ದುಬಾರಿ ವಸ್ತುಗಳು
Team Udayavani, Jun 29, 2020, 5:17 AM IST
ವಾಶಿಂಗ್ ಮಶೀನ್‌ನಲ್ಲಿ ಇಂಟರ್ನೆಟ್: ರೆಫ್ರಿಜರೇಟರ್ ಕೊಳ್ಳುವಾಗ ಅಂಗಡಿ ಮಳಿಗೆಗಳಲ್ಲಿ ಡಬಲ್ ಡೋರಿನದ್ದನ್ನು ನೋಡಿರುತ್ತೀರಿ. ಒಂದು ಬಾಗಿಲು ಇನ್ನೊಂದಕ್ಕಿಂತ ಚಿಕ್ಕದಿರುತ್ತದೆ. ಸಾಮಾನ್ಯವಾಗಿ ಕೆಳಗಿನ ಬಾಗಿಲು ದೊಡ್ಡಕ್ಕಿದ್ದು, ಮೇಲಿನದು ಚಿಕ್ಕದಾಗಿರುತ್ತದೆ. ವಾಶಿಂಗ್ ಮಶೀನಿನಲ್ಲೂ ಇದೇ ರೀತಿಯಾಗಿ ಡಬಲ್ ಡೋರ್ ಮತ್ತು ಡಬಲ್ ಡ್ರಮ್ಮಿನ ಮಾದರಿ ಗಮನ ಸೆಳೆಯುತ್ತಿದೆ. ಹಯರ್ ಸಂಸ್ಥೆಯ ಡುಯೋ ವಾಶಿಂಗ್ ಮಶೀನ್ ಈ ಸಾಲಿಗೆ ಸೇರುತ್ತದೆ. ಇದರಲ್ಲಿ ಒಟ್ಟು 20 ಕಂಪ್ಯೂಟರ್ ಪ್ರೋಗ್ರಾಮುಗಳನ್ನು ಅಳವಡಿಸಲಾಗಿದೆ. ಮಕ್ಕಳ ಬಟ್ಟೆಗಳನ್ನು ಒಗೆಯಲೆಂದೇ ಪ್ರತ್ಯೇಕ ಕಂಪ್ಯೂಟರ್ ಪ್ರೋಗ್ರಾಂ ಇದೆ. ಆ ಆಯ್ಕೆಯನ್ನು ಕ್ಲಿಕ್ ಮಾಡಿ ಆನ್ ಮಾಡಿದರೆ ಸಾಕು.
ಅದೇ ರೀತಿ ವಿವಿಧ ಬಗೆಯ ಬಟ್ಟೆಗಳ ಅನುಸಾರವಾಗಿ ಬಳಕೆದಾರರು ಆಯ್ಕೆಯನ್ನು ಆರಿಸಿಕೊಳ್ಳಬಹುದು. ಕೆಳಗಿನ ಡ್ರಮ್‌ನ ಸಾಮರ್ಥ್ಯ 8 ಕೆ.ಜಿ., ಮೇಲಿನ ಡ್ರಮ್‌ನ ಸಾಮರ್ಥ್ಯ 4 ಕೆ.ಜಿ. ಹೀಗೆ ಒಟ್ಟು 12 ಕೆ. ಜಿ ಬಟ್ಟೆಗಳನ್ನು ಏಕಕಾಲಕ್ಕೆ ಇದರಲ್ಲಿ ವಾಶ್ ಮಾಡಬಹುದಾಗಿದೆ. ಇದರ ದುಬಾರಿ ಬೆಲೆಯನ್ನು ಸಮರ್ಥಿಸಿಕೊಳ್ಳಲು ಇನ್ನೂ ಒಂದು ವಿಶೇಷ ತಂತ್ರಜ್ಞಾನವಿದೆ. ಅದೆಂದರೆ ವೈಫೈ ಕನೆಕ್ಟಿವಿಟಿ. ಈ ವಾಶಿಂಗ್ ಮಶೀನನ್ನು ಇಂಟರ್‌ನೆಟ್‌ಗೆ ಸಂಪರ್ಕ ಕಲ್ಪಿಸಬಹುದಾಗಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿ ನಲ್ಲಿ ಸ್ಮಾರ್ಟ್‌ವಾಶ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ ಕೊಂಡು, ವಾಶಿಂಗ್ ಮಶೀನನ್ನು ನಿಯಂತ್ರಿಸಬಹುದಾಗಿದೆ. ಲೈಫ್ ಟೈಮ್ ವಾರಂಟಿ, ಕಡಿಮೆ ವಿದ್ಯುತ್ ಬಳಕೆ ಮುಂತಾದ ಹಲವು ಸವಲತ್ತುಗಳು ಇದರಲ್ಲಿವೆ.
ಬೆಲೆ: 2 ಲಕ್ಷ ರೂ.
**
ಶತಮಾನಗಳ ಕಾಲ ಓಡುವ ಗಡಿಯಾರ: ಒಂದು ಟೇಬಲ್ ಕ್ಲಾಕ್‌ಗೆ ನಾಲ್ಕು ಲಕ್ಷ ರೂ.ಯಷ್ಟು ದುಬಾರಿ ಬೆಲೆ ನಿಗದಿ ಪಡಿಸಿರುವುದನ್ನು ನೋಡಿ ಯಾರಿಗೇ ಆದರೂ ಒಂದು ಕ್ಷಣ ಅಚ್ಚರಿಯಾಗದೇ ಇರದು. ಇದು ಅಂತಿಂಥ ಗಡಿಯಾರವಲ್ಲ; “ಅಟ್ಮೋಸ್ ಕ್ಲಾಕ್’ ಎಂದೇ ಪರಿಚಿತ. ಈ ಬ್ರಾಂಡ್‌ನ ಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಹೆಸರಾಂತ ಗಡಿಯಾರ ತಯಾರಕ ಸಂಸ್ಥೆ, ಸ್ವಿಜ್ಜರ್ಲೆಂಡಿನ “ಜೆಜೆರ್ ಲೆಕುಲ್ಟ್’. ಈ ಗಡಿಯಾರದ ವೈಶಿಷ್ಟವೆಂದರೆ, ಇದಕ್ಕೆ ಕೀ ತಿರುಗಿಸಬೇಕೆಂದಿಲ್ಲ. ಅಸಲಿಗೆ ಏನೇನೂ ಮಾಡುವ ಅಗತ್ಯವಿಲ್ಲ. ಇದು ವಾತಾವರಣದಲ್ಲಿನ ತಾಪಮಾನ ಮತ್ತು ಒತ್ತಡವನ್ನೇ ಉಪಯೋಗಿಸಿಕೊಂಡು ಕಾರ್ಯಾಚರಿಸುವ ಅದ್ಭುತ ಯಂತ್ರವಾಗಿದೆ.
ತಾಪಮಾನದಲ್ಲಿ ಒಂದು ಡಿಗ್ರಿಯಷ್ಟು ಬದಲಾವಣೆಯುಂ ಟಾದರೂ, ಎರಡು ದಿನಗಳಿಗಾಗುವಷ್ಟು ಶಕ್ತಿಯನ್ನು ಈ ಯಂತ್ರ ಪಡೆದುಕೊಳ್ಳುತ್ತದೆ. ಹೀಗಾಗಿ, ವರ್ಷಗಳ ಕಾಲ ಯಾವುದರ ಹಂಗೂ ಇಲ್ಲದೆ ಈ ಗಡಿಯಾರ ಓಡುತ್ತದೆ. ಈ ತಂತ್ರಜ್ಞಾನದ ಆವಿಷ್ಕಾರವಾಗಿದ್ದು 17ನೇ ಶತಮಾನದಲ್ಲಿ.. ನ್ಯೂಝಿಲೆಂಡಿನ ಡುನೆಡಿನ್ ಎಂಬಲ್ಲಿ 1864ನೇ ಇಸವಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಡಿಯಾರ ಇದೇ ತತ್ವದ ಆಧಾರದಲ್ಲಿ ನಿರ್ಮಿತವಾಗಿದ್ದು, ಇಂದಿಗೂ ಸಮಯ ತೋರಿಸುತ್ತಲೇ ಇದೆ. ಹೀಗಾಗಿಯೇ ಈ ಗಡಿಯಾರಗಳಿಗೆ ತುಂಬಾ ಬೆಲೆ. ಇವು ಪ್ರತಿಷ್ಠೆಯ ಸಂಕೇತವೂ ಹೌದು.
ಬೆಲೆ: 4 ಲಕ್ಷ ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.