ವಿಧಾನಮಂಡಲ ಅಧಿವೇಶನದ ಮೊದಲ ದಿನ ಸುಗಮ ಕಲಾಪ
ಅಗಲಿದ ಗಣ್ಯರಿಗೆ ಸಂತಾಪ
Team Udayavani, Dec 13, 2021, 10:00 PM IST
ಸುವರ್ಣವಿಧಾನಸೌಧ: ವಿಧಾನಮಂಡಲ ಅಧಿವೇಶನದ ಮೊದಲ ದಿನ ಕಲಾಪ ಉಭಯ ಸದನಗಳಲ್ಲಿ ಪ್ರತಿಭಟನೆ, ಧರಣಿಯ ಗೊಡವೆ ಇಲ್ಲದೆ ಸುಸೂತ್ರವಾಗಿ ನಡೆಯಿತು.
ಬಿಟ್ ಕಾಯಿನ್, ಶೇ.40 ಪರ್ಸಂಟೇಜ್ ಆರೋಪ ವಿಚಾರ ಪ್ರಸ್ತಾಪಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಚಿಂತನೆ ನಡೆಸಿತ್ತಾದರೂ ಮೊದಲ ದಿನವೇ ಆ ವಿಚಾರ ಪ್ರಸ್ತಾಪಿಸಿದರೆ ಕಲಾಪದಲ್ಲಿ ಗದ್ದಲ ಉಂಟಾದರೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕೆ ಮಳೆಯಿಂದ ಪ್ರವಾಹ, ಬೆಳೆ ನಷ್ಟ, ಪರಿಹಾರ ವಿಚಾರ ನಿಲುವಳಿ ಮಂಡಿಸುವ ಮೂಲಕ ಜಾಣ್ಮೆ ನಡೆ ಅನುಸರಿಸಿತು.ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಚಾರ ಪ್ರಸ್ತಾಪಕ್ಕೆ ಅವಕಾಶವನ್ನೂ ಕೊಟ್ಟರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪೂರ್ವಭಾವಿಯಾಗಿ ಪ್ರಸ್ತಾವನೆ ಮಾಡಿದರು. ಮೊದಲ ದಿನ ಸಂತಾಪ, ಪ್ರಶ್ನೊತ್ತರ, ಗಮನ ಸೆಳೆಯುವ ಸೂಚನೆ ಸೇರಿ ಎಲ್ಲವೂ ನಿಗದಿತ ಕಾರ್ಯಸೂಚಿಯಂತೆಯೇ ನಡೆಯಿತು. ವಿಧಾನಪರಿಷತ್‌ನಲ್ಲೂ ಸಂತಾಪ, ಪ್ರಶ್ನೋತರ, ಸಾರ್ವಜನಿಕ ಜರೂರು ವಿಷಯಗಳ ಪ್ರಸ್ತಾವನೆಗೆ ಅವಕಾಶ ದೊರೆಯಿತು. ಹೀಗಾಗಿ, ಉಭಯ ಸದನಗಳಲ್ಲಿ ಮೊದಲ ದಿನದ ಕಲಾಪ ಸುಗಮವಾಗಿ ನಡೆಯುವಂತಾಯಿತು.
ಅಗಲಿದ ಗಣ್ಯರಿಗೆ ಸಂತಾಪ
ಭಾರತೀಯ ಸೇನೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ನಟ ಪುನೀತ್ ರಾಜ್‌ಕುಮಾರ್ ಸಹಿತವಾಗಿ ಅಗಲಿದ ಗಣ್ಯರಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ರಾಜ್ಯಪಾಲ ಕೆ.ರೋಸಯ್ಯ, ಮಾಜಿ ಸಚಿವರಾಗಿದ್ದ ಎಸ್.ಆರ್.ಮೋರೆ, ವಿರೂಪಾಕ್ಷಪ್ಪ ಅಗಡಿ, ಮಾಜಿ ಶಾಸಕರಾಗಿದ್ದ ಕೆ.ರಾಮ್ ಭಟ್, ಡಾ.ಎಂ.ಪಿ.ಕರ್ಕಿ, ಹಿರಿಯ ನಟ ಎಸ್. ಶಿವರಾಮ್, ವಿದ್ವಾಂಸ ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಅವರಿಗೆ ಸಂತಾಪ ಸೂಚಿಸುವ ನಿಲುವಳಿಯನ್ನು ವಿಧಾನ ಸಭೆಯಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಂಡಿಸಿದರು.
ಇದನ್ನೂ ಓದಿ:ಕೇಂದ್ರದ ಒಪ್ಪಿಗೆ ದೊರೆತ ತಕ್ಷಣ ಪಶ್ಚಿಮ ಘಟ್ಟದ ಘಾಟ್‌ಗಳ ದುರಸ್ತಿ: ಸಿಸಿ ಪಾಟೀಲ್
ವಿಧಾನಸಭೆಯಲ್ಲಿ ನಿಲುವಳಿ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಅವರಿಗೆ ಈಗಾಗಲೇ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಈ ಸಂಬಂಧ ಶೀಘ್ರ ಆದೇಶ ಹೊರಡಿಸಲಿದ್ದೇವೆ. ಹಾಗೆಯೇ ಪುನೀತ್ ರಾಜ್‌ಕುಮಾರ್ ಅವರಿಗೆ ಪದ್ಮಶ್ರೀ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಿದ್ದೇವೆ ಎಂದರು.
ಭಾರತೀಯ ಸೇನೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನವಾಗಿರುವುದು ದಿಗ್ಭ್ರಮೆ ಉಂಟುಮಾಡಿದೆ. ಸಿಡಿಎಸ್ ಇರುವ ಹೆಲಿಕಾಪ್ಟರ್ ಪತನದಿಂದ ಇಡೀ ದೇಶವೇ ಅವರ ಸಾವಿಗೆ ಮರುಗುತ್ತಿದೆ. ವೀರ ಸೇನಾನಿಯನ್ನು ದೇಶ ಕಳೆದುಕೊಂಡಿದೆ ಎಂದು ಕಂಬನಿ ಮಿಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ವೀರ ಸೇನಾನಿಗಳು ವೀರ ಮರಣ ಹೊಂದಿದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಾವನ್ನು ಸಂಭ್ರಮಿಸಿದವರ ವಿರುದ್ಧವೂ ಕ್ರಮ ಆಗಬೇಕು. ಈ ಬಗ್ಗೆಯೂ ವಿಶೇಷ ತನಿಖೆ ನಡೆಸಬೇಕು. ವಿಕೃತ ಹೇಳಿಕೆ ನೀಡುವವರ ವಿರುದ್ಧ ಕ್ರಮ ಆಗಲೇ ಬೇಕು ಎಂದರು.
ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಜೆ.ಸಿ.ಮಾಧುಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಶಿಕಲಾ ಜೊಲ್ಲೆ, ಹಾಲಪ್ಪ ಆಚಾರ್, ಶಾಸಕರಾದ ಬಂಡೆಪ್ಪ ಕಾಶಂಪುರ್, ರಾಜೇಗೌಡ, ಎನ್.ಮಹೇಶ್, ಕುಮಾರ್ ಬಂಗಾರಪ್ಪ ಸಂತಾಪ ಸೂಚಕ ನಿಲುವಳಿ ಬೆಂಬಲಿಸಿ ಮಾತನಾಡಿದರು. ನಂತರ ಒಂದು ನಿಮಿಷ ಮೌನಾಚರಣೆ ಮೂಲಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಮೇಲ್ಮನೆಯಲ್ಲೂ ಸಂತಾಪ
ಪರಿಷತ್‌ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಹಿರಿಯ ನಟ ಕೆ.ಶಿವರಾಂ,ಹಿರಿಯ ರಾಜಕಾರಣಿ ರೋಸಯ್ಯ, ಮಾಜಿ ಸಚಿವ ಎಸ್.ಆರ್.ಮೋರೆ, ಸ್ವಾತಂತ್ರ್ಯ ಹೋರಾಟಗಾರ ಬೋಜರಾಜ್ ಹೆಗಡೆ, ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್, ನಾಡೋಜ ಪದ್ಮಮ್ಮ ಸೇರಿ ಅಗಲಿದ ಎಲ್ಲ ಗಣ್ಯರಿಗೆ ಸಂತಾಪ ಸೂಚಿಸಿದರು.
ಪೂರ್ಣ ತನಿಖೆ ಆಗಬೇಕು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಭಾರತೀಯ ಸೇನೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಸಂಚರಿಸುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೀಡಾಗಿ ಬಿಪಿನ್ ರಾವತ್, ಅವರಪತ್ನಿ ಸಹಿತವಾಗಿ 13 ಸೇನಾನಿಗಳು ವೀರ ಮರಣ ಅಪ್ಪಿದ್ದಾರೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಸೇನಾ ಹೆಲಿಕಾಪ್ಟರ್ ದುರಂತ ಸಂಭವಿಸಿರುವುದರ ಪೂರ್ಣ ತನಿಖೆ ಆಗಬೇಕು. ಇದರಲ್ಲಿ ಯಾರದೋ ಕೈವಾಡ ಇದೆ ಎಂದು ಹೇಳುತ್ತಿಲ್ಲ. ಬದಲಾಗಿ ಸಮಗ್ರ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ತಿಳಿಯಲು ಸಾಧ್ಯವಿದೆ ಎಂದರು.
ನಟಿ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಹಾಗೆಯೇ ಹಿರಿಯ ನಟ ಶಿವರಾಮ್ ಅವರ ಗ್ರಂಥಾಲಯವೊಂದಿದೆ. ಅದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಅಗಲಿದ ಚೇತನಗಳ ಸಾಧನೆಯನ್ನು ಸ್ಮರಿಸಿದರಲ್ಲದೇ ಅವರು ನಾಡಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ನಂತರ ಸಭೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಆಚರಿಸಿ ಸಂತಾಪ ಸೂಚಿಸಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.