ನಿಶ್ಶಬ್ದಕ್ಕೆ ಜಾರಿದ ಜಿ.ವಿ.
Team Udayavani, Apr 20, 2021, 1:00 AM IST
“ಸಂಸಾರದ ಸುಖವನ್ನು ಮರೆತೆ. ರಾತ್ರಿಗಳ ನಿ¨ªೆಗಳನ್ನು ತೊರೆದೆ. ಸಿನೆಮಾ ಕಡೆಗೆ ನೋಡಲೇ ಇಲ್ಲ. ಆಪ್ತರನ್ನೆಲ್ಲ ಮರೆತೇಬಿಟ್ಟೆ. ರಸ್ತೆಯಲ್ಲಿ ನಿಂತಾಗ, ನನಗೆ ಜನರೇ ಕಾಣಿಸುತ್ತಿರಲಿಲ್ಲ; ಬರೀ ಪದಗಳೇ ಓಡಾಡುತ್ತಿರುವಂತೆ ಅನ್ನಿಸುತ್ತಿತ್ತು!’
50 ವರ್ಷಕ್ಕೂ ಮೀರಿ, ಪದಗಳೊಟ್ಟಿಗೆ ಸಂಸಾರ ನಡೆಸಿದ ಜಿ. ವೆಂಕಟಸುಬ್ಬಯ್ಯ ಅವರ ನಿಘಂಟಿನ ತಪಸ್ಸು ಈ ಪರಿಯದ್ದು. ಬಹುಶಃ ಅಷ್ಟು ಸುದೀರ್ಘ ಕಾಲದ ತ್ಯಾಗ ಒಬ್ಬ ವಿಜ್ಞಾನಿಗೆ ನೊಬೆಲ್ ಅನ್ನು; ನಟನಾಗಿದ್ದಿದ್ದರೆ, ಆಸ್ಕರನ್ನೋ; ಕಥೆಗಾರನೋ- ಕವಿಯೋ ಆಗಿದ್ದಿದ್ದರೆ ಅವಾರ್ಡುಗಳ ಮಳೆಯನ್ನೇ ಎದುರಿಡುತ್ತಿತ್ತು. ಆದರೆ ಜಿ. ವೆಂಕಟಸುಬ್ಬಯ್ಯ ಮುಂದೆ ಇದ್ದಿದ್ದು ಅಂಥ ಕೀರ್ತಿಗಳ, ರಂಜನೆಗಳ, ಕಲ್ಪನೆಗಳ ಹಾದಿಗಳಲ್ಲ; ನಿಘಂಟು ಎಂಬ ಪುಟ್ಟ ಬಡ ಕೂಸು. ಒಂದೊಂದೇ ಪದಗಳನ್ನು ಹೆಕ್ಕಿ, ಅದಕ್ಕಿರುವ ಅರ್ಥಗಳನ್ನು ವಿಸ್ತರಿಸುತ್ತಲೇ, ಅವರು ಭಾಷೆಯನ್ನು “ಸ್ಟಾರ್’ ಆಗಿಸುವ ಕೆಲಸ ಮಾಡಿದ್ದರು. ಅಪರೂಪದ ಭಾಷಾತಜ್ಞ ರಾಗಿದ್ದ ಜಿ.ವಿ., ಸಂಶೋಧನೆ, ಅನುವಾದ ರಚನೆಗಳಲ್ಲೂ ಅಸಾಮಾನ್ಯ ಕೊಡುಗೆಗಳನ್ನು ನೀಡಿದ್ದರು. ಭಾಷೆಯ ಜತೆಗೇ ಲೇಖಕರಾಗಿ ಜೀವಿಸಿದ್ದರು.
ಬಿ.ಎಂ.ಶ್ರೀ. ಪ್ರೇರಣೆ: ಜಿ.ವಿ. ಅವರು ಎಂ.ಎ.ಯಲ್ಲಿ ಉತ್ತೀರ್ಣ ರಾದಾಗ, “ಕನ್ನಡದ ಕಣ್ವ’ ಬಿ.ಎಂ.ಶ್ರೀ. ಒಂದು ಮಾತು ಹೇಳಿದ್ದರು: “ನಿನ್ನ ಜವಾಬ್ದಾರಿ ಇಲ್ಲಿಗೇ ಮುಗಿಯಲಿಲ್ಲ. ನಾವಂತೂ ಮುದುಕ ರಾಗಿಬಿಟ್ಟೆವು. ನಿಘಂಟುವಿನ ಕೆಲಸ ನನ್ನ ಕಾಲದಲ್ಲಿ ಮುಗಿಯು ವಂಥದ್ದಲ್ಲ. ಕನ್ನಡವನ್ನು ನಿನ್ನ ಕೈಲಿ ಇಡುತ್ತಿದ್ದೇವೆ. ನೀನು ಮುಂದುವರಿಸು.’- ಜಿ.ವಿ. ಅಕ್ಷರಶಃ ಈ ಮಾತಿಗೆ ಬದ್ಧರಾಗಿ, ಕನ್ನಡಕ್ಕೆ ಶಕ್ತಿ ತುಂಬುವ ಕೆಲಸಕ್ಕೇ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟರು.
ಮೊದಲ ನಿಘಂಟು ಕೆಲಸ: 1943ರಲ್ಲಿ ನಿಘಂಟು ರಚನೆಗೆ ಶಬ್ದಗಳನ್ನು ಆರಿಸುವುದಕ್ಕೆ ಡಿ.ಎಲ್. ನರಸಿಂಹಾ ಚಾರ್ಯರು, ಎ.ಆರ್. ಕೃಷ್ಣಶಾಸ್ತ್ರೀಗಳು ಒಂದು ಬಳಗ ಕಟ್ಟಿದ್ದಾಗ, ಅದರಲ್ಲಿ ಜಿ.ವಿ.ಯೂ ಇದ್ದರು. ನಿತ್ಯದ ಆಡು ಭಾಷೆಯಿಂದ, ಹಳೆ ಗನ್ನಡದಿಂದ, ಹೊಸ ಗನ್ನಡದಿಂದ ಪದಗಳನ್ನು ಆರಿಸಲು, ಯುವಕ ಜಿ.ವಿ. ಹಗಲು ರಾತ್ರಿ ತೋರಿಸಿದ ಉತ್ಸಾಹ,
ಡಿಎಲ್‌ಎನ್‌ಗೆ ವಿಸ್ಮಯ ಹುಟ್ಟಿಸಿತ್ತು. ಪಂಪನಿಂದ ಪುಟ್ಟಪ್ಪನವರೆಗಿನ ಕವಿ, ಸಾಹಿತಿಗಳ ರಚನೆಗಳಲ್ಲಿನ ಪದಗಳನ್ನು ಶ್ರದ್ಧೆಯಿಂದ ಹೆಕ್ಕಿ ತೆಗೆದರು ಜಿ.ವಿ. ಎ.ಆರ್. ಕೃಷ್ಣಶಾಸ್ತ್ರಿಗಳು ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾದಾಗ, ಜಿ.ವಿ. ಅವರನ್ನು ಮನೆಗೆ ಆಹ್ವಾನಿಸಿ, ಸಂಸ್ಕೃತ ನಿಘಂಟನ್ನು ಕೈಗಿಟ್ಟು ಪಾಠ ಮಾಡಿ, ಪದಗಳ ರುಚಿಯನ್ನು ಇನ್ನಷ್ಟು ಹತ್ತಿಸಿದರು. ಮುಂದೊಂದು ದಿನ ಜಿ.ವಿ. ಅವರೇ ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. “ನಡೆದಾಡುವ ನಿಘಂಟು’ ಅಂತಲೇ ಖ್ಯಾತಿ ಪಡೆದರು.
“ಬರಹ’ದೊಳಗೆ ಜಿ.ವಿ.: ಜಿ.ವಿ. ಹೆಕ್ಕಿದ ಇಂಗ್ಲಿಷ್- ಕನ್ನಡ ಮತ್ತು ಕನ್ನಡ- ಕನ್ನಡ ಕ್ಲಿಷ್ಟ ಪದಕೋಶಗಳು ನಿಜಕ್ಕೂ ಅಮೂಲ್ಯ ಸಂಪತ್ತು. ಅಮೆರಿಕದಲ್ಲಿನ ಬೆಂಗಳೂರು ಮೂಲದ ಶೇಷಾ ದ್ರಿವಾಸು ಬರಹ ಅಂತರ್ಜಾಲ ಡಿಕ್ಷನರಿಯು, ಇದನ್ನು ಆಧರಿಸಿಯೇ ರಚನೆಗೊಂಡಿದೆ. ಕಂಪ್ಯೂಟರಿನಲ್ಲಿ ಇನ್ನೂ ಕನ್ನಡ ಅಷ್ಟಾಗಿ ಕಣ್ತೆರೆಯದ ಆ ದಿನಗಳಲ್ಲೇ ಜಿ.ವಿ. ಪೋಣಿಸಿದ ಪದಗಳು, ಅರ್ಥಗಳು ಗಣಕದ ಕಿಟಕಿಯಿಂದ ಇಣುಕುತ್ತಿದ್ದವು.
ಇಗೋ ಕನ್ನಡ: 3 ಭಾಷೆಗಳ ಅಧ್ಯಯನ ಮಾಡಿ, ದೈನಿಕವೊಂದಕ್ಕೆ ಜಿ.ವಿ. ಬರೆಯುತ್ತಿದ್ದ “ಇಗೋ ಕನ್ನಡ’ ಅಂಕಣ, ಅತ್ಯಂತ ಜನಪ್ರಿಯವಾಗಿತ್ತು. ಸುಮಾರು 18 ವರ್ಷಗಳ ಕಾಲ, ಪ್ರತೀ ರವಿವಾರ ಮೂಡಿಬರುತ್ತಿದ್ದ ಈ ಅಂಕಣ ಬರಹಗಳು, ಭಾಷೆಯನ್ನು ಬಗೆಬಗೆಯಲ್ಲಿ ಸವಿ ಯುವಂತೆ ಪ್ರೇರೇಪಿ ಸಿದ್ದವು. ನವ ಕರ್ನಾಟಕ ಪ್ರಕಾಶ ನವು ಇದನ್ನು “ಇಗೋ ಕನ್ನಡ- ಸಾಮಾಜಿಕ ನಿಘಂಟು’ ಎಂಬ ಶೀರ್ಷಿಕೆಯಲ್ಲಿ 4 ಸಂಪುಟಗಳಲ್ಲಿ ಪ್ರಕಟಿಸಿದೆ. ಪದಗಳ ವ್ಯುತ್ಪತ್ತಿ, ಅರ್ಥ, ಶಬ್ದ ದೋಷ, ಪ್ರಶ್ನೋತ್ತರ ಇತ್ಯಾದಿ ವಿವರಣೆಗಳನ್ನು ಒಳಗೊಂಡ ಈ ಕೃತಿ, ಕನ್ನಡ ಭಾಷೆಗೆ ಸಾರ್ವಕಾಲಿಕ ದಾರಿದೀಪ. ಇತ್ತೀಚೆಗೆ ಜಿ.ವಿ. ಅವರಿಗೆ ನಡೆದಾಡಲು ಸಾಧ್ಯವಾಗದೆ, ಹಾಸಿಗೆ ಹಿಡಿದಾಗಲೂ, ಪದಕೃಷಿ ನಿಲ್ಲಿಸಿರಲಿಲ್ಲ. ಮಗ ಜಿ.ವಿ. ಅರುಣ್ ಅವರಿಗೆ, “ಆ ಪುಸ್ತಕ ಕೊಡು, ಹೀಗೆ ಮಾಡು, ಅದು ಹಾಗಾಗಬೇಕು’ ಎಂದು ಹೇಳುತ್ತಾ, ಸಣ್ಣಪುಟ್ಟ ಕೆಲಸದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. 70- 80 ವರ್ಷಗಳ ಹಿಂದೆ ಬಳಸಿದ ಪದಗಳನ್ನೂ ಗಕ್ಕನೆ ನೆನಪಿಗೆ ತಂದುಕೊಂಡು, ಅದರ ಅರ್ಥ ವಿವರಿಸುತ್ತಿದ್ದರು. ಕನ್ನಡ ನುಡಿಯ ಅರ್ಥ, ಅಂತರಾರ್ಥ, ಆಳ- ವಿಸ್ತಾರಗಳ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೆಲವೇ ವಿದ್ವಾಂಸರ ಪೈಕಿ, ಜಿ.ವಿ.ಯೂ ಒಬ್ಬರಾಗಿದ್ದರು. ಇಂದು ಅವರಿಲ್ಲ ಎನ್ನಲು ಯಾರೂ ಸಿದ್ಧರಿಲ್ಲ. ಜಿ.ವಿ. ಶೋಧಿಸಿದ ಪದಗಳು ನಮ್ಮೊಟ್ಟಿಗೆ ಇವೆ. ಭಾಷೆ ಇರುವ ತನಕ ಜಿ.ವಿ.ಯೂ ಇದ್ದೇ ಇರುತ್ತಾರೆ.
ಕನ್ನಡದ ಕಿಟ್ಟೆಲ್ ನಡೆದು ಬಂದ ಹಾದಿ
ಜನನ: ಆಗಸ್ಟ್ 23, 1913
ಸ್ಥಳ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾ| ಗಂಜಾಂ
ಹೆತ್ತವರು: ಗಂಜಾಂ ತಿಮ್ಮಣ್ಣಯ್ಯ, ಸುಬ್ಬಮ್ಮ
ವ್ಯಾಸಂಗ: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ, ಬಿ.ಟಿ. ಪದವಿ
ಹುದ್ದೆ: ಮಂಡ್ಯದ ಮುನ್ಸಿಪಲ್ ಹೈ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ವೃತ್ತಿಬದುಕು ಆರಂಭ. ಅನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ರಾಗಿ ಸೇರಿ, ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ.
ಪುರಸ್ಕಾರಗಳು
ಪದ್ಮಶ್ರೀ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ (2015), ನಾಡೋಜ ಗೌರವ, ಭಾಷಾ ಸನ್ಮಾನ್ ಪುರಸ್ಕಾರ, ಸೇಡಿಯಾಪು ಪ್ರಶಸ್ತಿ, ಮುದ್ದಣ ಪುರಸ್ಕಾರ, ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, ಗೋಕಾಕ್ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, ವನಮಾಲಿ ಪ್ರಶಸ್ತಿ
ಬಿರುದುಗಳು
ನಡೆದಾಡುವ ನಿಘಂಟು, ನಿಘಂಟು ಸಾರ್ವಭೌಮ, ಶಬ್ದಬ್ರಹ್ಮ, ಕನ್ನಡದ ಕಿಟ್ಟೆಲ…, ಶಬ್ದ ಗಾರುಡಿಗ, ಶಬ್ದಸಂಜೀವಿನಿ, ವಿದ್ಯಾಲಂಕಾರ, ಪದಗುರು, ಪದಜೀವಿ, ಶಬ್ದಸಾಗರ, ಶಬ್ದಶಿಲ್ಪಿ ಪದಗಳ ಕಣಜ, ಇತ್ಯಾದಿ.
ಕೃತಿಗಳು: ಇಗೋ ಕನ್ನಡ- ಸಾಮಾಜಿಕ ನಿಘಂಟು ಸಂಪುಟ-1-4, ನಳಚಂಪು, ನಯಸೇನ, ಅನುಕಲ್ಪನೆ, ಅಕ್ರೂರ ಚರಿತ್ರೆ, ಲಿಂಡನ್ ಜಾನ್ಸನ್ ಕಥೆ, ಸಂಯುಕ್ತ ಸಂಸ್ಥಾನ ಪರಿ ಚಯ, ಶಂಕರಾಚಾರ್ಯ, ಇದು ನಮ್ಮ ಭಾರತ, ಸರಳಾದಾಸ್, ಕಬೀರ್, ರತ್ನಾಕರವರ್ಣಿ, ದಾಸ ಸಾಹಿತ್ಯ, ವಚನ ಸಾಹಿತ್ಯ, ಶಾಸನ ಸಾಹಿತ್ಯ, ಷಡಕ್ಷರ ದೇವ, ಸರ್ವಜ್ಞ, ಇಣುಕುನೋಟ, ಕನ್ನಡ ಸಾಹಿತ್ಯ ನಡೆದು ಬಂದ ದಾರಿ, ಕನ್ನಡ ಶಾಸನ ಪರಿಚಯ, ಕನ್ನಡದ ನಾಯಕಮಣಿಗಳು, ಕರ್ನಾಟಕ ವೈಭವ ಮತ್ತು ಇತರ ಶಬ್ಧ ಚಿತ್ರಗಳು, ಕನ್ನಡ- ಕನ್ನಡ- ಇಂಗ್ಲಿಷ್ ನಿಘಂಟು, ಕನ್ನಡ- ಕನ್ನಡ ಕ್ಲಿಷ್ಟ ಪದಕೋಶ, ಮುದ್ದಣ ಭಂಡಾರ ಭಾಗ 1- 2, ಮುದ್ದಣ ಪ್ರಯೋಗಕೋಶ, ಕಾವ್ಯಲ ಹರಿ, ಕಾವ್ಯ ಸಂಪುಟ, ಇಂಗ್ಲಿಷ್- ಕನ್ನಡ ನಿಘಂಟು, ಕುಮಾರವ್ಯಾಸನ ಅಂತರಂಗ, ತಮಿಳು ಕಥೆಗಳು, ನಾಗರಸನ ಭಗವದ್ಗೀತೆ, ಕರ್ಣ ಕರ್ಣಾಮೃತ, ಎರವಲು ಪದಕೋಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.