Agri: ಇನ್ನೂ ಸಿಕ್ಕಿಲ್ಲ ಕೃಷಿಕರ ಸಹಾಯಧನ
ಅಧಿಕಾರಿಗಳಲ್ಲೂ ಇಲ್ಲ ಸಮರ್ಪಕ ಮಾಹಿತಿ ರೈತರು ಸಂಕಷ್ಟದಲ್ಲಿ
Team Udayavani, Oct 27, 2023, 1:33 AM IST
ಪುತ್ತೂರು: ಮುಂಗಾರಿನ ಅವಧಿ ಮುಗಿದು ಬೇಸಗೆಯ ಬಿಸಿ ನೆತ್ತಿಗೆ ತಾಕಲು ಆರಂಭಿಸಿದ್ದರೂ 2023-24ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯ ಸವಲತ್ತು ವಿತರಣೆಗೆ ಸರಕಾರ ಕೃಷಿ ಇಲಾಖೆಗೆ ಈ ತನಕ ನಯಾಪೈಸೆ ಅನುದಾನ ಬಿಡುಗಡೆಗೊಳಿಸಿಲ್ಲ !
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದೇ ಸರಕಾರಕ್ಕೆ ದೊಡ್ಡ ಸವಾಲಾಗಿದ್ದು, ಅದರ ನೇರ ಪರಿ ಣಾಮ ಕೃಷಿಕರಿಗೂ ತಟ್ಟಿದಂತಿದೆ.
ನೂರಾರು ಅರ್ಜಿ
ಕೃಷಿ ಇಲಾಖೆ ಮೂಲಕ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನದ ಕೃಷಿ ಯಾಂತ್ರೀ ಕರಣ ಉಪ ಅಭಿಯಾನ, ಕೃಷಿ ವಿಸ್ತರಣೆ ಮತ್ತು ತರಬೇತಿ ಯಡಿ ರೈತರಿಗೆ ಕೃಷಿ ಸಲಕರಣೆಗಳ ಸಹಾಯಧನದ ಸೌಲಭ್ಯ ಒದಗಿಸಲಾಗುತ್ತದೆ.
ಉಳುಮೆಯಿಂದ ಕಟಾವಿನವರೆಗೂ ನೆರವಾಗಬಲ್ಲ ಸಣ್ಣ ಟ್ರಾಕ್ಟರ್, ಪವರ್ ಟಿಲ್ಲರ್, ಭತ್ತದ ನಾಟಿ/ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣ, ಟರ್ಪಾಲು, ಕಪ್ಪು ಬಣ್ಣದ ಪೈಪು ಮೊದಲಾದವುಗಳ ಖರೀದಿಗೆ ನೂರಾರು ರೈತರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ.
ಬಾರದ ಅನುದಾನ
ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಕೆಗೆ ರೈತರನ್ನು ಪ್ರೋತ್ಸಾಹಿಸಲು ಯಂತ್ರೋಪಕರಣ ಖರೀದಿಸಿದ ಸಾಮಾನ್ಯ ರೈತರಿಗೆ ಶೇ. 50ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಅರ್ಜಿಗಳ ಹಿರಿತನದ ಆಧಾರದಲ್ಲಿ ಸವಲತ್ತು ವಿತರಿಸಲಾಗುತ್ತದೆ. ಪ್ರತಿವರ್ಷ ಜೂನ್, ಜುಲೈಯಲ್ಲಿ ಅನುದಾನದ ಕಂತು ಬಿಡುಗಡೆ ಆಗುತ್ತದೆ. ಅನುದಾನ ಲಭ್ಯವಿದ್ದ ಸಂದರ್ಭದಲ್ಲಿ ಅರ್ಹ ಫಲಾನುಭವಿಯು ಸಬ್ಸಿಡಿ ಮೊತ್ತ ಹೊರತುಪಡಿಸಿ ಉಳಿದ ಮೊತ್ತವನ್ನು ಕಟ್ಟಬೇಕು. ಅನಂತರ ಅರ್ಜಿದಾರನಿಗೆ ಸವಲತ್ತು ನೀಡುವುದು ನಿಯಮ. ಆದರೆ 2023-24ನೇ ಸಾಲಿಗೆ ಸಂಬಂಧಿಸಿ ಈ ತನಕ ಅನುದಾನ ಬಿಡುಗಡೆ ಆಗಿಲ್ಲ. ಯಾವಾಗ ಬರಲಿದೆ ಎಂಬ ಮಾಹಿತಿ ಇಲಾಖೆಯ ಅಧಿಕಾರಿಗಳಿಗೂ ಇಲ್ಲ. 2022-23ನೇ ಸಾಲಿನಲ್ಲಿ ಸಲ್ಲಿಸಿದ ಹೆಚ್ಚುವರಿ ಕ್ರಿಯಾಯೋಜನೆಗೂ ಅನುದಾನ ಬರಲು ಬಾಕಿ ಇದೆ.
ಚಾತಕ ಪಕ್ಷಿಯಂತೆ ಕಾದು ಕುಳಿತ ರೈತ
ಕೃಷಿ ಇಲಾಖೆಯು ಸಬ್ಸಿಡಿ ರೂಪದಲ್ಲಿ ಉಪಯುಕ್ತವಿರುವ ಯಂತ್ರೋಪಕರಣಗಳನ್ನು ನೀಡುತ್ತಿದ್ದು, ಇದರಿಂದ ಕೃಷಿ ಕೆಲಸದ ಆರ್ಥಿಕ ಹೊರೆ ತಗ್ಗಲಿದೆ ಎಂಬ ನಿರೀಕ್ಷೆಯಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ಕೃಷಿಕರಿಗೆ ನಿರಾಶೆ ಮೂಡಿಸಿದೆ. ಮುಂಗಾರು ಅವಧಿಯಲ್ಲಿ ಸಬ್ಸಿಡಿ ರೂಪದಲ್ಲಿ ಬಿತ್ತನೆ ಬೀಜ ದೊರೆತಿದ್ದು, ಉಳಿದ ಯಾವುದೇ ಸವಲತ್ತುಗಳು ರೈತರಿಗೆ ಸಿಕ್ಕಿಲ್ಲ. ಒಂದೆಡೆ ಕೂಲಿ ಕಾರ್ಮಿಕರ ಕೊರತೆ, ನಿರ್ವಹಣೆ ವೆಚ್ಚ ಹೆಚ್ಚಿ ಸಂಕಷ್ಟದಲ್ಲಿರುವ ಕೃಷಿಕರಿಗೆ ಸಬ್ಸಿಡಿ ದರದಲ್ಲಿ ಕೃಷಿ ಸವಲತ್ತು ದೊರೆಯದೆ ಮತ್ತಷ್ಟು ಸಮಸ್ಯೆ ಎದುರಾಗಿದೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.