ಪೌಷ್ಟಿಕ ಆಹಾರ ಪೂರೈಕೆ ಹಿಂದಿನಂತೆ ವಿಸ್ತರಣೆ
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ
Team Udayavani, Jul 10, 2020, 5:41 AM IST
ವಿಶೇಷ ವರದಿ-ಬೆಳ್ತಂಗಡಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)ಯ ಮೂಲಕ ಮೂಲ ನಿವಾಸಿ ಕೊರಗ ಮತ್ತು ಮಲೆಕುಡಿಯ ಕುಟುಂಬಗಳಿಗೆ ಉಚಿತ ಪೌಷ್ಟಿಕ ಆಹಾರ ಸಾಮಗ್ರಿ ಪೂರೈಕೆ ಯೋಜನೆಯ ಕಂತನ್ನು ಲಾಕ್‌ಡೌನ್‌ನಿಂದಾಗಿ 2 ತಿಂಗಳುಗಳ ಕಾಲ ವಿಸ್ತರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ಕೊರಗ ಸಮುದಾಯದ 1,218 ಮತ್ತು ಮಲೆಕುಡಿಯ ಸಮುದಾಯದ 1,729 ಸೇರಿ ಒಟ್ಟು 2,497 ಕುಟುಂಬ ಗಳಿವೆ. ಜಿಲ್ಲೆಯಲ್ಲಿ ಕೊರಗ ಸಮುದಾಯಕ್ಕೆ 2008- 09ರಿಂದಲೇ ಈ ಯೋಜನೆ ಅನುಷ್ಠಾನಗೊಂಡಿದ್ದು, ಮಲೆಕುಡಿಯರಿಗೆ 2012- 13ರಿಂದ ಪೂರೈಸಲು ಆದೇಶಿಸಲಾಗಿತ್ತು.
ಹೊಸ ಅರ್ಜಿ ಪರಿಷ್ಕರಣೆ
ಆರಂಭದಲ್ಲಿ ವರ್ಷಕ್ಕೆ 6 ಕಂತುಗಳಲ್ಲಿ ಆಹಾರ ಪೂರೈಕೆ ಯಾಗುತ್ತಿದ್ದು, 2019-20ನೇ ಸಾಲಿನಲ್ಲಿ 4 ಕಂತುಗಳಿಗೆ ಕಡಿತಗೊಳಿಸಲಾಗಿತ್ತು. ಪ್ರಸಕ್ತ ಲಾಕ್‌ಡೌನ್‌ನಿಂದ ಮತ್ತೆ 6 ತಿಂಗಳುಗಳಿಗೆ ವಿಸ್ತರಿಸಲಾಗಿದೆ. 2020-21ನೇ ಸಾಲಿನಲ್ಲಿ ಪೌಷ್ಟಿಕ ಆಹಾರ ಯೋಜನೆಯ ಅನುಷ್ಠಾನಕ್ಕಾಗಿ ಇಲಾಖೆ ವತಿಯಿಂದ ಹೊಸದಾಗಿ ಅರ್ಜಿ ಕರೆಯಲಾಗಿತ್ತು. ಈ ಸಮುದಾಯದವರಾಗಿದ್ದರೂ 2.50 ಲಕ್ಷ ರೂ. ವಾರ್ಷಿಕ ಆದಾಯ ಮಿತಿಗಿಂತ ಹೆಚ್ಚಿದ್ದವರು, ಸರಕಾರಿ, ಅರೆಸರಕಾರಿ ಹುದ್ದೆಯಲ್ಲಿದ್ದವರು ಈ ಸೌಲಭ್ಯದಿಂದ ಹೊರಗುಳಿಯುತ್ತಾರೆ. ಕೋವಿಡ್ ಮುನ್ನೆಚ್ಚರಿಕೆ ಇತ್ಯಾದಿ ಕಾರಣಗಳಿಂದ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ನಿಗದಿ ಪಡಿಸಿರಲಿಲ್ಲ.
ಜೂನ್ ತಿಂಗಳ ಆಹಾರ ವಿತರಣೆ
ಜೂನ್ ತಿಂಗಳ ಆಹಾರ ಸಾಮಗ್ರಿ ದೊರಕಿವೆ. 15 ಕೆ.ಜಿ. ಅಕ್ಕಿ (ಕಳೆದ ವರ್ಷ 8 ಕೆ.ಜಿ.), 1 ಕೆ.ಜಿ. ತೊಗರಿಬೇಳೆ (ಕಳೆದ ವರ್ಷ 3 ಕೆ.ಜಿ.) ತಲಾ 1 ಕೆ.ಜಿ. ಕಡಲೆಕಾಳು, ಶೇಂಗಾ ಬೀಜ, ಅಲಸಂಡೆ ಕಾಳು, ಹುರುಳಿ, ಹೆಸರುಕಾಳು, ಸಕ್ಕರೆ, ಬೆಲ್ಲ, 30 ಮೊಟ್ಟೆ, 1 ಲೀ. ಸೂರ್ಯಕಾಂತಿ ಎಣ್ಣೆ (ಕಳೆದ ವರ್ಷ 2 ಲೀ.), ಅರ್ಧ ಕೆ.ಜಿ. ನಂದಿನಿ ತುಪ್ಪ ನೀಡಲಾಗಿದೆ. ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ ಕಡಿತಗೊಳಿಸಿ ಅಕ್ಕಿ ಹೆಚ್ಚಿಸಲಾಗಿದೆ. ತಲಾ 1,490.93 ರೂ.ಗಳಷ್ಟು ಮೊತ್ತದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಸ್ಥಳೀಯ ಅಂಗನವಾಡಿ ಕೇಂದ್ರಗಳ ಮೂಲಕ ವಿತರಿಸಲಾಗುತ್ತದೆ.
ಬದಲಿ ಕಿಟ್ ಪೂರೈಕೆ
ನಾಲ್ಕು ಕಂತುಗಳಲ್ಲಿ ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ಲಾಕ್‌ಡೌನ್ ಕಾರಣಕ್ಕಾಗಿ ಈ ಹಿಂದಿನಂತೆ ವಿಸ್ತರಿಸಲಾಗಿದ್ದು, 45 ದಿನಗಳ ಅಂತರದ 6 ಕಂತುಗಳಾಗಿ ಒದಗಿಸಲಾಗುತ್ತದೆ. ಕೆಲವೆಡೆ ಕಳಪೆ ಆಹಾರ ಸರಬರಾಜಾಗಿರುವುದು ಗಮನಕ್ಕೆ ಬಂದಿದೆ. ಅಲ್ಲಿಗೆ ಬದಲಿ ಕಿಟ್ ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಸರಬರಾಜುದಾರರು ಫಲಾನುಭವಿಗಳ ಮುಖಂಡರಿಗೆ ಮತ್ತು ಸ್ಥಳೀಯ ಅಂಗನವಾಡಿಗೆ ಮುಂಗಡವಾಗಿ ದಿನಾಂಕ ತಿಳಿಸಿ ತೆರಳುವಂತೆ ಸೂಚನೆ ನೀಡಲಾಗುವುದು.
-ಹೇಮಲತಾ, ಯೋಜನ ಸಮನ್ವಯಾಧಿಕಾರಿ,
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಂಗಳೂರು
ನೆರಿಯದಲ್ಲಿ ಕಳಪೆ ಆಹಾರ
ನೆರಿಯದ 180 ಕುಟುಂಬಗಳಿಗೆ ಜು.7ರಂದು ಕಳಪೆ ಪೌಷ್ಟಿಕ ಆಹಾರ ಸರಬರಾಜಾಗಿದೆ. 80 ಆಹಾರ ಪೊಟ್ಟಣಗಳಲ್ಲಿ ಕೊಳೆತ ಮೊಟ್ಟೆ, ಅಕ್ಕಿಯಲ್ಲಿ ಹುಳು ಪತ್ತೆಯಾಗಿದೆ. ತತ್‌ಕ್ಷಣ ಸ್ಥಳೀಯ ಸಮುದಾಯ ಮುಖಂಡರ ಉಪಸ್ಥಿತಿಯಲ್ಲಿ ಆಹಾರ ಕಿಟ್ ಹಿಂದಿರುಗಿಸಲಾಗಿದೆ. ಆಹಾರ ಸರಬರಾಜು ಮಾಡುವವರು ಮಾಹಿತಿ ನೀಡದೆ ಅಂಗನವಾಡಿಗಳಲ್ಲಿ ಶೇಖರಿಸಿಡುವುದರಿಂದ ಸಮಯಕ್ಕೆ ಸರಿಯಾಗಿ ವಿತರಣೆಯಾಗದೆ ಆಹಾರ ವಸ್ತು ಹಾಳಾಗಿ, ಪೋಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.