ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರ್ಕಾರ ಸಹಮತ
Team Udayavani, Jun 24, 2019, 3:08 AM IST
ಬೆಂಗಳೂರು: ಕನ್ನಡಿಗರನ್ನು ಪರಕೀಯರಂತೆ ಕಾಣುತ್ತಿದ್ದ ಗೋವಾ ಸರ್ಕಾರ ಗೋವಾ ಕನ್ನಡಿಗರ ಬಗ್ಗೆ ಮೃದು ಧೋರಣೆ ತಾಳಿದ್ದು, ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಎರಡು ಎಕರೆ ಜಮೀನು ನೀಡಲು ಸಹಮತ ವ್ಯಕ್ತಪಡಿಸಿದೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಹೊರನಾಡ ಕನ್ನಡಿಗರ 11ನೇ ಸಮಾವೇಶದ ಅತಿಥಿಯಾಗಿ ಪಾಲ್ಗೊಂಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಕನ್ನಡಿಗರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಎರಡು ಎಕರೆ ಜಮೀನು ನೀಡುವುದಾಗಿ ಹೇಳಿದ್ದಾರೆ. ಆದರೆ, ಕನ್ನಡ ಭವನ ನಿರ್ಮಾಣವನ್ನು ಕನ್ನಡಿಗರೇ ಮಾಡಿಕೊಳ್ಳಬೇಕೆಂದು ಷರತ್ತು ವಿಧಿಸಿದ್ದಾರೆಂದು ತಿಳಿದು ಬಂದಿದೆ.
ಕಳೆದ ನಲವತ್ತು ವರ್ಷಗಳಿಂದ ಗೋವಾ ಸರ್ಕಾರದೊಂದಿಗೆ ಕನ್ನಡಿಗರು ನಿರಂತರ ಸಂಘರ್ಷ ಮಾಡಿಕೊಂಡು ಬರುತ್ತಿದ್ದಾರೆ. ಗೋವಾದ ಕಡಲ ತಡಿಗಳಲ್ಲಿ ವಾಸವಾಗಿರುವ ಕನ್ನಡಿಗರನ್ನು ಒಕ್ಕಲೆಬ್ಬಿಸಿ ನಿರಾಶ್ರಿತರನ್ನಾಗಿ ಮಾಡುತ್ತಿದ್ದ ಗೋವಾ ಸರ್ಕಾರ ಮೊದಲ ಬಾರಿಗೆ ಕನ್ನಡಿಗರ ಮನವಿಗೆ ಸ್ಪಂದಿಸಿರುವುದು ಗೋವಾ ಕನ್ನಡಿಗರಲ್ಲಿ ಹೊಸ ಭರವಸೆ ಮೂಡಿಸಿದಂತಾಗಿದೆ.
ಅಲ್ಲದೇ ಇದು ಗೋವಾ ಮತ್ತು ಕರ್ನಾಟಕದ ನಡುವೆ ನಿರಂತರ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಉತ್ತಮ ಅವಕಾಶ ಎಂಬ ಭಾವನೆ ಗೋವಾ ಕನ್ನಡಿಗರಲ್ಲಿ ಮೂಡಿದೆ. ಆದರೆ, ಗೋವಾ ಸರ್ಕಾರದ ಸಕಾರಾತ್ಮಕ ಸ್ಪಂದನೆಯನ್ನು ಕಾರ್ಯರೂಪಕ್ಕೆ ತರಲು ಗೋವಾ ಕನ್ನಡಿಗರಿಗೆ ರಾಜ್ಯ ಸರ್ಕಾರದ ಸಹಾಯ ಹಸ್ತದ ಅಗತ್ಯವಿದೆ.
ಗೋವಾ ಸರ್ಕಾರ ಕನ್ನಡ ಭವನ ನಿರ್ಮಿಸಲು ಉಚಿತವಾಗಿ ಜಮೀನು ನೀಡುತ್ತಿದೆ. ಕನ್ನಡ ಭವನ ನಿರ್ಮಿಸಲು ಸುಮಾರು 1.5 ಕೋಟಿ ರೂ.ವೆಚ್ಚವಾಗುವ ನಿರೀಕ್ಷೆಯಿದೆ. ಈ ಹಿಂದೆ ಬೈನಾ ಬೀಚ್ ಕನ್ನಡಿಗರನ್ನು ಒಕ್ಕಲೆಬ್ಬಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಪುನರ್ ವಸತಿ ಕಲ್ಪಿಸಲು ಗೋವಾ ಸರ್ಕಾರ ಕನಿಷ್ಠ ಐದು ಎಕರೆ ಜಮೀನು ನೀಡಿದರೆ ರಾಜ್ಯ ಸರ್ಕಾರ ನಿರಾಶ್ರಿತರಾಗಿರುವ ಗೋವಾ ಕನ್ನಡಿಗರಿಗೆ ಮನೆ ಕಟ್ಟಿಕೊಡಲು ತೀರ್ಮಾನಿಸಿತ್ತು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಮಾರು 350 ಕನ್ನಡಿಗರ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ನಿರಾಶ್ರಿತರಿಗೆ ರಾಜ್ಯ ಸರ್ಕಾರದ ವತಿಯಿಂದಲೇ ಮನೆ ಕಟ್ಟಿಕೊಡಲು ಗೋವಾ ಸರ್ಕಾರಕ್ಕೆ ಐದು ಎಕರೆ ಜಮೀನು ನೀಡುವಂತೆ ಮನವಿ ಮಾಡಿಕೊಂಡಿತ್ತು.
ಆದರೆ, ಹಿಂದಿನ ಗೋವಾ ಮುಖ್ಯಮಂತ್ರಿಗಳಾದ ಲಕ್ಷ್ಮೀಕಾಂತ್ ಪರ್ಶೇಕರ್ ಹಾಗೂ ಮನೋಹರ್ ಪರಿಕ್ಕರ್ ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕನ್ನಡಿಗರ ಬಗ್ಗೆ ಮೃದು ಧೋರಣೆ ಹೊಂದಿದ್ದು, ಗೋವಾದಲ್ಲಿ ಕನ್ನಡಗರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಗೋವಾ ಕನ್ನಡಿಗರ ಬೆಂಬಲಕ್ಕೆ ನಿಂತು ಕನ್ನಡ ಭವನ ನಿರ್ಮಾಣ ಮಾಡಲು ಧನ ಸಹಾಯ ನೀಡಬೇಕು.
ಇದು ಗೋವಾದೊಂದಿಗೆ ಸಾಂಸ್ಕೃತಿಕ ಸಂಬಂಧ ವೃದ್ಧಿಗೆ ಸಹಾಯವಾಗಲಿದೆ. ಜೊತೆಗೆ, ಬೈನಾ ಬೀಚ್ ಕನ್ನಡಿಗರ ನಿರಾಶ್ರಿತರ ಸಮಸ್ಯೆ, ಮಹದಾಯಿ ವಿವಾದದಂತಹ ಪ್ರಮುಖ ಸಮಸ್ಯೆಗಳನ್ನು ಮಾತುಕತೆ ಮೂಲಕ ಚರ್ಚಿಸಿ ಬಗೆ ಹರಿಸಿಕೊಳ್ಳಲು ಈ ಬೆಳವಣಿಗೆ ಪೂರಕವಾಗಬಹುದು ಎಂಬ ಅಭಿಪ್ರಾಯ ಗೋವಾ ಕನ್ನಡಿಗರಲ್ಲಿದೆ.
ಕನ್ನಡಿಗರು ನಿರ್ಣಾಯಕ: ಅತ್ಯಂತ ಪುಟ್ಟ ರಾಜ್ಯ ಗೋವಾದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಸುಮಾರು 32 ಕನ್ನಡ ಸಂಘಗಳು ಗೋವಾದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಪ್ರತಿದಿನ ಕಾರವಾರ ಹಾಗೂ ಬೆಳಗಾವಿ, ಧಾರವಾಡದಿಂದ ಸುಮಾರು ಮೂವತ್ತು ಸಾವಿರ ಜನ ಗೋವಾಕ್ಕೆ ಹೋಗಿ ಬರುತ್ತಾರೆ.
ಗೋವಾದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕನ್ನಡಿಗರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 40 ವಿಧಾನಸಭಾ ಕ್ಷೇತ್ರವಿರುವ ರಾಜ್ಯದಲ್ಲಿ ಸುಮಾರು ಎಂಟರಿಂದ ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟರ ಮಟ್ಟಿಗೆ ಗೋವಾದಲ್ಲಿ ಕನ್ನಡಿಗರು ನೆಲೆಸಿದ್ದಾರೆ.
ಗೋವಾ ಸರ್ಕಾರ ನಮ್ಮ ಬಹಳ ದಿನಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಗೋವಾ ಮುಖ್ಯಮಂತ್ರಿಗಳು ಕನ್ನಡ ಭವನ ನಿರ್ಮಿಸಲು ಎರಡು ಎಕರೆ ಜಮೀನು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಭವನ ನಿರ್ಮಿಸಲು ನಮಗೆ ಆರ್ಥಿಕ ಸಮಸ್ಯೆಯಿದೆ. ಕರ್ನಾಟಕ ಸರ್ಕಾರ ಧನ ಸಹಾಯ ಮಾಡಿದರೆ, ಗೋವಾದೊಂದಿಗಿನ ಕನ್ನಡಿಗರ ಸಂಘರ್ಷಕ್ಕೆ ಅಂತ್ಯ ಹಾಡಿ, ಸೌಹಾರ್ದಯುತ ಜೀವನ ನಡೆಸಿಕೊಂಡು ಹೋಗಲು ಅನುಕೂಲವಾಗುತ್ತದೆ.
-ಹನುಮಂತಪ್ಪ ಶಿರೂರ್, ಅಖೀಲ ಗೋವಾ ಮಹಾ ಕನ್ನಡ ಸಂಘದ ಅಧ್ಯಕ್ಷ
ಗೋವಾ ಸರ್ಕಾರ ಕನ್ನಡ ಭವನಕ್ಕೆ ಜಮೀನು ನೀಡಲು ಮುಂದಾಗಿರುವುದು ಹೊಸ ಬದಲಾವಣೆ. ಕನ್ನಡ ಸಂಘಕ್ಕೆ ಜಾಗ ನೀಡಲು ಮುಂದೆ ಬಂದಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರ ಹೊರ ರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹಣ ನೀಡಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ತಕ್ಷಣ ಅನುದಾನ ನೀಡುವ ಅಗತ್ಯವಿದೆ. ದಯಮಾಡಿ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಬೇಕು.
-ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
* ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.