PG CET ಗೆ ದಿನಾಂಕ ಪ್ರಕಟಿಸಿದ ಪರೀಕ್ಷಾ ಪ್ರಾಧಿಕಾರ
-ಸೆ. 9, 10ಕ್ಕೆ ಪರೀಕ್ಷೆ; ಆ. 17 ಅರ್ಜಿ ಸಲ್ಲಿಸಲು ಕೊನೆಯ ದಿನ
Team Udayavani, Aug 5, 2023, 9:47 PM IST
ಬೆಂಗಳೂರು: ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿಸಿಇಟಿ-2023) ಸೆ. 9 ಮತ್ತು 10ರಂದು ನಡೆಯಲಿದೆ. ಪರೀಕ್ಷೆ ಬರೆಯುವವರು ಆ.7ರ ಬೆಳಗ್ಗೆ 11ರಿಂದ ಆ. 17ರ ರಾತ್ರಿ 11.59ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆ. 19ರ ಸಂಜೆ 6ರ ಒಳಗೆ ಶುಲ್ಕ ಪಾವತಿಸುವ ಅವಕಾಶ ನೀಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟನೆ ಹೊರಡಿಸಿದೆ.
ಪಿಜಿಸಿಇಟಿಯು ಮೊದಲನೆಯ ವರ್ಷದ ಅಥವಾ ಮೊದಲ ಸೆಮಿಸ್ಟರ್‌ನ (ಪೂರ್ಣಾವಧಿ / ಅರೆಕಾಲಿಕ) ಎಂಐಎ / ಎಂಸಿಎ / ಎಂಇ / ಎಂ.ಟೆಕ್. / ಎಂ.ಆರ್ಕಿಟೆಕ್ಟರ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯಲಿದೆ.
ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ವಿಭಾಗದ ಜಿಎಟಿಇ (ಗೇಟ್) ಅರ್ಹ ಅಭ್ಯರ್ಥಿಗಳು ಮಾತ್ರ ವಿಟಿಯುನ ವಿವಿಧ ಎಂ.ಟೆಕ್. ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು ಎಂಇ /ಎಂ.ಟೆಕ್. /ಎಂ. ಆರ್ಕ್. ಕೋರ್ಸ್‌ಗಳ ಪ್ರವೇಶಕ್ಕಾಗಿ, ಪಿಜಿಸಿಟಿ- 2023ಕ್ಕೆ ಹಾಜರಾಗಬೇಕಿಲ್ಲ. ಆದರೆ ಅವರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕ ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು ಎಂದು ಕೆಇಎ ತಿಳಿಸಿದೆ.
ಕರ್ನಾಟಕೇತರ ಅಭ್ಯರ್ಥಿಗಳ ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರಕಾರಕ್ಕೆ ಬಿಟ್ಟುಕೊಡುವ ಸೀಟುಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು. ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳಿಲ್ಲ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ (ಶೇ. 50) ಅವರು ಅರ್ಹರು.
ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಒಟ್ಟು ಕನಿಷ್ಠ ಶೇ. 50 ಹಾಗೂ ಕರ್ನಾಟಕದ ಎಸ್.ಸಿ., ಎಸ್.ಟಿ., ಪ್ರವರ್ಗ-1 ರ ಅಭ್ಯರ್ಥಿಗಳು ಕನಿಷ್ಠ ಶೇ. 45 ಅಂಕಗಳನ್ನು ಪಡೆದಿರಬೇಕು. ಸಿಜಿಪಿಎ/ಎಸ್‌ಜಿಪಿಎ ಗ್ರೇಡ್‌ಗಳ ಮಾದರಿಯಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಶಗಳು, ಆಗತ್ಯವಿರುವ ಕನಿಷ್ಠ ಅರ್ಹತಾ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗ್ರೇಡ್‌ಗಳ ಅಂಕಗಳು ಸೂಚಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.
ಮಾಹಿತಿ ತಿದ್ದುಪಡಿಗೆ ಅವಕಾಶವಿಲ್ಲ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪಿಜಿಸಿಇಟಿ-2023ಕ್ಕೆ ದಾಖಲಿಸುವ ಮಾಹಿತಿಗಳನ್ನು ಅಂತಿಮ ಎಂದು ಪರಿಗಣಿಸಲಾಗುತ್ತದೆ. ಈ ಮಾಹಿತಿಯೇ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ಆಧಾರವಾಗಿರುತ್ತದೆ ಹಾಗೂ ಯಾವುದೇ ಕಾರಣಕ್ಕೂ ದಾಖಲಿಸಿದ ಮಾಹಿತಿಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಆಭ್ಯರ್ಥಿಗಳು ಕೋರ್ಸಿಗೆ ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ವಿವರ, ಶೈಕ್ಷಣಿಕ ವಿದ್ಯಾರ್ಹತೆ, ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲಾತಿ ಸಹಿತ ಎಲ್ಲ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಕೆಇಎ ಸೂಚನೆ ನೀಡಿದೆ.
ನೋಂದಣಿಯ ವಿವರವಾದ ಅರ್ಹತಾ ಮಾನದಂಡಗಳನ್ನೊಳಗೊಂಡ ಮಾಹಿತಿ ಪುಸ್ತಕ- 2023 ಅನ್ನು ಕೆಇಎ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.
ಪರೀಕ್ಷೆ ವಿವರ
ಸೆ. 9ರಂದು ಮಧ್ಯಾಹ್ನ 2.30 ರಿಂದ 4.30ರವರೆಗೆ ಎಂ.ಇ., ಎಂ. ಟೆಕ್ ಮತ್ತು ಎಂ. ಅರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕೆ ಪರೀಕ್ಷೆ ನಡೆಯಲಿದೆ. ಸೆ. 10ರಂದು ಎಂಸಿಎ ಕೋರ್ಸ್‌ಗೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರ ತನಕ ಹಾಗೂ ಎಂಬಿಎ ಕೋರ್ಸ್‌ಗೆ ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ಪರೀಕ್ಷೆ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.