ಗಡಿನಾಡಿಗರ ಬದುಕು ಅತಂತ್ರವಾಗಿಸಿದ ಸರಕಾರಗಳು
ಸಣ್ಣ ತಾಂತ್ರಿಕ ಎಡವಟ್ಟು ಇಲ್ಲಿನ ಜನತೆಯನ್ನು ಜೀವನಪೂರ್ತಿ ನಲುಗುವಂತೆ ಮಾಡಿತು.
Team Udayavani, Oct 30, 2021, 12:34 PM IST
ಕೋವಿಡ್ ನಿಯಂತ್ರಣದಲ್ಲಿ ಕೇರಳ ಸರಕಾರ ತೋರಿದ ಅಸಡ್ಡೆಯಿಂದ ರಾಜ್ಯದಲ್ಲಿ ವೈರಸ್ ಇನ್ನೂ ನಿಯಂತ್ರಣಕ್ಕೆ ಬಾರದೆ ಕಾಸರಗೋಡು ಭಾಗದ ಜನ ಪರಿತಪಿ ಸುವಂತಾಗಿದೆ.
ಬೇರು ಕರ್ನಾಟಕದಲ್ಲಿ; ರೆಂಬೆ ಕೊಂಬೆಗಳು ಕೇರಳದಲ್ಲಿ ಎಂಬಂತೆ ಬದುಕುತ್ತಿರುವವರು ಕಾಸರಗೋಡು ಪ್ರದೇಶದವರು. ಇಲ್ಲಿನ ಜನರ ಭೌಗೋಳಿಕ ಮತ್ತು ಶಾರೀರಿಕ ಅಸ್ತಿತ್ವ ಕೇರಳದಲ್ಲೇ ಇದ್ದರೂ ಭಾವನಾತ್ಮಕ ಅಸ್ತಿತ್ವವಿರುವುದು ಕರ್ನಾಟಕದಲ್ಲಿ. ವಿದ್ಯಾಭ್ಯಾಸ ಮತ್ತು ಔದ್ಯೋಗಿಕ ದೃಷ್ಟಿಯಿಂದಲೂ ಇಲ್ಲಿನ ಅರ್ಧಕ್ಕಿಂತಲೂ ಹೆಚ್ಚು ಜನರು ಕರ್ನಾಟಕವನ್ನು ಆಶ್ರಯಿಸಿದ್ದಾರೆ. ಈ ಅವಲಂಬನೆಗೆ ಕಾರಣವೂ ಇಲ್ಲದಿಲ್ಲ.
1956ರ ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ನಡೆದ ಸಣ್ಣ ತಾಂತ್ರಿಕ ಎಡವಟ್ಟು ಇಲ್ಲಿನ ಜನತೆಯನ್ನು ಜೀವನಪೂರ್ತಿ ನಲುಗುವಂತೆ ಮಾಡಿತು. ಇಲ್ಲಿ ನೆಲೆಸಿರುವ ಜನರ ಆಡುಭಾಷೆ ಮತ್ತು ಸಾಂಸ್ಕೃತಿಕ ನೆಲೆಗಟ್ಟು ಕರ್ನಾಟಕವನ್ನೇ ಪ್ರತಿನಿಧಿಸುತ್ತಿದ್ದರೂ ಈ ಪ್ರದೇಶ ಮಾತ್ರ ಭೌಗೋಳಿಕವಾಗಿ ಕೇರಳಕ್ಕೆ ಸೇರಿ ಹೋಯಿತು. ಅನಂತರದ ದಿನಗಳಲ್ಲಿ ಕೈಯಾರ, ಕಳ್ಳಿಗೆ, ಕಕ್ಕಿಲ್ಲಾಯರಂತಹ ಮಹಾನ್ ನಾಯಕರು ಕನ್ನಡ ನಾಡಿನಿಂದ ದೂರವಾದ ಗಡಿನಾಡನ್ನು ಮತ್ತೆ ತವರು ರಾಜ್ಯಕ್ಕೆ ಸೇರಿಸಲು ಘನ ಹೋರಾಟವನ್ನೇ ಸಂಘಟಿಸಿದರು. ಫಲಿತಾಂಶ ಮಾತ್ರ ಶೂನ್ಯವಾಗಿ ಕಾಸರಗೋಡು ಇಂದಿಗೂ ಕೇರಳದಲ್ಲೇ ಉಳಿದು ಕೊಂಡಿದೆ. ಇಲ್ಲಿನ ಜನತೆಗೆ ಅತ್ತ ಕರ್ನಾಟಕ ಹೊರ ರಾಜ್ಯದವರೆಂದೂ ಇತ್ತ ಕೇರಳ ಅನ್ಯಭಾಷಿಗರೆಂದೂ ಹಣೆಪಟ್ಟಿಯನ್ನು ಕಟ್ಟಿರುವ ಕಾರಣ ಅವರು ಮಾನಸಿಕ ಹಿಂಸೆ ಅನುಭವಿಸುವ ಸಂದರ್ಭಗಳು ಆಗಾಗ ಎದುರಾಗುತ್ತಿರುತ್ತವೆ. ಪ್ರಸ್ತುತ ಕೋವಿಡ್ ನಿಯಂತ್ರಣದ ಸಂದರ್ಭದಲ್ಲಂತೂ ಈ ಗಡಿನಾಡಿಗರ ಬದುಕು ಹೈರಾಣಾಗಿ ಹೋಗಿದೆ.
ಕೋವಿಡ್ ವೈರಸ್ ನಿಯಂತ್ರಣ ವಿಚಾರದಲ್ಲಿ ಕೇರಳ ಸರಕಾರ ತೋರಿದ ಅಸಡ್ಡೆಯಿಂದ ರಾಜ್ಯದಲ್ಲಿ ವೈರಸ್ ಇನ್ನೂ ನಿಯಂತ್ರಣಕ್ಕೆ ಬಾರದೆ ಕಾಸರಗೋಡು ಭಾಗದ ಜನ ಪರಿತಪಿ ಸುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳ ಜನತೆಗೆ ಹೇರಿದ ನಿರ್ಬಂಧ ಗಡಿ ನಾಡಿಗರ ನೆಮ್ಮದಿಗೆ ಕೊಳ್ಳಿಯಿಟ್ಟಿದೆ.
ಇದನ್ನೂ ಓದಿ:ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?
ಇದುವರೆಗೂ ಮಂಜೇಶ್ವರ ಮತ್ತು ಮಂಗಳೂರು ನಡುವೆ ಅಂತಾರಾಜ್ಯ ಗಡಿಯಿದ್ದರೂ ಇದು ಇಲ್ಲಿನ ಜನಜೀವನವನ್ನು ಭೇದಗೊಳಿಸಿರಲಿಲ್ಲ. ಅತ್ತಿತ್ತ ಸಂಚರಿಸಿ ದುಡಿಯುವ ವರ್ಗಕ್ಕೆ ಇದು ಸಮಸ್ಯೆಯನ್ನು ತಂದೊಡ್ಡಿರಲಿಲ್ಲ. ಕೋವಿಡ್ ವೈರಸ್ ದಾಳಿ ಇಟ್ಟಾಗಲೇ ಇಲ್ಲಿ ಗಡಿ ಸಮಸ್ಯೆ ಪ್ರಾರಂಭವಾದದ್ದು. ಒಂದೇ ಕುಟುಂಬ-ಎರಡು ಮನೆಗಳು ಎಂಬಂತೆ ಜೀವನ ನಡೆಸುತ್ತಿದ್ದವರಿಗೆ ಗಡಿ ಮುಚ್ಚುಗಡೆಯಾದಾಗ ಅತ್ತಿಂದಿತ್ತ ಸಂಪರ್ಕ ಕಡಿಯಲ್ಪಟ್ಟು ಒಂದು ರೀತಿಯ ಮಾನಸಿಕ ಹಿಂಸೆ ಅನುಭವಿಸುವಂತಾಯಿತು. ಕರ್ನಾಟಕಕ್ಕೆ ಬರುವವರಿಗೆ 72 ಗಂಟೆ ಮೊದಲಿನ RT-PCR ನೆಗೆಟಿವ್ ವರದಿ ಮತ್ತು ನಿತ್ಯ ಪ್ರಯಾಣಿಕರಿಗೆ 7 ದಿನಗಳಿಗೊಮ್ಮೆ ಈ ವರದಿಯನ್ನು ಕಡ್ಡಾಯಗೊಳಿಸಿರುವುದರಿಂದ ಇದೀಗ ಸಂಕಷ್ಟ ಬಿಗಡಾಯಿಸಿದೆ. ಪದೇ ಪದೆ ಮೂಗು, ಗಂಟಲಿಗೆ ನಾಳ ಇಳಿಸುವುದರಿಂದ ಒಳಭಾಗದಲ್ಲಿ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ.
ಡಾಟಾ ಎಂಟ್ರಿಯವರ ಎಡವಟ್ಟಿನಿಂದ ದೇಹದಲ್ಲಿ ರೋಗ ಇಲ್ಲದೆಯೂ ಕೋವಿಡ್ ಪಾಸಿಟಿವ್ ವರದಿ ಪಡೆದ ಉದಾಹರಣೆಗಳೂ ಇವೆ. ಈ ಕಾರಣಗಳಿಗಾಗಿ ಪದೇ ಪದೆ ಪರೀಕ್ಷೆಗೊಳಪಡಲು ಜನರು ಹೆದರುವುದು ಸಾಮಾನ್ಯ. ಇದರ ಪರಿಣಾಮ ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬಂದು ಕೆಲಸ ಮಾಡುವ ಹೆಚ್ಚಿನವರೆಲ್ಲ ನಿರುದ್ಯೋಗಿ ಗಳಾದರು. ವಿದ್ಯಾರ್ಥಿಗಳು ಒತ್ತಡದಲ್ಲಿ ಸಿಲುಕಿದರು. ವೈದ್ಯಕೀಯ ಉದ್ದೇಶದಿಂದ ಮಂಗಳೂರು ಸಂದರ್ಶಿಸುವವರು ಕಷ್ಟಪಡುವಂತಾಯಿತು. ಮದುವೆಯಾದ ಹೆಣ್ಣು ಮಕ್ಕಳು ಅತ್ತಿಂದಿತ್ತ ದಾಟಲಾರದೆ ಪರಿತಪಿಸಿದರು. ಒಟ್ಟಿನಲ್ಲಿ ಕೋವಿಡ್ ನಿಯಂತ್ರಣವೆಂಬ ನೆಪದಲ್ಲಿ ಕೇರಳ -ಕರ್ನಾಟಕ ಸಂಪರ್ಕದ ಎಲ್ಲ ಗಡಿಗಳು ಮುಚ್ಚಿ ಉಭಯ ರಾಜ್ಯಗಳ ಜನರು ತಾವು ಭಾರತ- ಪಾಕಿಸ್ಥಾನದ ಗಡಿಯಲ್ಲಿದ್ದೇವೆಯೋ? ಎಂಬಂತೆ ಜೀವನ ನಡೆಸಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.
ಕೋವಿಡ್ ವೈರಸ್ ಜಗತ್ತನ್ನು ತಲ್ಲಣಗೊಳಿಸಿ ರುವುದು ನಿಜ. ಅದರ ನಿಯಂತ್ರಣ ಕ್ರಮಗಳಲ್ಲಿ ಒಂದಾಗಿ ಗಡಿ ಮುಚ್ಚಲಾಗುತ್ತಿದೆ. ಜಿಲ್ಲೆಯೊಳಗೆ ವೈರಸ್ ನಿಯಂತ್ರಿಸುವ ಜವಾಬ್ದಾರಿಯನ್ನು ಸರಕಾರ ಜಿಲ್ಲಾಡಳಿತಕ್ಕೆ ವಹಿಸಿರುವುದರಿಂದ ಆದಷ್ಟು ಕಡಿಮೆ ಸಮಯಕ್ಕೆ ಅನ್ವಯಿಸುವಂತೆ ಗಡಿ ಮುಚ್ಚುವುದು ತಪ್ಪಲ್ಲ. ಆದರೆ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಗತ್ಯ, ಅನನು ಕೂಲಗಳನ್ನು ಕೂಡ ಈ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ.
ಎರಡು ಡೋಸ್ ಕೋವಿಡ್ ಲಸಿಕೆ ಪಡೆ ದವರನ್ನು ದೇಶದ ಯಾವ ಭಾಗದಲ್ಲೂ ನಿರ್ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವಾಗ ಹೇಗೆ ದ.ಕ. ಪ್ರವೇಶ ನಿರ್ಬಂಧಿಸಿದಿರಿ? ಎಂದು ಪ್ರಶ್ನಿಸಿ ಕಾಸರಗೋಡು ನಿವಾಸಿಯೊಬ್ಬರು ಕೇರಳ ಹೈಕೋರ್ಟ್ ಮೂಲಕ ದ.ಕ. ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಗೊಳಿಸಿದರು. ಇದರ ವಿಚಾರಣೆ ದಿನಾಂಕದ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು. ಗಡಿಯಲ್ಲಿ ರಾಜಕೀಯ ಪ್ರೇರಿತವಾದ ಪ್ರತಿ ಭಟನೆಗಳೂ ನಡೆದವು. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿ ಸದ್ರಿ ಕಾಸರಗೋಡು-ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ಸಾಮಾನ್ಯ ಪ್ರವೇಶವನ್ನು ನಿಷೇಧಿಸಿ ಒಂದೂವರೆ ತಿಂಗಳೇ ಕಳೆದಿದೆ. ಇನ್ನೂ ಅಕ್ಟೋಬರ್ ಅಂತ್ಯದವರೆಗೆ ಕೇರಳ ಭಾಗದವರು ಕರ್ನಾಟಕ ಪ್ರವೇಶಿಸಬಾರದೆಂದು ದ.ಕ. ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಕೇರಳ ಸರಕಾರ ಕೋವಿಡ್ ವಿಚಾರವಾಗಿ ಗಾಂಭೀರ್ಯವನ್ನೇ ಮರೆತು ನಿಶ್ಚಿಂತೆಯಲ್ಲಿ ಇದ್ದಂತಿದೆ. ಇಲ್ಲಿ ಅಡಕತ್ತರಿಯಲ್ಲಿ ಸಿಕ್ಕಿರುವುದು ಗಡಿನಾಡ ಜನತೆ.
ಒಟ್ಟಿನಲ್ಲಿ ಕೋವಿಡ್ ಮಹಾಮಾರಿ ಅಖಂಡ ಭಾರತವನ್ನು ವಿಭಜಿಸಿದ್ದಂತೂ ಸತ್ಯ. ಕೇರಳದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸೋಂಕು ಕಡಿಮೆಯಾಗಿಲ್ಲ. ಸೋಂಕು ನಿಯಂತ್ರಿಸುವ ಕಾಳಜಿಯೂ ಕೇರಳ ಸರಕಾರಕ್ಕೆ ಇದ್ದಂತಿಲ್ಲ. ಸೋಂಕು ಕಡಿಮೆಯಾಗದೆ ಕರ್ನಾಟಕ ಪ್ರವೇಶಿಸುವ ನೈತಿಕತೆಯೂ ಕೇರಳದ ವರಿಗಿಲ್ಲ. ಕಾಸರಗೋಡು ಪ್ರದೇಶ ಕೇರಳ ಸರಕಾರ ದಿಂದ (ಬಹುಶಃ ಕನ್ನಡ ನಾಡು ಎಂಬ ಕಾರಣಕ್ಕೆ) ನಿರ್ಲಕ್ಷ್ಯಕ್ಕೊಳಗಾದ ಜಿಲ್ಲೆ ಎಂಬುದು ಇಲ್ಲಿನ ಜನತೆಗೆ ಅದು ಕಲ್ಪಿಸಿದ ವ್ಯವಸ್ಥೆಗಳನ್ನು ಗಮನಿ ಸುವಾಗ ಮನದಟ್ಟಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿಯವರು ಪಕ್ಕದ ಮಂಗಳೂರನ್ನು ಆಶ್ರಯಿಸಿದ್ದಾರೆ. ಆದರೆ ಈಗ ವೈರಸ್ ಬಾಧೆಗೆ ಸಿಲುಕಿ ಕಂಗಾಲಾಗಿದ್ದಾರೆ. ಈ ಗಡಿನಾಡು ಇಂದು ಉಭಯ ರಾಜ್ಯಗಳಿಗೆ ಮಾತ್ರವಲ್ಲದೆ ಕೇಂದ್ರ ಸರಕಾರಕ್ಕೂ ಬೇಡದ ಪ್ರದೇಶವಾದಂತಿದೆ. ಗಡಿನಾಡಿಗರ ಈ ಪರಿಸ್ಥಿತಿಯ ಸುಧಾರಣೆ ಯಾರಿಂದ? ಮತ್ತು ಹೇಗೆ? ಎಂಬುದು ಸದ್ಯ ಇಲ್ಲಿನ ಕನ್ನಡಿಗರನ್ನು ಕಾಡುತ್ತಿರುವ ಯಕ್ಷಪ್ರಶ್ನೆ.
-ಭಾಸ್ಕರ ಕೆ., ಕುಂಟಪದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.