ಉ.ಕ., ಮಲೆನಾಡಲ್ಲಿ ಪ್ರವಾಹ ಇಳಿಕೆ
Team Udayavani, Aug 12, 2019, 3:08 AM IST
ಹುಬ್ಬಳ್ಳಿ: ಉತ್ತರ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಭಾನುವಾರ ಮಳೆ ಕಡಿಮೆಯಾಗಿದ್ದು, ನೆರೆ ಇಳಿಮುಖವಾಗುತ್ತಿದೆ. ಆದರೆ, ಹೊಸಪೇಟೆಯ ತುಂಗಭದ್ರಾ ಜಲಾಶಯ ಭರ್ತಿಯಾಗಿ ನೀರನ್ನು ಹೊರಬಿಟ್ಟ ಕಾರಣ ಹೈ-ಕ ಭಾಗದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸಂಕಷ್ಟ ಎದುರಾಗಿದೆ.
ಮೂರು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗಿದ್ದು, ವಿಶ್ವವಿಖ್ಯಾತ ಹಂಪಿ ಹಾಗೂ ಕೊಪ್ಪಳ ಜಿಲ್ಲೆಯ ವಿರೂಪಾಪುರ ಗಡ್ಡಿ ಜಲಾವೃತವಾಗಿದೆ. ವಾರಾಂತ್ಯ ಕಳೆಯಲು ಆಗಮಿಸಿದ್ದ ಸುಮಾರು ಇನ್ನೂರರಷ್ಟು ಪ್ರವಾಸಿಗರು ಗಡ್ಡಿಯಲ್ಲಿ ಸಿಲುಕಿದ್ದು, ಈ ಪೈಕಿ ಹರಿಗೋಲು ನೆರವಿನಿಂದ 26 ಜನರನ್ನು ರಕ್ಷಿಸಲಾಗಿದೆ. ಆದರೆ, ಈ ಕಾರ್ಯಾಚರಣೆ ಅಪಾಯಕಾರಿ ಎನ್ನುವ ಕಾರಣಕ್ಕೆ ಸ್ಥಗಿತಗೊಳಿಸಲಾಗಿದ್ದು, ರಾಷ್ಟ್ರೀಯ ವಿಪತ್ತು ದಳದ ತಂಡ ಸೋಮವಾರ ಆಗಮಿಸಿ ಪ್ರವಾಸಿಗರ ರಕ್ಷಣಾ ಕಾರ್ಯ ಕೈಗೊಳ್ಳಲಿದೆ.
ಪಂಪಾಸರೋವರ ಜಲಾವೃತ: ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಮಧ್ಯೆ ಸಂಪರ್ಕ ಕಲ್ಪಿಸುವ ಕಂಪ್ಲಿ-ಗಂಗಾವತಿ ಪುರಾತನ ಸೇತುವೆ ಜಲಾವೃತಗೊಂಡಿದೆ. ಇತಿಹಾಸ ಪ್ರಸಿದ್ಧ ಪಂಪಾಸರೋವರ ಕ್ಷೇತ್ರಕ್ಕೆ ನದಿಯ ನೀರು ನುಗ್ಗಿದ್ದು, ಅರ್ಚಕ ರಾಮದಾಸ ಬಾಬಾ ಸೇರಿ ಐವರು ಸಿಲುಕಿದ್ದಾರೆ. ಋಷಿಮುಖ ಪರ್ವತದಲ್ಲಿ ಆನಂದಗಿರಿ ಬಾಬಾ ಹಾಗೂ ಇಬ್ಬರು ಕಾರ್ಮಿಕರು ಸಿಲುಕಿದ್ದಾರೆ. ನವವೃಂದಾವನ ಗಡ್ಡಿಯಲ್ಲಿ ಕಾವಲು ಕಾಯುತ್ತಿದ್ದ ರಾಘವೇಂದ್ರ, ಉಡಚಪ್ಪ ಎಂಬುವರು ಪ್ರವಾಹದಲ್ಲಿ ಸಿಲುಕಿದ್ದಾರೆ.
ಆನೆಗೊಂದಿ, ಚಂದ್ರಮೌಳೇಶ್ವರ ದೇಗುಲ, ಹನುಮನಹಳ್ಳಿ ಸಂಪೂರ್ಣ ಜಲಾವೃತಗೊಂಡಿದೆ. ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇಗುಲ ಆವರಣಕ್ಕೂ ನೀರು ನುಗ್ಗಿದೆ. ಶಿವಪುರ ಸಮೀಪದ ನಗರಗಡ್ಡಿ ಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಹಂಪಿಯಲ್ಲೂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸುಮಾರು 63ಕ್ಕೂ ಹೆಚ್ಚು ಸ್ಮಾರಕಗಳು ನೀರಿನಲ್ಲಿ ಮುಳುಗಿವೆ.
ಪ್ರವಾಹ ಕಡಿಮೆಯಾಗುವವರೆಗೆ ಹಂಪಿಗೆ ಬರದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ವಿಜಯವಿಠ್ಠಲ ಮಂಟಪಕ್ಕೆ ತೆರಳುವ ರಸ್ತೆ ಬಂದ್ ಆಗಿದೆ. ವಿರೂಪಾಕ್ಷೇಶ್ವರ ದೇವಸ್ಥಾನ ಹಿಂಭಾಗ ಬರುವ ಧಾರ್ಮಿಕ ಮಂಟಪಗಳು ಮುಳುಗಡೆಯಾಗಿ ಶ್ರದ್ಧಾ ಕಾರ್ಯಗಳು ಗಣೇಶ ಮಂಟಪದಲ್ಲಿ ಜರುಗಿದವು. ಬೋಟ್ ಸಂಚಾರ ಸ್ಥಗಿತಗೊಳಿಸಿದ್ದ ಕಾರಣ ಹಂಪಿಯಿಂದ ವಿರೂಪಾಪುರ ಗಡ್ಡೆಯ ಸಂಪರ್ಕ ಕಡಿತವಾಗಿತ್ತು. ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿತ್ತು.
ರಾಯಚೂರು: ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯ ಹಾಗೂ ಭೀಮಾ ನದಿಯ ಸನ್ನತಿ ಜಲಾಯಶದಿಂದ ನೀರು ಹರಿಸಿರುವುದು ರಾಯಚೂರು ಜಿಲ್ಲೆಯಲ್ಲಿ ಅಪಾಯ ತಂದೊಡ್ಡಿದೆ. ದೇವದುರ್ಗ ತಾಲೂಕಿನ ಗೂಗಲ್ ಬ್ಯಾರೇಜ್ ಮುಳುಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಸಂಪೂರ್ಣ ನೀರಾಗಿದೆ. ಹಳೇ ಬೂರ್ದಿಪಾಡ್ ಗ್ರಾಮ ಜಲಾವೃತಗೊಂಡಿದೆ.
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿಗಳ ಪ್ರವಾಹದಿಂದ 178 ಗ್ರಾಮಗಳು ಅಕ್ಷರಶ: ನಲುಗುತ್ತಿದ್ದು, ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಘಟಪ್ರಭಾ ನದಿ ನೀರು ಮನೆಗೆ ನುಗ್ಗಿ ಮುಧೋಳ ತಾಲೂಕು ಮಾಚಕನೂರಿನ ವಿಠ್ಠಲ ದೇವರಮನಿ (38) ಎಂಬುವರು ಮೃತಪಟ್ಟಿದ್ದಾರೆ. ಕೃಷ್ಣಾ ನದಿ ನೀರು ಕೂಡಲಸಂಗಮದ ಸಂಗಮನಾಥ ದೇವಸ್ಥಾನ ಪ್ರವೇಶಿಸಿದ್ದು, ಗರ್ಭಗುಡಿಗೆ ಬೀಗ ಹಾಕಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಂಗಳಿ ಗ್ರಾಮದ ನಾರಾಯಣಪ್ಪ ಬಡಿಗೇರ ಎಂಬುವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ: ಶಿವಮೊಗ್ಗದ ಸಾಗರ ರಸ್ತೆಯ ಚೋರಡಿ ಬಳಿ ಶನಿವಾರ ನಡೆದಿದ್ದ ಅಪಘಾತದಲ್ಲಿ ಕುಮುದ್ವತಿ ನದಿಗೆ ಬಿದ್ದವರಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಮತ್ತೂಬ್ಬರ ಶವ ದೊರಕಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಬಳಿ ದನ ಮೇಯಿಸಲು ಹೋಗಿದ್ದ ವ್ಯಕ್ತಿಯೊಬ್ಬರು ಭೀಮೆಯ ಪಾಲಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.