ಮಾರುಕಟ್ಟೆಯಲ್ಲಿ ಚೈತನ್ಯ ಮೂಡಿಸಿದ ಚೌತಿ; ಸರಳವಾಗಿ ಸಂಪ್ರದಾಯದಂತೆ ಆಚರಣೆಗೆ ಸಿದ್ಧತೆ
Team Udayavani, Aug 21, 2020, 9:20 PM IST
ಕುಂದಾಪುರ: ಕೋವಿಡ್ ಸಂಕಷ್ಟದ ನಡುವೆ ಆಚರಣೆಗೆ ಬಂದ ವಿನಾಯಕ ಚತುರ್ಥಿ ಮಾರುಕಟ್ಟೆಯಲ್ಲಿ ತುಸು ಚೈತನ್ಯ ಮೂಡಿಸಿದೆ. ಒಂದಷ್ಟು ಜನರ ಓಡಾಟ, ವ್ಯಾಪಾರ, ಖರೀದಿ ಎಂದು ಆಶಾದಾಯಕವಾಗಿ ವಹಿವಾಟು ಆರಂಭವಾಗಿದೆ. ಶನಿವಾರದ ಮೆರುಗು ಶುಕ್ರವಾರ ಗೌರಿ ಹಬ್ಬ, ಶನಿವಾರ ಚತುರ್ಥಿ ಬಂದಿದ್ದು, ರವಿವಾರ ರಜೆ ಇರುವುದರಿಂದ ದೂರದೂರಿಂದ ಬರುವವರು ಸರಣಿ ರಜೆಯಲ್ಲಿ ಬಂದಿದ್ದಾರೆ. ಅನೇಕರು ಹಬ್ಬದ ಸಲುವಾಗಿ ಊರಿಗೆ ಬಂದಿದ್ದಾರೆ. ಆದರೆ ಕೊರೊನಾ ಹಾಟ್‌ಸ್ಪಾಟ್ ಪ್ರದೇಶದಲ್ಲಿ ಇರುವವರು ಊರಿಗೆ ಬರುತ್ತಿಲ್ಲ.
ಆಚರಣೆ
ಗಣೇಶೋತ್ಸವ ಸಾರ್ವಜನಿಕವಾಗಿ ಪೆಂಡಾಲ್ ಹಾಕಿ ಆಚರಣೆಗೆ ಒಂದಷ್ಟು ವಿಘ್ನಗಳೇ ಬಂದರೂ ದೇವಾಲಯ ಹಾಗೂ ಮನೆಗಳಲ್ಲಿ ಆಚರಣೆಗೆ ಯಾವುದೇ ತೊಡಕು ಇಲ್ಲ. ಸರಕಾರ ಕೂಡಾ ಮಾರ್ಗಸೂಚಿ ಪ್ರಕಟಿಸಿ ಜನರ ಸಂಖ್ಯೆ ಮಿತಿಯಲ್ಲಿಟ್ಟುಕೊಂಡು ಆಚರಣೆಗೆ ಅನುವು ಮಾಡಿದೆ. ಕೆಲವೆಡೆ ಸಾರ್ವಜನಿಕ ಆಚರಣೆಗೆ ಸಿದ್ಧತೆಗಳು ನಡೆದಿವೆ. ಅಂತಹ ಕಡೆಗಳಲ್ಲಿ ತೀರ್ಥ ಪ್ರಸಾದ ವಿತರಣೆ ಇಲ್ಲ, ಅನ್ನದಾನ ಇಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ ಆಚರಣೆಗೆ ಯಾವುದೇ ತೊಂದರೆ ಇಲ್ಲ. ಆದ್ದರಿಂದ ಊರಿನಲ್ಲಿ ಹಬ್ಬದ ವಾತಾವರಣ ನಿಶ್ಚಿತವಾಗಿ ಇರಲಿದೆ. ದೇವಾಲಯಗಳಲ್ಲೂ ವಿಗ್ರಹ ಪ್ರತಿಷ್ಠೆ ನಡೆದು ಪೂಜೆ, ಅರ್ಚನೆ, ಆರಾಧನೆಗಳು ನಡೆಯಲಿವೆ.
ಮಾರುಕಟ್ಟೆಯಲ್ಲಿ ಚಟುವಟಿಕೆ
ಹೆಚ್ಚಿನ ಮನೆಗಳಲ್ಲಿ ಹಬ್ಬದ ಆಚರಣೆ ಇರುವುದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಚುರುಕು ಪಡೆದಿದೆ. ನಿರೀಕ್ಷಿತವಾಗಿ ಅಲ್ಲದಿದ್ದರೂ ಭಾರೀ ಇಳಿಮುಖವೇನೂ ಅಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಈ ಹಿಂದಿನ ಭೀತಿಯ ವಾತಾವರಣ ಇಲ್ಲ. ಹೂವಿನ ಮಾರುಕಟ್ಟೆ, ದಿನಸಿ ಅಂಗಡಿ ಗಳು, ತರಕಾರಿ ಅಂಗಡಿಗಳು, ಫ್ಯಾನ್ಸಿ ಅಂಗಡಿಗಳಲ್ಲಿ ವ್ಯಾಪಾರದ ಲಕ್ಷಣ ಇತ್ತು. ಗಣಪತಿ ವಿಗ್ರಹಗಳ ತಯಾರಿ ಕೂಡಾ ಭಾರೀ ಇಳಿಮುಖವಾಗಿಲ್ಲ. ಪೊಲೀಸ್ ಠಾಣೆಗೆ ಅನುಮತಿ ಕೋರಿ ಬಂದ ಅರ್ಜಿಗಳ ಸಂಖ್ಯೆಯೂ ಕಳೆದ ಬಾರಿಗಿಂತ ಕೇವಲ 6 ಕಡಿಮೆ. ತರಕಾರಿ, ಕಬ್ಬು, ಹೂವಿನ ದರದಲ್ಲಿ ಇಳಿಕೆಯಾಗಿಲ್ಲ. ಚೌತಿ ವ್ಯಾಪಾರ ಎಂದು ಏರಿಕೆಯೂ ಆಗಿಲ್ಲ.
ಪೇಟೆಯಲ್ಲಿ ಹಬ್ಬದ ಗೌಜಿ
ಕಾರ್ಕಳ: ಗೌರಿ-ಗಣೇಶ ಹಬ್ಬಕ್ಕೆ ಶುಕ್ರವಾರ ಕಾರ್ಕಳ ಪೇಟೆಯಲ್ಲಿ ವ್ಯಾಪಾರ ಆಶಾದಾಯಕವಾಗಿತ್ತು. ತಾಲೂಕಿನಲ್ಲಿ ವಿವಿಧೆಡೆ ಹಬ್ಬವನ್ನು ಆಚರಿಸಲಾಗುತ್ತಿದ್ದರೂ ಈ ಬಾರಿ ಸರಳವಾಗಿ ಆಚರಣೆಗೆ ಒತ್ತು ನೀಡಲಾಗಿದೆ. ಸರಕಾರದ ಮಾರ್ಗ ಸೂಚಿಗಳನ್ವಯ ಆಚರಣೆ ಮಾಡಬೇಕಿರು ವುದರಿಂದ ಸಾರ್ವಜನಿಕ ಸಮಿತಿಗಳು ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿವೆ. ಜನರೂ ಮನೆಗಳಲ್ಲಿ ಆಚರಣೆಗೆ ಹೆಚ್ಚು ಒತ್ತು ನೀಡಿರುವುದು ಕಂಡು ಬಂದಿದೆ. ಇನ್ನು ಮಾರುಕಟ್ಟೆಯಲ್ಲಿ ಖರೀದಿ ಆಶಾದಾಯಕವಾಗಿತ್ತು. ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿತ್ತು. ಸಂಪ್ರದಾಯ ಪ್ರಕಾರ ಜನರು ಹಬ್ಬಕ್ಕೆ ಪೂರಕ ಖರೀದಿ ನಡೆಸಿದರು. ಮೂರು ಮಾರ್ಗದ ಹೂವಿನ ಅಂಗಡಿ ಮುಂತಾದ ಸ್ಥಳಗಳಲ್ಲಿ ಹೂವು, ಹಣ್ಣಿನ ಅಂಗಡಿಗಳಲ್ಲಿ ಶುಕ್ರವಾರ ವ್ಯಾಪಾರ ನಡೆದಿತ್ತು.
ಕಾರ್ಕಳ: ಸರಳ ಆಚರಣೆ
ಗಣೇಶೋತ್ಸವ ನಿಯಮದಂತೆ ನಡೆಸ ಬೇಕಾದ ಅನಿವಾರ್ಯ ಇರುವುದರಿಂದ ಗಣೇಶೋತ್ಸವ ಸಮಿತಿಗಳು ಸರಳ ಆಚರಣೆಗೆ ನಿರ್ಧರಿಸಿವೆ. ಕಾರ್ಕಳದ ಜೋಡುಕಟ್ಟೆ. ಬಸ್‌ಸ್ಟಾಂಡ್, ಅಜೆಕಾರು. ಎಣ್ಣೆಹೊಳೆ ಗಣೇಶ ಮಂದಿರ ಸಾಣೂರು, ಬೈಲೂರು, ಮಾಳ ಮುಂತಾದ ಕಡೆಗಳಲ್ಲಿ ಸರಳ ಆಚರಣೆ ನಡೆಯಲಿದೆ. ದೇವಸ್ಥಾನಗಳಲ್ಲಿ ಕೂಡ ಪೂರ್ವ ಸಂಪ್ರದಾಯದಂತೆ ಆಚರಣೆ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.