![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 29, 2020, 3:07 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ “ಫಿಟ್ ಇಂಡಿಯಾ’ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗ್ರಾಮೀಣ ಪ್ರದೇಶದ ಯುವಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಾಗೂ “ಫಿಟ್ ಇಂಡಿಯಾ’ ಅಭಿಯಾನದ ಭಾಗವಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ “ಓಪನ್ ಜಿಮ್’ ತೆರೆಯಲು ಚಿಂತನೆ ನಡೆಸಿದೆ.
ಭವಿಷ್ಯತ್ತಿನ ಯುವ ಜನಾಂಗದ ಸದೃಢ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು “ಫಿಟ್ ಇಂಡಿಯಾ’ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಮೋದಿಯವರ ಕನಸಿನ ಈ ಅಭಿಯಾನ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಮಟ್ಟಕ್ಕೂ ವಿಸ್ತರಿಸುತ್ತಿದೆ.
“ಫಿಟ್ ಇಂಡಿಯಾ’ ಅಭಿಯಾನ ಹಳ್ಳಿಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಸಚಿವರು ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಂಬಂಧ ಹಲವು ರೀತಿಯ ಚರ್ಚೆಗಳನ್ನು ಕೂಡ ನಡೆಸಿದ್ದಾರೆಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭೂಮಿ ನೀಡಿದರೆ “ಓಪನ್ ಜಿಮ್’: ತಾಲೂಕು ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ “ಫಿಟ್ ಇಂಡಿಯಾ’ ಅಭಿಯಾನದ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನದೇ ಆದ ಯೋಜನೆ ರೂಪಿಸುತ್ತಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ “ಓಪನ್ ಜಿಮ್’ ತೆರೆಯುವ ಇರಾದೆಯಲ್ಲಿದೆ.
“ಫಿಟ್ ಇಂಡಿಯಾ’ ಅಭಿಯಾನ ಸಂಬಂಧ ಇತ್ತೀಚೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮತ್ತು ಸದಸ್ಯರ ಸಭೆಯಲ್ಲಿ “ಫಿಟ್ ಇಂಡಿಯಾ’ ಅಭಿಯಾನವನ್ನು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಯಶಸ್ವಿಗೊಳಿಸುವ ಸಂಬಂಧ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಚಿವರು, ಹಿರಿಯ ಅಧಿಕಾರಿ ಗಳು ಕೂಡ ಪಾಲ್ಗೊಂಡಿದ್ದರು.
ಈ ವೇಳೆ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ “ಓಪನ್ ಜಿಮ್’ ತೆರೆಯುವ ಬಗ್ಗೆ ವಿಸ್ತೃತ ಚರ್ಚೆ ನಡೆ ಯಿತು ಎಂದು ಬೆಂಗಳೂರು ಉತ್ತರ ತಾಲೂಕಿನ ಕಾರ್ಯ ನಿರ್ವಹಣಾ ಅಧಿಕಾರಿ ಕಿಶೋರ್ ತಿಳಿಸಿದ್ದಾರೆ. ತಾಲೂಕು ಹಾಗೂ ಗ್ರಾಮ ಪಂಚಾಯ್ತಿಗಳು “ಓಪನ್ ಜಿಮ್’ ತೆರೆಯಲು ಆಸಕ್ತಿ ತೋರಿ, ಇದಕ್ಕೆ ಬೇಕಾಗುವ ಭೂಮಿ ನೀಡಿದರೆ ಈ ಕಾರ್ಯಕ್ಕೆ ಎಲ್ಲಾ ರೀತಿಯ ನೆರವನ್ನು ಸರ್ಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿಗಳಿಗೆ ಸುತ್ತೋಲೆ: “ಫಿಟ್ ಇಂಡಿಯಾ’ ಅಭಿಯಾನದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸೈಕಲ್ ಜಾಥಾ ನಡೆಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಎಲ್ಲಾ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದೆ.
ಈ ಅಭಿಯಾನದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಸ್ವ-ಸಹಾಯ ಗುಂಪುಗಳನ್ನು ತೊಡಗಿಸಿ ಕೊಳ್ಳುವಂತೆ ಸೂಚಿಸಿದೆ. ಜತೆಗೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಾರ್ಯದರ್ಶಿಗಳು ಕೂಡ ಸಂಬಂಧಪಟ್ಟ ಹಿರಿಯ ಅಧಿಕಾರಿ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಕಾರ್ಯಕ್ರಮಗಳ ರೂಪುರೇಷ ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
96 ಗ್ರಾಮ ಪಂಚಾಯ್ತಿಗಳಲ್ಲಿ ಅಭಿಯಾನ: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ 96 ಗ್ರಾಮ ಪಂಚಾಯ್ತಿಗಳಿದ್ದು, ಇಲ್ಲಿ ಈಗಾಗಲೇ “ಫಿಟ್ ಇಂಡಿಯಾ’ ಅಭಿಯಾನ ಕಾರ್ಯ ರೂಪಕ್ಕೆ ಬಂದಿದೆ. ವಿದ್ಯಾರ್ಥಿಗಳು “ಫಿಟ್ ಇಂಡಿಯಾ’ ಅಭಿಯಾನದ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು, ಹಳ್ಳಿಗರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮರಸೂರು ಗ್ರಾಮ ಪಂಚಾಯ್ತಿ ಪಿಡಿಒ ಶಶಿಕಿರಣ್, ಪ್ರೌಢಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೈಕಲ್ ಜಾಥಾ ನಡೆಸಿದ್ದಾರೆ. ವಿದ್ಯಾರ್ಥಿಗಳ, ಸರ್ಕಾರದ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮಾಹಿತಿ ನೀಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ “ಫಿಟ್ ಇಂಡಿಯಾ’ ಅಭಿಯಾನ, ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿಗೆ ವ್ಯಾಪಿಸಿದೆ. ದೇಶದ ಯುವ ಸಮೂಹ ಸದೃಢ ಆರೋಗ್ಯ ಹೊಂದುವುದು ಇದರ ಮುಖ್ಯ ಉದ್ದೇಶವಾಗಿದೆ
-ಕೆ.ಶಿವರಾಮೇಗೌಡ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಿಇಒ
* ದೇವೇಶ ಸೂರಗುಪ್ಪ
You seem to have an Ad Blocker on.
To continue reading, please turn it off or whitelist Udayavani.