Gastroenteritis: ಹೊಟ್ಟೆಗೆ ಜ್ವರ ಬಂದರೆ…!
Team Udayavani, Oct 8, 2023, 8:34 AM IST
ಗ್ಯಾಸ್ಟ್ರೊಎಂಟರೈಟಿಸ್ ಎಂಬುದನ್ನು ಸರಳವಾಗಿ ಹೊಟ್ಟೆಯ ಜ್ವರ ಎಂಬುದಾಗಿಯೂ ಹೇಳಬಹುದು; ಇದು ಕರುಳಿನಲ್ಲಿ ಉಂಟಾಗುವ ವೈರಾಣು ಸೋಂಕಿನಿಂದ ಕಾಣಿಸಿಕೊಳ್ಳುತ್ತದೆ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಅಥವಾ ಕಲುಷಿತ ನೀರು, ಆಹಾರದಿಂದ ಇದು ಹರಡುತ್ತದೆ. ಮಳೆಗಾಲದಲ್ಲಿ ಕೊಳಕು ನೀರು ಕುಡಿಯುವ ನೀರಿನ ಜತೆಗೆ ಸೇರಿಕೊಳ್ಳುವುದರಿಂದಾಗಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಇದರ ಉಪದ್ರವ ಹೆಚ್ಚು.
ಸಾಮಾನ್ಯವಾಗಿ ಸರಿಯಾದ ಆರೈಕೆ ಒದಗಿಸಿದರೆ ಇದು ತಾನಾಗಿಯೇ ವಾಸಿಯಾಗುತ್ತದೆ. ಈ ಕಾಯಿಲೆಯ ಬಹಳ ಸಾಮಾನ್ಯವಾದ ಲಕ್ಷಣ ಎಂದರೆ ರಕ್ತಮಿಶ್ರಿತವಲ್ಲದ, ಆದರೆ ನೀರಾದ ಮಲವಿಸರ್ಜನೆಯ ಜತೆಗೆ ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ. ಇವುಗಳ ಜತೆಗೆ ಹೊಟ್ಟೆ ನೋವು ಮತ್ತು ಕರುಳು ಹಿಡಿದುಕೊಳ್ಳುವುದೂ ಇರಬಹುದು. ಕೆಲವರಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ಆಗೀಗೊಮ್ಮೆ ತಲೆನೋವು ಮತ್ತು ಮೈಕೈ ನೋವು ಕೂಡ ಇರಬಹುದಾಗಿದೆ. ರೋಗಿಗಳು ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ; ಆದರೆ ಕೆಲವೊಮ್ಮೆ ಲಕ್ಷಣಗಳು ಒಂದು ವಾರದವರೆಗೂ ಇರಬಹುದು.
ಆದರೆ ಸಣ್ಣ ಮಕ್ಕಳು ಮತ್ತು ವಯೋವೃದ್ಧರಲ್ಲಿ ಹಾಗೂ ರೋಗ ನಿರೋಧಕ ಶಕ್ತಿಯು ದುರ್ಬಲವಾಗಿರುವವರಲ್ಲಿ ಈ ಹೊಟ್ಟೆಯ ಜ್ವರವು ಅಪಾಯಕಾರಿಯಾಗಿದ್ದು, ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದ ತತ್‌ಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಬೇಕು. ಲಕ್ಷಣಗಳು ತೀವ್ರವಾಗಿದ್ದು, ಸೂಕ್ತವಾದ ಆರೈಕೆಯನ್ನು ಪಡೆಯದೆ ಇದ್ದಲ್ಲಿ ಅದರಿಂದ ಮೂತ್ರಪಿಂಡ ವೈಫಲ್ಯ, ರಕ್ತದೊತ್ತಡ ಕಡಿಮೆಯಾಗುವಂತಹ ಪ್ರಾಣಾಪಾಯಕಾರಿ ಸಮಸ್ಯೆಗಳು ತಲೆದೋರಬಹುದಾಗಿದೆ. ಮಲದಲ್ಲಿ ರಕ್ತ, ವಾಂತಿಯಾಗುವುದು, ನಿರ್ಜಲೀಕರಣದ ಲಕ್ಷಣಗಳು (ಬಾಯಾರಿಕೆ ಹೆಚ್ಚುವುದು, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ಗಾಢ ಬಣ್ಣದ ಮೂತ್ರ) ಇತ್ಯಾದಿ ಎಚ್ಚರಿಕೆಯ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ಬೇಧಿ ಒಂದೆರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದಲ್ಲಿ ತತ್‌ಕ್ಷಣ ವೈದ್ಯಕೀಯ ಆರೈಕೆಗೆ ಒಳಗಾಗಬೇಕು.
ಈ ಅನಾರೋಗ್ಯದ ಸಮಯದಲ್ಲಿ ಆರೈಕೆಯ ಪ್ರಧಾನ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನಂಶ ಕುಸಿಯದಂತೆ ಕಾಪಾಡಿಕೊಳ್ಳುವುದು ಮತ್ತು ಜೀರ್ಣಗೊಳ್ಳಲು ಸುಲಭವಾದ ಲಘು-ಮೃದು ಆಹಾರ ಸೇವನೆ. ಕಾಫಿ, ಹಾಲು, ಸೋಡಾ ಪಾನೀಯಗಳು, ಮಸಾಲೆ ಹಾಗೂ ಎಣ್ಣೆಪದಾರ್ಥಗಳ ಸೇವನೆ ಕಡಿಮೆ ಮಾಡಿ. ಶಕ್ತಿಯ ತತ್‌ಕ್ಷಣದ ಮೂಲವಾಗಬಲ್ಲ ಹಣ್ಣಿನ ರಸಗಳು, ಪ್ರೊಬಯೋಟಿಕ್ಸ್ ಮೂಲವಾಗಿರುವ ಮಜ್ಜಿಗೆಯನ್ನು ಸೇವಿಸಬಹುದು. ಚೇತರಿಸಿಕೊಳ್ಳುವ ತನಕ ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ದೇಹ ದಣಿಯುವಂತಹ, ದೇಹ ದಂಡಿಸುವ ಕೆಲಸಗಳಲ್ಲಿ ತೊಡಗಬೇಡಿ.
ರೋಗ ಬಂದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ರೋಗ ಬಾರದಂತೆ ತಡೆಯುವುದೇ ಅತ್ಯಂತ ಸೂಕ್ತ. ಹಾಗಾಗಿ ಊಟ-ಉಪಾಹಾರ ಸೇವಿಸುವುದಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು, ಆಹಾರವನ್ನು ಸರಿಯಾಗಿ ಬೇಯಿಸಿ, ಕುದಿಸಿ ಸೇವಿಸುವಂತಹ ವೈಯಕ್ತಿಕ ನೈರ್ಮಲ್ಯ ಕ್ರಮಗಳನ್ನು ಪಾಲಿಸುವುದು ಉತ್ತಮ.
-ಡಾ| ಅನುರಾಗ್ ಶೆಟ್ಟಿ,
ಮೆಡಿಕಲ್ ಗ್ಯಾಸ್ಟ್ರೊಎಂಟರಾಲಜಿ,
ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.