“ಮಾನವ – ಕಾಡು ಪ್ರಾಣಿಗಳ ಸಂಘರ್ಷಕ್ಕೆ ಪರಿಹಾರ ಹುಡುಕಿ’
Team Udayavani, May 7, 2022, 10:41 PM IST
ಉಡುಪಿ: ಇತ್ತೀಚಿನ ದಿನಗಳಲ್ಲಿ ಮಾನವ ಹಾಗೂ ಕಾಡುಪ್ರಾಣಿಗಳ ನಡುವೆ ಸಂಘರ್ಷಗಳು ಹೆಚ್ಚಾಗುವುದರ ಜತೆಗೆ ಪ್ರಾಣ ಹಾಗೂ ಬೆಳೆ ಹಾನಿಗಳು ಆಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅರಣ್ಯ ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಕಾಡುಪ್ರಾಣಿಗಳಿಗೆ ಅಗತ್ಯವಿರುವ ಹಣ್ಣು-ಹಂಪಲು, ಗಿಡ-ಮರಗಳನ್ನು ಬೆಳೆಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಳಸಂತೆಯಲ್ಲಿ ಪಡಿತರ ಮಾರಾಟ ಬೇಡ
ಪಡಿತರ ವ್ಯವಸ್ಥೆಯಲ್ಲಿ ಪಡೆದ ದವಸ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಎಚ್ಚರ ವಹಿಸಬೇಕು. ಸಿಕ್ಕಿಬಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಸಚಿವರು ಹೇಳಿದರು.
ಗಿಡಮರ ಬೆಳೆಯಲು ಒತ್ತು
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಾತನಾಡಿ, ಕಾಡು ಪ್ರಾಣಿಗಳು ಆಹಾರಗಳನ್ನು ಅರಸಿ ಜನವಸತಿಯತ್ತ ಬರುತ್ತಿವೆ. ಅದನ್ನು ತಡೆಯಲು ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡ-ಮರಗಳು, ಆನೆಗಳಿಗೆ ಅಗತ್ಯವಿದ್ದ ಬಿದಿರು, ಬೈನೆ ಮರಗಳನ್ನು ಬೆಳೆಯಲು ಒತ್ತು ನೀಡುವುದು ಅವಶ್ಯ ಎಂದು ಸಲಹೆ ನೀಡಿದರು.
ಕುಚ್ಚಿಗೆ ಅಕ್ಕಿ ನೀಡಿ
ಪಡಿತರದಲ್ಲಿ ನೀಡುತ್ತಿರುವ ಅಕ್ಕಿಯನ್ನು ಹೆಚ್ಚಾಗಿ ಕರಾವಳಿಯ ಜನರು ಬಳಸುವುದಿಲ್ಲ. ಅವರಿಗೆ ಕುಚ್ಚಿಗೆ ಅಕ್ಕಿಯನ್ನು ಪಡಿತರದಲ್ಲಿ ವಿತರಿಸಬೇಕು ಎಂದು ಶಾಸಕ ರಘುಪತಿ ಭಟ್ ಸಚಿವರ ಗಮನಕ್ಕೆ ತಂದರು.
ಅಪರ ಜಿಲ್ಲಾಧಿಕಾರಿ ವೀಣಾ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಅರಣ್ಯ ಇಲಾಖೆ ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.