ನಿರಾಶ್ರಿತರ ಗೋಳು ಕೇಳ್ಳೋರ್ಯಾರು?
Team Udayavani, Nov 18, 2021, 11:44 AM IST
ಚಿಂಚೋಳಿ: ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಡಿಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವ ಜನರು ಪುನರ್ವಸತಿ ಕೇಂದ್ರದಲ್ಲಿ ಮೂಲ ಸೌಲಭ್ಯಗಳಿಲ್ಲದೇ ತಾತ್ಕಾಲಿಕ ಶೆಡ್‌ಗಳಲ್ಲಿ ಅನೇಕ ವರ್ಷಗಳಿಂದ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ತಾಲೂಕಿನ ನಾಗರಾಳ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ಉಪನದಿಯಲ್ಲಿ ಒಂದಾದ ಮುಲ್ಲಾಮಾರಿ ನದಿಗೆ 1973-74ನೇ ಸಾಲಿನಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ. ಒಟ್ಟು 652.69 ಚದರ ಕಿ.ಮೀ ಜಲಾನಯನ ಪ್ರದೇಶವಾಗಿದ್ದು, 845 ಹೆಕ್ಟೇರ್ ವಿಸ್ತೀರ್ಣ ಪ್ರದೇಶ ಮುಳುಗಡೆಯಾಗಿದೆ.
ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ಎಲ್ಮಾಮಡಗಿ, ಚೆನ್ನೂರ, ಗಡಲಿಂಗದಳ್ಳಿ, ನಾಗರಾಳ ಗ್ರಾಮಗಳನ್ನು ಸಂಪೂರ್ಣ ಮುಳುಗಡೆಯಾದ ಗ್ರಾಮಗಳೆಂದು ಗುರುತಿಸಲಾಗಿತ್ತು. ಈ ಗ್ರಾಮಗಳ ಜನರನ್ನು ಸ್ಥಳಾಂತರಿಸಲು 1990ರಲ್ಲಿ ಪುನರ್ವಸತಿ ಕೇಂದ್ರ ನಿರ್ಮಿಸಲು ಆರಂಭವಾಗಿ 1994ರಲ್ಲಿ ಪೂರ್ಣಗೊಳಿಸಲಾಗಿತ್ತು. 2004ರಲ್ಲಿ ಆಣೆಕಟ್ಟಿನಲ್ಲಿ ನೀರು ತಡೆಹಿಡಿಯುವಾಗ ಎಲ್ಲ ಗ್ರಾಮದ ನಿವಾಸಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಒಟ್ಟು ಏಳು ಪುನರ್ವಸತಿ ಕೇಂದ್ರದಲ್ಲಿ 1075 ಕಟ್ಟಡಗಳಿದ್ದು, 7525 ಜನಸಂಖ್ಯೆಯಿದೆ. ಇದರಲ್ಲಿ ಇನ್ನು 1113 ಕುಟುಂಬಗಳು ಬೇರೆ ಬೇರೆ ಕಡೆ ವಾಸವಾಗಿದ್ದು, ಇವರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಕಲಬುರಗಿ ಕಲಾವಿದೆಯಿಂದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ನಾಗರಾಳ, ಎಲ್ಮಾಡಗಿ-1, ಎಲ್ಮಾಡಗಿ-2, ಚೆನ್ನೂರ, ಗಡಿಲಿಂಗದಳ್ಳಿ-1, ಗಡಿಲಿಂಗದಳ್ಳಿ-2, ಗಡಿಲಿಂಗದಳ್ಳಿ 3 ಪುರ್ನವಸತಿ ಕೇಂದ್ರಗಳಲ್ಲಿ ಜನರು ಕಳೆದ ಮೂರು ದಶಕಗಳಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಶೆಡ್‌ಗಳಲ್ಲಿ ವಾಸವಾಗಿದ್ದಾರೆ. ಪುನರ್ವಸತಿ ಕೇಂದ್ರಗಳಲ್ಲಿ ಜನರಿಗೆ ಮನೆ ಕಟ್ಟಿಕೊಳ್ಳುವುದಕ್ಕಾಗಿ ಹಕ್ಕುಪತ್ರಗಳನ್ನಾಗಲಿ, ಖಾಲಿ ನಿವೇಶನವನ್ನಾಗಲಿ ಕೊಟ್ಟಿಲ್ಲ. ಆಸ್ತಿ-ಪಾಸ್ತಿ ಕಳೆದುಕೊಂಡವರ ಹೆಸರಿನಲ್ಲಿ ಬಂದ ನಿವೇಶನಗಳನ್ನು ಕೆಲವು ಪ್ರಭಾವಿಗಳು ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದರಿಂದ ನಿರಾಶ್ರಿತರು ಕಳೆದ ಮೂರು ದಶಕಗಳಿಂದ ಮನೆಗಳನ್ನು ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಹಕ್ಕುಪತ್ರ ನೀಡುವಂತೆ ಇಲ್ಲಿನ ನಿವಾಸಿಗಳು ಅನೇಕ ಸಲ ಹೋರಾಟ ನಡೆಸಿದರೂ ನಿರಾಶ್ರಿತರ ಸಂಕಷ್ಟವನ್ನು ಯಾರೂ ಆಲಿಸುತ್ತಿಲ್ಲ.
ಎಲ್ಲ ಕಾಲದಲ್ಲೂ ತೊಂದರೆ
ಮಳೆಗಾಲದಲ್ಲಿ ಶೆಡ್ ಸಂಪೂರ್ಣ ಸೋರುತ್ತದೆ. ಇದರಿಂದ ಇಲ್ಲಿನ ನಿವಾಸಿಗಳು ರಾತ್ರಿಯೆಲ್ಲ ಎಚ್ಚರವಾಗಿಯೇ ಕುಳಿತುಕೊಳ್ಳಬೇಕಾಗುತ್ತದೆ. ಬೇಸಿಗೆ ದಿನದಲ್ಲಿ ಬಿಸಿಲಿನ ಧಗೆ ಹೇಳತೀರದಂತೆ ಇರುತ್ತದೆ. ಓಡಾಡಲು ಈ ಭಾಗದಲ್ಲಿ ಸರಿಯಾದ ರಸ್ತೆಗಳೂ ಇಲ್ಲ. ತಾತ್ಕಾಲಿಕ ಶೆಡ್‌ಗಳಲ್ಲಿ ಉಪಜೀವನ ನಡೆಸುತ್ತಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರಗಳಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ನಿರ್ಮಿಸಲು, ವಿದ್ಯುತ್ ಸಂಪರ್ಕ ಒದಗಿಸಲು, ವಿದ್ಯುತ್ ಕಂಬ ಜೋಡಿಸಲು, ಕುಡಿಯುವ ನೀರು, ಶಾಲೆ ಕಟ್ಟಡ, ಅಂಗನವಾಡಿ ಕಟ್ಟಡ, ಮಂದಿರ, ಮಸೀದಿ ನಿರ್ಮಿಸಲು ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ಈ ಭಾಗದ ಜನರ ಉಪಯೋಗಕ್ಕೆ ಬಾರದಂತಾಗಿವೆ. ಸರ್ಕಾರದಿಂದ ಸುಸಜ್ಜಿತ ಮನೆಗಳು ದೊರಕಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ನಿರಾಶ್ರಿತರು ಇನ್ನು ಎಷ್ಟು ವರ್ಷ ಈ ನರಕಯಾತನೆಯಲ್ಲಿ ಬದುಕಬೇಕು ಎನ್ನುವುದನ್ನು ಕಾಯ್ದು ನೋಡಬೇಕಿದೆ.
ನಾನು ಒಬ್ಬ ನಿರಾಶ್ರಿತ. ನನಗೂ ಹಕ್ಕುಪತ್ರ ನೀಡಿಲ್ಲ. ಇನ್ನು 500 ಜನರಿಗೆ ಹಕ್ಕು ಪತ್ರ ಕೊಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎರಡು ಸಾವಿರ ಜನಸಂಖ್ಯೆಯಿದ್ದು, ಇನ್ನು 600 ಹಕ್ಕುಪತ್ರ ಹಂಚಿಕೆಯಾಗಬೇಕು. ಈ ಕುರಿತು ಕರ್ನಾಟಕ ನೀರಾವರಿ ನಿಗಮಕ್ಕೆ ದೂರು ನೀಡಲಾಗಿದೆ. ತಹಶೀಲ್ದಾರ್ ಗಮನಕ್ಕೂ ತರಲಾಗಿದೆ. -ಗೌರಿಶಂಕರ ಉಪ್ಪಿನ, ಗ್ರಾಪಂ ಅಧ್ಯಕ್ಷ, ಗಡಿಲಿಂಗದಳ್ಳಿ
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆ ಅಡಿಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡಿದ್ದೇವೆ. ಆದರೆ ನಮಗೆ ಇನ್ನುವರೆಗೂ ಮನೆ, ನಿವೇಶನಕ್ಕಾಗಿ ಹಕ್ಕು ಪತ್ರ ಕೊಟ್ಟಿಲ್ಲ. ಪುನರ್ವಸತಿ ಕೇಂದ್ರ 1ರಲ್ಲಿ 150 ಮತ್ತು 2ರಲ್ಲಿನ ನಿವಾಸಿಗಳಲ್ಲಿ ಇನ್ನೂ 150 ಜನರಿಗೆ ಹಕ್ಕುಪತ್ರ ಸಿಗಬೇಕು. ನನಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ದಾರೆ. ಇದರಲ್ಲಿ ಜೀವನ ಸಾಗಿಸುವುದು ಬಹಳ ಕಷ್ಟವಾಗಿದೆ. -ವಾಸುದೇವ, ನಿರಾಶ್ರಿತ, ಎಲಮಡಗಿ
ಚಿಂಚೋಳಿ ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಅಡಿಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡ ನಿರಾಶ್ರಿತರಿಗೆ ಈಗಾಗಲೇ ಎಲ್ಲ ಕಡೆಗಳಲ್ಲಿ ಹಕ್ಕುಪತ್ರ ಕೊಡಲಾಗಿದೆ. ಪುನರ್ವಸತಿ ಕೇಂದ್ರದಲ್ಲಿನ 125 ಜನರಿಗೆ ಮಾತ್ರ ಹಕ್ಕುಪತ್ರ ಕೊಡಬೇಕಾಗಿದೆ. ಬಿಜೆಪಿ ಕಾರ್ಯಕರ್ತರೊಬ್ಬರು ನಮ್ಮ ಯೋಜನೆ ಇಂಜಿನಿಯರ್ ಹನುಮಂತಪ್ಪ ಮತ್ತು ನಾಗೇಂದ್ರಪ್ಪ ಅವರಿಂದ ಹಕ್ಕುಪತ್ರ ತೆಗೆದುಕೊಂಡಿದ್ದಾರೆ. ಯೋಜನೆಗೆ ಸಂಬಂಧಪಟ್ಟ ಹಕ್ಕುಪತ್ರಗಳನ್ನು ಬಿಜೆಪಿ ಕಾರ್ಯಕರ್ತನಿಗೆ ನೀಡಿದ ಕುರಿತು ಇಂಜಿನಿಯರ್‌ಗೆ ಎರಡು ಸಲ ಮೆಮೋ ನೀಡಲಾಗಿದೆ. ನಿರಾಶ್ರಿತರಿಗೆ ಹಕ್ಕು ಪತ್ರ ನೀಡುವ ಕುರಿತು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. -ಹಣಮಂತ ಪೂಜಾರಿ, ಎಇಇ, ಕೆಳದಂಡೆ ಮುಲ್ಲಾಮಾರಿ ಯೋಜನೆ
-ಶಾಮರಾವ ಚಿಂಚೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.