Ram Mandir: ನೆಲಮಹಡಿ ಸಿದ್ಧ; 1-2ನೇ ಮಹಡಿ ಬಾಕಿ
ಮಂದಿರ ನಿರ್ಮಾಣ ವ್ಯವಸ್ಥೆಯ ಬಹುಪಾಲು ಉಸ್ತುವಾರಿ ವಹಿಸಿಕೊಂಡಿರುವ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನವರಾದ ಗೋಪಾಲ ನಾಗರಕಟ್ಟೆ ಮಾತು
Team Udayavani, Jan 17, 2024, 12:55 AM IST
ಉಡುಪಿ: ಕಳೆದ ಮೂರು ವರ್ಷಗಳಿಂದ ರಾತ್ರಿ ಹಗಲೆನ್ನದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ನೋಡಿಕೊಳ್ಳುತ್ತಾ ಕೆತ್ತನೆ, ಕಲಾವಿದರು, ಕಾರ್ಮಿಕರು ಸಹಿತವಾಗಿ ವ್ಯವಸ್ಥೆಯ ಬಹುಪಾಲು ಉಸ್ತುವಾರಿ ವಹಿಸಿಕೊಂಡಿರುವ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನವರಾದ ಗೋಪಾಲ ನಾಗರಕಟ್ಟೆ ಅವರು ಮಂದಿರ ನಿರ್ಮಾಣದಲ್ಲಿ ಎದುರಾಗಿರುವ ಸವಾಲು ಮತ್ತು ಸಾಗಿಬಂದ ಹಾದಿಯ ಬಗ್ಗೆ “ಉದಯವಾಣಿ”ಯ ಜತೆ ಸವಿವರವಾಗಿ ಮಾತನಾಡಿದ್ದಾರೆ.
ಅಯೋಧ್ಯೆಯ ರಾಮಮಂದಿರ ಇಡೀ ದೇಶದ ಬಹುಸಂಖ್ಯಾಕರ ಕನಸು. ಇದರ ನಿರ್ಮಾಣದ ಹೊಣೆಯನ್ನು ಕನ್ನಡಿಗರೊಬ್ಬರು ಹೊತ್ತುಕೊಂಡರು ಎಂಬುದು ಇಡೀ ಕರುನಾಡಿಗೆ ಹೆಮ್ಮೆಯ ಸಂಗತಿ ಎನ್ನಿಸುವುದಿಲ್ಲವೇ?
2020ರ ಆ. 5ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ದೇಶದ ಪ್ರಮುಖ ಸಂತರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆದು ಅನಂತರ ಅಧಿಕೃತವಾಗಿ ಮಂದಿರದ ಕೆಲಸ ಆರಂಭವಾಯಿತು. ಇವತ್ತು ಹಗಲು ರಾತ್ರಿ ಅಲ್ಲಿ ಕೆಲಸ ನಡೆಯುತ್ತಿದೆ. ಇಂಥದೊಂದು ದೊಡ್ಡ ಹೊಣೆಯನ್ನು ನಿರ್ವಹಿಸುವುದು ಖುಷಿಗಿಂತ ಸೌಭಾಗ್ಯದ ಸಂಗತಿ.
ರಾಮಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿಕೊಳ್ಳಿ ಎಂಬ ಹೊಣೆ ವಹಿಸಿದಾಗ ಏನನ್ನಿಸಿತು? ಸವಾಲೆನಿಸಲಿಲ್ಲವೇ?
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲೇ ಭವ್ಯ ಮಂದಿರ ನಿರ್ಮಾಣ ಮಾಡಬೇಕು ಎಂಬ ಶತಮಾನದ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿ, ಮಂದಿರ ನಿರ್ಮಾಣ ಕಾರ್ಯದಲ್ಲಿ ನನ್ನನ್ನು ಸಂಘಟನೆಯಿಂದ ನಿಯೋಜನೆ ಮಾಡಿದಾಗ ಆ ಕ್ಷಣ ಅತ್ಯಂತ ಖುಷಿ ಕೊಟ್ಟಿತ್ತು. ನಿಜ, ಸವಾಲು ಎನಿಸಿದ್ದೂ ಹೌದು. ಆದರೆ ಆ ಮಹತ್ಕಾರ್ಯದಲ್ಲಿ ಭಾಗಿಯಾಗಲು ಸಿಕ್ಕ ಅವಕಾಶದ ಖುಷಿ ಸವಾಲನ್ನು ಒಪ್ಪಿಕೊಳ್ಳುವ ಧೈರ್ಯ ಕೊಟ್ಟಿತು. ಇದು ನನ್ನ ಸೌಭಾಗ್ಯ ಎನ್ನುವ ಖುಷಿಯಲ್ಲೇ ಇಂದಿಗೂ ಸೇವೆ ನಡೆಸುತ್ತಿದ್ದೇನೆ. ಉಳಿದಂತೆ ಎಲ್ಲದರ ಕುರಿತೂ ಟ್ರಸ್ಟ್‌ಗೆ ವರದಿ ನೀಡಬೇಕು. ಅಲ್ಲದೇ ನಿರ್ಮಾಣ ಹೊಣೆ ಹೊತ್ತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕಿತ್ತು. ಶ್ರೀರಾಮನ ಕೃಪೆ. ಯಾವುದೇ ಸಮಸ್ಯೆಯಿಲ್ಲದೆ ಎಲ್ಲವೂ ಸಾಧ್ಯವಾಗುತ್ತಿದೆ.
ನಿಮ್ಮನ್ನು ಆಯ್ಕೆ ಮಾಡಿದ್ದು ಯಾರು? ಆಯ್ಕೆ ಪ್ರಕ್ರಿಯೆ ಹೇಗಾಯಿತು?
ಅಯೋಧ್ಯೆ ರಾಮಜನ್ಮಭೂಮಿ ಹೋರಾಟದಲ್ಲಿ ವಿಹಿಂಪ ಮುಖ್ಯ ಭೂಮಿಕೆ ಇದ್ದುದರಿಂದ ಟ್ರಸ್ಟ್ ರಚನೆಯ ಬಳಿಕ ಮಂದಿರ ನಿರ್ಮಾಣದ ಸಮನ್ವಯ ವಿಷಯದಲ್ಲಿ ವಿಹಿಂಪದಿಂದ ನಿಯೋಜಿಸಲಾಗಿತ್ತು. ಇದಕ್ಕೆ ವಿಶೇಷವ ಆದ ಆಯ್ಕೆ ಪ್ರಕ್ರಿಯೆ ಏನೂ ಇರಲಿಲ್ಲ. ಟ್ರಸ್ಟ್‌ನ ಸದಸ್ಯರಿಗೆ ನಿರ್ದಿಷ್ಟ ಹೊಣೆ ನೀಡಲಾಗಿದೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ನಾನೂ ಅಷ್ಟೆ.
ನಿಮ್ಮ ಕೆಲಸ ಎಲ್ಲಿಂದ, ಹೇಗೆ ಪ್ರಾರಂಭ ಆಯಿತು?
2020ರ ಫೆಬ್ರವರಿಯಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚನೆಯಾಯಿತು. ಆ ಟ್ರಸ್ಟ್‌ನ ಎಲ್ಲ ಸದಸ್ಯರೂ ಸೇರಿದಂತೆ ಕರ್ನಾಟಕದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಟ್ರಸ್ಟಿ ಆಗಿದ್ದಾರೆ. ನಮ್ಮ ಈ ಕಾರ್ಯದಲ್ಲಿ, ವಿಶೇಷವಾಗಿ ನ್ಯಾಯಾಲಯದ ಹೋರಾಟದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ ಚಂಪತ್ ರಾಯರು ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು. ಅವರು ಈ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ. ಟ್ರಸ್ಟ್‌ನ ನಿರ್ದೇಶನಂತೆ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಅದಕ್ಕೂ ಪೂರ್ವದಲ್ಲಿ ಸಿದ್ಧತ ಸಭೆಗಳು ವಿಶೇಷವಾಗಿ ಶತಮಾನಗಳ ಕಾಲ ಮಂದಿರ ಉಳಿಯಬೇಕಿರುವುದರಿಂದ ಕಬ್ಬಿಣ ಬಳಸದೇ ನಿರ್ಮಾಣ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚಿಸಲಾಗಿತ್ತು. ಮರಳು ಮಿಶ್ರಿತ ಮಣ್ಣು. ದೇಶದ ಶ್ರೇಷ್ಠ ಎಂಜಿನಿಯರ್‌ಗಳ ಮೂಲಕ ಉತVನನ… ಹೀಗೆ ಮಂದಿರ ನಿರ್ಮಾಣಕ್ಕೆ ತಳಪಾಯ ಸಿದ್ಧಪಡಿಸುವ ಕಾರ್ಯದಿಂದ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ನಿರ್ವಹಿಸಲಾಗಿದೆ.
ನಿರ್ಮಾಣ ಹಂತದಲ್ಲಿ ಎದುರಿಸಿದ ಸವಾಲುಗಳೇನು?
ಅಗತ್ಯವಾಗಿ ತಳಪಾಯ (ಫೌಂಡೇಶನ್) ಆಗಬೇಕಿತ್ತು. ಆರಂಭದಲ್ಲಿ ಎಲ್‌ಎನ್‌ಟಿ ಸಂಸ್ಥೆಯ ಪ್ರಕಾರ ಫೈಲಿಂಗ್ ಸ್ಟೀಲ್ ಇಲ್ಲದೇ ಇರುವುದರಿಂದ ತಳಪಾಯ ಯಶಸ್ವಿಯಾಗಿರಲಿಲ್ಲ. ಆಗ ಮುಂದೇನು ಎಂಬ ಬೃಹತ್ ಸವಾಲು ಉದ್ಭವಿಸಿತ್ತು. ಆಗ ತತ್‌ಕ್ಷಣವೇ ಉತ್ಖನನ ಮಾಡಲು ದೇಶದ ತಜ್ಞ ಎಂಜಿನಿಯರ್‌ಗಳ ಸಹಾಯ ಪಡೆಯಲಾಯಿತು. ಅನಂತರ ತಜ್ಞರು ಅಧ್ಯಯನ ನಡೆಸಿ ಮಾಹಿತಿ ನೀಡಿದ ಪ್ರಕಾರ, ಅಗತ್ಯಕ್ಕೆ ತಕ್ಕಂತೆ ಅಡಿಪಾಯವನ್ನು ಮತ್ತಷ್ಟು ಭದ್ರಗೊಳಿಸಲು ಸೂಕ್ತ ಕ್ರಮಗಳಣ್ನು ಅನುಸರಿಸಿ ಮಂದಿರ ನಿರ್ಮಾಣ ಕಾರ್ಯ ಆರಂಭಿಸಿದೆವು. ಈ ಮಧ್ಯೆ ಮಂದಿರಕ್ಕೆ ರಾಜಸ್ಥಾನದ ಬನ್ಸಿ ಬಹಪೂರ್ ಕಲ್ಲುಗಳ ಅವಶ್ಯವಿತ್ತು. ಆದರೆ ಅಲ್ಲಿನ ಸರಕಾರ ಆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ನಿಷೇಧ ಹೇರಿತ್ತು. ಹೀಗಾಗಿ ಕಲ್ಲಿನ ಲಭ್ಯತೆ ಇರಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಬೇಕಾಗಿದ್ದ ಕಾರಣ ಹೊಂದಿಸುವುದು ಕಷ್ಟ ಎನಿಸತೊಡಗಿತು. ಅಕ್ರಮವಾಗಿ ಸಿಗುವ ಕಲ್ಲುಗಳನ್ನು ಬಳಸಿ ರಾಮಮಂದಿರ ನಿರ್ಮಿಸಬಾರದು ಎಂದು ನಿರ್ಧರಿಸಿದ್ದೆವು. ಆಗ ಪರಿಹಾರಕ್ಕಾಗಿ ರಾಜಸ್ಥಾನ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮನವೊಲಿಸಿದೆವು. ಮಂದಿರಕ್ಕೆ ಬೇಕಿರುವಷ್ಟು ಕಲ್ಲುಗಳನ್ನು ನೀಡುವಂತೆ ಸ್ಥಳೀಯ ರಾಜ್ಯ ಸರಕಾರ ಸಂಬಂಧಪಟ್ಟ ಇಲಾಖೆಗೆ ಸೂಚಿಸಿತು. ಬಳಿಕ ಕಲ್ಲುಗಳು ಲಭ್ಯವಾದವು.
ಅಡಿಪಾಯ ಹಾಕುವಲ್ಲಿಂದ ಹಿಡಿದು ಮಂದಿರ ನಿರ್ಮಾಣದವರೆಗೆ ಕೆಲಸಗಳನ್ನು ಹೇಗೆ ಯೋಜಿಸಲಾಗಿತ್ತು?
ಗರ್ಭಗುಡಿಯ ಕೆಳಗೆ 56 ಪದರ ಹಾಗೂ ಉಳಿದ ಭಾಗದಲ್ಲಿ 48 ಪದರಗಳ ಸ್ಟೀಲ್ ರಹಿತವಾದ ಸಿಮೆಂಟ್ ಕಾಂಕ್ರೀಟ್ ಹಾಕಿ ತಳ ಭದ್ರ ಮಾಡಲಾಗಿದೆ. ಅನಂತರ ರಿಚ್ ಕಾಂಕ್ರೀಟ್ ಹಾಕಿ ಕಟ್ಟೆ ಕಟ್ಟಲಾಗಿದೆ. ಬಳಿಕ ಕರ್ನಾಟಕದ ಗ್ರಾನೈಟ್ ಕಲ್ಲುಗಳನ್ನು ಹೆಚ್ಚಾಗಿ ಬಳಸಲಾಗಿದೆ. ಕಲ್ಲಿನ ಹಾಸುಗಳೊಂದಿಗೆ ನಾಗರ ಶೈಲಿಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಇದನ್ನು ಎಲ್ ಆ್ಯಂಡ್ ಟಿ ಸಂಸ್ಥೆ ನಿರ್ವಹಿಸುತ್ತಿದ್ದು, ಟಾಟಾ ಕನ್ಸಲ್ಟಿಂಗ್ ಸಂಸ್ಥೆ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ವಹಿಸಿದೆ. ಹೆಸರಾಂತ ವಾಸ್ತುಶಿಲ್ಪಿ ಚಂದ್ರಕಾಂತ್.ಬಿ.ಸೋಂಪುರ ಮುಖ್ಯ ಶಿಲ್ಪಿಯಾಗಿದ್ದು, ಐಐಟಿ ಚೆನ್ನೈ, ಮುಂಬಯಿ, ಗುವಹಾಟಿ, ಸಿಬಿಆರ್‌ಐ ರೂರ್ಕಿ, ಎಸ್‌ವಿಎನ್‌ಐಟಿ ಸೂರತ್ ಹಾಗೂ ಎನ್‌ಜಿಆರ್‌ಐ ಹೈದರಾಬಾದ್‌ನಿಂದ ವಿನ್ಯಾಸಕ್ಕೆ ಸಂಬಂಧಿಸಿ ಸಲಹೆ ನೀಡಿವೆ.
ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ನಿರ್ವಹಣೆ ಹೊಣೆಯನ್ನೂ ನೀವೇ ನಿಭಾಯಿಸಿದಿರಾ? ಹೇಗೆ?
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಶದ ಕೋಟ್ಯಂತರ ರಾಮ ಭಕ್ತರು ದೇಣಿಗೆ ನೀಡಿದ್ದಾರೆ. ಜತೆಗೆ ನಿರ್ಮಾಣ ಕಾರ್ಯದಲ್ಲಿ ಎಲ್ಲ ರಾಜ್ಯದಿಂದಲೂ ಕಾರ್ಮಿಕರು, ಸ್ವಯಂ ಸೇವಕರು ತೊಡಗಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂಲಕವೇ ನಿರ್ವಹಿಸಲಾಗುತ್ತಿದೆ. ಹಣಕಾಸಿನ ನಿರ್ವಹಣೆ ಶೇ.100 ಪಾರದರ್ಶಕ. ಈ ಬಗ್ಗೆ ಯಾರಿಗೇ ಏನೇ ಸಂಶಯಗಳಿದ್ದರೂ ಮುಕ್ತವಾಗಿ ಕೇಳಬಹುದು. ಅದಕ್ಕೆ ಎಲ್ಲ ದಾಖಲೆ ಒದಗಿಸುತ್ತೇವೆ. ಅಲ್ಲದೆ ಎಲ್ಲ ಬಗೆಯ ತೆರಿಗೆಯನ್ನೂ ಪಾವತಿಸುತ್ತಿದ್ದೇವೆ. ಇಲ್ಲಿನ ಎಲ್ಲ ವ್ಯವಹಾರಗಳು ಬ್ಯಾಂಕ್ ಖಾತೆಯ ಮೂಲಕವೇ ನಡೆಯುತ್ತಿದ್ದು, ನಗದು ವಹಿವಾಟು ಇಲ್ಲ. ಪ್ರತೀ ಖರ್ಚನ್ನೂ ಅಳೆದು ತೂಗಿಯೆ ನಿರ್ಧರಿಸುತ್ತಿದ್ದೇವೆ. ಇದು ಜನರ, ದೇವರ ದುಡ್ಡು. ಶ್ರೀರಾಮ ಮಂದಿರ ಖಾಸಗಿ ಸ್ವತ್ತಲ್ಲ ಎಂಬ ಸ್ಪಷ್ಟತೆ ನಮಗಿದೆ.
ಅಯೋಧ್ಯೆಯಲ್ಲಿ ಭಕ್ತರಿಗೆ ಮೂಲ ಸೌಕರ್ಯ ಹೇಗಿರಲಿದೆ?
ಇಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಸರಕಾರದ್ದೇ ಆಗಿರುತ್ತದೆ. ಟ್ರಸ್ಟ್‌ನ ಮೂಲಕ ಜನರಿಗೆ ಅನುಕೂಲವಾಗುವ ಕೆಲಸ ಮಾಡಲಿದ್ದೇವೆ. ಭಕ್ತರಿಗೆ ಲಗೇಜ್ ಇಡಲು ವ್ಯವಸ್ಥೆ, ಚಪ್ಪಲಿ ಇಡಲು ವ್ಯವಸ್ಥೆ, ಉಚಿತ ದರ್ಶನ ಹಾಗೂ ಶುಲ್ಕವಿಲ್ಲದೇ ಆರತಿ ಬೆಳಗಲು ವ್ಯವಸ್ಥೆ ಮಾಡಲಾಗುವುದು. ನಿಶುಲ್ಕವಾಗಿ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು. ವಸತಿ ವ್ಯವಸ್ಥೆಗೆ ಟ್ರಸ್ಟ್ ಅಧೀನದಲ್ಲಿ ಜಾಗ ಇರಲಿಲ್ಲ. ಈಗ ಸ್ವಲ್ಪ ಜಾಗ ಖರೀದಿಸಿದ್ದೇವೆ. ಹಂತ ಹಂತವಾಗಿ ವಸತಿ ವ್ಯವಸ್ಥೆ ಕಲ್ಪಿಸುತ್ತೇವೆ.
ರಾಮಮಂದಿರಕ್ಕೆ ಮುನ್ನ ಅಯೋಧ್ಯೆ ಹೇಗಿತ್ತು? ಈಗ ಹೇಗಾಗಿದೆ?
ಮೂರು ವರ್ಷದ ಹಿಂದಿನವರೆಗೂ ಅಯೋಧ್ಯೆ ಒಂದು ಸಾಮಾನ್ಯ ಊರಿನಂತಿತ್ತು. ಇಲ್ಲಿಗೆ ಬರುವ ಯಾತ್ರಾರ್ಥಿಗಳೂ ಕಡಿಮೆ ಸಂಖ್ಯೆಯಲ್ಲಿದ್ದರು. ರಾಮಜನ್ಮಭೂಮಿ ಆಂದೋಲನ ಆಗುವ ಮೊದಲು ಯಾತ್ರಾರ್ಥಿಗಳ ಸಂಖ್ಯೆ ಇನ್ನೂ ಕಡಿಮೆಯಿತ್ತು. ನ್ಯಾಯಾಲಯದ ನಿರ್ಣಯ ಬಂದ ಬಳಿಕ ಬರುವವರ ಸಂಖ್ಯೆ ಹಂತ ಹಂತವಾಗಿ ಏರಿತು. ಈಗ ಸಾವಿರಾರು ಮಂದಿ ಬರತೊಡಗಿದ್ದಾರೆ. ಇದರಿಂದ ಸ್ಥಳೀಯ ಆರ್ಥಿಕತೆಯೂ ಬೆಳೆದಿದೆ. ಆನಂದದ ವಾತಾವರಣ ನಿರ್ಮಾಣವಾಗಿದೆ. ಅಯೋಧ್ಯೆ ಸಮೃದ್ಧಿಯಿಂದ ನಳನಳಿಸತೊಡಗಿದೆ.
ಅಯೋಧ್ಯೆ ಇನ್ನು ಜಾಗತಿಕ ಪ್ರವಾಸಿ ತಾಣ ಎನಿಸಿಕೊಳ್ಳಲಿದೆಯೇ?
ಖಂಡಿತಾ. ಆದರೆ ಪ್ರಮುಖವಾಗಿ ಧಾರ್ಮಿಕ ಶ್ರದ್ಧಾಸ್ಥಾನವಾಗಿ ಉಳಿಯಲಿದೆ. ಜತೆಗೆ ಜಾಗತಿಕ ಪ್ರವಾಸಿ ತಾಣ ಸಹ. ಸದ್ಯ ನಿತ್ಯವೂ 20 ರಿಂದ 25 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರಾಣ ಪ್ರತಿಷ್ಠೆಯ ಅನಂತರ ಈ ಸಂಖ್ಯೆ ಲಕ್ಷಕ್ಕೆ ಏರುವ ನಿರೀಕ್ಷೆಯಿದೆ. ನಾವು ಬಂದವರಿಗೆಲ್ಲ ಶ್ರೀ ರಾಮ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಸ್ವತ್ಛತೆಗೆ ಸಂಬಂಧಿಸಿದಂತೆ ದೇವಸ್ಥಾನ ಪ್ರದೇಶವನ್ನು ಟ್ರಸ್ಟ್ ವತಿಯಿಂದ ನಿರ್ವಹಿಸಲಾಗುತ್ತದೆ. ಉಳಿದಂತೆ ಎಲ್ಲವೂ ಇಲ್ಲಿನ ಸ್ಥಳೀಯಾಡಳಿತ/ ಸರಕಾರ ಗಮನಿಸಲಿದೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರು, ಭಕ್ತರು ಹೆಚ್ಚಾಗುತ್ತಿರುವುದರಿಂದ ಜಾಗತಿಕ ಪ್ರವಾಸಿ ತಾಣವಾಗಿ ಬೆಳೆಯಲಿದೆ.
ಮೂರು ವರ್ಷಗಳಲ್ಲಿ ನೀವು ಅನುಭವಿಸಿದ ಅತ್ಯಂತ ಸ್ಮರಣೀಯ ಎನಿಸುವಂಥ ವಿದ್ಯಮಾನ ಯಾವುದು?
ದೇಶದಲ್ಲಿ ರಾಮ ದೇವರ ಬಗ್ಗೆ ಇದ್ದ ಶ್ರದ್ಧೆ ಎಂಥದ್ದು ಎಂಬುದು ಈ ಮೂರು ವರ್ಷದಲ್ಲಿ ತಿಳಿದಿದೆ. ದೇವರ ಮೇಲೆ ಜನರಿಗೆ ಇರುವ ಶ್ರದ್ಧೆ ಕಣ್ಣಿಗೆ ಕಾಣುತ್ತಿದೆ. ನಾನು ಇಲ್ಲಿ ಸೇವೆ ಮಾಡುತ್ತಿದ್ದೇನೆ. ಹೀಗಾಗಿಯೇ ಜನರು ಅತೀವ ಗೌರವ ನೀಡುತ್ತಿದ್ದಾರೆ. ಇಲ್ಲಿನ ಒಂದೊಂದು ದಿನದ ಅನುಭವವೂ ವರ್ಣಿಸಲು ಸಾಧ್ಯವಾಗದ್ದು.
ರಾಮಮಂದಿರ ನಿರ್ಮಾಣದ ಉಸ್ತುವಾರಿ ಮುಗಿದ ಬಳಿಕ ಏನು ಮಾಡಬೇಕೆಂದು ಇದ್ದೀರಿ?
ವಿಶ್ವ ಹಿಂದೂ ಪರಿಷತ್‌ನಿಂದ ನಿಯೋಜಿಸಿದ್ದು, ಟ್ರಸ್ಟ್‌ನ ಸೂಚನೆಯಂತೆ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆ ಸಂಘಟನೆಯ ಸೂಚನೆಯಂತೆ ಕಾರ್ಯ ಮುಂದುವರಿಯಲಿದೆ. ಈಗಂತೂ ಮಂದಿರ ನಿರ್ಮಾಣ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲಾಗಿದೆ. ಮುಂದಿನದು ಯೋಚಿಸಿಲ್ಲ.
ರಾಮಮಂದಿರ ನಿರ್ಮಾಣ ಕಾರ್ಯ ಮುಕ್ತಾಯ ಆಗಿದೆಯಾ? ಅಥವಾ ಇನ್ನೂ ಏನಾದರೂ ಬಾಕಿ ಇದೆಯಾ?
ನೆಲ ಮಹಡಿಯ ಎಲ್ಲ ವಿಭಾಗಗಳೂ ಪೂರ್ಣಗೊಂಡಿವೆ. ಮೊದಲ ಮಹಡಿಯಲ್ಲಿ ಕಲ್ಲಿನ ಕೆತ್ತನೆ ಪೂರ್ಣಗೊಂಡಿದೆ. ಎರಡನೇ ಮಹಡಿ ಕಾರ್ಯ ಇನ್ನಷ್ಟು ಆಗಬೇಕಿದೆ. ಪ್ರಾಕಾರದ ಕಾರ್ಯಗಳು ಕೈಗೊಳ್ಳಬೇಕು. ಪ್ರಾಣಪ್ರತಿಷ್ಠೆಗೆ ಬೇಕಿರುವ ಎಲ್ಲ ಕೆಲಸ ಪೂರ್ಣಗೊಂಡಿದೆ. ಮಂದಿರ ಪೂರ್ಣಪ್ರಮಾಣದಲ್ಲಿ 2025ರ ಡಿಸೆಂಬರ್ ಅಂತ್ಯಕ್ಕೆ ನಿರ್ಮಾಣವಾಗಲಿದೆ.
ಶಿಲ್ಪಿಗಳು, ತಜ್ಞರು, ತಂತ್ರಜ್ಞರು ಸೇರಿದಂತೆ ಇಡೀ ರಾಮ ಮಂದಿರ ನಿರ್ಮಾಣದಲ್ಲಿ ಕರ್ನಾಟಕದವರ ಯೋಗದಾನವೇನು?
ದೇಶದ ಎಲ್ಲ ಭಾಗದಿಂದಲೂ ಕಾರ್ಮಿಕರು ಇದರಲ್ಲಿ ತೊಡಗಿಸಿಕೊಂಡಿದ್ದು, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶದವರು ಕೊಂಚ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕದಿಂದಲೂ ಸಾಕಷ್ಟು ಜನರಿದ್ದಾರೆ. ಕೆಲವರು ವೇತನ ಪಡೆಯದೇ ಸೇವೆ ಮಾಡುತ್ತಿದ್ದಾರೆ.ಇದಲ್ಲದೇ ಗ್ರಾನೈಟ್‌ಗಳನ್ನು ಕರ್ನಾಟಕದಿಂದ ತರಲಾಗಿದೆ. ಅದನ್ನು ಅಳವಡಿಸಿದವರೂ ಕರ್ನಾಟಕದವರೇ. ಬನ್ಸಿ ಬಹಪೂರ್‌ಕಲ್ಲು ಅಳವಡಿಸುವ ಕೆಲಸ ಮಾಡುತ್ತಿರುವ ಇಬ್ಬರು ಗುತ್ತಿಗೆದಾರರು ಕರ್ನಾಟಕದವರೇ. ವಿದ್ಯುತ್ ದೀಪಗಳ ವ್ಯವಸ್ಥೆಯೂ ಕರ್ನಾಟಕದವರದ್ದೇ. ನಮ್ಮ ಜತೆಗೆ ಕೆಲಸ ಮಾಡುತ್ತಿರುವ ಒಬ್ಬರು ಎಂಜಿನಿಯರ್, ಇಬ್ಬರು ನಿವೃತ್ತ ಎಂಜಿನಿಯರ್, ಇನ್ನೊಬ್ಬ ಕಾರ್ಯಕರ್ತ, ಇನ್ನೊಬ್ಬರು ಅಕೌಂಟೆಂಟ್ ಸಹ ಕನ್ನಡಿಗರು. ಕಲ್ಲಿನ ಕೆತ್ತನೆಯಲ್ಲಿ ಮೈಸೂರಿನ ಯೋಗಿರಾಜ ಹಾಗೂ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ದೇವಸ್ಥಾನದ ಅರ್ಚಕ ಪರಂಪರೆಯ ಗಣೇಶ್ ಭಟ್ ಇದ್ದಾರೆ. ಮಂದಿರ ನಿರ್ಮಿಸುತ್ತಿರುವ ನಿರ್ಮಾಣ ಕಂಪೆನಿಯಲ್ಲೂ ಕನ್ನಡಿಗರಿದ್ದಾರೆ.
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.