ನೆರೆ ಮರಳು ಸದ್ಬಳಕೆಗೆ ಸರ್ಕಾರ ಪ್ರಯತ್ನ
Team Udayavani, Sep 21, 2019, 3:10 AM IST
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ತಲೆದೋರಿದ ನೆರೆಯಿಂದಾಗಿ ಹಲವು ಜಿಲ್ಲೆಗಳ ಪಟ್ಟಾ ಭೂಮಿಯಲ್ಲಿ ಸಾಕಷ್ಟು ಮರಳು ಶೇಖರಣೆಯಾಗಿದ್ದು, ಆ ಮರಳನ್ನು ಆಯಾ ಪ್ರದೇಶದಲ್ಲೇ ಮನೆ ನಿರ್ಮಾಣ ಸೇರಿ ಪುನರ್ವಸತಿ ಕಾಮಗಾರಿ ಬಳಕೆಗೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತಿಸಿದೆ.
ರೈತರು ತಮ್ಮ ಭೂಮಿಯಲ್ಲಿ ಶೇಖರಣೆಯಾಗಿರುವ ಮರಳನ್ನು ಸ್ವಂತ ಬಳಕೆಗೆ ಉಪಯೋಗಿಸಿ ಉಳಿಕೆ ಮರಳಿಗೆ ರಾಯಧನ ಪಾವತಿಸಿ ನೆರೆಹೊರೆ, ಇತರರಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಿಂದ ರೈತರ ಭೂಮಿ ಹಸನಾಗಿಸುವ ಜತೆಗೆ ಮರಳಿನ ಸದ್ಬಳಕೆಗೆ ಒತ್ತು ನೀಡುವುದು. ಹಾಗೆಯೇ ತಾತ್ಕಾಲಿಕವಾಗಿ ಮರಳಿನ ಕೊರತೆ ನಿವಾರಿಸಿ, ಮರಳು ಮಾಫಿಯಾ ತಡೆಯುವುದು ಸರ್ಕಾರದ ಚಿಂತನೆ.
ಈ ಸಂಬಂಧ ಪ್ರಸ್ತಾವ ಸಿದ್ಧವಿದ್ದು, ಅನುಮೋದನೆ ದೊರೆತರೆ ತಕ್ಷಣವೇ ಮಧ್ಯಂತರ ಆದೇಶ ಹೊರಬೀಳುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಕಳೆದ ಆಗಸ್ಟ್‌ನಲ್ಲಿ ಭಾರೀ ಮಳೆ ಹಾಗೂ ಜಲಾಶಯಗಳು ಭರ್ತಿಯಾಗಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಜನ- ಜಾನುವಾರು ಪ್ರಾಣ ಹಾನಿ ಜತೆಗೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ. ಮೂಲ ಸೌಕರ್ಯವೂ ಹಾಳಾಗಿದ್ದು, 38,000 ಕೋಟಿ ರೂ.ಗಿಂತ ಹೆಚ್ಚು ನಷ್ಟ ಸಂಭವಿಸಿದೆ ಎಂದು ಸರ್ಕಾರ ಅಂದಾಜಿಸಿದೆ.
ನೆರೆಯಿಂದಾಗಿ ಕೃಷಿ ಬೆಳೆ, ತೋಟಗಾರಿಕೆ ಬೆಳೆಯೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಮಾತ್ರವಲ್ಲದೇ ನೆರೆಯಲ್ಲಿ ಕೊಚ್ಚಿ ಬಂದ ಅನುಪಯುಕ್ತ ವಸ್ತುಗಳ ಜತೆಗೆ ಅಪಾರ ಪ್ರಮಾಣದ ಮರಳು ಪಟ್ಟಾ ಭೂಮಿಯಲ್ಲಿ ಆವರಿಸಿದೆ. ಬೆಳೆ ಬೆಳೆಯುತ್ತಿದ್ದ ಭೂಮಿಯಲ್ಲೂ ಮರಳು ಹರಡಿರುವುದರಿಂದ ಅದೇ ಸ್ಥಿತಿಯಲ್ಲಿ ಬೆಳೆ ಬೆಳೆಯುವುದು ಕಷ್ಟ. ಹಾಗಾಗಿ ಆ ಮರಳನ್ನು ಉಪಯುಕ್ತವಾಗಿ ಬಳಸಿಕೊಳ್ಳುವತ್ತ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ ಎಂದು ಮೂಲಗಳು ಹೇಳಿವೆ.
ಪುನರ್ವಸತಿ ಕಾರ್ಯಕ್ಕೆ ಬಳಕೆ: ನೆರೆಪೀಡಿತ ಪ್ರದೇಶದ ಪಟ್ಟಾ ಭೂಮಿಯಲ್ಲಿ ಶೇಖರಣೆಯಾಗಿರುವ ಮರಳನ್ನು ಭೂ ಮಾಲೀಕರು ಮನೆ ನಿರ್ಮಾಣ ಸೇರಿ ಇತರೆ ಸ್ವಂತ ಬಳಕೆಗೆ ಅವಕಾಶ ನೀಡುವುದು, ಜತೆಗೆ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಗಳಿಗೂ ಇದೇ ಮರಳು ಬಳಕೆಗೆ ಅವಕಾಶ ಕಲ್ಪಿಸುವ ಮೂಲಕ ಮರಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಇಲಾಖೆ ಚಿಂತಿಸಿದೆ. ಇದರಿಂದ ಮನೆ ನಿರ್ಮಾಣ ಸೇರಿ ಇತರೆ ಪುನರ್ವಸತಿ ಕಾರ್ಯಗಳಿಗೆ ಮರಳು ಖರೀದಿಗೆ ಮಾಡುವ ವೆಚ್ಚ ಉಳಿತಾಯವಾಗುವ ನಿರೀಕ್ಷೆ ಇದೆ.
ರಾಯಧನ ಪಡೆದು ಮಾರಾಟಕ್ಕೆ ಅವಕಾಶ: ಸ್ವಂತ ಬಳಕೆ ನಂತರ ಉಳಿಕೆಯಾಗುವ ಮರಳನ್ನು ನೆರೆಹೊರೆಯವರಿಗೆ ಅಥವಾ ಇತರರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಪಟ್ಟಾ ಭೂಮಿಯಲ್ಲಿ ಭಾರೀ ಪ್ರಮಾಣದಲ್ಲಿ ಶೇಖರಣೆಯಾಗಿರುವ ಮರಳನ್ನು ತೆರವುಗೊಳಿಸ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಸ್ವಂತ ಬಳಕೆಗೆ ಹೊರತುಪಡಿಸಿ ಉಳಿಕೆ ಮರಳಿನ ಪ್ರಮಾಣಕ್ಕೆ ಅನುಗುಣವಾಗಿ ರಾಯಧನ ಸಂಗ್ರಹಿಸಿ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಇದರಿಂದ ಸರ್ಕಾರದ ಖಜಾನೆಗೂ ಆದಾಯ ಬರಲಿದ್ದು, ಜತೆಗೆ ಮರಳಿನ ಅಭಾವವನ್ನು ತಾತ್ಕಾಲಿಕವಾಗಿ ತಗ್ಗಿಸಲು ಸಹಕಾರಿಯಾಗಲಿದೆ ಎಂಬುದು ಇಲಾಖೆ ಲೆಕ್ಕಾಚಾರ. ಇದರಿಂದ ಆಯಾ ಭೂಮಾಲೀಕರೂ ಒಂದಿಷ್ಟು ಆದಾಯ ಗಳಿಸಲು ಸಾಧ್ಯತೆಯಿದೆ.
ಸ್ಥಳೀಯ ಬಳಕೆಗೆ ಒತ್ತು: ಭೂಮಾಲೀಕರು ತಮ್ಮ ಜಮೀನಿನಲ್ಲಿ ಶೇಖರಣೆಯಾಗಿರುವ ಮರಳು ಮಾರಾಟಕ್ಕೆ ಅವಕಾಶ ನೀಡಿದರೂ ಅದು ಸ್ಥಳೀಯವಾಗಿಯೇ ಬಳಕೆಯಾಗಬೇಕು ಎಂಬುದು ಇಲಾಖೆ ಆಶಯ. ಹೆಚ್ಚುವರಿ ಮರಳನ್ನು ಮೊದಲಿಗೆ ಗ್ರಾಮ ಪಂಚಾಯ್ತಿ ಮಿತಿಗೊಳಗೆ, ಬಳಿಕ ತಾಲೂಕು ಪಂಚಾಯ್ತಿ ಆನಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ನೀಡುವುದು. ಜಿಲ್ಲಾ ವ್ಯಾಪ್ತಿಯಿಂದ ಮರಳು ಹೊರ ಹೋಗದೆ ಸ್ಥಳೀಯವಾಗಿಯೇ ಬಳಕೆಯಾಗುವಂತಾಗಬೇಕು. ಇಲ್ಲದಿದ್ದರೆ ಜಿಲ್ಲೆ ವ್ಯಾಪ್ತಿಯಿಂದ ಹೊರ ಹೋಗುವುದಾದರೆ ಮತ್ತೆ ಆ ಮರಳು ಬೆಂಗಳೂರು ಸೇರಿ ಇತರೆ ಪ್ರಮುಖ ನಗರಗಳಿಗೆ ಸಾಗಣೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೆರೆ ಮರಳು ಬಳಕೆಯನ್ನು ಜಿಲ್ಲಾ ವ್ಯಾಪ್ತಿ ಮಿತಿಯೊಳಗೆ ಸೀಮಿತಗೊಳಿಸುವ ಬಗ್ಗೆ ಚಿಂತಿಸಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಪಟ್ಟಾ ಭೂಮಿಯಲ್ಲಿದೆ ಮರಳು: ನೆರೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಇನ್ನೊಂದೆಡೆ ತುಂಗಭದ್ರಾ, ಕೃಷ್ಣಾ ನದಿ ಪಾತ್ರದ ಪ್ರದೇಶ ಸೇರಿ ಶಿವಮೊಗ್ಗ, ಸಕಲೇಶಪುರ, ಮಡಿಕೇರಿ ಇತರೆಡೆ ಪಟ್ಟಾ ಭೂಮಿಯಲ್ಲಿ ಸಾಕಷ್ಟು ಮರಳು ಹರಡಿದೆ. ಹಾಗಾಗಿ ಆ ಮರಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತಾವ ರೂಪಿಸಲಾಗಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.
ನೆರೆ ಕಾಣಿಸಿಕೊಂಡ ಪ್ರದೇಶಗಳ ಹಲವೆಡೆ ಪಟ್ಟಾ ಜಮೀನಿನಲ್ಲಿ ಮರಳು ಹರಡಿದ್ದು, ಜಮೀನುದಾರರು ತಮ್ಮ ಸ್ವಂತ ಬಳಕೆಗೆ ಬೇಕಾಗುವಷ್ಟು ಮರಳು ಬಳಸಲು ಅವಕಾಶ ನೀಡು ವುದು, ಉಳಿಕೆ ಮರಳಿಗೆ ರಾಯಧನ ಸಂಗ್ರಹಿಸಿ ಮಾರಾಟಕ್ಕೆ ಅವಕಾಶ ನೀಡಲು ಚಿಂತಿಸಲಾಗಿದೆ. ಇದರಿಂದ ಮರಳಿನ ಸದ್ಬಳಕೆ ಜತೆಗೆ ಮಾಫಿಯಾ ತಡೆಗೂ ಸಹಕಾರಿಯಾಗುವ ನಿರೀಕ್ಷೆ ಇದೆ. ಪ್ರಸ್ತಾವ ಸಲ್ಲಿಕೆಯಾಗುತ್ತಿದ್ದಂತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
-ಸಿ.ಸಿ.ಪಾಟೀಲ್, ಗಣಿ ಸಚಿವ
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.