ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರಿ ಅನುದಾನ ಮೊಟಕು
ಖಾಸಗಿ ಹೂಡಿಕೆಗೆ ಉತ್ತೇಜನ ಅನುದಾನ ಇಲ್ಲದೇ ಅಭಿವೃದ್ಧಿ ಹೇಗೆ?
Team Udayavani, Dec 29, 2023, 12:15 AM IST
ಉಡುಪಿ: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ, ಸರಕಾರಕ್ಕೆ ಸಲ್ಲಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಾರದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಅಭಿವೃದ್ಧಿ ಕಾಣುತ್ತಿಲ್ಲ. ಹೀಗಾಗಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ನಾನಾ ಕಸರತ್ತು ನಡೆಸುತ್ತಿದೆ.
2016-17ರಿಂದ 2022-23ನೇ ಸಾಲಿನವರೆಗೆ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪ್ರಮುಖ 8 ಕಾಮಗಾರಿಗಳಿಗೆ ಅನುಮೋದನೆ ನೀಡಿ, ಅನುದಾನ ಘೋಷಣೆ ಮಾಡಲಾಗಿತ್ತು. 8 ಯೋಜನೆಗಳಿಗೆ 32.81 ಕೋ.ರೂ. ಅಂದಾಜು ಪಟ್ಟಿಯನ್ನು ಜಿಲ್ಲೆಯಿಂದ ಸಲ್ಲಿಸಲಾಗಿತ್ತು. ಸರಕಾರಿಂದ ಬಂದಿರುವುದು 8.73 ಕೋ.ರೂ. ಮಾತ್ರ. ಇದೇ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ 6 ಪ್ರಮುಖ ಕಾಮಗಾರಿಗಳಿಗೆ 4.45 ಕೋ.ರೂ. ಅಂದಾಜುಪಟ್ಟಿ ಕಳುಹಿಸಿದ್ದು, ಬಿಡುಗಡೆಯಾಗಿದ್ದ 2.77 ಕೋ.ರೂ. ಮಾತ್ರ. ಉಭಯ ಜಿಲ್ಲೆಯಲ್ಲಿ 2022ರಿಂದ ಈವರೆಗೆ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ಕೆ ಸರಕಾರದಿಂದ ನಯಾಪೈಸೆ ಬಿಡುಗಡೆಯಾಗಿಲ್ಲ.
ಪಿಪಿಪಿ ಮಾದರಿ
ಪ್ರವಾಸಿತಾಣಗಳನ್ನು ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ(ಪಿಪಿಪಿ) ಅಭಿವೃದ್ಧಿಪಡಿಸಲು ಸಾಹಸ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ, ಮನೋರಂಜನ ಪಾರ್ಕ್, ಕ್ಯಾರವಾನ್ ಪಾರ್ಕ್, ಕ್ಯಾರವಾನ್ ಪ್ರವಾಸೋದ್ಯಮ, ಸಮಾವೇಶ ಕೇಂದ್ರ, ಸಾಂಸ್ಕೃತಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಗ್ರಾಮ, ಪರಿಸರ ಪ್ರವಾಸೋದ್ಯಮ, ಪಾರಂಪರಿಕ ಹೋಟೆಲ್- ಪ್ರವಾಸೋದ್ಯಮ, ಪಾರಂಪರಿಕ ನಡಿಗೆ, ಹೋಂ ಸ್ಟೇ, ಹೌಸ್‌ಬೋಟ್, ಹೋಟೆಲ್, ವಸ್ತು ಸಂಗ್ರಹಾಲಯ, ಗ್ಯಾಲರಿ, ರೋಪ್ ವೇ ಇತ್ಯಾದಿ ಚಟುವಟಿಕೆಗಳನ್ನು ನಡೆಸಬಹುದು ಎಂಬ ಪ್ರಸ್ತಾವನೆಯನ್ನು ಉಭಯ ಜಿಲ್ಲೆಗಳಿಂದ ಸರಕಾರಕ್ಕೆ ನೀಡಲಾಗಿದೆ
ಅನುದಾನ ಹಂಚಿಕೆ
2016-17ರಿಂದ 2022-23 ರಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 14 ಕಾಮಗಾರಿಗೆ ಸರಕಾರದ ಒಪ್ಪಿಗೆ ಸಿಕ್ಕಿತ್ತು. ಇದರಲ್ಲಿ 5 ಪೂರ್ಣಗೊಂಡಿದ್ದರೆ, 3 ಪ್ರಗತಿಯಲ್ಲಿದೆ. ಉಳಿದ 6 ಆರಂಭವಾಗಬೇಕಿದೆ. ಉಡುಪಿ ಜಿಲ್ಲೆಯ 8 ಕಾಮಗಾರಿಗಳಿಗೆ 32.81 ಕೋ.ರೂ. ಪೈಕಿ 8.73 ಬಿಡುಗಡೆ ಮಾಡಲಾಗಿದೆ. ದ.ಕ. ಜಿಲ್ಲೆಯ 6 ಕಾಮಗಾರಿಗಳ 4.45 ಕೋ.ರೂ. ಪೈಕಿ 2.77 ಕೋ.ರೂ. ಬಿಡುಗಡೆಯಾಗಿದೆ. ಇದರಲ್ಲಿ ಬೀಚ್ ರಸ್ತೆ ಅಭಿವೃದ್ಧಿ, ಫೆರ್ರೀ ಜೆಟ್ಟಿ ನಿರ್ಮಾಣ, ಮರೈನ್ ಡ್ರೈವ್ ವರ್ಕ್, ಜಲಪಾತ ಅಭಿವೃದ್ಧಿ ಇತ್ಯಾದಿ ಸೇರಿದೆ. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಯ ಹಣವೂ ಸರಕಾರದಿಂದ ಬಂದಿಲ್ಲ. ಹೊಸದಾಗಿ ಶುರುವಾಗಿರುವ ಕಾಮಗಾರಿಗೂ ಅನುದಾನ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ..
ಜಿಲ್ಲೆಯಲ್ಲೆ ಹೊಂದಾಣಿಕೆ
ಉಭಯ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರದಿಂದ ಅನುದಾನ ಬಾರದೇ ಇರುವುದರಿಂದ ಈಗಾಗಲೇ ಹೆಚ್ಚು ಅದಾಯ ಬರುತ್ತಿರುವ ಪ್ರವಾ ಸೋದ್ಯಮ ಕ್ಷೇತ್ರದಿಂದ ಶೇ.50ರಷ್ಟು ಆದಾಯವನ್ನು ಬೇರೆ ಸ್ಥಳಗಳ ಅಭಿವೃದ್ಧಿಗೆ ಹಂಚಿಕೆ ಮಾಡಲು ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಮಲ್ಪೆ ಬೀಚ್, ಸೈಂಟ್ ಮೇರಿಸ್ ಐಲ್ಯಾಂಡ್ ಪ್ರದೇಶದಿಂದ ಬರುವ ಆದಾಯದಲ್ಲಿ ಅರ್ಧಾಂಶವನ್ನು ಜಿಲ್ಲೆಯ ಬೇರೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬಳಸಲು ನಿರ್ಧ ರಿಸಲಾಗಿದೆ. ದ.ಕ.ದಲ್ಲಿ ಈ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಪಿಪಿಪಿ ಮಾದರಿ ಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಸ್ತಾವನೆಯನ್ನು ರಾಜ್ಯ ಕಚೇರಿಗೆ ಸಲ್ಲಿಸಿದ್ದೇವೆ. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆಗಳನ್ನು ಪಟ್ಟಿ ಮಾಡಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು.
– ಮಾಣಿಕ್ಯ, ಕುಮಾರ್ ಸಿ.ಯು., ಉಪ ನಿರ್ದೇಶಕರು, ದ.ಕ., ಉಡುಪಿ, ಪ್ರವಾಸೋದ್ಯಮ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.