ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ
Team Udayavani, Sep 18, 2021, 6:30 AM IST
ಕೆಲವರು ಯಾವುದೇ ಕೆಲಸ ಕೈಗೆತ್ತಿಕೊಳ್ಳುವ ಮುನ್ನ ನಿರ್ದಿಷ್ಟ ಉದ್ದೇಶ, ಗುರಿಯೊಂದಿಗೆ ಆರಂಭದಲ್ಲಿ ಭಾರೀ ಉತ್ಸಾಹ, ಶ್ರದ್ಧೆಯಿಂದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಆರಂಭಿಕ ಹಂತದಲ್ಲಿ ಅವರ ಪ್ರಯತ್ನವು ಇತರರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಆದರೆ ಕ್ರಮೇಣ ಅವರ ಉತ್ಸಾಹ ಕುಗ್ಗಲಾರಂಭಿ ಸುತ್ತದೆ. ಬರುಬರುತ್ತಾ ಅವರು ಆಸಕ್ತಿ ಕಳೆದುಕೊಂಡು ತಾವು ಕೈಗೆತ್ತಿಕೊಂಡ ಕಾರ್ಯವನ್ನು ಕೈಬಿಡುತ್ತಾರೆ. ಇಂಥವರನ್ನೇ ಆರಂಭಶೂರರು ಎಂದು ಕರೆಯಲಾಗುತ್ತದೆ.
ಆರಂಭಶೂರರು ತಮ್ಮ ವೈಫಲ್ಯಕ್ಕೆ ಇತರರನ್ನು ದೂಷಿಸುತ್ತಾ ಅಥವಾ ಇತರ ಯಾವುದೋ ಕಾರಣವನ್ನು ಕೊಡುತ್ತಾ ಹೋಗುತ್ತಾರೆ. ಆದರೆ ತಮ್ಮ ವೈಫಲ್ಯಕ್ಕೆ ನಿಜವಾದ ಕಾರಣವೇನು ಎಂಬುದನ್ನು ಅರಿಯಲು ಆತ್ಮಾವಲೋಕನ ಮಾಡಿ ಕೊಳ್ಳಲು ಇವರು ಸಿದ್ಧರಿರುವುದಿಲ್ಲ.
ನಾವು ಒಂದು ಗುರಿಯನ್ನು ಇಟ್ಟುಕೊಂಡು ಅದರ ಸಾಧನೆಯತ್ತ ಕಾರ್ಯೋನ್ಮುಖರಾದರೂ ನಮ್ಮಲ್ಲೇ ಇರುವ ಯಾವುದೋ ದೋಷ ಅಥವಾ ಕಾರಣದಿಂದಾಗಿ ಸೋಲಿನ ಭೀತಿ ಎದುರಾಗಬಹುದು. ಅಷ್ಟಕ್ಕೇ ನಾವು ಕೈಚೆಲ್ಲಿದರೆ ಅದು ನಮ್ಮಲ್ಲಿನ ಆತ್ಮವಿಶ್ವಾಸದ ಬಗೆಗಿನ ಕೀಳರಿಮೆ ಮತ್ತು ದೃಢಸಂಕಲ್ಪದ ಕೊರತೆಯೇ ಸರಿ. ಹಾಗೆಂದು ನಮ್ಮ ಈ ವೈಫಲ್ಯಕ್ಕೆ ಇತರರನ್ನು ದೂಷಿಸುವುದು ನಮ್ಮ ಹೊಣೆಗೇಡಿತನವನ್ನು ಎತ್ತಿತೋರಿಸುತ್ತದೆ.
ನಾವು ಆತ್ಮವಂಚನೆ ಮಾಡಿಕೊಳ್ಳದೆ ವೈಫಲ್ಯವನ್ನು ಆತ್ಮಾವಲೋಕನ ಮಾಡಿಕೊಂಡು ಅದಕ್ಕೆ ಕಾರಣವೇನೆಂಬುದನ್ನು ಪರಾಮರ್ಶಿಸಿದಾಗ ಅರ್ಥವಾಗುವ ಸತ್ಯವೆಂದರೆ ಅಲ್ಪಾವಧಿಯಲ್ಲಿ ಅಪಾರವಾದುದನ್ನು ಪಡೆಯಬೇಕೆಂಬ ನಮ್ಮ ಅವಸರ,
ತಾಳ್ಮೆ ಇಲ್ಲದ ದುಡುಕು ಬುದ್ಧಿ ಎಂಬುದು. ಈ ರೀತಿ ನಾವು ಸಂಯಮವಿಲ್ಲದ ಆತುರವನ್ನು ತೋರಿದಾಗ ಗುರಿಯ ಕಡೆಗೆ ಮಾತ್ರ ನಮ್ಮ ಸಂಪೂರ್ಣ ಗಮನ ಕೇಂದ್ರೀಕೃತವಾಗಿರುತ್ತದೆ ಹೊರತು ಗುರಿಯೆಡೆಗೆ ಏರಲು ಅತ್ಯಗತ್ಯವಾಗಿರುವ ಪ್ರತಿಯೊಂದೂ ಮೆಟ್ಟಿಲನ್ನು ಏರುವಾಗಿನ ಕೆಲವೊಂದು ಅಡೆತಡೆಗಳನ್ನು ನಾವು ಅಲಕ್ಷಿಸಿರುತ್ತವೆ. ಇದರಿಂದಾಗಿ ನಾವು ಗುರಿಯತ್ತ ಸಾಗುವ ಹಾದಿಯ ಮಧ್ಯೆಯೇ ಎಡವಿ ಬೀಳುತ್ತೇವೆ. ಗುರಿಯನ್ನು ನಾವು ಯಶಸ್ವಿಯಾಗಿ ತಲುಪಬೇಕಾದರೆ ಮೊದಲು ಮಾರ್ಗದಲ್ಲಿರುವ ಅಡೆ- ತಡೆಗಳನ್ನು ತಾಳ್ಮೆಯಿಂದ ಗುರುತಿಸಿ ಕೊಂಡು ಸಣ್ಣಪುಟ್ಟ ಅಡೆತಡೆಗಳನ್ನೂ ಅಲಕ್ಷಿಸದೆ ಎಚ್ಚರಿಕೆಯಿಂದ ಹಂತಹಂತವಾಗಿ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.
ಮಾರ್ಗವು ಅಡ್ಡಿ ಆತಂಕಗಳಿಂದ ಮುಕ್ತವಾಗಿ ಸುರಳಿತವಾದರೆ ನೀವು ನಿಮ್ಮ ಗುರಿಯನ್ನು ಸುಲಭವಾಗಿ ತಲು ಪಬಹುದಾಗಿದೆ. ನಿಮ್ಮ ಗುರಿಯು ಸ್ಪಷ್ಟ ವಾಗಿದ್ದು ಪ್ರಯತ್ನ ಪ್ರಬಲವಾಗಿದ್ದರೆ ಮಾತ್ರ ಸಕಾರಾತ್ಮಕ ಫಲಿತಾಂಶ ನಿಶ್ಚಿತ.
ಒಮ್ಮೆ ಆದರ್ಶ ಉದ್ದೇಶಗಳನ್ನು ನಮ್ಮದಾಗಿಸಿಕೊಂಡು, ಅನಂತರ ಆ ಮಾರ್ಗದಲ್ಲಿ ಚಂಚಲಚಿತ್ತರಾಗದಿರಲು ಏಕಾಗ್ರತೆ ಮತ್ತು ದೃಢ ಸಂಕಲ್ಪ, ಪ್ರಯತ್ನ, ಪರಿಶ್ರಮದಿಂದ ಮುನ್ನಡೆಯುವುದಷ್ಟೇ ನಮ್ಮ ಕರ್ತವ್ಯವಾಗಬೇಕು. ಮಂದಗತಿ ಯಲ್ಲಿ ಆದರೂ ಸರಿ, ಸೂಕ್ತ ಮಾರ್ಗ ದಲ್ಲಿ ಹೆಜ್ಜೆಯಿಟ್ಟು ಪುನಃ ಹಿಂದೆ ನೋಡ ದಂತೆ, ಧೃತಿಗೆಡದಂತೆ ಸಾಗಿದಾಗ ಗುರಿ ನಮಗೆ ಸನಿಹವಾಗುತ್ತದೆ. ಗುರಿ ಸಮೀಪಿಸಿತು ಎಂದಾಕ್ಷಣ ನಾವು ಆಗಲೇ ಸಂಭ್ರಮಿಸುವುದೂ ತಪ್ಪು. ಇದು ಇನ್ನೊಂದು ವೈಫಲ್ಯಕ್ಕೆ ಎಡೆಮಾಡಿ ಕೊಟ್ಟಿತು.
ನಾವು ಆ ಹಂತದವರೆಗೆ ಅನುಸರಿಸಿಕೊಂಡು ಬಂದಿದ್ದ ಶ್ರದ್ಧೆ, ಏಕಾಗ್ರತೆ, ಪರಿಶ್ರಮವನ್ನು ನಾವು ಗುರಿಯನ್ನು ತಲುಪುವವರೆಗೂ ಕಾಯ್ದುಕೊಳ್ಳುವುದು ಅತ್ಯವಶ್ಯ. ಗುರಿ ತಲುಪಿದ ಬಳಿಕವಷ್ಟೇ ಸಂಭ್ರಮ, ವಿಜಯೋತ್ಸಾಹ. ಅಷ್ಟು ಮಾತ್ರವಲ್ಲದೆ ಆ ಸಂದರ್ಭದಲ್ಲಿ ನಾವು ಗುರಿಯತ್ತ ಸಾಗಿ ಬಂದ ಹಾದಿಯನ್ನು ಒಮ್ಮೆ ಹಿಂದಿರುಗಿ ನೋಡಿದಾಗ ನಮ್ಮ ಸಾಧನೆಯ ನೈಜ ಚಿತ್ರಣದ ಅರಿವು ನಮಗಾಗಲು ಸಾಧ್ಯ. ಇದು ನಮ್ಮನ್ನು ಇನ್ನಷ್ಟು ಬಲಶಾಲಿಗಳನ್ನಾಗಿಸುತ್ತದೆ ಮಾತ್ರವಲ್ಲದೆ ಇನ್ನಷ್ಟು ಸಾಧನೆಗಳಿಗೆ ಹಾದಿ ಮಾಡಿಕೊಡುತ್ತದೆ.
ಸಾಧಕರು, ಮೇಧಾವಿಗಳು, ಪಂಡಿತರೆಲ್ಲ ಹುಟ್ಟಿದಾಗಲೇ ಪ್ರತಿಭೆ, ಪಾಂಡಿತ್ಯವನ್ನು ಹೊತ್ತುಕೊಂಡೇ ಹುಟ್ಟಿದವರಲ್ಲ. ಅವರೆಲ್ಲ ಅಗಾಧ ಪ್ರತಿಭೆ, ಪಾಂಡಿತ್ಯದ ಹಿಂದೆ ಇಷ್ಟೊಂದು ಸುದೀರ್ಘ ಕಾಲದ ಶ್ರದ್ಧೆಯಿಂದ ಕೂಡಿದ ತಪಸ್ಸು, ನಿರಂತರ ಪರಿಶ್ರಮ, ಸತತ ಅಭ್ಯಾಸವಿದೆ ಎಂಬು ದನ್ನು ಊಹಿಸಿದಾಗಲೇ ವಿಸ್ಮಯವಾಗದಿರದು. ಅದು ಯಾವುದೇ ಕ್ಷೇತ್ರವಾಗಿರಲಿ ಸಾಧನೆಗೆ ನಿರಂತರ ಮತ್ತು ಕಠಿನ ಪರಿಶ್ರಮವೊಂದೇ ದಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.