ಕೇಂದ್ರದಿಂದ ಅನುದಾನ ಅನ್ಯಾಯವಾಗಿಲ್ಲ
Team Udayavani, Feb 18, 2020, 3:10 AM IST
ಬೆಂಗಳೂರು: ಅನುದಾನದ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವೂ ಆಗಿಲ್ಲ, ತಾರತಮ್ಯವನ್ನೂ ಮಾಡಿಲ್ಲ. 15ನೇ ಹಣಕಾಸು ಆಯೋಗದಡಿ ಕರ್ನಾಟಕಕ್ಕೆ 2.03 ಲಕ್ಷ ಕೋಟಿ ರೂ.ಹಣ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
“ಜನಪರ ಮುಂಗಡ ಪತ್ರ’ ಕುರಿತು ಸೋಮವಾರ ಕೈಗಾರಿಕೋದ್ಯಮಿಗಳ ಜೊತೆಗೆ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕಾಸು ಆಯೋಗ, ಜಿಎಸ್‌ಟಿ ನಷ್ಟ ಪರಿಹಾರ, ನರೇಗಾ ಬಾಕಿ, ಸಬ್ ಅರ್ಬನ್ ರೈಲು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾ ಯ ಅಥವಾ ತಾರತಮ್ಯ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 72,209 ಕೋಟಿ ರೂ.ಹಂಚಿಕೆಯಾಗಿತ್ತು. 15ನೇ ಹಣಕಾಸು ಆಯೋಗದಲ್ಲಿ 2.03 ಲಕ್ಷ ಕೋಟಿ ಸಿಗಲಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇ.178ರಷ್ಟು ಹೆಚ್ಚಾಗಿದೆ ಎಂದು ಸಚಿವರ ಮಾತಿಗೆ ಸಮರ್ಥನೆಯಾಗಿ ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ಅಂಕಿ-ಅಂಶಗಳನ್ನು ನೀಡಿದರು.
ಜಿಎಸ್‌ಟಿ ನಷ್ಟ ಪರಿಹಾರ ಬಿಡುಗಡೆಯಲ್ಲಿ ಕರ್ನಾಟಕಕ್ಕೆ ಮಾತ್ರ ವಿಳಂಬವಾಗಿಲ್ಲ. ಇದೂ ಎಲ್ಲಾ ರಾಜ್ಯಗಳ ಸಮಸ್ಯೆಯಾಗಿದೆ. ಜಿಎಸ್‌ಟಿ ಸಂಗ್ರಹ ಕುಂಠಿತಗೊಂಡಿದ್ದರಿಂದ ಪರಿಹಾರದ ಪಾಲು ವಿತರಣೆ ಮಾಡಲು ಸಾಕಷ್ಟು ಹಣ ಇರಲಿಲ್ಲ. ಕಳೆದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು.
ಉಳಿದ ಹಣವನ್ನು ಎರಡು ಕಂತುಗಳಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ಕಳೆದ ವಾರ 7,300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನರೇಗಾ ಯೋಜನೆಯ ವೇತನ ಬಾಬ್ತಿನಲ್ಲಿ ಕರ್ನಾಟಕಕ್ಕೆ ಕೇಂದ್ರದ ಯಾವುದೇ ಬಾಕಿ ಇಲ್ಲ ಎಂದು ಸಚಿವರ ಉಪಸ್ಥಿತಿಯಲ್ಲಿ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಸಬ್ ಅರ್ಬನ್ ಯೋಜನೆಗೆ ಬದ್ಧ: ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಬಜೆಟ್‌ನಲ್ಲಿ 1 ಕೋಟಿ ರೂ. ಮೀಸಲಿಟ್ಟಿರುವುದು ಬಜೆಟ್‌ನ ತಾಂತ್ರಿಕ ವಿಷಯವಷ್ಟೇ. 18,600 ಕೋಟಿ ರೂ.ವೆಚ್ಚದ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ತಲಾ ಶೇ.20 ಪಾಲು ಭರಿಸಬೇಕಾಗುತ್ತದೆ.
ಅದರಂತೆ ಕೇಂದ್ರದ ಪಾಲು 20,800 ಕೋಟಿ ರೂ.ಆಗಲಿದೆ. ಕೇಂದ್ರದ ಪಾಲನ್ನು ಕೊಡುವುದರ ಜೊತೆಗೆ ಶೇ.60ರ ಬಾಹ್ಯ ಸಾಲಗಳ ಖಾತರಿಯನ್ನೂ ಕೇಂದ್ರ ಸರ್ಕಾರ ನೀಡಲಿದೆ. ಕೇಂದ್ರ ಸಚಿವ ಸಂಪುಟದಿಂದ ಅನುಮೋದ ನೆಗೊಂಡು ಸಂಸತ್ತಿನ ಒಪ್ಪಿಗೆ ಪಡೆದಿರುವ ಯೋಜನೆಗೆ ಬಜೆಟ್‌ನಲ್ಲಿ ಕೊಟ್ಟ ಭರವಸೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಸಹಕಾರಿ ಬ್ಯಾಂಕುಗಳು ಕಾಯ್ದೆ ವ್ಯಾಪ್ತಿಗೆ: ಬ್ಯಾಂಕುಗಳೆಂದು ಕರೆಸಿಕೊಳ್ಳುವ ಸಹಕಾರಿ ಸಂಘಗಳು “ಬ್ಯಾಂಕುಗಳ ನಿಯಂತ್ರಣ (ತಿದ್ದುಪಡಿ) ಕಾಯ್ದೆ ವ್ಯಾಪ್ತಿಗೆ ಬರಲಿವೆ. ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ ಏನೇ ಇರಲಿ, ಇವುಗಳಿಗೆಲ್ಲ ಪರಿಹಾರ ಸೂಚಿಸುವ ವಾಸ್ತವಿಕ ಬಜೆಟ್ ಕೊಟ್ಟಿದ್ದೇವೆ. ರಫ್ತಿಗೆ ಸಾಕಷ್ಟು ಉತ್ತೇಜನ ನೀಡಲಾಗಿದೆ. ಹಿರಿಯ ನಾಗರಿಕರಿಗೆ ಈ ಬಜೆಟ್‌ನಲ್ಲಿ 9,500 ಕೋಟಿ ರೂ. ಮೀಸಲಿಡಲಾಗಿದೆ.
ಠೇವಣಿಯ ವಿಮೆ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಟೆಲಿಕಾಂ ಕಂಪನಿಗಳ ದರ ಸಂಘರ್ಷದ ವಿಚಾರದಲ್ಲಿ ಕೋರ್ಟ್ ನಿರ್ದೇಶನ, ಟೆಲಿಕಾಂ ಸಚಿವಾಲಯದ ಪ್ರಸ್ತಾವನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.