ಮದುವೆ ಆಮಂತ್ರಣ ಪತ್ರದಲ್ಲಿ ಜನೌಷಧ ಮಾಹಿತಿ ನೀಡಿದ ವರ
ವಿಶಿಷ್ಟ ಆಹ್ವಾನ ಪತ್ರಿಕೆ ರೂಪಿಸಿದ ಸಾಫ್ಟ್ವೇರ್ ಉದ್ಯೋಗಿ ಬಳ್ಪ ಗ್ರಾಮದ ಪ್ರಸನ್ನ
Team Udayavani, Oct 30, 2019, 4:52 AM IST
ಪ್ರಸನ್ನ ಅವರ ಮದುವೆ ಆಮಂತ್ರಣ ಪತ್ರದಲ್ಲಿರುವ ಜನೌಷಧ ಕುರಿತಾದ ಮಾಹಿತಿ.
ಸುಬ್ರಹ್ಮಣ್ಯ: ಮದುವೆ ಪತ್ರ ಬರೀ ಪತ್ರವಲ್ಲ. ಅದೊಂದು ಜೀವನದ ಮಧುರ ಕ್ಷಣದ ನೆನಪಿನ ಹೊತ್ತಿಗೆ. ಅದರಲ್ಲಿ ನವೀನ ಮಾದರಿಯ ಆಮಂತ್ರಣ ಪತ್ರ ಮಾಡಿದರೆ ಅದರ ಸೊಗಸು ಬೇರೆಯೇ ಆಗಿದೆ. ಸಂಸದರ ಆದರ್ಶ ಗ್ರಾಮದ ವರನೋರ್ವ ತನ್ನ ಮದುವೆ ಆಮಂತ್ರಣದಲ್ಲಿ ಜನೌಷಧ ಯೋಜನೆಯ ಮಾಹಿತಿ ಅಚ್ಚು ಹಾಕಿಸಿಕೊಂಡು ವಿನೂತನವಾಗಿ ಮುದ್ರಿಸಿ ಅಮೂಲ್ಯ ಮಾಹಿತಿ ಮೂಲಕ ಬಂಧುಗಳು, ಸ್ನೇಹಿತರು, ಸಾರ್ವಜನಿಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಕಡಬ ತಾಲೂಕಿನ ಬಳ್ಪ ಗ್ರಾಮದ ಪಾನ ಪೈಲಾಡಿ ದಿ| ರಾಧಾಕೃಷ್ಣ ಗೌಡರ ಪುತ್ರ ಪ್ರಸನ್ನ ಅವರ ವಿವಾಹ ಪುತ್ತೂರು ತಾ| ಹಿರೆಬಂಡಾಡಿ ಜಾಡೆಂಕಿ ಸದಾಶಿವ ಗೌಡ ಅವರ ಪುತ್ರಿ ಸೌಮ್ಯಾ ಜತೆ ನ. 4ರಂದು ಪಂಜದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಅವರು ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಅಚ್ಚು ಹಾಕಿದ್ದಾರೆ. ಮದುವೆ ಆಮಂತ್ರಣದ ಕೊನೆಯ ಪುಟದಲ್ಲಿ ಈ ಮಾಹಿತಿಗಳಿವೆ.
ಏನೆಲ್ಲ ಮಾಹಿತಿ ಇದೆ?
ಆಮಂತ್ರಣ ಪತ್ರದಲ್ಲಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಎಂದರೇನು? ಜನೌಷಧಿಯ ಮಾಹಿತಿ, ಜನೌಷಧ ಕಡಿಮೆ ಬೆಲೆಯಲ್ಲಿ ದೊರೆಯುವುದು ಹೇಗೆ. ಜನೌಷಧಿಗಳು ಸುರಕ್ಷಿತ ಮತ್ತು ಅದರ ಪರಿಣಾಮಗಳೇನು? ಜನೌಷಧವನ್ನು ಯಾರು ಮತ್ತು ಹೇಗೆ ತಿಳಿದುಕೊಳ್ಳಬಹುದು. ಜನೌಷಧ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ? ಕಂಪೆನಿ ಔಷಧ ಮತ್ತು ಜನೌಷಧಗಳಿಗಿರುವ ವ್ಯತ್ಯಾಸ ಕಂಡು ಹಿಡಿದುಕೊಳ್ಳುವ ಬಗೆ ಹೇಗೆ? ಯಾವೆಲ್ಲ ವರ್ಗದ ಔಷಧಗಳು ಇದರಲ್ಲಿ ಸಿಗುತ್ತವೆ. ಎಲ್ಲಿ ದೊರಕುತ್ತವೆ ಹೀಗೆ ಎಲ್ಲ ಸಂಕ್ಷಿಪ್ತ ಮಾಹಿತಿಗಳು ಆಮಂತ್ರಣ ಪತ್ರದಲ್ಲಿದೆ. ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ವೆಬ್‌ಸೈಟ್ ವಿಳಾಸವನ್ನು ಕೂಡ ಆಮಂತ್ರಣದಲ್ಲಿ ಅಚ್ಚು ಹಾಕಿಸಲಾಗಿದೆ.
ಹೊಸ ಪ್ರಯೋಗ
ಜೀವನದಲ್ಲಿ ನಡೆಯುವ ಬಹಳ ಮಹತ್ವದ ಘಟನೆಗಳಲ್ಲಿ ಮದುವೆಯೂ ಒಂದು. ಎರಡು ಹೃದಯಗಳ ಸಮ್ಮಿಲನದ ಶುಭ ಮುಹೂರ್ತವೇ ಮದುವೆ. ಅದಕ್ಕೆ ಅನೇಕ ಶಾಸ್ತ್ರ, ಕ್ರಮಗಳು ಇದ್ದರೂ ಅಂತಹ ಸಂಪ್ರದಾಯಗಳ ಚೌಕಟ್ಟಿನೊಳಗೆ ಇದ್ದುಕೊಂಡು ಜೀವನದಲ್ಲಿ ಈ ಮಹತ್ವದ ಘಟನೆ ಮರೆಯದಂತೆ ಅವೀಸ್ಮರಣೀಯವಾಗಿಸಬೇಕು ಎನ್ನುವ ಆಸೆ ಎಲ್ಲರಿಗೂ ಇದೆ. ಅಂತಹ ಒಂದು ಪ್ರಯತ್ನವನ್ನು ಅವರು ಇಲ್ಲಿ ನಡೆಸಿದ್ದಾರೆ. ಹೊಸ ಪ್ರಯೋಗ ಮಾಡಿದ್ದಾರೆ.
ಮಾಹಿತಿ ತಿಳಿದಿರಬೇಕು
ಆರೋಗ್ಯದ ಮಾಹಿತಿ ಎಲ್ಲರಿಗೂ ತಿಳಿದಿರಬೇಕು. ಅದೇ ಉದ್ದೇಶ ಇರಿಸಿಕೊಂಡು ಆಮಂತ್ರಣದಲ್ಲಿ ಮಾಹಿತಿ ನೀಡುವ ಪ್ರಯತ್ನ ನಡೆಸಿದ್ದೇನೆ. ಸ್ನೇಹಿತರು ಕೂಡ ತಮ್ಮ ಮದುವೆಯ ಮಧುರ ಕ್ಷಣದಲ್ಲಿ ಇಂತಹ ಪ್ರಯೋಗವನ್ನು ನಡೆಸಿದ್ದರು. ಅವರಿಂದ ಪ್ರೇರಣೆಗೊಂಡು ತಾನು ಕೂಡ ಅಂತಹದ್ದನ್ನು ಮದುವೆ ಸಂದರ್ಭ ಅಳವಡಿಸಿಕೊಂಡಿದ್ದೇನೆ.
– ಪ್ರಸನ್ನ, ವರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.