ಸಾಮೂಹಿಕ ನಾಯಕತ್ವದಲ್ಲಿ ಹೋದರಷ್ಟೇ ಗೆಲುವು : ಜಿ. ಪರಮೇಶ್ವರ್
Team Udayavani, Jun 27, 2021, 6:50 AM IST
ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಶಾಸಕರ ವೈಯಕ್ತಿಕ ಅಭಿಪ್ರಾಯ ರಾಜ್ಯ ಕಾಂಗ್ರೆಸ್‌ನಲ್ಲಿ “ಕೂಸು ಹುಟ್ಟುವ ಮುನ್ನ ಕುಲಾವಿ’ ಎಂಬಂತೆ ಇದ್ದಕ್ಕಿದ್ದಂತೆ ಮುಂದಿನ ಮುಖ್ಯಮಂತ್ರಿ ವಿಚಾರ ಚರ್ಚೆಯಾಗಿ ಬಣ ಸ್ವರೂಪ ಪಡೆದಿದೆ. ಕಾಂಗ್ರೆಸ್‌ನಲ್ಲಿ ಅಕಾಲಿಕವಾಗಿ ಎದ್ದಿರುವ ಮುಂದಿನ ಮುಖ್ಯಮಂತ್ರಿ ವಿಚಾರ ಕುರಿತು ಏಳು ವರ್ಷಗಳಷ್ಟು ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಅವರ ಜತೆ ನೇರಾ-ನೇರಾ ಮಾತಿಗೆ ಇಳಿದಾಗ…
ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ. ಇಷ್ಟು ಬೇಗ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ, ಹಪಾಹಪಿ…. ಏನಿದೆಲ್ಲ?
ಬೇಕಿರಲಿಲ್ಲ, ಈ ಸಮಯದಲ್ಲಿ ಅದರ ಅಗತ್ಯವೂ ಇರಲಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ಏನೇನೋ ಲೆಕ್ಕಾಚಾರಗಳು ದಿಢೀರ್ ತೇಲಿ ಬರುತ್ತವೆ. ಎಲ್ಲವೂ ಆಗುತ್ತದೆ ಎಂದೇನಿಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯಂತೆ ಗುಂಪುಗಾರಿಕೆ ಶುರುವಾಗುತ್ತಾ? ಇವೆಲ್ಲ ಅದರ ಸೂಚನೆಗಳಾ?
ನೋಡಿ, 2013 ರಲ್ಲಿ ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದೆವು. ಪಕ್ಷ ಅಧಿಕಾರಕ್ಕೆ ಬಂತು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಐದು ವರ್ಷ ಉತ್ತಮ ಆಡಳಿತ ಕೊಟ್ಟರು. ನಾವೆಲ್ಲರೂ ಸಹಕರಿಸಿದೆವು. ಒಂದು ದಿನವಾದರೂ ನಮ್ಮಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂತಾ? ಸ್ಥಿರ ಸರಕಾರ ಕೊಡಲಿಲ್ಲವೇ? ನಮ್ಮಲ್ಲಿ ಹೈಕಮಾಂಡ್ ಗಟ್ಟಿಯಿದೆ, ಯಾವ ಗುಂಪುಗಾರಿಕೆಯೂ ನಡೆಯಲ್ಲ.
ಮತ್ತೇಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದೆ?
ಆ ರೀತಿ ಏನೂ ಇಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಇರುವವರು ಒಂದು ಡಜನ್ ನಾಯಕರಿದ್ದಾರೆ. ಒಬ್ಬೊಬ್ಬರೂ ಅವರದೇ ಆದ ಶಕ್ತಿ, ಸಾಮರ್ಥ್ಯ, ಸಂಘಟನ ಪ್ರಭಾವ ಹೊಂದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಹೋದರೆ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ. ಪ್ರತಿಯೊಬ್ಬ ನಾಯಕರಿಗೂ ವೈಯಕ್ತಿಕ ಹಾಗೂ ಸಮುದಾಯಿಕವಾಗಿಯೂ ಒಂದೊಂದು ಶಕ್ತಿ ಇದೆ. ಕಾಂಗ್ರೆಸ್‌ನಲ್ಲಿ ಇರುವಷ್ಟು ಗಟ್ಟಿ ಹಾಗೂ ದಕ್ಷ ನಾಯಕತ್ವ ಯಾವ ಪಕ್ಷದಲ್ಲೂ ಇಲ್ಲ.
ಹಾಗಿದ್ದರೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಲ್ಲಿ ಹೊಂದಾಣಿಕೆ ಇಲ್ಲ ಎಂದು ಅರ್ಥವೇ?
ನನಗೇನೂ ಹಾಗೆ ಕಾಣಿಸುತ್ತಿಲ್ಲ. ಕೆಲವೊಮ್ಮೆ ಯಾರಿಗೂ ಬರದ ಅನುಮಾನ ಮಾಧ್ಯಮದವರಿಗೆ ಬಂದುಬಿಡುತ್ತದೆ. ಏನು ಮಾಡೋಣ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಹೊಂದಾಣಿಕೆ ಚೆನ್ನಾಗಿದೆ.
ಇಷ್ಟು ದಿನ ಸುಮ್ಮನಿದ್ದ ನೀವು, ದಿಢೀರಾಗಿ ಮೊನ್ನೆ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಎಂದು ಹೇಳಿದಿರಿ. ಏನಿದರ ಮರ್ಮ?
ಹೌದು, ಪಕ್ಷದ ವಿಚಾರ ಬಂದರೆ ಅಧ್ಯಕ್ಷರು, ಶಾಸಕಾಂಗ ಪಕ್ಷದ ವಿಚಾರ ಬಂದರೆ ಶಾಸಕಾಂಗ ಪಕ್ಷದ ನಾಯಕರೇ ಸುಪ್ರೀಂ. ಎಲ್ಲರೂ ಪಕ್ಷದ ಶಿಸ್ತಿಗೆ ಬದ್ಧರು. ನಾನು ಅಷ್ಟೇ ಹೇಳಿದ್ದು.
ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂದು ಶಿವಕುಮಾರ್ ಪದೇ ಪದೆ ಯಾಕೆ ಹೇಳುತ್ತಾ¤ರೆ? ಯಾರು ಅವರ ಟಾರ್ಗೆಟ್?
ಅವರು ಹೇಳುವುದು ಸರಿಯಾಗಿದೆ. ಪಕ್ಷದ ಅಧ್ಯಕ್ಷರಾಗಿ ಅವರ ಕರ್ತವ್ಯ ಅವರು ಮಾಡುತ್ತಾರೆ. ಪಕ್ಷವೇ ಎಲ್ಲರಿಗಿಂತ ಮುಖ್ಯ ಅಲ್ಲವೇ.
ಹೋಗಲಿ, ನೀವೂ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದಿದ್ದೀರಿ…
ಹೌದು, ಅದರಲ್ಲಿ ತಪ್ಪೇನಿದೆ. ನಾನೂ ಮುಖ್ಯಮಂತ್ರಿ ಆಕಾಂಕ್ಷಿಯೇ. ಆದರೆ ಆ ವಿಚಾರ ಹಾದಿ ಬೀದಿಯಲ್ಲಿ ಚರ್ಚಿಸುವುದಲ್ಲ. ಅಂತಹ ಸಮಯವೂ ಈಗ ಬಂದಿಲ್ಲ. ಸಮಯ ಬಂದಾಗ ಪಕ್ಷ ಹೈಕಮಾಂಡ್ ಶಾಸಕರು ಆ ತೀರ್ಮಾನ ಮಾಡುತ್ತಾರೆ.
ಮುಂದಿನ ಮುಖ್ಯಮಂತ್ರಿ ಕುರಿತ ಹೇಳಿಕೆಗಳು ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ನಿಮ್ಮ ಪಕ್ಷದ ಹಿರಿಯರಿಗೆ ತಿಳಿದಿಲ್ಲವೇ?
ಹೌದು, ತಳಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಗೊಂದಲ ಉಂಟಾಗುತ್ತದೆ. ನಮ್ಮ ನಮ್ಮ ಫಾಲೋವರ್ ಇರುತ್ತಾರೆ. ನಮ್ಮ ಜತೆಯಲ್ಲಿ ಗುರುತಿಸಿಕೊಳ್ಳುವವರು ಇರುತ್ತಾರೆ. ಅವರೆಲ್ಲ ಬೇರೆ ಬೇರೆ ತರಾ ಆಗುತ್ತಾರೆ. ಅದಕ್ಕೇ ನಾವು ಸಾಮೂಹಿಕ ನಾಯಕತ್ವದಲ್ಲಿ ಹೋಗೋಣ ಎಂದು ಹೇಳುತ್ತಿರುವುದು. ಸಿದ್ದರಾಮಯ್ಯ ಅವರೇ ಯಾರೂ ಮಾತನಾಡಬಾರದು ಎಂದು ಹೇಳಿದ್ದಾರಲ್ಲಾ ಅಲ್ಲಿಗೆ ವಿಷಯ ಮುಕ್ತಾಯ ಅಷ್ಟೇ.
ಸಿದ್ದರಾಮಯ್ಯ ಅವರು ಹೇಳಿದ್ದು ತಡವಾಗಲಿಲ್ಲವೇ? ವಿವಾದ ಭುಗಿಲೆದ್ದ ಮೇಲೆ ಹೇಳಿದರು ಅವರು.
ತಡ ಅಂತೇನೂ ಇಲ್ಲ. ಸಿದ್ದರಾಮಯ್ಯ ಅವರು ಬಹಳ ಸೂಕ್ತವಾಗಿ ಕರೆಕ್ಟ್ ಆಗಿ ಹೇಳಿದ್ದಾರೆ. ಇನ್ಮೆàಲೆ ಮಾತನಾಡಿದರೆ ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳುತ್ತದೆ.
ಸಿದ್ದು ಸಿಎಂ ಆಗಬೇಕೆನ್ನುವುದು ಪಕ್ಷದ ಶಾಸಕರ ವೈಯಕ್ತಿಕ ಅಭಿಪ್ರಾಯ. ಶಾಸಕರ ಅಭಿಪ್ರಾಯ ಪಕ್ಷದೊಳಗಿನ ಧ್ವನಿಯೇ ಅಲ್ಲವೇ?
ಇಲ್ಲ, ಶಾಸಕರು ವೈಯಕ್ತಿಕ ಅಭಿಪ್ರಾಯಗಳನ್ನು ಪ್ರೀತಿ, ಅಭಿಮಾನದಿಂದ ಹೇಳಬಹುದು. ಆದರೆ ಅದೇ ಪಕ್ಷದ ಧ್ವನಿ ಎಂದಾಗುವುದಿಲ್ಲ. ಈ ವಿಚಾರದಲ್ಲಿ ಯಾರಿಗೂ ವೈಯಕ್ತಿಕ ಪ್ರತಿಷ್ಠೆ ಇರಬಾರದು, ನಾಯಕರಾದವರಿಗೆ ಉದಾರ ಮನೋಭಾವ ಇರಬೇಕು.
ಹಾಗಾದರೆ ನಿಮ್ಮ ಮಾತಿನ ಅರ್ಥ?
ನೋಡಿ, ಕಾಂಗ್ರೆಸ್‌ನಲ್ಲಿ ಒಂದು ಸಂಸ್ಕೃತಿ ಹಾಗೂ ಪದ್ಧತಿ ಇದೆ. ಮುಖ್ಯಮಂತ್ರಿಯ ವಿಚಾರ ಮತ್ತು ಅಂತಹ ಸಂದರ್ಭ ಬಂದಾಗ ಹೈಕಮಾಂಡ್ ಇದೆ. ರಾಜ್ಯ ಉಸ್ತುವಾರಿಗಳು ಇರುತ್ತಾರೆ. ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ಕೆಲವೊಮ್ಮೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂಬ ಒಂದು ಸಾಲಿನ ನಿರ್ಣಯ ಕೈಗೊಂಡಿದ್ದು ಇದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಲೂ ಎ.ಕೆ.ಆ್ಯಂಟನಿ, ಅಂಬಿಕಾ ಸೋನಿ ಎಲ್ಲರೂ ಬಂದಿದ್ದರು. ಹೀಗಾಗಿ ಸೂಕ್ತ ವೇದಿಕೆಯಲ್ಲಿ ಮಾತ್ರ ಅದು ಚರ್ಚೆಯಾಗುತ್ತದೆ, ಚರ್ಚೆಯಾಗಬೇಕು ಸಹ.
ಪಕ್ಷದ ಹಿರಿಯ ನಾಯಕರಾಗಿ, ನೀವು ಶಾಸಕರಿಗೆ ಕಿವಿಮಾತು ಹೇಳಬಹುದಲ್ಲವೇ?
ನನ್ನ ಸಲಹೆ ಏನೆಂದರೆ ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡದೆ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೆಚ್ಚು ಚರ್ಚೆಯಾಗಬೇಕು. ಎಲ್ಲ ಕಾರ್ಯತಂತ್ರ ಮಾಡೋಣ, ತಪ್ಪು ಒಪ್ಪು ಸರಿಪಡಿಸಿಕೊಳ್ಳೋಣ. ಸಾಮೂಹಿಕ ನಾಯಕತ್ವದಲ್ಲಿ ಹೋಗೋಣ. ನಮ್ಮಲ್ಲಿ ವ್ಯತ್ಯಾಸ ಇದ್ದರೆ ಸರಿಪಡಿಸಿಕೊಳ್ಳೋಣ.
ಹಿಂದೊಮ್ಮೆ ಅವಕಾಶ ಇದ್ದರೂ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿದ ಬಗ್ಗೆ ಬೇಸರ ಇಲ್ಲವೇ?
ಖಂಡಿತಾ ಇದೆ. ಅನೇಕ ಸಂದರ್ಭಗಳಲ್ಲಿ ಒಂದಲ್ಲ, ಹತ್ತಾರು ಬಾರಿ ಬೇಸರ ಆಗಿದೆ. ಯಾಕಪ್ಪಾ ಹೀಗಾಗುತ್ತದೆ ಎಂದು ಅನಿಸಿದೆ. ಯಾವ ಮಾನದಂಡ, ಏನು ಕೊರತೆ ಎಂದು ಯೋಚಿಸಿದ್ದೂ ಇದೆ. ಅಂತಿಮವಾಗಿ ಪಕ್ಷದ ತೀರ್ಮಾನ, ಆಯಾ ಸಮಯ ಸಂದರ್ಭದ ಅನಿವಾರ್ಯಕ್ಕೆ ತಲೆಬಾಗಬೇಕಾಗುತ್ತದೆ. ಇದೆಲ್ಲ ಒಂದು ರೀತಿ ಗೇಮ್. ಪಾಲಿಟಿಕ್ಸ್ ನಲ್ಲಿ ಹೀಗೇ ಆಗುತ್ತದೆ ಎಂದು ಹೇಳಲಾ ಗದು. ಇಲ್ಲಿ ಪಾಯಿಂಟ್ಸ್, ಸ್ಕೋರ್ ಮುಖ್ಯ. ಸೋತೋರು, ಗೆಧ್ದೋರು. ರಾಜಕೀಯ ಪರಿಸ್ಥಿತಿ ಹೀಗೆ ಏನೇನೋ ಲೆಕ್ಕಾಚಾರ ಇರುತ್ತದೆ. ಹಾಗೆಂದು ಸಂಘರ್ಷಕ್ಕೆ ಇಳಿಯಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.