Politics: ಕೇಂದ್ರದಿಂದ ಬಂದ ಅನುದಾನದ ಲೆಕ್ಕ ಕೊಡಿ: ಕೈಗೆ ಬಿಜೆಪಿ ಆಗ್ರಹ
ಬಿಜೆಪಿ- ಕಾಂಗ್ರೆಸ್ ನಡುವೆ ಈಗ ಅನುದಾನ ಜಗಳ
Team Udayavani, Feb 4, 2024, 12:49 AM IST
ಬೆಂಗಳೂರು/ಹುಬ್ಬಳ್ಳಿ: ಮನ ಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಹತ್ತು ವರ್ಷ ಹಾಗೂ ಈಗ ನರೇಂದ್ರ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಒಟ್ಟು ಎಷ್ಟು ಅನುದಾನ ಸಿಕ್ಕಿದೆ ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ 81 ಸಾವಿರ ಕೋಟಿ ರೂ. ನೀಡಲಾಗಿತ್ತು; ನಾವು 2.82 ಲಕ್ಷ ಕೋಟಿ ರೂ. ನೀಡಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಎನ್‌ಡಿಎ ಸರಕಾರದ ಎರಡು ಅವಧಿಗಳಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ಸತ್ಯ ಜನರಿಗೆ ಗೊತ್ತಾಗಬೇಕಿದೆ. ರಾಜ್ಯದಿಂದ ಹೆಚ್ಚು ತೆರಿಗೆ ಪಾವತಿಸುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಕರ್ನಾಟಕಕ್ಕಿಂತ ಹೆಚ್ಚು ತೆರಿಗೆ ಪಾವತಿ ಮಾಡುವ ಮಹಾರಾಷ್ಟ್ರಕ್ಕೆ ಎಷ್ಟು ಕೊಟ್ಟಿದ್ದಾರೆ, ದಿಲ್ಲಿಗೆ ಎಷ್ಟು ಕೊಟ್ಟಿದ್ದಾರೆ ಎಂಬ ಬಗ್ಗೆ ಚರ್ಚೆಯಾಗಲಿ. ಹೀಗಾಗಿ ರಾಜ್ಯಕ್ಕೆ ಈ ಎರಡು ಅವಧಿಗಳಲ್ಲಿ ಬಂದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ತೆರಿಗೆ ಪಾವತಿ ಆಧಾರದ ಮೇಲೆ ತೆರಿಗೆ ಹಂಚಿಕೆ ಮಾಡಿ ಎಂದು ಹೇಳುವುದು ಒಕ್ಕೂಟ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸಬಹುದು. ಬೆಂಗಳೂರು ಒಂದರಿಂದಲೇ ರಾಜ್ಯದ ಶೇ. 65 ತೆರಿಗೆ ಸಂಗ್ರಹವಾಗುತ್ತದೆ. ಹಾಗಾದರೆ ಬೆಂಗಳೂರಿಗೆ ಎಷ್ಟು ಮೊತ್ತ ನೀಡಲಾಗಿದೆ, ಉಳಿದ ಜಿಲ್ಲೆಗಳಿಗೆ ಪ್ರಾಪ್ತಿಯಾಗಿರುವುದು ಎಷ್ಟು ಎಂದು ವಿಪಕ್ಷ ನಾಯಕ ಪ್ರಶ್ನಿಸಿದರು.
ಅನುದಾನ ತಾರತಮ್ಯಕ್ಕಾಗಿ ಕರ್ನಾಟಕದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಎಂಬ ಧ್ವನಿ ಕೇಳಿಬಂದಿತ್ತು. ಕರ್ನಾಟಕಕ್ಕೆ ನಾವು ನೀರು ಕೊಡುತ್ತೇವೆ, ನಾವು ಕಾಫಿ ಬೆಳೆಯುತ್ತೇವೆ, ನಾವು ಹೆಚ್ಚು ತೆರಿಗೆ ಪಾವತಿ ಮಾಡುತ್ತೇವೆ ಎಂದು ಕೊಡಗು ಜಿಲ್ಲೆಯವರು ಹೇಳಿದ್ದರು. ಆಗ ಸಿದ್ದರಾಮಯ್ಯ ಅವರೇ ತೆರಿಗೆ ಆಧಾರದ ಮೇಲೆ ರಾಜ್ಯವನ್ನು ಇಬ್ಭಾಗ ಮಾಡಲು ಆಗುವುದಿಲ್ಲ ಎಂದಿದ್ದರು. ಈಗ ಅದೇ ಕಾಂಗ್ರೆಸ್ ನಾಯಕರು ತೆರಿಗೆ ಹಾಗೂ ಅನುದಾನದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಲು ಮುಂದಾಗಿರುವುದು ಸರಿಯೇ ಎಂದು ಅಶೋಕ್ ತಿರುಗೇಟು ನೀಡಿದರು.
ಯುಪಿಎ ಅವಧಿಯಲ್ಲಿ ಕಡಿಮೆ
ತೆರಿಗೆ ಹಂಚಿಕೆಯಲ್ಲಿ ಯುಪಿಎ ಆಡಳಿತದ 10 ವರ್ಷಗಳ ಅವ ಧಿಯಲ್ಲಿ ರಾಜ್ಯಕ್ಕೆ 81 ಸಾವಿರ ಕೋಟಿ ರೂ. ನೀಡಲಾಗಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಈಗಿನ ಕೇಂದ್ರ ಸರಕಾರದ ಅವಧಿಯಲ್ಲಿ ರಾಜ್ಯಕ್ಕೆ 2.82 ಲಕ್ಷ ಕೋಟಿ ರೂ. ನೀಡಲಾಗಿದೆ. ರಾಜ್ಯಕ್ಕೆ ಯಾರ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂಬುದನ್ನು ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ ಎಂದರು.
ರಾಜ್ಯ ಸರಕಾರಕ್ಕೆ ಆರ್ಥಿಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಪೂರ್ವ ಚಿಂತನೆಯಿಲ್ಲದೆ ಮಾಡಿದ ಗ್ಯಾರಂಟಿಗಳ ಘೋಷಣೆ ಈ ಆರ್ಥಿಕ ಅಶಿಸ್ತಿಗೆ ಕಾರಣ. ಗ್ಯಾರಂಟಿಗಳು ಕೂಡ ಜನರಿಗೆ ಪೂರ್ಣವಾಗಿ ತಲುಪಿಲ್ಲ. ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಅವರ ಪಕ್ಷದ ಶಾಸಕರೇ ಈ ಕುರಿತು ಮಾತನಾಡಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು.
ತಮ್ಮ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಒಳಜಗಳ ಮರೆಮಾಚಲು ಕೇಂದ್ರ ಸರಕಾರದ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬುದು ಜನರ ದಿಕ್ಕು ತಪ್ಪಿಸುವ ಕುತಂತ್ರ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಬಣ ರಾಜಕಾರಣ ಇದೆ. ತಮ್ಮ ನಾಯಕತ್ವ ಪ್ರದರ್ಶನ ಹಾಗೂ ಪ್ರತಿಷ್ಠೆಗಾಗಿ ಈ ಹೋರಾಟ ನಡೆಸುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.