ಹಾಜಿ ಅಬ್ದುಲ್ಲಾರ ದೈವೀಶಕ್ತಿಯ ಇನ್ನೊಂದು ಮುಖ
Team Udayavani, Aug 7, 2021, 6:50 AM IST
ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರೆಂದಾಕ್ಷಣ ಶ್ರೀಮಂತಿಕೆ, ಅದಕ್ಕೆ ತಕ್ಕಂತೆ ದಾನ ಬುದ್ಧಿ, ಮತಧರ್ಮ ಗಳಲ್ಲಿ ಸೌಮನಸ್ಯ, ಸಾಮಾಜಿಕ ಜೀವನದಲ್ಲಿ ಸಮನ್ವಯ ಹೀಗೆ ಹಲವು ಉದಾತ್ತ ಸಂಗತಿಗಳು ಕಣ್ಣೆದುರು ಬರುತ್ತವೆ. ಇಷ್ಟೆಲ್ಲ ಸಾತ್ವಿಕ ಗುಣಗಳಿದ್ದರೆ ದೈವಿಕ ಶಕ್ತಿ ಉದ್ದೀಪನ ಗೊಳ್ಳುತ್ತದೆಯೆ? ಹಾಜಿ ಅಬ್ದುಲ್ಲಾ ಸಾಹೇಬರ ಕುರಿತು ಇಂತಹ ಕಥೆಗಳೂ ಇವೆ. ಇವು ಅಂತೆಕಂತೆಯಾದರೆ “ದಂತಕಥೆ’ ಎನ್ನಬಹುದಿತ್ತು, ಇದಕ್ಕೆ ಸಾಕ್ಷಿ ಈಗಲೂ ಇದ್ದಾರೆ. 1882ರಲ್ಲಿ ಜನಿಸಿದ ಅಬ್ದುಲ್ಲಾ 1935ರ ಆಗಸ್ಟ್ 12ರಂದು 53ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ದರು. ಇವರ ಪುಣ್ಯತಿಥಿ ಸಂದರ್ಭ ಇವರ ದೈವೀಶಕ್ತಿ ಎಂಥದ್ದಿರಬಹುದು? ಅಥವಾ ಈ ಮಟ್ಟಕ್ಕೇರಬೇಕಾದರೆ ವ್ಯಕ್ತಿಯಲ್ಲಿರ ಬೇಕಾದ ಅರ್ಹತೆಗಳು ಯಾವುವು ಎಂದು ಚಿಂತನೆ ನಡೆಸಬಹುದು.
1906ರಲ್ಲಿ ಕಾರ್ಪೊರೇಶನ್ ಬ್ಯಾಂಕ್‌ನ್ನು ಅಬ್ದುಲ್ಲಾ ಸಾಹೇಬರು ಸ್ಥಾಪಿಸಿದರು. ಈಗ ಆತ್ಮನಿರ್ಭರ ಭಾರತ ಮಂತ್ರ ಕೇಳಿಬರುವಾಗ ಬ್ರಿಟಿಷ್ ಆಧಿಪತ್ಯದ ಕಾಲದಲ್ಲಿ ಸ್ಥಾಪಿಸಿದ ಈ ಸ್ವದೇಶೀ ಬ್ಯಾಂಕ್ ಆತ್ಮನಿರ್ಭರ ಭಾರತ ಕಲ್ಪನೆಗೆ ಸಂವಾದಿಯಾಗಬಲ್ಲದು. ಇವರ ಮನೆಯಲ್ಲಿಯೇ ಬ್ಯಾಂಕ್‌ನ್ನು ಸ್ಥಾಪಿಸಿದ್ದರಿಂದ ಇದನ್ನು ಇಂದಿಗೂ ಸ್ಥಾಪಕರ ಶಾಖೆ ಎಂದು ಕರೆ ಯುತ್ತಾರೆ. ಈಗ ಯೂನಿಯನ್ ಬ್ಯಾಂಕ್ ಜತೆ ಕಾರ್ಪೊರೇಶನ್ ಬ್ಯಾಂಕ್‌ನ್ನು ವಿಲೀನ ಗೊಳಿಸಿದರೂ ಇವರು ವಾಸಿಸಿದ ಮನೆಯಲ್ಲಿ ಸ್ಥಾಪಿಸಿದ ಮ್ಯೂಸಿಯಂ ಹೆಸರನ್ನು ಹಾಜಿ ಅಬ್ದುಲ್ಲಾ ಮೆಮೋರಿ ಯಲ್ ಕಾರ್ಪೊರೇಶನ್ ಬ್ಯಾಂಕ್ ಹೆರಿಟೇಜ್ ಮ್ಯೂಸಿಯಂ ಅಂತಲೇ ಉಳಿಸಿಕೊಂಡಿದ್ದಾರೆ.
ಬ್ಯಾಂಕ್ ನೌಕರರು ಏನಾದರೂ ತೊಂದರೆಯಾದರೆ ಅವರ ಭಾವಚಿತ್ರದ ಬಳಿ ಹೋಗಿ ಅಥವಾ ಮನಸ್ಸಿನಲ್ಲಿ ಪ್ರಾರ್ಥಿಸಿದರೆ ಅದು ಈಡೇ ರುತ್ತಿತ್ತು ಎಂದು ಬ್ಯಾಂಕ್‌ನ ನಿವೃತ್ತ ಸಿಬಂದಿ ಎಸ್. ಪಿ. ನಾಯಕ್ (ಸುಂಕೇರಿ ಪದ್ಮನಾಭ ನಾಯಕ್) ತಮ್ಮ ಅನುಭವವನ್ನು ತೆರೆದಿಡುತ್ತಾರೆ. 1980ರಲ್ಲಿ ನಾಯಕ್ ತೀರ್ಥಹಳ್ಳಿ ಶಾಖೆಯಲ್ಲಿದ್ದರು. ಇವರಿಗೆ ವಿಜಯಪುರಕ್ಕೆ ವರ್ಗವಾಯಿತು. ವಿಜಯಪುರ ದಲ್ಲಿನ ಹವಾಮಾನ ನಾಯಕ್‌ರಿಗೆ ಹಿಡಿಸಲಿಲ್ಲ. ಅಬ್ದುಲ್ಲಾರನ್ನು ನೆನೆಸಿ ಕಣ್ಣೀರಿಟ್ಟ ಮರುದಿನವೇ ಉಡುಪಿಗೆ ವರ್ಗವಾಯಿತು. ನನ್ನಂತೆ ಅನೇಕರು ತಮ್ಮ ಸಮಸ್ಯೆಗಳನ್ನು ಅಬ್ದುಲ್ಲಾರನ್ನು ಸ್ಮರಿಸಿ ಹೇಳಿಕೊಂಡಾಗ ಪರಿಹಾರವಾಗುತ್ತಿತ್ತು ಎನ್ನುತ್ತಾರೆ ಎಸ್. ಪಿ. ನಾಯಕ್.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರಾದ ರಾಮಮೂರ್ತಿ ಅವರು 1992ರಲ್ಲಿ ಕಾರ್ಪ್ ಬ್ಯಾಂಕ್ ಅಧ್ಯಕ್ಷರಾಗಿ ಮಂಗ ಳೂರು ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವ ಮುನ್ನವೇ ಉಡುಪಿಗೆ ಬಂದು ಅಬ್ದುಲ್ಲಾರ ಪ್ರತೀಕಕ್ಕೆ ಗೌರವ ಸಲ್ಲಿಸಿದ್ದರು. ನಿವೃತ್ತಿಯಾಗುವಾಗ ಅವರಿಗೆ ಉಡುಪಿಯ ಸ್ಥಾಪಕರ ಶಾಖೆ ಆವರಣದಲ್ಲಿಯೂ ಬೀಳ್ಕೊಡುಗೆ ನಡೆ ದಿತ್ತು. 2008ರ ನ. 26-29ರಂದು ಮುಂಬಯಿ ತಾಜ್ ಹೊಟೇಲ್ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿ ವೇಳೆ ರಾಮಮೂರ್ತಿ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಆ ಘಟನೆಯಲ್ಲಿ ನೂರಾರು ಜನರು ಅಸುನೀಗಿದ್ದರು. ರಾಮಮೂರ್ತಿಯವರು ಈ ಘಟನೆಯಲ್ಲಿ ಪಾರಾ ದರು. “ನನ್ನ ಪ್ರಕಾರ ರಾಮಮೂರ್ತಿಯವರನ್ನು ಕಾಪಾಡಿದ್ದು ಅಬ್ದುಲ್ಲಾರೇ’ ಎಂದು ಎಸ್.ಪಿ.ನಾಯಕ್ ಎದೆತಟ್ಟಿ ಹೇಳುತ್ತಾರೆ.
ನಾಯಕ್ ನಿಲುಗಡೆ ಇಲ್ಲದೆ ಆವೇಶಭರಿತರಾಗಿ ಮಾತನಾಡುವಾಗ ಭಾವುಕರಂತೆ ಕಾಣುತ್ತದೆ. 41 ವರ್ಷಗಳ ಸೇವೆಯಲ್ಲಿ ಅರ್ಧಾಂಶ ಅವಧಿ ಎಂಪ್ಲಾಯೀಸ್ ಯೂನಿಯನ್‌ನ ಅಖೀಲ ಭಾರತ ಜಂಟಿ ಕಾರ್ಯದರ್ಶಿಯಾಗಿದ್ದವರು. ಹಾಜಿ ಅಬ್ದುಲ್ಲಾರ ಕೃತಿಯಲ್ಲಿ ಇದನ್ನು ದಾಖಲಿಸಿದವರು ವಿಮರ್ಶಕ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ.
“ಹಿಂದೆ ಈ ತೆರನಾಗಿ ಸಿಬಂದಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಕೇಳಿದ್ದೇನೆ. ಇತ್ತೀಚಿಗೆ ಜನರೇಶನ್ ಗ್ಯಾಪ್‌ನಿಂದ ಹಾಗೆ ನಡೆದುಕೊಳ್ಳುವವರು ಇಲ್ಲ’ ಎನ್ನುತ್ತಾರೆ ಹೆರಿಟೇಜ್ ಮ್ಯೂಸಿಯಂ ಕ್ಯುರೇಟರ್, ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಜಯಪ್ರಕಾಶ್.
ಬ್ರಿಟಿಷ್ ಅಧಿಪತ್ಯದ ಮದ್ರಾಸ್ ಪ್ರಾಂತ್ಯ ಸರಕಾರದಲ್ಲಿ ಮೂರು ಬಾರಿ ವಿವಿಧ ಕ್ಷೇತ್ರಗಳ ಶಾಸಕರಾಗಿದ್ದರೂ, ಬ್ರಿಟಿಷರಿಂದ ಬಹಾದ್ದೂರ್, ಖಾನ್ ಬಹಾದ್ದೂರ್ ಎಂಬ ಬಿರುದು ಪಡೆದುಕೊಂಡಿದ್ದರೂ ಗಾಂಧೀಜಿಯವರ ಚಳವಳಿಗೆ ಪೂರ್ಣ ಬೆಂಬಲವನ್ನಿತ್ತವರು ಮತ್ತು ಕರಾವಳಿಗೆ ಎರಡು ಬಾರಿ ಅವರನ್ನು ಸ್ವಾಗತಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದವರು ಅಬ್ದುಲ್ಲಾ.
ಶ್ರೀಕೃಷ್ಣ ದೇವರ ದರ್ಶನ ಪಡೆಯುತ್ತಿದ್ದ ಅಬ್ದುಲ್ಲಾರು ಎರಡು ಬಾರಿ ಹಜ್ ಯಾತ್ರೆ ಮಾಡಿದ್ದರಿಂದ ಸುದೀರ್ಘ ಹೆಸರಿನಲ್ಲಿ (ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಮ್ ಸಾಹೇಬ್ ಬಹಾದ್ದೂರ್) ಎರಡು ಬಾರಿ ಹಾಜಿ ವಿಶೇಷಣಗಳನ್ನು ಹೊತ್ತವರು. ದಾನದಲ್ಲಿ ಎತ್ತಿದ ಕೈ.
ಯಾರು ಪರರ ಒಳಿತಿಗಾಗಿ ತೀವ್ರ ಹಂಬಲಿಸುತ್ತಾರೋ ಅಂಥವರಲ್ಲಿ ದೈವೀ ಶಕ್ತಿ ಇರುವುದನ್ನು ಕಾಣಬಹುದು. ಇದಕ್ಕೆ ಜಾತಿಮತ ಭೇದವಿಲ್ಲ. ಇಂತಹ ವ್ಯಕ್ತಿಗಳು ಅಸುನೀಗಿದ ಅನಂತರವೂ ಇವರ ಹೆಸರಿನಲ್ಲಿ ಪ್ರಾರ್ಥಿಸಿ ದರೆ ಇಷ್ಟಾರ್ಥ ಸಿದ್ಧಿ ಆಗುವುದು ಎಂಬ ನಂಬಿಕೆ ಚಾಲ್ತಿಯಲ್ಲಿರುವುದು ಎಲ್ಲ ಧರ್ಮಗಳಲ್ಲಿ ಕಾಣುತ್ತೇವೆ. ವಿಭೂತಿಪುರುಷರು, ಕಾರಣಿಕ ಶಕ್ತಿಗಳೂ ಹಿಂದೆ ಮಾನವರಾಗಿದ್ದವರೇ.
ಇಂತಹ ವಿಷಯ ಹೇಳಿದರೆ ನಂಬುವುದು ತುಸು ಕಷ್ಟ. ಆದರೂ ಅನುಕೂಲವಾಗುತ್ತದೆ ಎಂದಾಕ್ಷಣ ಸೈದ್ಧಾಂತಿಕ ನಿಲುವನ್ನು ಮೂಲೆಗೆ ತಳ್ಳಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದಷ್ಟೇ ತತ್‌ಕ್ಷಣ ಹೊಳೆಯುವ ಬುದ್ಧಿ. “ಪ್ರಾರ್ಥಿಸುವವರು ಸಾಚಾ ಇದ್ದಾರಾ?’ ಎಂದು ಮಹಾಪುರುಷರ ಶಕ್ತಿಯೂ ಲೆಕ್ಕ ಹಾಕಬಹುದು. ಇಲ್ಲವಾದರೆ ಮಹಾಪುರುಷರು ಎಂದು ಕರೆಯುವುದಾದರೂ ಹೇಗೆ? ಮೇಲಾಗಿ ನಿಸರ್ಗಕ್ಕೂ ಒಂದು ನಿಯಮವಿದೆಯಲ್ಲ? ಪ್ರಾರ್ಥಿಸುವವರು ಸಾಚಾ ಇದ್ದಾಗ ಅನುಗ್ರಹಿಸುವವರೂ ಧಾರಾಳಿಯಾಗಬಹುದು. ದೈವೀಪುರುಷರು ಧಾರಾಳಿಯಾಗಬೇಕಾದರೆ ನಾವು ಸಾಚಾ ಆಗಬೇಕು ಅಥವಾ ನಾವು ಸಾಚಾ ಆಗುತ್ತಿದ್ದಂತೆ ದೈವೀಪುರುಷರಿಗೆ (ನಿಸರ್ಗ) ನಮ್ಮ ಸಮಸ್ಯೆ ಸ್ವಯಂ ಆಗಿ ಗೋಚರವಾಗಲೂಬಹುದು. ನಾವೇ “ಖೋಟಾ’ ಆದರೆ… ನಮಗೆ ಸಿಗಬೇಕಾದದ್ದು (ಕೋಟಾ)ಸಿಗದೆ “ಖೋತಾ’ ಆಗಬಹುದು ಎಚ್ಚರಿಕೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.