ಅಮೃತವಾಗಲಿ ಗ್ರಾಮಗಳ ದತ್ತು ಯೋಜನೆ
Team Udayavani, Aug 28, 2021, 6:35 AM IST
ದೇಶದ 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ “ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ಯ ಅನುಷ್ಠಾನಕ್ಕೆ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಂತೆ ರಾಜ್ಯದಲ್ಲಿ ಅತೀ ಬಡತನದಲ್ಲಿರುವ 1,27,369 ಕುಟುಂಬ ಗಳು ವಾಸಿಸುತ್ತಿರುವ 750 ಹಳ್ಳಿಗಳನ್ನು ಶಾಲಾಕಾಲೇಜುಗಳಲ್ಲಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳು ದತ್ತು ತೆಗೆದುಕೊಳ್ಳಲಿವೆ.
ಯೋಜನೆಯ ಅನುಷ್ಠಾನದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳೇ ಪ್ರಮುಖ ಪಾತ್ರ ವಹಿಸಲಿರುವುದರಿಂದ ಅವರಿಗೆ ಅಗತ್ಯವಾದ ತರಬೇತಿಯನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡಲಿದೆ. ಈಗಾಗಲೇ ಎನ್‌ಎಸ್‌ಎಸ್ ಘಟಕಗಳು ರಾಜ್ಯದಲ್ಲಿ ಕೋವಿಡ್ ಸಹಿತ ವಿವಿಧ ಸಂದರ್ಭಗಳಲ್ಲಿ ಸೇವಾ ಕಾರ್ಯ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇದರ ಅನುಭವದ ಆಧಾರದಲ್ಲಿ “ಅಮೃತ ಸಮುದಾಯ ಅಭಿವೃದ್ಧಿ ಯೋಜನೆ’ ಯ ಜಾರಿಯಲ್ಲಿ ಈ ತಂಡಗಳನ್ನೇ ಬಳಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಯೋಜನೆಯಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗಳಡಿಯಲ್ಲಿ ಬಡವರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಯೋಜನೆಗಳನ್ನು ಈ ಗ್ರಾಮಗಳಲ್ಲಿ ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲು ಸರಕಾರ ನಿರ್ಧರಿಸಿದೆ. ರಾಜ್ಯದ ಆಯ್ದ ಶಾಲಾ-ಕಾಲೇಜುಗಳ ಒಟ್ಟು 750 ಎನ್‌ಎಸ್‌ಎಸ್ ತಂಡಗಳು 750 ಗ್ರಾಮಗಳನ್ನು ದತ್ತು ತೆಗೆದುಕೊಂಡು ಈ ಗ್ರಾಮಗಳನ್ನು ಬಡತನ ಮುಕ್ತಗೊಳಿಸಲು ಶ್ರಮಿಸಲಿವೆ. ಈ ಗ್ರಾಮಗಳಲ್ಲಿನ ಅತೀ ಬಡ ಕುಟುಂಬಗಳ ಮನೆಮನೆಗೆ ತೆರಳಿ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಬಡತನ ನಿರ್ಮೂಲನೆಗಾಗಿ ಹೊಸ ಯೋಜನೆಯನ್ನು ಘೋಷಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಬದಲಾಗಿ ಸರಕಾರದ ವಿವಿಧ ಇಲಾಖೆಗಳಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಹಲವಾರು ಬಡವರ ಪರ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಈ ಚಿಂತನೆ ನಿಜಕ್ಕೂ ವಿಶಿಷ್ಟ ಮಾತ್ರವಲ್ಲದೆ ವಿನೂತನ ಪರಿಕಲ್ಪನೆಯಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಸರಕಾರದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬೀಳಲಾರದು ಮಾತ್ರವಲ್ಲದೆ ವಿವಿಧ ಜನಕಲ್ಯಾಣ ಯೋಜನೆಗಳಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬಿಡುಗಡೆಯಾಗುವ ಅನುದಾನ ನೈಜ ಫಲಾನುಭವಿಗಳಿಗೆ ತಲುಪಿ ಸದ್ಬಳಕೆಯಾಗುವ ಜತೆಯಲ್ಲಿ ಸರಕಾರ ಉದ್ದೇಶಿತ ಗುರಿಯೂ ಈಡೇರಿ ದಂತಾಗಲಿದೆ. ಅಷ್ಟೇ ಅಲ್ಲದೆ ಆಡಳಿತ ವ್ಯವಸ್ಥೆಯ ಲೋಪದೋಷ ಮತ್ತು ನಿರ್ಲಕ್ಷ್ಯದಿಂದಾಗಿ ಯೋಜನೆಗೆ ಬಿಡುಗಡೆಯಾಗುವ ಹಣ ಸರಕಾರಕ್ಕೆ ವಾಪಸಾಗುವಂಥ ಪ್ರಸಂಗಗಳೂ ತಪ್ಪಲಿವೆ.
ಒಟ್ಟಾರೆ ಯೋಜನೆಯ ಚಿಂತನೆ, ಉದ್ದೇಶ ಶ್ಲಾಘನೀಯವಾಗಿದ್ದು ಸರಕಾರದ ಬಹುತೇಕ ಯೋಜನೆಗಳಂತೆ ಈ ಯೋಜನೆಯೂ ಅನುಷ್ಠಾನ ಹಂತದಲ್ಲಿ ಎಡವದಂತೆ ಜಾಗ್ರತೆ ವಹಿಸುವ ಹೊಣೆಗಾರಿಕೆ ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.