Gangolli ಮೀನುಗಾರಿಕೆ ಬಂದರು: ಲೋಕಸಭೆಗೆ ಸ್ಪರ್ಧೆಯಿಲ್ಲ: ಸಚಿವ ಜಾರಕಿಹೊಳಿ
Team Udayavani, Jan 28, 2024, 12:06 AM IST
ಗಂಗೊಳ್ಳಿ: ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮೊದಲೇ ತಿಳಿಸಿದ್ದೇನೆ. ನಮ್ಮ ಜಾರಕಿಹೊಳಿ ಕುಟುಂಬದಿಂದಲೂ ಯಾರೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ.
ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸಲಾಗುವುದು. ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯದಲ್ಲಿ ಈಗಾಗಲೇ ಸಮೀಕ್ಷೆ ನಡೆಸಲಾಗಿದ್ದು ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಅವರು ಶನಿವಾರ ಸಂಜೆ ಗಂಗೊಳ್ಳಿ ಮೀನುಗಾರಿಕೆ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಕೋಡಿ-ಗಂಗೊಳ್ಳಿ ಸೇತುವೆ ಕುರಿತು ಸ್ಥಳ ಪರಿಶೀಲಿಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆ ಹಳೆ ಸುದ್ದಿಯಾಗಿದ್ದು, ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ. ಲಕ್ಷ್ಮಣ ಸವದಿ ಬಿಜೆಪಿ ಸೇರುವುದಿಲ್ಲ ಎಂದು ಅವರೇ ಹೇಳಿದ್ದು, ಹೋದಾಗ ನೋಡೋಣ ಎಂದು ಹೇಳಿದರು.
ಅನುದಾನದ ಕೊರತೆ ಇಲ್ಲ
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿಲ್ಲ. ರಸ್ತೆ ಹೊಂಡ ಮುಚ್ಚಲು ಸರಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ವಿಪಕ್ಷಗಳ ಶಾಸಕರ ಆರೋಪಗಳನ್ನು ತಿರಸ್ಕರಿಸಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. ಹಿಂದಿನ ಸರಕಾರದವರು ಅನುದಾನ ಮೀಸಲಿರಿಸದೆ ಕಾಮಗಾರಿ ನಡೆಸಿದ್ದಾರೆ. ಹೀಗಾಗಿ ಹಿಂದೆ ನಡೆಸಿದ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಹೋಗುತ್ತಿದೆ. ರಾಜ್ಯದಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ರಸ್ತೆ ಹೊಂಡಗಳನ್ನು ಮುಚ್ಚಲಾಗಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನವನ್ನು ನೀಡಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.
ಗಂಗೊಳ್ಳಿ-ಕೋಡಿ ಸೇತುವೆ ನಿರ್ಮಾಣದ ಪ್ರಸ್ತಾವನೆ ಇದೆ. ಸುಮಾರು 1.6 ಕಿ.ಮೀ ಉದ್ದದ ಸೇತುವೆ ನಿರ್ಮಾಣ ಆಗಬೇಕಿರುವುದರಿಂದ ಹೆಚ್ಚಿನ ಅನುದಾನದ ಆವಶ್ಯಕತೆಯಿದೆ. ಈ ಬಗ್ಗೆ ವಿವರವಾದ ಅಂದಾಜು ಪಟ್ಟಿ ಸಿದ್ಧಪಡಿಸಿದ ಬಳಿಕ ತೀರ್ಮಾನ ಮಾಡುವುದಾಗಿ ಹೇಳಿದರು. ಕುಂದಾಪುರದಲ್ಲಿ ಹೊಸ ಪ್ರವಾಸಿ ಮಂದಿರದ ಬೇಡಿಕೆಯನ್ನು ಆದ್ಯತೆ ನೆಲೆಯಲ್ಲಿ ಈಡೇರಿಸಲಾಗುವುದು ಎಂದು ಭರವಸೆಯಿತ್ತರು.
ಗಂಗೊಳ್ಳಿ ಬಂದರಿನಲ್ಲಿ 2 ವರ್ಷಗಳಿಂದ ಜೆಟ್ಟಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿರುವ ಬಗ್ಗೆ ಸ್ಥಳೀಯ ಮೀನುಗಾರರು ಸಚಿವರ ಗಮನ ಸೆಳೆದರು. ಈ ಬಗ್ಗೆ ಮೀನುಗಾರಿಕೆ ಸಚಿವರೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ಪುನರಾರಂಭದ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಚಂದ್ರಶೇಖರ ಖಾರ್ವಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.