Dialysis: ಉಚಿತ ಡಯಾಲಿಸಿಸ್: ಆರಂಭಶೂರತನ ಬೇಡ
Team Udayavani, Jan 28, 2024, 11:37 PM IST
ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಹಾಗೂ ರಾಜ್ಯ ಸರಕಾರದ ಅನುದಾನದಡಿಯಲ್ಲಿ ರಾಜ್ಯದಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ರಾಜ್ಯವ್ಯಾಪಿ 800 ಏಕಬಳಕೆ ಡಯಾಲಿಸಿಸ್ ಯಂತ್ರಗಳ ಸೇವೆ ಮತ್ತು 48 ನೂತನ ಡಯಾಲಿಸಿಸ್ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಕಿಡ್ನಿ ವೈಫಲ್ಯಕ್ಕೀಡಾಗಿರುವ ರೋಗಿಗಳ ಚಿಕಿತ್ಸೆಗೆ ಅತ್ಯಗತ್ಯವಾಗಿರುವ ದುಬಾರಿ ವೆಚ್ಚದ ಡಯಾಲಿಸಿಸ್ ಸೇವೆ ಯನ್ನು ಬಡರೋಗಿಗಳಿಗೆ ಉಚಿತವಾಗಿ ಒದಗಿಸಲು ಸರಕಾರ ಮುಂದಾಗಿದೆ.
ಇದೀಗ ಮಂಜೂರುಗೊಂಡಿರುವ 800 ಏಕಬಳಕೆಯ ಡಯಾಲಿಸಿಸ್ ಯಂತ್ರ ಗಳ ಪೈಕಿ ಮೊದಲ ಹಂತದಲ್ಲಿ 475 ಯಂತ್ರಗಳು ಕಾರ್ಯಾರಂಭಗೊಂಡಿದ್ದರೆ ಮುಂದಿನ ತಿಂಗಳ ಒಳಗಾಗಿ ಉಳಿದ ಯಂತ್ರಗಳು ಕೂಡ ಕಾರ್ಯಾರಂಭ ಮಾಡಲಿವೆ. ಈ ಯೋಜನೆಯಡಿ 48 ಹೊಸ ತಾಲೂಕುಗಳೂ ಡಯಾಲಿಸಿಸ್ ಸೇವೆಗೆ ಸೇರ್ಪಡೆಯಾಗಿರುವುದು ಗಮನಾರ್ಹ. ಏಕಬಳಕೆಯ ಡಯಾಲಿಸಿಸ್ ಯಂತ್ರಗಳಲ್ಲಿ ಬಳಸಲಾಗುವ ಸಾಧನವು ಏಕಬಳಕೆಯದ್ದಾಗಿದೆ. ಇದರ ವೆಚ್ಚ ಕಡಿಮೆಯಾಗಿದ್ದು, ಈ ಯಂತ್ರದ ಮೂಲಕ ಡಯಾಲಿಸಿಸ್‌ಗೊಳಗಾಗುವ ರೋಗಿಗಳು ಹೆಪಟೈಟಿಸ್ ಸಹಿತ ವಿವಿಧ ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಕಡಿಮೆಯಾಗಿದ್ದು ಹೆಚ್ಚು ಸುರಕ್ಷಿತ. ಅಷ್ಟು ಮಾತ್ರವಲ್ಲದೆ ಇದರ ಕಾರ್ಯನಿರ್ವಹಣೆಗೆ ಸೀಮಿತ ಸಂಖ್ಯೆಯ ಸಿಬಂದಿ ಸಾಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆದ್ಯತೆಯ ಮೇಲೆ ರಾಜ್ಯದ ಸರಕಾರ ಡಯಾಲಿಸಿಸ್ ಕೇಂದ್ರಗಳಿಗೆ ಈ ಏಕಬಳಕೆಯ ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲು ಕ್ರಮ ಕೈಗೊಂಡಿದೆ.
ಕಿಡ್ನಿ ವೈಫಲ್ಯಕ್ಕೀಡಾಗಿರುವ ರೋಗಿಗಳ ಪ್ರಾಣರಕ್ಷಣೆಯಲ್ಲಿ ಡಯಾಲಿಸಿಸ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಸೇವೆಗೆ ದುಬಾರಿ ವೆಚ್ಚ ತಗಲುವುದರಿಂದ ಬಡ ರೋಗಿಗಳು ಬಹಳಷ್ಟು ಸಂಕಷ್ಟ ಅನುಭವಿ ಸುವಂತಾಗಿತ್ತು. ಇದೀಗ ರಾಜ್ಯ ಸರಕಾರ ಬಡ ರೋಗಿಗಳ ಬೇಡಿಕೆಗೆ ಸ್ಪಂದಿಸು ವುದರ ಜತೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಸೇವೆಯ ಸೌಲಭ್ಯವನ್ನು ಒದ ಗಿಸಿದೆ. ಸರಕಾರದ ಈ ನಿರ್ಧಾರದಿಂದ ಬಡ ರೋಗಿಗಳು ಅದರಲ್ಲೂ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಭಾರೀ ಪ್ರಯೋಜನ ಲಭಿಸಲಿದೆ.
ರಾಜ್ಯದಲ್ಲಿ ಈಗಾಗಲೇ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯಾಚರಿಸುತ್ತಿವೆಯಾದರೂ ಬಹುತೇಕ ಕಡೆ ಯಂತ್ರಗಳ ನಿರ್ವಹಣೆ ಮತ್ತು ಸಿಬಂದಿ ಕೊರತೆಯ ಕಾರಣದಿಂದಾಗಿ ಇವು ಬಡರೋಗಿಗಳ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದವು. ಈ ಬಗ್ಗೆ ರಾಜ್ಯದೆಲ್ಲೆಡೆಯಿಂದ ವ್ಯಾಪಕವಾಗಿ ದೂರುಗಳು ಕೇಳಿಬಂದಿದ್ದವು. ಇನ್ನು ಹಲವೆಡೆ ಈ ಡಯಾಲಿಸಿಸ್ ಕೇಂದ್ರಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ಹೊಸದಾಗಿ ಯಂತ್ರಗಳನ್ನು ಪೂರೈಸ ಲಾಗಿದ್ದರೂ ಅವುಗಳು ಲೋಪದೋಷಗಳಿಂದ ಕೂಡಿರುವುದು, ಪದೇಪದೆ ಕೈಕೊ ಡುವುದು ಮತ್ತಿತರ ಸಮಸ್ಯೆಗಳಿಂದಾಗಿ ಈ ಯಂತ್ರಗಳು ಮೂಲೆಗುಂಪಾಗಿದ್ದವು. ಇನ್ನು ಕೆಲವೆಡೆ ಈ ಯಂತ್ರಗಳ ಕಾರ್ಯಾಚರಣೆಗೆ ತರಬೇತಿ ಪಡೆದ ಸಿಬಂದಿಯ ಕೊರತೆಯೂ ಕಾಡಿತ್ತು. ಇದರಿಂದಾಗಿ ಹೊಸದಾಗಿ ಪೂರೈಕೆಯಾದ ಡಯಾಲಿಸಿಸ್ ಯಂತ್ರಗಳು ಧೂಳು ಹಿಡಿಯುವಂತಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಸರಕಾರದ ಬಹುದ್ದೇಶಿತ ಆರೋಗ್ಯ ಸೇವಾ ಯೋಜನೆಯೊಂದು ಹಳ್ಳಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ರಾಜ್ಯದ ಡಯಾಲಿಸಿಸ್ ಕೇಂದ್ರಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ.
ಡಯಾಲಿಸಿಸ್ ಕೇಂದ್ರಗಳಿಗೆ ಹೊಸ ಯಂತ್ರಗಳನ್ನು ಪೂರೈಸುವ ಜತೆಜತೆಯಲ್ಲಿ ಈ ಹಿಂದೆ ತಲೆದೋರಿದ್ದ ಸಮಸ್ಯೆಗಳು ಮತ್ತೆ ಮರುಕಳಿಸದಿರುವ ಸಲುವಾಗಿ ಈ ಯಂತ್ರಗಳ ಸೂಕ್ತ ನಿರ್ವಹಣೆ, ಅಗತ್ಯ ಸಿಬಂದಿ ನೇಮಕ, ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಹೀಗಾದಲ್ಲಿ ಮಾತ್ರವೇ ಸರಕಾರದ ನೈಜ ಉದ್ದೇಶ ಈಡೇರಲು ಸಾಧ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.