ಎಲೆಕ್ಟ್ರಿಕಲ್-ಎಲೆಕ್ಟ್ರಾನಿಕ್ಸ್ ಮಳಿಗೆಗಳಿಗೂ ಶುಭ ಸುದ್ದಿ ?
Team Udayavani, Apr 24, 2020, 5:51 AM IST
ಸಾಂದರ್ಭಿಕ ಚಿತ್ರ...
ಉಡುಪಿ: ಗುರುವಾರವು ಸರಕಾರ ಇನ್ನಷ್ಟು ವಲಯಗಳಿಗೆ ವಿನಾಯತಿ ಘೋಷಿಸಿರುವ ಹಿನ್ನೆಲೆ ಯಲ್ಲಿ ಜನರಿಗೆ ಅಗತ್ಯವಾದ ಎಲೆಕ್ಟ್ರಿಕಲ್-ಎಲೆಕ್ಟ್ರಾನಿಕ್ಸ್ ಮಳಿಗೆ, ಮೊಬೈಲ್ ಫೋನ್ ಉದ್ಯಮವೂ ಶುಭ ಸುದ್ದಿಯ ನಿರೀಕ್ಷೆಯಲ್ಲಿದೆ.
ಜಿಲ್ಲೆಯು ಹಸಿರು ವಲಯವಾಗಿ ಪರಿವರ್ತಿತ ವಾಗುವ ಲಕ್ಷಣಗಳಿವೆ. ಪ್ರಸ್ತುತ ನಿಯಮದ ಪ್ರಕಾರ ಎಲೆಕ್ಟ್ರಾನಿಕ್ಸ್ ಮಳಿಗೆ, ಮೊಬೈಲ್ ಅಂಗಡಿ-ಸೇವಾ ವಿಭಾಗಗಳಿಗೆ ತೆರೆಯಲು ಅವಕಾಶ ಕಲ್ಪಿಸಿಲ್ಲ. ಆದರೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಎರಡು ದಿನಗಳಿಂದ ಹಲವು ಉದ್ಯಮ ವಲಯಗಳಿಗೆ ವಿನಾಯಿತಿ ಘೋಷಿಸಿರುವ ಕಾರಣ ಜಿಲ್ಲಾಡಳಿತದ ಪರಿಷ್ಕೃತ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. ಬುಧವಾರ ಕೇಂದ್ರ ಸರಕಾರವು ಫ್ಯಾನ್ ಮಾರಾಟ ಮಳಿಗೆ, ಕೃಷಿ ಸಂಬಂಧಿತ ಉಪಕರಣಗಳ ಮಾರಾಟ ಮಳಿಗೆಗಳಿಗೆ ಅವಕಾಶ ನೀಡಿತ್ತು. ಗುರುವಾರ ರಾಜ್ಯ ಸರಕಾರವೂ ಕೆಲವು ಹೊಸ ಕ್ಷೇತ್ರಗಳಿಗೆ ವಿನಾಯಿತಿ ಕೊಟ್ಟಿದೆ. ನಗರ ಪ್ರದೇಶದಲ್ಲೂ ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ಕೊಟ್ಟಿದ್ದು, ಹಾರ್ಡ್‌ವೇರ್ ಮತ್ತು ಕಟ್ಟಡ ನಿರ್ಮಾಣ ಸಂಬಂಧಿ ಉದ್ಯಮಕ್ಕೆ ಅವಕಾಶ ಸಿಗಬಹುದು.
ಫ್ಯಾನ್ ಮಾರಾಟಕ್ಕೆ ಅವಕಾಶ
ಬುಧವಾರದ ಆದೇಶದಲ್ಲಿ ಇಲೆಕ್ಟ್ರಿಕಲ್ ವಯರಿಂಗ್, ಪ್ಲಂಬಿಂಗ್ ಕೆಲಸಗಳನ್ನು ಮನೆಗಳಿಗೆ ಹೋಗಿ ಮಾಡಲು ಅವಕಾಶ ನೀಡಲಾಗಿದೆ. ಗುರುವಾರದ ಆದೇಶದಲ್ಲಿ ಫ್ಯಾನ್ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು ಫ್ಯಾನ್ ಮಾರಲು ಇಲೆಕ್ಟ್ರಿಕಲ್-ಇಲೆಕ್ಟ್ರಾನಿಕ್ಸ್ ಅಂಗಡಿಗಳನ್ನು ತೆರೆಯಬೇಕು. ಇದು ನಗರ, ಗ್ರಾಮಾಂತರ ಎರಡೂ ಪ್ರದೇಶಗಳಿಗೆ ಅನ್ವಯಿಸಬೇಕಿದೆ.
ಜಿಲ್ಲೆಗೆ ಸಂಬಂಧಿಸಿ ಈಗಾಗಲೇ ಹೊರಡಿಸಿದ ಆದೇಶಗಳಿಗೆ ಕೆಲವು ಮಾರ್ಪಾಟು ಮಾಡಿ ಹೊಸ ಆದೇಶವನ್ನು ಹೊರಡಿಸ ಲಾಗುವುದು.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿಗಳು,ಉಡುಪಿ ಜಿಲ್ಲೆ