ಅನ್ನ ಕೊಡುವ ಹೊನ್ನಿನಂತಾ ಮಣ್ಣಿಗೆ ಕನ್ನ; ಇದು ಮೈನಿಂಗ್ ಅಲ್ಲ, ಮಣ್ಣು ಮಾಫಿಯಾ…
ಇಟ್ಟಿಗೆ ಸುಡುವ ಕೆಲಸ ಮಾಡುತ್ತಿರುವುದು ಮಾತ್ರ ಕೃಷಿಗೆ ಮಾರಕವಾಗುತ್ತಿದೆ ಎನ್ನುತ್ತಿದ್ದಾರೆ ಕೃಷಿ ತಜ್ಞರು.
Team Udayavani, Feb 15, 2022, 5:48 PM IST
ಧಾರವಾಡ: ಕೆದರಿ ಗುಡ್ಡ ಹಾಕಿರುವ ಕೆನೆ ಪದರದಂತಹ ಫಲವತ್ತಾದ ಮಣ್ಣು, ಗೋಮಾಳ, ಸರ್ಕಾರಿ ಜಾಗದಲ್ಲಿನ ಮಣ್ಣಿಗೂ ಬಿತ್ತು ರೌಡಿ ಶೀಟರ್‌ಗಳ ಕಣ್ಣು. ಅನ್ನ ಬೆಳೆಯವ ಮಣ್ಣಿಗೆ ಕನ್ನ ಹಾಕುತ್ತಿರುವ ಇಟ್ಟಿಗೆ ಭಟ್ಟಿ ಮಾಲೀಕರು. ಅನ್ನ ಬೆಳೆಯುವ ಹೊನ್ನಿನಂತಾ ಮಣ್ಣಿಗೆ ಬಿತ್ತು ಕಣ್ಣು.
ಹೌದು. ರೀಯಲ್ ಎಸ್ಟೇಟ್ ಫಲವತ್ತಾದ ಭೂಮಿ ನುಂಗಿ ಹಾಕಿದ್ದು ಹಳೆಯ ಸುದ್ದಿ. ಅಭಿವೃದ್ಧಿ ಯೋಜನೆಗಳಾದ ವಿಮಾನ ನಿಲ್ದಾಣ, ಅಷ್ಟಪಥ ರಸ್ತೆಗಳು, ಸರ್ಕಾರಿ ಕಚೇರಿಗಳು, ಕ್ರೀಡಾಂಗಣಗಳ ನಿರ್ಮಾಣಕ್ಕೆ ಮಾತ್ರ ಫಲವತ್ತಾದ ಭೂಮಿ ಬಲಿಯಾಗುತ್ತದೆ ಎನ್ನುವ ಕೂಗು ಈವರೆಗೂ ಕೇಳಿ ಬಂದಿತ್ತು. ಆದರೆ ಇದೀಗ ದೇಶಿ ಭತ್ತದ ಅನ್ನ ಅದರಲ್ಲೂ ವರ್ಷಕ್ಕೆ ಕನಿಷ್ಠ ಎರಡು ಉತ್ತಮ ಬೆಳೆ ಬೆಳೆಯುವ ಧಾರವಾಡ ಜಿಲ್ಲೆಯಲ್ಲಿನ ಅರೆಮಲೆನಾಡು ಪ್ರದೇಶದ ಹಳ್ಳಿಗಳಲ್ಲಿನ ಫಲವತ್ತಾದ ಭೂಮಿಯನ್ನು ಹಾಡಹಗಲೇ ಕೊಳ್ಳೆ ಹೊಡೆಯಲಾಗುತ್ತಿದ್ದು, ಮೈನಿಂಗ್ ಮಾಫಿಯಾದಂತೆ ಮಣ್ಣು ಮಾಫಿಯಾ ಕೂಡ ಹೆಡೆ ಎತ್ತಿದೆ.
ರೈತರಿಂದ ಸ್ವಯಂಕೃತ ಅಪರಾಧ : ರಾಸಾಯನಿಕ ಕೃಷಿಯಿಂದ ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿನ ಫಲವತ್ತತೆ ಕ್ಷೀಣಿಸುತ್ತಿದ್ದು, ರೈತರು ಉತ್ತಮ ಇಳುವರಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಬೆಳೆ ಬೆಳೆಯುವ ಕೆನೆ ಭರಿತ ಮಣ್ಣನ್ನು ಸದ್ದಿಲ್ಲದೇ ಕೊಂಡುಕೊಂಡು ಇಟ್ಟಿಗೆ ಭಟ್ಟಿಗಳಿಗೆ ಹಾಕಿಕೊಳ್ಳುವ ಮಾಫಿಯಾ ತಲೆ ಎತ್ತಿದ್ದು, ಬಡವರು, ಸಾಲದ ಸುಳಿಯಲ್ಲಿ ಸಿಲುಕಿದ ರೈತರು ಮತ್ತು ಶೋಕಿ ಮಾಡುವವರ ಖರ್ಚಿಗೆ ಹಣ ಕೊಡುವ ದಲ್ಲಾಳಿಗಳು ರೈತರ ಹೊಲದಲ್ಲಿನ ಫಲವತ್ತಾದ ಮಣ್ಣನ್ನು ಹೊಲಗಳಿಂದ ಎತ್ತಿ ಗುಡ್ಡೆ ಹಾಕಿಕೊಳ್ಳುತ್ತಿದ್ದಾರೆ.
ಬೆಳೆ ಬೆಳೆಯುವ ಭೂಮಿಯಲ್ಲಿನ ಮೊದಲ 3-4 ಅಡಿ ಮಣ್ಣು ಅತ್ಯಂತ ಶ್ರೇಷ್ಠವಾದದ್ದಾಗಿದ್ದು, ಇದರಿಂದಲೇ ಉತ್ತಮ ಬೆಳೆ ಸಾಧ್ಯ. ಆದರೆ ಇಟ್ಟಿಗೆ ಭೂ ಮಾಫಿಯಾ ಇದೇ ಮಣ್ಣನ್ನು ಕೊಳ್ಳೆ ಹೊಡೆದುಕೊಳ್ಳುತ್ತದೆ.
ಸರ್ಕಾರಿ ಗೋಮಾಳಗಳು ಬರ್ಬಾದ್: ಜಿಲ್ಲೆಯಲ್ಲಿ ಇಂದಿಗೂ ಗಾಂವಠಾಣಾ, ಸರ್ಕಾರಿ ಗೋಮಾಳ, ಕೆರೆ ಕುಂಟೆಗಳಲ್ಲಿ ಖರಾಬು ಜಮೀನು, ಹಳ್ಳಗಳ ದಡಗಳು, ಕೆರೆಯ ಅಂಗಳಗಳು ಸೇರಿದಂತೆ ಎಲ್ಲಾ ಕಡೆಗೂ ಫಲವತ್ತಾದ ಮಣ್ಣು ಇದ್ದೇ ಇದೆ. 27 ಸಾವಿರ ಹೆಕ್ಟೇರ್‌ನಷ್ಟು ಸರ್ಕಾರಿ ಪಡಾ ಭೂಮಿ ಇದ್ದು. ಈ ಪೈಕಿ 700 ಹೆಕ್ಟೇರ್ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ.
ಈ ಭೂಮಿಯಲ್ಲಿನ ಫಲವತ್ತಾದ ಮಣ್ಣನ್ನು ರಾತ್ರೋರಾತ್ರಿ ಇಟ್ಟಿಗೆ ಭಟ್ಟಿ ತಯಾರಿಸುವ ಉದ್ಯಮಿಗಳು ಕೊಳ್ಳೆ ಹೊಡೆದು ಲಕ್ಷ ಲಕ್ಷ ಮೆಟ್ರಿಕ್ ಟನ್‌ಗಳ ಲೆಕ್ಕದಲ್ಲಿ ಶೇಖರಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಈ ಭೂಮಿಗಳು ಪರಿಸರ ಸೂಕ್ಷ್ಮ ಸಂವೇದಿ(ಇಕೋ ಝೋನ್) ಪ್ರದೇಶಳಾಗಿದ್ದವು. ಗಿಡಮರ, ಹೂ-ಬಳ್ಳಿ, ಜಾನುವಾರುಗಳಿಗೆ ಹುಲ್ಲು, ನೀರು ಸಂಗ್ರಾಹಕಗಳಾಗಿ ಅಂತರ್ಜಲ ವೃದ್ಧಿಗೂ ಇವು ಸಹಕಾರಿಯಾಗಿವೆ. ಆದರೆ ಇಲ್ಲಿನ ಫಲವತ್ತಾದ ಮಣ್ಣನ್ನು ವಿಪರೀತ ಪ್ರಮಾಣದಲ್ಲಿ ಕೊಳ್ಳೆ ಹೊಡೆಯಲಾಗುತ್ತಿದ್ದು,ವರ್ಷದಿಂದ ವರ್ಷಕ್ಕೆ ಗೋಮಾಳಗಳು ಗೊರಚು ಮಣ್ಣಿನ ಪಡಾ ಜಾಗಗಳಾಗುತ್ತಿವೆ.
ಕೆರೆಯ ಮಣ್ಣಿಗೂ ಗುನ್ನ: ಇನ್ನು ಸರ್ಕಾರಿ ಲೆಕ್ಕದಲ್ಲೂ ಮೂಗು ತೂರಿಸುವ ರೌಡಿ ಶೀಟರ್‌ಗಳು ತಮ್ಮ ಇಟ್ಟಿಗೆ ಉದ್ಯಮ ನಡೆಸುವುದಕ್ಕಾಗಿ ಕೆಲ ಅಧಿಕಾರಿಗಳು, ಗ್ರಾಪಂನ ಸ್ಥಳೀಯ ಪುಡಿ ರಾಜಕಾರಣಿಗಳ ಪಟಾಲಂಗೆ ಪಾರ್ಟಿ ಕೊಟ್ಟು ಕೆರೆಗಳಿಂದ ಹೂಳೆತ್ತುವ ಫಲವತ್ತಾದ ಮಣ್ಣನ್ನೆ ಹೊತ್ತುಕೊಂಡು ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ರೈತ ಸಮುದಾಯ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಮರಳಿ ಭೂಮಿಗೆ ಹಾಕಿ ಉತ್ತಮ ಬೆಳೆ ಬೆಳೆಯವುದಕ್ಕೆ ತಯಾರಿ ಮಾಡಿಕೊಳ್ಳುವುದು ರೂಢಿಯಲ್ಲಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಈ ಕೆರೆ ಮಣ್ಣಿಗೆ ವಿಶಿಷ್ಟ ಸ್ಥಾನವಿದ್ದು, ಗೊಬ್ಬರಕ್ಕೆ ಸರಿಸಮವಾದ ಭೂ ಪೋಷಕಾಂಶಗಳನ್ನು ಈ ಮಣ್ಣು ಹೊಂದಿರುತ್ತದೆ. ಆದರೆ ಇದರಿಂದ ಇಟ್ಟಿಗೆ ಸುಡುವ ಕೆಲಸ ಮಾಡುತ್ತಿರುವುದು ಮಾತ್ರ ಕೃಷಿಗೆ ಮಾರಕವಾಗುತ್ತಿದೆ ಎನ್ನುತ್ತಿದ್ದಾರೆ ಕೃಷಿ ತಜ್ಞರು.
ಅರಣ್ಯ ಭೂಮಿಯೂ ಸ್ವಾಹಃ: ಇನ್ನು ಮಣ್ಣು ನುಂಗುವವರಿಗೆ ಅರಣ್ಯ ಭೂಮಿಯೂ ಹೊರತಾಗಿಲ್ಲ. ರಾಜಕೀಯ ಬಲ ಬಳಸಿಕೊಂಡು ಅಧಿಕಾರ ವರ್ಗವನ್ನು ಒಳಗೆ ಹಾಕಿಕೊಂಡು ಆಯ ಕಟ್ಟಿನ ಅರಣ್ಯ ಭೂಮಿಯಲ್ಲಿನ ಫಲವತ್ತಾದ ಮಣ್ಣು ಮತ್ತು ಉತ್ತಮ ಗುಣಮಟ್ಟದ ಕಲ್ಲುಗಳನ್ನು ಕೂಡ ಈ ಮಣ್ಣು ಮಾಫಿಯಾ ಕೊಳ್ಳೆ ಹೊಡೆಯುತ್ತಿದೆ.
ಸರ್ಕಾರ ಮಾಡಬೇಕಾಗಿದ್ದೇನು?
ಮರಳು ಮಾಫಿಯಾ, ಮೈನಿಂಗ್ ಮಾಫಿಯಾ, ಕಲ್ಲು ಗಣಿಗಾರಿಕೆ ಮಾಫಿಯಾ, ಟಿಂಬರ್ ಮಾಫಿಯಾಗಳ ಕಾಲ ಮುಗಿದು ಹೋಗಿದ್ದು ಇದೀಗ ಮಣ್ಣು ಮಾಫಿಯಾ ನಿಧಾನಕ್ಕೆ ತಲೆ ಎತ್ತುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಗಳ ಉದ್ಯಮಕ್ಕೆ ಭಾರಿ ಬಲ ಬಂದಿದೆ. ಇಟ್ಟಿಗೆ ಮಾರಾಟ ವರ್ಷದಿಂದ ವರ್ಷಕ್ಕೆ ಹತ್ತಾರು ಪಟ್ಟು ಹೆಚ್ಚಾಗುತ್ತಿದ್ದು, ಫಲವತ್ತಾದ ಮಣ್ಣು, ಹಳೆ ಕಾಲದ ಹುಣಸೆ ಮರಗಳು ಕಣ್ಣು ಮುಚ್ಚಿ ಕಣ್ಣು ತೆಗೆಯುವುದರಲ್ಲಿ ಮಾಯವಾಗುತ್ತಿವೆ. ಕೂಡಲೇ ಈ ಮಾಫಿಯಾಕ್ಕೆ ಸರ್ಕಾರ ಕಡಿವಾಣ ಹಾಕಿ, ಫಲವತ್ತಾದ ಮಣ್ಣಿನ ರಕ್ಷಣೆಗೆ ಅಗತ್ಯವಾದ ಕಾನೂನು ರೂಪಿಸಬೇಕಿದೆ.
ಒಂದು ಟಿಪ್ಪರ್ ಮಣ್ಣಿಗೆ 550 ರೂ.ನಂತೆ ಮಣ್ಣನ್ನು ಕೊಂಡು ಸಂಗ್ರಹಿಸಿ ಇಡುತ್ತೇವೆ. ಮುಂದಿನ ವರ್ಷ ಮಣ್ಣು ಸಿಕ್ಕದೇ ಹೋಗಬಹುದು. ಅಥವಾ ಸರ್ಕಾರ ಕಠಿಣ ಕಾನೂನು ತರಬಹುದು. ಅದಕ್ಕೆ ಈಗಲೇ ಸಂಗ್ರಹಿಸುತ್ತಿದ್ದೇವೆ.
ಪ್ರದೀಪ್ ಲೆಗೋಡೆ, ಇಟ್ಟಿಗೆ ವ್ಯಾಪಾರಿ,ಕಲಘಟಗಿ
ಹೊಲದಲ್ಲಿನ ಮಣ್ಣು ಮನೆ ಸಂತಿ ಮತ್ತು ದಿನಸಿ ಖರ್ಚಿಗೆ ಮಾರಾಟ ಮಾಡಿದ್ದೇವೆ. ಮಣ್ಣು ಮಾರಾಟದಿಂದ ಹೊಲಗಳಿಗೆ ಹಾನಿಯಾಗುತ್ತದೆ. ಆದರೆ ಸದ್ಯಕ್ಕೆ ಇದು ಅನಿವಾರ್ಯ.
ಲಕ್ಷ್ಮಣ ತಳವಾರ, ಮುಗದ-ಮಂಡಿಹಾಳ ರೈತ
*ಡಾ.ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.