G-20: ಭಾರತಕ್ಕೆ G-20 ಶೃಂಗದ ಯಶಸ್ಸಿನ ಮುಕುಟ
Team Udayavani, Sep 10, 2023, 11:34 PM IST
ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಅಭಿವೃದ್ಧಿ ಮತ್ತು ಭೌಗೋಳಿಕ ರಾಜಕೀಯ ವಿಷಯಗಳನ್ನೂ ಒಳಗೊಂಡ “ಹೊಸದಿಲ್ಲಿ ಘೋಷಣೆ’ಗೆ ಜಾಗತಿಕ ನಾಯಕರು ಸರ್ವಾನುಮತದಿಂದ ಅಂಗೀಕಾರದ ಮುದ್ರೆ ಒತ್ತುವ ಮೂಲಕ ಐತಿಹಾಸಿಕ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಈ ಹಿಂದಿನ ಬಾಲಿ ಶೃಂಗದ ವೇಳೆ ನಡೆದ ಗೊಂದಲ, ರಷ್ಯಾ-ಉಕ್ರೇನ್ ಸಮರದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳ ರಷ್ಯಾದೊಂದಿಗಿನ ಸಂಬಂಧ ಹದಗೆಟ್ಟಿರುವುದು, ಇದರಿಂದ ಜಾಗತಿಕವಾಗಿ ಉದ್ಭವಿಸಿರುವ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟು, ಚೀನದ ವಿಸ್ತರಣಾವಾದಕ್ಕೆ ವಿಶ್ವ ರಾಷ್ಟ್ರಗಳಿಂದ ವ್ಯಕ್ತವಾಗುತ್ತಿರುವ ತೀವ್ರ ವಿರೋಧ, ತಾಪಮಾನ ಹೆಚ್ಚಳ ಸಮಸ್ಯೆ ಉಲ್ಬಣಗೊಂಡಿರುವುದು… ಹೀಗೆ ಹತ್ತು ಹಲವು ವೈರುಧ್ಯಗಳ ಹೊರತಾಗಿಯೂ ಜಿ20 ರಾಷ್ಟ್ರಗಳು ಈ ಶೃಂಗಸಭೆಯಲ್ಲಿ ಹಲವಾರು ಮಹತ್ವಪೂರ್ಣ ನಿರ್ಣಯಗಳನ್ನು ಒಳಗೊಂಡ ಘೋಷಣೆಗೆ ಒಮ್ಮತ ವ್ಯಕ್ತಪಡಿಸಿರುವುದು ಆತಿಥೇಯ ರಾಷ್ಟ್ರ ಭಾರತದ ಪಾಲಿಗೆ ಅತ್ಯಂತ ಮಹತ್ವದ ಗೆಲುವೇ ಸರಿ.
ಜಿ20 ನಿರ್ಣಯ ವಿಚಾರದಲ್ಲಿ ಎಲ್ಲರನ್ನು ಒಪ್ಪಿಸುವುದು ಸುಲಭದ ಮಾತೇನಲ್ಲ. ಕಳೆದ ವರ್ಷದ ಶೃಂಗಸಭೆಯಲ್ಲಿನ ಇರುಸು ಮುರುಸು ಜಾಗತಿಕ ನಾಯಕರ ಬೇಸರಕ್ಕೂ ಕಾರಣವಾಗಿತ್ತು. ಹೀಗಾಗಿಯೇ ಭಾರತ ಈ ಬಾರಿ ಉಕ್ರೇನ್ ವಿಚಾರವನ್ನು ಹೆಚ್ಚು ಮುತುವರ್ಜಿಯಿಂದ ಬಳಸಿಕೊಂಡಿತು. ಅಂದರೆ ಎಲ್ಲದಕ್ಕೂ ಯುದ್ಧವೇ ಅಂತಿಮವಲ್ಲ ಎಂಬ ಸಂದೇಶವನ್ನು ರಷ್ಯಾಗೆ ರವಾನಿಸುತ್ತಲೇ, ಉಕ್ರೇನ್ ಜತೆಗೆ ನಾವಿದ್ದೇವೆ ಎಂಬ ಅಭಯವನ್ನೂ ನೀಡಲಾಯಿತು.
ಜಿ20 ಒಕ್ಕೂಟಕ್ಕೆ 55 ದೇಶಗಳನ್ನು ಒಳಗೊಂಡ ಆಫ್ರಿಕಾ ಒಕ್ಕೂಟ ಸೇರ್ಪಡೆ, ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಐತಿಹಾಸಿಕ ಕಾರಿಡಾರ್ ನಿರ್ಮಾಣ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಸರಸ್ನೇಹಿ ಇಂಧನ ಬಳಕೆಗೆ ಇನ್ನಷ್ಟು ಉತ್ತೇಜನ ನೀಡುವ ಕ್ರಮವಾಗಿ ಜೈವಿಕ ಇಂಧನ ಮೈತ್ರಿಕೂಟಕ್ಕೆ ಚಾಲನೆ ಇವು ಈ ಬಾರಿಯ ಜಿ20 ಶೃಂಗದ ಐತಿಹಾಸಿಕ ಬೆಳವಣಿಗೆಗಳು. ಇವೆಲ್ಲದರ ಹಿಂದೆ ಭಾರತ ಅತ್ಯಂತ ಮಹತ್ವದ ಮತ್ತು ನಿರ್ಣಾಯಕ ಪಾತ್ರ ವಹಿಸಿರುವುದು ಗಮನಾರ್ಹ.
ಶೃಂಗಸಭೆಯಲ್ಲಿ ಕೈಗೊಳ್ಳಲಾದ ಬಹುತೇಕ ಎಲ್ಲ ನಿರ್ಣಯಗಳಲ್ಲಿ ಭಾರತದ ದೃಷ್ಟಿಕೋನ, ನಿಲುವುಗಳೇ ಪ್ರತಿಬಿಂಬಿತವಾಗಿವೆ. ಶೃಂಗಸಭೆಯ ಕೊನೆಯಲ್ಲಿ ಮಾತನಾಡಿದ ಭಾರತದ ಪ್ರಧಾನಿ ಮೋದಿ ಅವರು ನವೆಂಬರ್ ಅಂತ್ಯದಲ್ಲಿ ವರ್ಚುವಲ್ ಅಧಿವೇಶನ ನಡೆಸಿ ಮತ್ತೂಮ್ಮೆ ಪರಾಮರ್ಶೆ ನಡೆಸುವ ಸಲಹೆಯನ್ನು ಜಿ20 ರಾಷ್ಟ್ರಗಳ ಮುಂದಿಟ್ಟಿದ್ದು ಇದು ನಿರ್ಣಯಗಳ ಜಾರಿಯ ಕುರಿತಾಗಿನ ಭಾರತದ ಬದ್ಧತೆಯ ದ್ಯೋತಕವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಪ್ರಮಾಣದ ಗಣ್ಯರನ್ನು ಒಂದೆಡೆ ಸೇರಿಸಿ, ದೊಡ್ಡ ಮಟ್ಟದ ಶೃಂಗವೊಂದನ್ನು ಯಶಸ್ವಿಯಾಗಿ ಭಾರತ ನಡೆಸಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಮುಂದೆ ನಿಂತು ಸಿದ್ಧತೆಗಳನ್ನೂ ನೋಡಿಕೊಂಡು ಶೃಂಗಸಭೆ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಆಫ್ರಿಕಾ ಒಕ್ಕೂಟದ ಸೇರ್ಪಡೆ ವಿಚಾರದಲ್ಲಿ ಭಾರತದ ತಂತ್ರಗಾರಿಕೆ ಚೆನ್ನಾಗಿಯೇ ಕೆಲಸ ಮಾಡಿದೆ. ಒಟ್ಟಿನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗಸಭೆ ನಿರೀಕ್ಷೆಯಂತೆಯೇ ಭಾರೀ ಯಶಸ್ಸನ್ನು ಕಂಡಿದೆ ಎಂಬುದಕ್ಕೆ ಜಿ20 ರಾಷ್ಟ್ರಗಳಾದಿಯಾಗಿ ಜಾಗತಿಕ ಸಮುದಾಯದ ನಾಯಕರಿಂದಲೂ ವ್ಯಕ್ತವಾದ ವ್ಯಾಪಕ ಮೆಚ್ಚುಗೆ, ಶ್ಲಾಘನೆಗಳೇ ಸಾಕ್ಷಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.