ಕೋವಿಡ್ ಎದುರಿಸಲು ಅಸ್ತ್ರಗಳಿಲ್ಲದೆ ಸೋತ ಫ್ರಾನ್ಸ್
Team Udayavani, May 18, 2020, 4:18 PM IST
ಪ್ಯಾರಿಸ್: ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ ಅವರು ಮಾರ್ಚ್‌ನಲ್ಲಿ ಕೋವಿಡ್ ವಿರುದ್ಧ ಯುದ್ಧ ಸಾರಿದಾಗ ಮುಂಚೂಣಿಯಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ಸುರಕ್ಷಾ ಸಾಧನಗಳನ್ನು ಒದಗಿಸುವ ಭರವಸೆಯಿತ್ತಿದ್ದರು. ಆದರೆ ವಸ್ತುಸ್ಥಿತಿ ಏನಿತ್ತೆಂದರೆ ಕೋವಿಡ್ ವಿರುದ್ಧ ಹೋರಾಟಕ್ಕೆ ಫ್ರಾನ್ಸ್ ಬಳಿ ಯಾವುದೇ ರಕ್ಷಣಾ ಸಾಧನಗಳಿರಲಿಲ್ಲ.
ಈ ಹಿಂದೆ ದೇಶವನ್ನು ಕಾಡಿದ್ದ ಸಾಂಕ್ರಾಮಿಕ ರೋಗಗಳ ವೇಳೆ ಅನುಸರಿಸಲಾಗಿದ್ದ ಎಡಬಿಡಂಗಿ ನೀತಿಗಳಿಂದಾಗಿ ಮುಖಗವಸುಗಳ ದಾಸ್ತಾನು ಸಂಪೂರ್ಣ ಬರಿದಾಗಿತ್ತು. ದಾಸ್ತಾನನ್ನು ಮರಳಿ ಭರಿಸೋಣವೆಂದರೆ ಉತ್ಪಾದನಾ ಘಟಕಗಳನ್ನು ಹೊರಗುತ್ತಿಗೆ ನೀಡಿದ್ದರು. ಇದರಿಂದಾಗಿ ಮಾಸ್ಕ್ ಗಳು, ಪರೀಕ್ಷಾ ಕಿಟ್‌ಗಳು, ವೆಂಟಿಲೇಟರ್‌ಗಳು, ಥರ್ಮೋಮೀಟರ್‌ಗಳು ಹಾಗೂ ಜ್ವರ ಇಳಿಸುವ ಔಷಧಿಗಳಿಗಾಗಿ ಕೂಡ ಫ್ರಾನ್ಸ್ ವಿದೇಶಿ ಕಾರ್ಖಾನೆಗಳನ್ನು ಅವಲಂಬಿಸಬೇಕಾಗಿ ಬಂತು.
ಸಾಂಕ್ರಾಮಿಕ ರೋಗವೊಂದು ಸ್ಫೋಟಗೊಂಡಲ್ಲಿ ಮಾಸ್ಕ್ ಗಳು ಎಷ್ಟು ಅವಶ್ಯವೆಂದು ಫ್ರಾನ್ಸ್ ಬಹು ಹಿಂದೆಯೇ ಮನಗಂಡಿತ್ತು. ಹಾಗಿದ್ದರೂ ಸರಕಾರ ಕಳೆದ ದಶಕದಲ್ಲಿ ಮುಖ್ಯವಾಗಿ ಬಜೆಟ್ ಕಾರಣಕ್ಕೆ ಅವುಗಳನ್ನು ಸಂಗ್ರಹಿಸಿ ಇರಿಸುವುದನ್ನು ನಿಲ್ಲಿಸಿತು. ಅದೇ ವೇಳೆ ದೇಶದೊಳಗಿನ ಉತ್ಪಾದನೆ ಸ್ಥಗಿತಗೊಂಡಿತು ಮತ್ತು ದೇಶದ ಔಷಧ ಉದ್ಯಮ ಹೊರದೇಶಗಳಿಗೆ ವರ್ಗಾವಣೆಯಾಗತೊಡಗಿತು.
ಉತ್ಪಾದನಾ ಘಟಕಗಳು, ಅದರಲ್ಲೂ ವಿಶೇಷವಾಗಿ ಚೀನದಲ್ಲಿರುವ ಉತ್ಪಾದನಾ ಘಟಕಗಳು ತ್ವರಿತವಾಗಿ ಕಾರ್ಯಾಚರಿಸಬಲ್ಲವಾದ್ದರಿಂದ ದೇಶದಲ್ಲಿ ಬೃಹತ್ ದಾಸ್ತಾನು ಇರಿಸುವ ಅಗತ್ಯವಿಲ್ಲವೆಂದು ಫ್ರಾನ್ಸ್ ನಿರ್ಧರಿಸಿತು.
ಆದರೆ ಕೋವಿಡ್ ವೈರಸ್ ಹಬ್ಬಿದ ವಿಸ್ತಾರ ಹಾಗೂ ವೇಗ ಈ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತು. ವಿಶ್ವದಲ್ಲೇ ಅತಿಹೆಚ್ಚು ಮಾಸ್ಕ್ ಗಳನ್ನು ಉತ್ಪಾದಿಸುವ ಚೀನ ತಾನೇ ಕೋವಿಡ್‌ನ ಹೊಡೆತಕ್ಕೆ ನಲುಗಿತ್ತಲ್ಲದೆ ಹೊರದೇಶಗಳಿಂದ ಬಂದ ಬೇಡಿಕೆಯ ಭಾರಕ್ಕೆ ತತ್ತರಿಸಿತ್ತು. ಔಷಧ ಸಾಮಗ್ರಿಗಳ ಅಗ್ರ ರಫ್ತುದಾರರಲ್ಲೊಂದಾದ ಭಾರತ ತನ್ನಲ್ಲಿ ಕೊರತೆ ಸಂಭವಿಸಬಹುದೆಂಬ ಭಯದಲ್ಲಿ ರಫ್ತಿನ ಮೇಲೆ ತಾತ್ಕಾಲಿಕ ನಿಷೇಧ ವಿಧಿಸಿತ್ತು.
ಜಾಗತಿಕ ಪೂರೈಕೆಯ ಸರಪಣಿ ಕಡಿದುಹೋದ ಕಾರಣ ಫ್ರೆಂಚ್ ಆರೋಗ್ಯ ಅಧಿಕಾರಿಗಳಿಗೆ ಅಮೂಲ್ಯ ಸಮಯ ವ್ಯರ್ಥವಾಯಿತು. ಫ್ರಾನ್ಸ್‌ನ ನಗರಗಳು, ಪಟ್ಟಣಗಳು ಹಾಗೂ ವಾರ್ಡ್‌ಗಳು ಕೂಡ ಚೀನದಿಂದ ನೇರ ಖರೀದಿಗೆ ಮುಗಿಬಿದ್ದವು. ವೈರಾಣು ಮುಂದೆ ಫ್ರಾನ್ಸ್ ಅಸಹಾಯಕವಾದುದಕ್ಕೆ ಅದರ ಉತ್ಪಾದನಾ ನೆಲಗಟ್ಟು ಟೊಳ್ಳಾದುದೇ ಕಾರಣವೆಂದು ಅನೇಕ ಟೀಕಾಕಾರರು ಹೇಳುತ್ತಾರೆ.
2000ದ ಆದಿಭಾಗದಲ್ಲಿ ಈಗ ವ್ಯಾಪಕವಾಗಿ ಬಳಸಲಾಗುವ ಪಿಸಿಆರ್ ಟೆಸ್ಟ್ ಕಿಟ್‌ಗಳು ಹಾಗೂ ವೆಂಟಿಲೇಟರ್‌ಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಫ್ರಾನ್ಸ್ ತನ್ನ ಎದುರಾಳಿ ಜರ್ಮನಿಯಿಂದ ಸ್ವಲ್ಪವಷ್ಟೇ ಹಿಂದುಳಿದಿತ್ತು. ಆದರೆ 2018ರಲ್ಲಿ ಪಿಸಿಆರ್ ಟೆಸ್ಟ್ ಕಿಟ್‌ಗಳಿಗೆ ಸಂಬಂಧಿಸಿ ಜರ್ಮನಿ 140 ಕೋಟಿ ಡಾಲರ್‌ಗಳ ವ್ಯಾಪಾರ ಮಿಗತೆ ಹೊಂದಿದ್ದರೆ ಫ್ರಾನ್ಸ್ 8.90 ಕೋಟಿ ಡಾಲರ್‌ಗಳ ಕೊರತೆ ಹೊಂದಿತ್ತು.
ಕೋವಿಡ್ ವಿರುದ್ಧ ಹೋರಾಟಕ್ಕೆ ಜರ್ಮನಿ ಕ್ಷಿಪ್ರವಾಗಿ ತನ್ನ ಉದ್ದಿಮೆಯನ್ನು ಸಜ್ಜುಗೊಳಿಸಲು ಶಕ್ತವಾದರೆ ಫ್ರಾನ್ಸ್ ನೆಲಕಚ್ಚಿತು. ಹತ್ತಿ ಸುರುಳಿ ಮತ್ತು ಏಜೆಂಟ್‌ಗಳ ಕೊರತೆಯ ಕಾರಣ ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಕೂಡ ಅದಕ್ಕೆ ಸಾಧ್ಯವಾಗಲಿಲ್ಲ. ಇವು ಕಡಿಮೆ ವೆಚ್ಚದವುಗಳಾದರೂ ಪರೀಕ್ಷೆಗೆ ಮಹತ್ವದ ಅಂಶಗಳಾಗಿವೆ.
ಫ್ರಾನ್ಸ್ 2000ದಿಂದೀಚೆ ತನ್ನ ಉದ್ಯಮಗಳನ್ನು ಅತಿಯಾಗಿ ಮುಚ್ಚಿತು ಮತ್ತು ಅದಕ್ಕಾಗಿ ಈಗ ಬೆಲೆ ತೆರುತ್ತಿದೆ ಎಂದು ಹಾರ್ವರ್ಡ್ ಮತ್ತು ಕಾಲೇಜ್ ಡಿ ಫ್ರಾನ್ಸ್‌ನ ಅರ್ಥಶಾಸ್ತ್ರ ಉಪನ್ಯಾಸಕ ಫಿಲಿಪ್ಪಿ ಅಗಿಯೋನ್ ಹೇಳುತ್ತಾರೆ. ಫ್ರಾನ್ಸ್‌ನಲ್ಲಿ ಥರ್ಮೋಮೀಟರ್‌ಗಳು ಖಾಲಿಯಾದವು. ಟೈಲೆನೋಲ್ ಹೆಸರಿನ ಸಾಮಾನ್ಯ ನೋವು ನಿವಾರಕ ಮಾತ್ರೆಗಳ ಭಾರೀ ಕೊರತೆಯುಂಟಾಯಿತು ಮತ್ತು ಅವುಗಳ ಮಾರಾಟ ಮೇಲೆ ಅಧಿಕಾರಿಗಳು ನಿರ್ಬಂಧಗಳನ್ನು ವಿಧಿಸಿದರು.
ರಫೇಲ್ ಫೈಟರ್ ಜೆಟ್‌ಗಳು, ಜಲಾಂತರ್ಗಾಮಿಗಳು, ನೆಲಬಾಂಬ್ ವಿನಾಶಿ ಸಾಧನಗಳು ಹಾಗೂ ಸಮರನೌಕೆಗಳನ್ನು ವಿಶ್ವಕ್ಕೆ ರಫ್ತು ಮಾಡಿದ ಬಲಾಡ್ಯ ರಾಷ್ಟ್ರ ಫ್ರಾನ್ಸ್ ಮೇಲೆ ಕೋವಿಡ್ ಆಕ್ರಮಣ ಮಾಡಿದಾಗ ತನ್ನನ್ನು ರಕ್ಷಿಸಿಕೊಳ್ಳಲು ಮಾಸ್ಕ್ ನಂಥ ಪ್ರಾಥಮಿಕ ಸೌಲಭ್ಯಗಳು ಕೂಡ ಇಲ್ಲದೆ ಮಂಡಿಯೂರಬೇಕಾಗಿ ಬಂದುದು ವಿಪರ್ಯಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.