Politics: ಚಳಿಗಾಲದ ಅಧಿವೇಶನದಲ್ಲೇ ಮಂಡನೆಗೆ ವಿಪಕ್ಷ ಪಟ್ಟು ?
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ(ಜಾತಿಗಣತಿ)ಗೆ ಅಂತಿಮ ಸ್ಪರ್ಶ
Team Udayavani, Oct 7, 2023, 11:16 PM IST
ಬೆಂಗಳೂರು: ಏಳು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಗೆ ಅಂತಿಮ ಸ್ಪರ್ಶ ಸಿಕ್ಕಿದ್ದು, ನವೆಂಬರ್ ಒಳಗೆ ಸರಕಾರದ ಕೈಸೇರಲಿದೆ.
ಇದನ್ನು ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರೂ ಸ್ಪಷ್ಟಪಡಿಸಿದ್ದಾರೆ. ಹೆಚ್ಚಾ ಕಡಿಮೆ ಇದೇ ಅವಧಿಯಲ್ಲಿ ಚಳಿಗಾಲದ ಅಧಿವೇಶನವೂ ಸಮಾವೇಶಗೊಳ್ಳಲಿದ್ದು, ಈ ಅಧಿ
ವೇಶನದಲ್ಲಿ ವರದಿ ಮಂಡಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ವಿಪಕ್ಷಗಳು ಸಜ್ಜಾಗಿವೆ.
ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಹಂತದಲ್ಲಿ ಬಿಹಾರದ ಜಾತಿಗಣತಿ ವರದಿ ಹೊರಬಿದ್ದಿದ್ದು, ದೇಶಾದ್ಯಂತ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಬೇಕೆಂಬ ನ್ಯಾ| ಭಕ್ತವತ್ಸಲ ಸಮಿತಿಯ ಕೆಲವು ಶಿಫಾರಸುಗಳ ಜಾರಿಗೆ ಸರಕಾರ ಒಪ್ಪಿದೆ.
ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೇಲೆ ರಾಜ್ಯದಲ್ಲಿ ನಿರೀಕ್ಷೆ ಹೆಚ್ಚಾಗಿದ್ದು, ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅಧಿಕಾರಾವಧಿಯೂ ನವೆಂಬರ್‌ನಲ್ಲಿ ಪೂರ್ಣಗೊಳ್ಳುವುದರಿಂದ ಅಷ್ಟರೊಳಗಾಗಿ ಸರಕಾರಕ್ಕೆ ವರದಿ ಸಲ್ಲಿಕೆಯಾ ಗುವ ಎಲ್ಲ ಸಾಧ್ಯತೆಗಳೂ ಇವೆ. ನ್ಯಾ| ಭಕ್ತವತ್ಸಲ ಸಮಿತಿ ವರದಿ ಹಾಗೂ ಆಯೋಗದ ವರದಿಯನ್ನು ಸರಕಾರ ಹೇಗೆ ಜಾರಿಗೆ ತರಲಿದೆ ಎಂಬುದಕ್ಕೆ ಉತ್ತರ ಸಿಗಬೇಕಿದೆ.
165 ಕೋ.ರೂ. ಖರ್ಚು
2014-19ರ ಅವಧಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ್ ಅವರು 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದರು. ಇದಕ್ಕಾಗಿ 165 ಕೋ. ರೂ. ಖರ್ಚಾಗಿತ್ತು. ಆದರೆ ಕಾರ್ಯದರ್ಶಿಯ ಸಹಿ ಆಗಿರಲಿಲ್ಲ ಎಂಬ ಕಾರಣಕ್ಕೆ ಸರಕಾರಕ್ಕೆ ಸಲ್ಲಿಕೆಯಾಗಿರಲಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲೂ ವರದಿ ಸ್ವೀಕಾರವಾಗಿರಲಿಲ್ಲ. 2020ರ ನವೆಂಬರ್ ತಿಂಗಳಲ್ಲಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾಗಿತ್ತು. ಕಾಂತರಾಜು ತಯಾರಿಸಿದ್ದ ವರದಿಯ ಪರಿಶೀಲನೆ ನಡೆಸಲು ಕಾಲಾವಕಾಶ ಕೇಳಿದ್ದ ಹೆಗ್ಡೆ, ಶಿಕ್ಷಕರು ಮನೆ-ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿದ್ದರಿಂದ ಅದರಲ್ಲಿ ಬದಲಾವಣೆ ಇಲ್ಲ ಎಂದಿದ್ದರು.
ಮೀಸಲಾತಿಗೆ ಪೂರಕವೋ?
ಸುಪ್ರೀಂಕೋರ್ಟ್ ಆದೇಶದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಬೇಕೆಂಬ ನ್ಯಾ| ಭಕ್ತವತ್ಸಲ ಸಮಿತಿ ವರದಿಯನ್ನು ಸರಕಾರ ಒಪ್ಪಿಕೊಂಡಿದೆ. ಅದೇ ರೀತಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಲಿರುವ ವರದಿ ಯನ್ನೂ ಸರಕಾರ ಸಂಪುಟದಲ್ಲಿ ಇಡಲಿದೆಯೇ? ಅದರ ಅಧ್ಯಯನಕ್ಕೆ ಕಾಲಾವಕಾಶ ಬೇಕೆಂದು ಕಾಲಹರಣ ಮಾಡಲಿದೆಯೇ ಎಂಬುದು ಪ್ರಶ್ನೆ. ಎಲ್ಲಕ್ಕಿಂತ ಮಿಗಿಲಾಗಿ ಎರಡೂ ವರದಿ ಗಳು ಮೀಸಲಾತಿಗೆ ಸಹಕಾರಿ ಆಗಲಿವೆಯೇ ಅಥವಾ ಮೀಸಲಾತಿ ವಿಚಾರವನ್ನು ಇನ್ನಷ್ಟು ಕಗ್ಗಂಟಾಗಿಸ ಲಿವೆಯೇ ಎಂಬ ಆತಂಕವೂ ಎದುರಾಗಿದೆ. ಹೀಗಾಗಿ ವರದಿಯನ್ನು ಸಂಪುಟ ಅಥವಾ ಅಧಿವೇಶನದಲ್ಲಿ ಪ್ರಸ್ತಾವಿಸಬೇಕೆ, ಬೇಡವೇ ಎಂಬ ಜಿಜ್ಞಾಸೆ ಸರಕಾರದ್ದಾಗಿದೆ.
ಒಂದು ದೇಶ ಒಂದು ಚುನಾವಣೆಗೆ ಕೌಂಟರ್?
ಬಿಹಾರದ ಜಾತಿಗಣತಿಗೆ ತಡೆಯೊಡ್ಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ದೇಶಾದ್ಯಂತ ಜಾತಿಗಣತಿಯೇ ಚರ್ಚೆಯ ವಸ್ತುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಜಾತಿಗಣತಿ ಬಹಿರಂಗ ಪಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಮಧ್ಯೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದು, ಜಾತಿಗಣತಿ ನಡೆಸುವಂತೆ ಕೇರಳ ಸರಕಾರದ ಮೇಲೆ ಅಲ್ಲಿನ ಅಲ್ಪಸಂಖ್ಯಾಕರು ಒತ್ತಡ ಹೇರುತ್ತಿದ್ದಾªರೆ. ರಾಜಸ್ಥಾನದಲ್ಲೂ ಜಾತಿಗಣತಿ ನಡೆಸುವುದಾಗಿ ಸಿಎಂ ಅಶೋಕ್ ಗೆಹೊÉàಟ್ ಹೇಳಲಾರಂಭಿಸಿದ್ದಾರೆ. ಲೋಕಸಭೆ ಚುನಾವಣೆಗೆ ಜಾತಿಗಣತಿಯನ್ನೇ ಅಸ್ತ್ರವನ್ನಾಗಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆಯ ವಿರುದ್ಧ ಇದನ್ನೇ ಪ್ರಬಲ ಅಸ್ತ್ರವಾಗಿ ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡಿದೆ. 2011ರ ಬಳಿಕ ದೇಶಾದ್ಯಂತ ಜನಗಣತಿ ನಡೆದಿಲ್ಲ. 2021ರಲ್ಲಿ ನಡೆಯ ಬೇಕಿದ್ದ ಗಣತಿ ಮುಂದೂಡಿಕೆಯಾಗಿದೆ. ರಾಜ್ಯಗಳು ತಮ್ಮದೇ ಆದ ಜಾತಿ ಗಣತಿಗಳನ್ನು ನಡೆಸಿವೆ. ರಾಜಕೀಯ ಸನ್ನಿವೇಶಗಳಿಗಿಂತ ಹೆಚ್ಚಾಗಿ ಸ್ಥಳೀಯ ಜನ ಸಂಖ್ಯೆ ಹಾಗೂ ಜಾತಿಗಳ ಹಿಂದುಳಿದಿರುವಿಕೆಯ ವಿಚಾರದಲ್ಲಿ ಭಿನ್ನ ಪರಿಸ್ಥಿತಿಗಳು ಹಲವು ರಾಜ್ಯಗಳಲ್ಲಿವೆ. ಹೀಗಿರುವಾಗ ಒಂದು ದೇಶ ಒಂದು ಚುನಾವಣೆ ಅಸಾಧ್ಯ ಎಂಬುದನ್ನು ಐಎನ್‌ಡಿಐಎ ಮಿತ್ರಪಕ್ಷಗಳು ಆಡಳಿತ ದಲ್ಲಿರುವ ರಾಜ್ಯಗಳು ಪ್ರತಿಪಾದಿಸಲೂ ಗಂಭೀರ ಚಿಂತನೆಗಳು ನಡೆದಿವೆ.
ಶಿಕ್ಷಕರು ಮನೆ-ಮನೆಗೆ ತೆರಳಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ್ದಾರೆ. ಪ್ರತಿ ಕುಟುಂಬದ ಸಾಮಾಜಿಕ ಸ್ಥಾನಮಾನ, ಶಿಕ್ಷಣದ ಗುಣಮಟ್ಟ, ಔದ್ಯೋಗಿಕ ಸ್ಥಿತಿಗತಿ, ಜಾತಿ, ಉಪಜಾತಿ ಸೇರಿ ಅರ್ಜಿ ನಮೂನೆಯಲ್ಲಿದ್ದ ಎಲ್ಲ ದತ್ತಾಂಶಗಳನ್ನೂ ಸಂಗ್ರಹಿಸಿದ್ದಾರೆ. ವರದಿ ಅತ್ಯಂತ ನಿಖರವಾಗಿರಲಿದ್ದು, ಈಗಾಗಲೇ ತಿಳಿಸಿರುವಂತೆ ಅತಿ ಶೀಘ್ರದಲ್ಲಿ ಸರಕಾರಕ್ಕೆ ಆಯೋಗದ ವರದಿಯನ್ನು ಸಲ್ಲಿಸುತ್ತೇವೆ.
ಕೆ. ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಜಾತಿಗಣತಿಯು ಸಮಾಜವನ್ನು ವಿಭಜಿಸುವುದಿಲ್ಲ. ಸ್ವಾತಂತ್ರಾéನಂತರ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗಳನ್ನು ಅರಿತು, ಬಡತನ ನಿವಾರಣೆಗೆ ಕಾರ್ಯಕ್ರಮ ರೂಪಿಸಿ ಸಮಸಮಾಜ ನಿರ್ಮಿಸಲು ಸಹಕಾರಿಯಾಗಲಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ನವೆಂಬರ್‌ನಲ್ಲಿ ವರದಿ ನೀಡುವುದಾಗಿ ಹೇಳಿ¨ªಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾವು 2014-15ರಲ್ಲಿ ಶೈಕ್ಷಣಿಕ ಮತ್ತು ಆರ್ಥಿಕತೆಯ ಗಣತಿಗೆ ಆದೇಶಿಸಿದ್ದೆವು. ಎಲ್ಲೂ ಜಾತಿಗಣತಿ ಮಾಡಲು ಹೇಳಿರಲಿಲ್ಲ. ಎಲ್ಲರಿಗೂ ಇದು ಜಾತಿಗಣತಿ ಅಲ್ಲ ಎಂಬುದು ಗೊತ್ತಿದೆ. ಇದು ಜಾತಿಗಣತಿಯೋ? ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೋ ಎಂಬುದನ್ನು ಸರಕಾರ ಸ್ಪಷ್ಟಪಡಿಸಲಿ.
-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.