ಆನ್‌ಲೈನ್‌ನಲ್ಲಿ “ನಯವಂಚನೆ’ : ಎಚ್ಚರ ವಹಿಸಿ ನೀವೂ ಆಗಬಹುದು ಟಾರ್ಗೆಟ್.!
ಸಿಲುಕದಿರಿ ಸೈಬರ್ ಅಪರಾಧಗಳ ಮಾಯಾಜಾಲಕ್ಕೆ ,ಇತ್ಯರ್ಥಗೊಳ್ಳುತ್ತಿಲ್ಲ ಸೈಬರ್ ವಂಚನೆ ಪ್ರಕರಣಗಳು
Team Udayavani, Dec 11, 2020, 6:06 PM IST
ಸಾಂದರ್ಭಿಕ ಚಿತ್ರ
ಮುಗ್ಧರು, ಅಮಾಯಕರು, ಅನಕ್ಷರಸ್ಥರು ಮೋಸದ ಜಾಲಕ್ಕೆ ಸಿಲುಕಿದರೆ ಅಚ್ಚರಿ ಪಡಬೇಕಿಲ್ಲ. ಆದರೆ, ಸುಶಿಕ್ಷಿತರು, ತಿಳಿವಕಸ್ಥರೇ ಅತಿಯಾಸೆಗೆ ಬಿದ್ದು ಲಕ್ಷಾಂತರ ಕಳೆದುಕೊಂಡರೆ? ಇಂಥ 27 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು ಹುಬ್ಬೇರಿಸುವಂತೆ ಮಾಡಿದೆ. ಸೈಬರ್ ಅಪರಾಧಗಳ ಕರಾಳ ಮುಖ ಕ್ಷಿಪ್ರವೇಗದಲ್ಲಿ ಅನಾವರಣಗೊಳುತ್ತಿದ್ದು, ಜಿಲ್ಲೆಯಲ್ಲೂ ಕಳದೆರಡು ವರ್ಷಗಳಲ್ಲಿ ಸಾಕಷ್ಟು ಜನ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಆದರೆ, ಈವರೆಗೂ ಬಿಡಿಗಾಸು ಹಿಂದುರುಗಿ ಬಂದಿಲ್ಲ. ಈ ಕುರಿತು ಸಮಗ್ರ ವರದಿ ಇಲ್ಲಿದೆ.
ರಾಯಚೂರು: ಆಸೆ ಕೆಟ್ಟದ್ದು. ಆಸೆಯೇ ದುಖಕ್ಕೆ ಮೂಲ ಎಂದಿದ್ದಾರೆ ದಾರ್ಶನಿಕರು. ಇಂಥ ಆಸೆಯ ಬೆನ್ನತ್ತಿದ ಎಷ್ಟೋ ಜನ ಕೈಯಲ್ಲಿದ್ದ ಹಣಕಳೆದುಕೊಂಡು ಪೇಚಾಡುತ್ತಿದ್ದು,ಅದಕ್ಕೆ ಮುಖ್ಯ ಕಾರಣ ಆನ್ ಲೈನ್ ಮೋಸ ಜಾಲ ಎಂಬುದು ಗಮನಾರ್ಹ.
ಕಾಣದ ಲೋಕದಲ್ಲಿ ಕುಳಿತು ನಮಗರಿವಿಲ್ಲದೇ ನಮ್ಮಖಾತೆಯಲ್ಲಿದ್ದ ಲಕ್ಷಾಂತರ ಹಣಕದಿಯುವ ಕದೀಮರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ತಿಳಿದವರೇ ಇಂಥ ಮೋಸಕ್ಕೆ ಸಿಲುಕಿರುವುದು ಆತಂಕ ಮೂಡಿಸಿದೆ. ವಂಚನೆಯ ಸ್ವರೂಪಗಳು ಹಲವಾದರೂ ಎಲ್ಲ ಪ್ರಕರಣಗಳಲ್ಲಿ ವಂಚಕರು ಬಳಸುತ್ತಿರುವ ಏಕೈಕ ಅಸ್ತ್ರ “ಆಮಿಷ’! ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಸೈಬರ್ ಕ್ರೈಂಗೆ ಸಂಬಂಧಿಸಿದ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 27 ಪ್ರಕರಣಗಳಲ್ಲಿ ಜನ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. 10 ಸಾವಿರ ರೂ.ದಿಂದ 21 ಲಕ್ಷ ರೂ.ವರೆಗೂ ವಂಚನೆ ಮಾಡಲಾಗಿದೆ. 2019ರಲ್ಲಿ 38.52 ಲಕ್ಷ ರೂ. ವಂಚನೆಯಾಗಿದ್ದರೆ,2020ರಲ್ಲಿ ಈವರೆಗೆ 98.20 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಹೀಗೆ ಹಣ ಕಳೆದುಕೊಂಡವರಲ್ಲಿ ಎಂಜಿನಿಯರ್‌ಗಳು, ಬ್ಯಾಂಕ್ ನೌಕರರು, ವೈದ್ಯರು ಸೇರಿದಂತೆ ಶಿಕ್ಷಿತರೇ ಹೆಚ್ಚಾಗಿರುವುದು ಕಳವಳಕಾರಿ ಅಂಶ. 27ರಲ್ಲಿ ಎರಡು ಪ್ರಕರಣಗಳು ಮಾತ್ರ ಭೇದಿಸಲ್ಪಟ್ಟಿದ್ದು, ಉಳಿದ ಯಾವ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.
ವಂಚಕರ ಸುಳಿವೇ ಇಲ್ಲ: ಪೊಲೀಸರು ಹೇಳುವ ಪ್ರಕಾರ ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಸವಾಲಾಗಿಗುರುವುದೇ ವಂಚಕರ ಸುಳಿವು ಪತ್ತೆ ಮಾಡುವುದು. ಈವರೆಗೂ ದಾಖಲಾದ ಬಹುತೇಕ ಪ್ರಕರಣಗಳಲ್ಲಿ ವಂಚಕರ ಸುಳಿವೇ ಸಿಗುತ್ತಿಲ್ಲ. ಕೃತ್ಯಕ್ಕೆ ಬಳಸಿದ ಎಲ್ಲ ಮೊಬೈಲ್ ಸಂಖ್ಯೆಗಳು ಬಹುತೇಕ ಬಿಹಾರ್, ಒಡಿಶಾ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳದ್ದಾಗಿದೆ. ಅಲ್ಲಿ ಹೋಗಿ ವಿಚಾರಿಸಿದರೆ ಸುಳಿವು ಸಿಗುತ್ತಿಲ್ಲ. ಬ್ಯಾಂಕ್ ಖಾತೆಗಳಿಗೆ ನೀಡಿದ ದಾಖಲೆಗಳು ನಕಲಿಯಾಗಿವೆ. ಹೀಗಾಗಿ ಪ್ರಕರಣ ಬೇಧಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮೋಸ ಹೇಗಾಗುತ್ತಿದೆ?: ಆನ್‌ಲೈನ್ ವಂಚನೆಯಲ್ಲಿ ಮೊದಲು ನಮ್ಮ ಖಾಸಗಿ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಒಮ್ಮೆ ನಮ್ಮ ಬ್ಯಾಂಕ್ ಖಾತೆಗಳ ವಿವರ ಸಿಕ್ಕರೆ ಕ್ಷಣಾರ್ಧದಲ್ಲೇ ಹಣ ಲಪಟಾಯಿಸಿ ಬಿಡುತ್ತಾರೆ. ನಿಮಗೆ ಪ್ರಶಸ್ತಿ ಬಂದಿದೆ, ನಿಮ್ಮ ಬ್ಯಾಂಕ್ ಖಾತೆ ವಿವರ ತಿಳಿಸಿ, ನಾವು ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದು,ನಿಮಗೆ ಬಂದ ಒಟಿಪಿ ಕೊಡಿ, ನಿಮ್ಮ ಮೊಬೈಲ್ ಸಂಖ್ಯೆ ದುಬಾರಿ ಉಡುಗೊರೆಗೆ ಆಯ್ಕೆಯಾಗಿದೆ. ಅದಕ್ಕೆ ನೀವು ಇಂತಿಷ್ಟು ಹಣ ಪಾವತಿಸಿ, ಆಫರ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ದುಬಾರಿ ವಸ್ತು ಸಿಗುತ್ತಿದೆ… ಹೀಗೆ ನಾನಾ ರೀತಿಯ ಸಂದೇಶಗಳು ಬರುತ್ತವೆ. ಇದಕ್ಕೆ ಉತ್ತರಿಸಿ ಯಾಮಾರಿದರೆ ಖಾತೆಯಲ್ಲಿದ್ದ ಹಣಕ್ಕೆ ಕತ್ತರಿ ಖಚಿತ ಎಂಬುದು ಸೈಬರ್ ಠಾಣೆ ಸಿಬ್ಬಂದಿ ವಿವರಣೆ. ಇಂಥ ಆಮಿಷಗಳಿಗೆ ಮುಗ್ಧರು ಮಾತ್ರವಲ್ಲ ತಿಳಿದವರೇ ಮೋಸ ಹೋಗುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್, ಲಕ್ಕಿ ಡ್ರಾ ಹೆಸರಲ್ಲೂ ಮೋಸವಾಗುತ್ತಿದೆ.
ಹನಿಟ್ರ್ಯಾಪ್‌ನಿಂದ ವಂಚನೆ :
ಅಷ್ಟೇ ಅಲ್ಲ ಹನಿಟ್ರ್ಯಾಪ್‌ನಿಂದಲೂ ಹಣ ವಂಚಿಸಲಾಗುತ್ತಿದೆ. ಸುಂದರ ಹುಡುಗ, ಹುಡುಗಿಯ ಫೋಟೋ ಹಾಕಿ ಚಾಟಿಂಗ್ ಮಾಡಿ ಮೋಸದ ಬಲೆಗೆ ಬೀಳಿಸಲಾಗುತ್ತಿದೆ. ಅವರಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗುತ್ತಿದೆ. ಇಂಥದ್ದೇ ಪ್ರಕರಣದಲ್ಲಿ ಜಿಲ್ಲೆಯ ಯುವತಿಯೊಬ್ಬರು 38 ಸಾವಿರ ರೂ. ಕಳೆದುಕೊಂಡಿದ್ದಾರೆ. ನಾನು ವಿದೇಶದಲ್ಲಿದ್ದು ನಿನಗಾಗಿ ದುಬಾರಿ ಮೌಲ್ಯದ ಉಡುಗೊರೆ ಕಳುಹಿಸಿದ್ದೇನೆ ಎಂದು ಯುವಕ ತಿಳಿಸಿದ್ದಾನೆ. ಒಂದೆರಡು ದಿನಗಳ ಬಳಿಕ ಬೇರೆ ಸಂಖ್ಯೆಯಿಂದ ಕರೆ ಬಂದಿದ್ದು, ನಾವು ದೆಹಲಿಯ ಕೋರಿಯರ್ ಸಂಸ್ಥೆಯಿಂದ ಕರೆ ಮಾಡುತ್ತಿದ್ದು, ನಿಮ್ಮ ಹೆಸರಿಗೆ ಉಡುಗೊರೆ ಬಂದಿದ್ದು, 38 ಸಾವಿರ ರೂ. ಪಾವತಿಸಿದರೆ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ. ಇದನ್ನು ನಂಬಿದ ಯುವತಿ ಖಾತೆಗೆ ಹಣ ಪಾವತಿಸಿದ್ದಾರೆ. ಮರುಕ್ಷಣವೇ ಎರಡು ಮೊಬೈಲ್ ಸಂಖ್ಯೆ ನಾಟ್ ರೀಚೆಬಲ್ ಆಗಿದೆ.
ಚೈನ್ ಬಿಸಿನೆಸ್ ಕೂಡ: ಗುಜರಾತ್ ಮೂಲದ ಅವೆಂಟೆಜ್ ಕ್ರೌಡ್ ಫಂಡಿಂಗ್ ಎನ್ನುವ ಸಂಸ್ಥೆಯ ಚೈನ್ ಬಿಸಿನೆಸ್ ನಂಬಿ ಸಾವಿರಾರು ಜನ ಕೋಟ್ಯಂತರ ಹಣ ಕಳೆದುಕೊಂಡಿದ್ದಾರೆ. ಜಿಲ್ಲೆಯ ಆರ್‌ಎಂಪಿ ವೈದ್ಯರೊಬ್ಬರು 2625 ರೂ.ಪಾವತಿಸಿ ಸದಸ್ಯರಾಗಿದ್ದು, ಇತರರನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ಕಮಿಷನ್ ಆಸೆಗೆ ಬಲಿಯಾಗಿ 5374 ಜನ ಹಣ ಹೂಡಿದ್ದಾರೆ. ಆರಂಭದಲ್ಲಿ ಪ್ರಚಾರಕ್ಕಾಗಿ ಒಂದಷ್ಟು ಜನರಿಗೆ ಕಮಿಷನ್ ಹಣ ನೀಡಲಾಗಿದೆ. ದೊಡ್ಡ ಮೊತ್ತ ಕ್ರೋಡೀಕರಣವಾಗುತ್ತಿದ್ದಂತೆ ಕಂಪನಿ ನಾಪತ್ತೆಯಾಗಿದೆ. ಕಂಪನಿಯ ವೆಬ್‌ಸೈಟ್ ಕೂಡ ಡಿಲಿಟ್ ಮಾಡಲಾಗಿದೆ. ಆದರೆ, ಇಷ್ಟೆಲ್ಲ ವ್ಯವಹಾರ ನಡೆಸಿದರೂ ಕಂಪನಿಯ ಯಾವೊಂದು ದಾಖಲೆಗಳು ಸರಿಯಾಗಿಲ್ಲ. ಈಗ ಅಸ್ತಿತ್ವದಲ್ಲೇ ಇಲ್ಲದ ಕಂಪನಿ ನಂಬಿದ ಜನ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.
ಸೈನಿಕರ ಹೆಸರಲ್ಲೂ ವಂಚನೆ! : ಬರೀ ಯಾವುದೋ ಕಂಪನಿಗಳ ಹೆಸರಲ್ಲಿ ಮಾತ್ರವಲ್ಲ ಸೈನಿಕರ ಹೆಸರಿನಲ್ಲೂ ಆನ್‌ಲೈನ್‌ನಲ್ಲಿ ವಂಚನೆಮಾಡಲಾಗುತ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಸಾಮಾಜಿಕ ಜಾಲತಾಣದಲ್ಲಿ ವಂಚಿಸಲಾಗುತ್ತಿದೆ. ನಾನೊಬ್ಬ ಸೈನಿಕ. ತುರ್ತಾಗಿ ಸೇನೆಗೆ ಮರಳಬೇಕಿದ್ದು, ನನ್ನ ವಾಹನ ಮಾರಾಟಕ್ಕಿದೆ. ಕಡಿಮೆ ದರದಲ್ಲಿ ನೀಡುತ್ತಿದ್ದು, ಆಸಕ್ತರುಸಂಪರ್ಕಿಸುವಂತೆ ಪೋಸ್ಟ್‌ಗಳನ್ನು ಹಾಕಲಾಗುತ್ತದೆ. ಇಂಥ ಖಾತೆಗಳನ್ನು ಪರಿಶೀಲಿಸಿದಾಗ ಆ ಹೆಸರಿನ ಸೈನಿಕರೇ ಇರುವುದಿಲ.
21 ಲಕ್ಷ ಕಳೆದುಕೊಂಡ ಯುವತಿ : ಜಿಲ್ಲೆಯ ಸುಶಿಕ್ಷಿತ ಯುವತಿಯೊಬ್ಬರು ಇಂಥ ಮೋಸದ ಜಾಲಕ್ಕೆ ಸಿಲುಕಿ ಬರೋಬ್ಬರಿಗೆ 21 ಲಕ್ಷ ರೂ. ಕಳೆದುಕೊಂಡ ವಿಚಿತ್ರ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಗೆ ಹಂತ-ಹಂತವಾಗಿ ಹಣ ಪಾವತಿಸುತ್ತಾ ಬಂದಿದ್ದಾರೆ. ಈ ರೀತಿ ಲಕ್ಷಾಂತರ ರೂ. ಪಾವತಿಸಲಾಗಿದೆ. ಕೊನೆಗೆ ಸತ್ಯ ಅರಿವಾಗಿದ್ದು, ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬೆನ್ನತ್ತಿದಾಗ ಅದು ಉತ್ತರ ಭಾರತದ ರಾಜ್ಯದ ಖಾತೆ ಎಂಬುದು ತಿಳಿದು ಬಂದಿದ್ದು, ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈವರೆಗೂ ವಂಚಕರ ಸುಳಿವು ಸಿಕ್ಕಿಲ್ಲ.
ಮಹಿಳೆಯರೇ ಟಾರ್ಗೆಟ್ : ಆನ್‌ಲೈನ್ ವಂಚಕರಿಗೆ ಮಹಿಳೆಯರೇ ಟಾರ್ಗೆಟ್ ಎನ್ನುವುದು ಗಮನಾರ್ಹ. ಜಿಲ್ಲೆಯಲ್ಲಿ ನಡೆದ ಸಾಕಷ್ಟು ಪ್ರಕರಣಗಳಲ್ಲಿ ಮಹಿಳೆಯರೂ ಹಣಕಳೆದುಕೊಂಡಿದ್ದಾರೆ. ಮಹಿಳೆಯರಿಗೆ ಕರೆ ಮಾಡಿ ಇನ್ನಿಲ್ಲದ ಆಮಿಷವೊಡ್ಡಿ ವಂಚಿಸಲಾಗುತ್ತಿದೆ. ಆದರೆ, ಅತಿಯಾಸೆಗೆ ಬಿದ್ದ ಮಹಿಳೆಯರು ಹಿಂದೆ ಮುಂದೆ ನೋಡದೆ ಇಂಥ ಜಾಲಕ್ಕೆ ಸಿಲುಕಿ ಕೊನೆಗೆ ಪೆಚ್ಚು ಮೋರೆ ಹಾಕಿಕೊಳ್ಳುವಂತಾಗಿದೆ.
ಉತ್ತರ ಭಾರತ ಪೊಲೀಸರ ಅಸಹಕಾರ : ಇಂಥ ಮೋಸ ಜಾಲ ಇರುವುದೇ ಉತ್ತರ ಭಾರತದ ರಾಜ್ಯಗಳಲ್ಲಿ. ಪ್ರಕರಣದ ಬೆನ್ನತ್ತಿ ಅಲ್ಲಿಗೆ ಹೋಗಲು ಮುಂದಾದ ಪೊಲೀಸರಿಗೆ ಆ ರಾಜ್ಯದ ಪೊಲೀಸರು ಸರಿಯಾಗಿ ಸಹಕಾರ ನೀಡುವುದಿಲ್ಲ ಎಂಬ ಆರೋಪಗಳಿವೆ. ಅಲ್ಲೆಲ್ಲ ಅಂಧಾ ಕಾನೂನು ಜಾರಿಯಲ್ಲಿದ್ದು, ಪೊಲೀಸರೇ ಒಂಟಿಯಾಗಿ ಓಡಾಡುವುದಿಲ್ಲ. ಅಂಥದ್ದರಲ್ಲಿ ನಾವು ಹೋಗಿ ನಮ್ಮೊಟ್ಟಿಗೆ ಬನ್ನಿ ಎಂದು ಕೇಳಿದರೆ ಅಲ್ಲಿನ ಪೊಲೀಸರು ಸರಿಯಾಗಿ ಸ್ಪಂದಿಸುವುದಿಲ್ಲ. ಹೇಗೋ ಪ್ರಯಾಸದಿಂದ ಹೋದರೂ ಆ ವಿಳಾಸದಲ್ಲಿ ವಂಚಕ ಇರುವುದೇ ಇಲ್ಲ. ಅಲ್ಲಿಯೂ ಅಮಾಯಕರನ್ನು ಬಲಿ ಮಾಡಲಾಗಿರುತ್ತದೆ ಎನ್ನುವುದು ಪೊಲೀಸರ ವಿವರಣೆ.
ನುರಿತ ಸಿಬ್ಬಂದಿ ಇಲ್ಲ : ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚಕರು ತುಂಬಾ ತೀಕ್ಷ್ಣಮತಿಗಳಾಗಿರುತ್ತಾರೆ. ಅವರನ್ನು ಬೆನ್ನತ್ತಬೇಕಾದರೆ ವಿಶೇಷ ನುರಿತ ತಾಂತ್ರಿಕ ಸಿಬ್ಬಂದಿ ಇರಬೇಕು. ತಂತ್ರಜ್ಞಾನ ಬಳಸಿ ಅಪರಾಧಿ ಗಳಿಗಂತ ವೇಗದಲ್ಲಿ ಪ್ರಕರಣ ಬೇಧಿಸುವ ಸಿಬ್ಬಂದಿಯ ಅಗತ್ಯವಿದೆ. ಈಗಿರುವ ಸಿಬ್ಬಂದಿಗೆ ತರಬೇತಿ ನೀಡಿ ಆ ನಿಟ್ಟಿನಲ್ಲಿ ತಯಾರಿಸಬೇಕಿದೆ. ಇಲ್ಲವಾದರೆ ಇಂಥ ಪ್ರಕರಣ ಬೇಧಿ ಸುವುದು ಕಷ್ಟ ಎನ್ನುವುದು ಅಧಿಕಾರಿಗಳ ವಿಶ್ಲೇಷಣೆ.
–ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.