ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯದ ಕಸುವು
ಕೋವಿಡ್ ಬಳಿಕ ಬಲವರ್ಧನೆಗೊಂಡ ಆಸ್ಪತ್ರೆಗಳು ; ಗ್ರಾಮೀಣ ಸೇವೆಗೆ 26 ಎಂಬಿಬಿಎಸ್ ವೈದ್ಯರು ; ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ
Team Udayavani, Aug 26, 2021, 6:18 PM IST
ಬಾಗಲಕೋಟೆ: ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಜನರೇ ಹೆಚ್ಚಿದ್ದರು. ಆದರೆ, ಕೋವಿಡ್ ಸೋಂಕು ಬಂದ ಬಳಿಕ, ಬಡವರು-ಶ್ರೀಮಂತರು ಎನ್ನದೇ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುವಂತೆಮಾಡಿದೆ. ಅದರಲ್ಲೂ ಕೋವಿಡ್ ವೇಳೆ ಜಿಲ್ಲೆಯ ಜಿಲ್ಲಾಸ್ಪತ್ರೆಯಿಂದ ಹಿಡಿದು ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಜನರಿಗೆ ಅತ್ಯುತ್ತಮ ಸೇವೆ ಒದಗಿಸಲು ಬಲವರ್ಧನೆಗೊಂಡಿವೆ. ಜಿಲ್ಲೆಯಲ್ಲಿ ಒಂದು ಜಿಲ್ಲಾಸ್ಪತ್ರೆ, ಐದು ತಾಲೂಕು ಆಸ್ಪತ್ರೆ, ಬಾಗಲಕೋಟೆ ನಗರದ 50 ಹಾಸಿಗೆಯ ಪ್ರತ್ಯೇಕ ವಿಶೇಷ ಆಸ್ಪತ್ರೆ ಹಾಗೂ 8 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 48 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.
ಹೊಸದಾಗಿ ಬಂದ ತಜ್ಞರು: ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಯೂ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ತೀವ್ರವಾಗಿತ್ತು. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನೇ ಬೇರೊಂದು ಆಸ್ಪತ್ರೆಗೆ ವಾರದ ಮೂರು ದಿನಗಳ ಕಾಲ ನಿಯೋಜನೆ ಮಾಡುವುದು ಅನಿವಾರ್ಯವಾಗಿತ್ತು. ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಜ್ಞ ವೈದ್ಯರ ಕೊರತೆ ತೀವ್ರವಾಗಿತ್ತು. ಅಲ್ಲಿ, ವೈದ್ಯರ ಸೇವೆಗಿಂತ ಶುಶ್ರೂಕಿಯರೇ ರೋಗಿಗಳಿಗೆ ಸೇವೆ ಒದಗಿಸುವ ಪರಿಸ್ಥಿತಿ ಇತ್ತು. ಆದರೆ, ಈಗ ಅಂತಹ ಪರಿಸ್ಥಿತಿ ಯಾವ ಆಸ್ಪತ್ರೆಯಲ್ಲೂ ಇಲ್ಲ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಗೆ 28 ಜನ ಎಂಬಿಬಿಎಸ್ ವೈದ್ಯರು ಹೊಸದಾಗಿ ಸೇವೆಗೆ ಬಂದಿದ್ದಾರೆ. ಮುಖ್ಯವಾಗಿ ಸರ್ಕಾರದ ಕಡ್ಡಾಯ ಗ್ರಾಮೀಣ ಸೇವೆ ಷರತ್ತಿಗೆ ಒಳಪಟ್ಟು 26 ಜನ ಎಂಬಿಬಿಎಸ್ ವೈದ್ಯರು, ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಗೆ ಹಾಜರಾಗಿದ್ದಾರೆ.
ಪ್ರತಿ ಆಸ್ಪತ್ರೆಗೂ ಶಕ್ತಿ: ಜಿಲ್ಲೆಯಲ್ಲಿರುವ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕೋವಿಡ್ ಬಳಿಕ ಬಲವರ್ಧನೆಗೊಂಡಿವೆ. ಮುಖ್ಯವಾಗಿ ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ (ವಿವಿಧ ವೈದ್ಯಕೀಯಉಪಕರಣ) ಜತೆಗೆ ವೈದ್ಯರು, ಶುಶ್ರೂಕಿಯರ ಹುದ್ದೆಗಳು ಭರ್ತಿಯಾಗಿವೆ. ಸಧ್ಯ ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲೂ ಸಿಬ್ಬಂದಿ ಕೊರತೆ ಇಲ್ಲ. ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯೇ ತೀವ್ರವಾಗಿತ್ತು. ತುರ್ತು ಸಂದರ್ಭದಲ್ಲಿ ಯಾರೇ ಆಸ್ಪತ್ರೆಗೆ ಬಂದರೂ ಕನಿಷ್ಠ ನರ್ಸ್‌ಗಳೂ ತಕ್ಷಣ ಕೈಗೆ ಸಿಗುತ್ತಿರಲಿಲ್ಲ ಎಂಬ ಆರೋಪವಿತ್ತು. ಹೀಗಾಗಿ ಜನರು, ಸರ್ಕಾರಿ ಆಸ್ಪತ್ರೆಗಳತ್ತ ಕಾಲಿಡದೇ, ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದರು. ಇದರಿಂದ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಉಪಕರಣಗಳ ಪೂರೈಕೆ ಎಲ್ಲವೂ ಕೈಗೊಂಡಿದ್ದು, ಇದರಿಂದ ಆಸ್ಪತ್ರೆಗಳು ಬಲವರ್ಧನೆಗೊಂಡಿವೆ.
ಆಕ್ಸಿಜನ್ ಉತ್ಪಾದನೆ ಘಟಕ: ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಆಸ್ಪತ್ರೆಗಳಿಗೆ ಪ್ರಾಣವಾಯು (ಆಕ್ಸಿಜನ್) ಕೊರತೆ ತೀವ್ರವಾಗಿತ್ತು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 18 ಕೆಎಲ್ ಆಕ್ಸಿಜನ್ ಅಗತ್ಯವಿದೆ. ಆದರೆ, ಜಿಲ್ಲೆಗೆ ನಿತ್ಯ 12ರಿಂದ 16 ಕೆಎಲ್ ಮಾತ್ರ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಆಕ್ಸಿಜನ್ ಕೊರತೆ ನೀಗಿಸಲು ರಾಜ್ಯ ಮಟ್ಟದಲ್ಲೂ ತೀವ್ರ ಪ್ರಭಾವ ಬೀರಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಇದೀಗ ಜಿಲ್ಲಾಸ್ಪತ್ರೆಯಲ್ಲಿ 1 ಸಾವಿರ ಮತ್ತು ಜಮಖಂಡಿ ತಾಲೂಕು ಆಸ್ಪತ್ರೆಯಲ್ಲಿ 500ರಷ್ಟು ಆಕ್ಸಿಜನ್ ಉತ್ಪಾದನೆ ಘಟಕ ಸಿದ್ಧಗೊಳ್ಳುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಸಿದ್ಧತೆಯಲ್ಲಿದ್ದು, ಜಮಖಂಡಿಯಲ್ಲಿ ಬಹುತೇಕ ಪೂರ್ಣಗೊಂಡಿದೆ.
ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ: ಜಿಲ್ಲಾಸ್ಪತ್ರೆ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ವಿಭಾಗವನ್ನು ಪ್ರತ್ಯೇಕವಾಗಿ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಕೋವಿಡ್ 3ನೇ ಅಲೆ, ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಇದರಿಂದ ಜಿಲ್ಲಾ ಆಡಳಿತವೂ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಇದರ ಜತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ನಿರ್ವಹಣೆಗೆ ವಿಶೇಷ ಸೂಚನೆ ನೀಡಲಾಗಿದೆ.
ಎಚ್‌ಎನ್‌ಎಫ್‌ಸಿ ಯಂತ್ರ, ಆಕ್ಸಿಜನ್ ಕಾನ್ಸ್‌ಟ್ರೇಟರ್, ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಉಪಕರಣ ಎಲ್ಲವೂ ಸಿದ್ಧತೆಯಲ್ಲಿವೆ. ಯಾವುದೇ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾದರೂ, ಮಕ್ಕಳಿಗಾಗಿ ರಚಿಸಲಾದ ಪ್ರತ್ಯೇಕ ವಿಭಾಗದಲ್ಲಿ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಡವಿದ ಮೇಲೆ ಸುಧಾರಣೆ: ಕೋವಿಡ್ ಮೊದಲ ಅಲೆ ಜಿಲ್ಲೆಗೆ ಕಾಲಿಟ್ಟಾಗ, ದೊಡ್ಡ ಆತಂಕ, ಭೀತಿ ಶುರುವಾಗಿತ್ತು. ಸುಮಾರು 15 ಲಕ್ಷಕ್ಕೂ
ಅಧಿಕವಾಗಿರುವ ಜಿಲ್ಲೆಯ ಜನರಿಗೆ ಜಿಲ್ಲಾಸ್ಪತ್ರೆಯ ಮೇಲೆ ಅಷ್ಟೊಂದು ವಿಶ್ವಾಸವೂ ಇರಲಿಲ್ಲ. ಕಾರಣ, ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ಇತ್ತು. 250 ಹಾಸಿಗೆಯ ಆಸ್ಪತ್ರೆ ಮಾತ್ರವಿತ್ತು. ಸೋಂಕಿತರ ಸಂಖ್ಯೆ 300 ದಾಟಿದಾಗಲೇ ಜಿಲ್ಲಾಡಳಿತ, ತಕ್ಷಣ ಎಚ್ಚೆತ್ತುಕೊಂಡಿದ್ದು. ಕೋವಿಡ್ ಕ್ಕಾಗಿಯೇ ಜಿಲ್ಲೆಯ ವಸತಿ ನಿಲಯ, ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಸಿಕೊಳ್ಳಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ಕೇವಲ 9 ಬೆಡ್‌ಗಳಿದ್ದ ಐಸಿಯು ಕೇಂದ್ರವನ್ನು 40ಕ್ಕೆ ಹೆಚ್ಚಿಸಲಾಯಿತು. 250 ಹಾಸಿಗೆಯ ಆಸ್ಪತ್ರೆಯನ್ನು 400 ಹಾಸಿಗೆಗೆ ಹೆಚ್ಚಿಸಿ, ಸೋಂಕಿತ ರಿಗೆ ಅತ್ಯುತ್ತಮ ಸೇವೆ ಒದಗಿಸುವಲ್ಲಿ ಜಿಲ್ಲಾಸ್ಪತ್ರೆಯೇ ಮೊದಲ ಸಾಲಿನಲ್ಲಿ ನಿಂತಿತು. ಇದು ಜಿಲ್ಲಾಸ್ಪತ್ರೆಯ ಸೇವೆಯಲ್ಲಿ ಬಲವರ್ಧನೆ ಗೊಳ್ಳಲೂ ಕಾರಣವಾಯಿತು.
ಕೋವಿಡ್ ಸಂಕಷ್ಟದ ವೇಳೆ ಜಿಲ್ಲೆಯ ಎಲ್ಲ ಸರ್ಕಾರಿ ತಾಲೂಕು ಮತ್ತು ಜಿಲ್ಲಾಸ್ಪತ್ರೆ ಅತ್ಯುತ್ತಮವಾಗಿ ಕೆಲಸ ಮಾಡಿವೆ. ಸಧ್ಯ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಪ್ರತಿ ಆಸ್ಪತ್ರೆಯಲ್ಲೂ ಮಕ್ಕಳ ವಿಭಾಗ ಸ್ಥಾಪಿಸಿದ್ದು, ಮಕ್ಕಳ ವಿಶೇಷ ತಜ್ಞ ವೈದ್ಯರ ನೇಮಕ ಮಾಡಲಾಗಿದೆ. ಜಿಲ್ಲೆಗೆ 28 ಜನ ಎಂಬಿಬಿಎಸ್ ವೈದ್ಯರು, 26 ಜನ ಗ್ರಾಮೀಣ ಸೇವೆಗೆ ವೈದ್ಯರ ನೇಮಕಗೊಂಡಿದ್ದು, 8 ಜನ ವಿಶೇಷ ತಜ್ಞ ವೈದ್ಯರು ಸೇವೆಗೆ ಬಂದಿದ್ದಾರೆ. ಯಾವುದೇ ಆಸ್ಪತ್ರೆಯಲ್ಲೂ ಯಾವ ಕೊರತೆಯೂ ಇಲ್ಲ.
-ಡಾ|ಅನಂತ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಜಿಲ್ಲಾಸ್ಪತ್ರೆಯಲ್ಲಿ 40 ಐಸಿಯು ಬೆಡ್ ಸೇರಿದಂತೆ 400 ಹಾಸಿಗೆ ಇದ್ದು, ಎರಡು ಅಲೆಯಲ್ಲೂ ನಮ್ಮ ಎಲ್ಲ ವೈದ್ಯರು, ಸಿಬ್ಬಂದಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಇದೀಗ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ರಚಿಸಲಾಗಿದೆ. ಆಕ್ಸಿಜನ್ ಉತ್ಪಾದನೆ ಘಟಕವೂ ಸಿದ್ಧಗೊಳ್ಳುತ್ತಿದೆ. ಕೋವಿಡ್ ಬಳಿಕ ಆಸ್ಪತ್ರೆಯ ಸೇವೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
–ಡಾ| ಪ್ರಕಾಶ ಬಿರಾದಾರ,
ಜಿಲ್ಲಾ ಶಸ್ತ್ರ ಚಿಕಿತ್ಸಾ, ಜಿಲ್ಲಾಸ್ಪತ್ರೆ
ಕೋವಿಡ್ 1 ಮತ್ತು 2ನೇ ಅಲೆಯ ವೇಳೆ ಬಡವರು, ಶ್ರೀಮಂತರು ಎನ್ನದೇ ಪ್ರತಿಯೊಬ್ಬರಿಗೂ ಅತ್ಯುತ್ತಮವಾಗಿ ಸೇವೆ ಒದಗಿಸವಲ್ಲಿ ಜಿಲ್ಲಾಸ್ಪತ್ರೆ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಪ್ರತಿಯೊಬ್ಬ ಸಿಬ್ಬಂದಿ, ವೈದ್ಯರೂ ತಮ್ಮ ಜೀವದ ಹಂಗು ತೊರೆದು, ಕೆಲಸ ಮಾಡಿದ್ದು, ಅವರ ಸೇವೆಯನ್ನು
ಸ್ಮರಿಸಲೇಬೇಕು. ಅದಕ್ಕಾಗಿಯೇ ನಮ್ಮ ಸಂಸ್ಥೆಯಿಂದ ಜಿಲ್ಲಾಸ್ಪತ್ರೆಯ ಮುಖ್ಯಸ್ಥರನ್ನು ಸನ್ಮಾನಿಸಿ, ಗೌರವಿಸಿದ್ದೇವೆ.
–ವಿಜಯ ಸುಲಾಖೆ,
ಕಾಮಧೇನು ಸಂಸ್ಥೆಯ ಪ್ರಮುಖರು
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.