HD Kumaraswamy; ಕೈ ಮುಗಿದು ಕೇಳುತ್ತೇನೆ, ರಾಜ್ಯಪಾಲರೇ ಅಭಿಯೋಜನೆಗೆ ಅನುಮತಿ ಕೊಡಿ
ನನ್ನ ರಕ್ಷಣೆಗೆ ಹೊರಟ ಅಪಖ್ಯಾತಿ ರಾಜ್ಯಪಾಲರಿಗೆ ಬೇಡ ; ನಮಗೆ ಸರಕಾರ ಕೆಡಹುವುದೊಂದೇ ಕೆಲಸವಲ್ಲ
Team Udayavani, Aug 28, 2024, 7:05 AM IST
ಬೆಂಗಳೂರು: ನನ್ನ ವಿರುದ್ಧದ ಶ್ರೀಸಾಯಿ ಮಿನರಲ್ಸ್ ಪ್ರಕರಣಕ್ಕೆ ಸಂಬಂಧಿಸಿ ಅಭಿಯೋಜನೆಗೆ ಅನುಮತಿ ಕೊಡುವಂತೆ ರಾಜ್ಯಪಾಲರಲ್ಲಿ ಕೈಮುಗಿದು ಕೇಳುತ್ತಿದ್ದೇನೆ. ಕುಮಾರಸ್ವಾಮಿಗಾಗಲಿ, ಕೇಂದ್ರ ಸರಕಾರಕ್ಕಾಗಲಿ ಇವರ ಸರಕಾರ ಕೆಡಹುವುದೇ ಕೆಲಸವಲ್ಲ. ಅವರನ್ನವರು ಭದ್ರ ಮಾಡಿಕೊಳ್ಳಲಿ.
ಇದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮನದಾಳದ ಮಾತು. ಉದಯವಾಣಿಯ “ನೇರಾನೇರ’ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವ ಅವರು, ಮುಡಾ ಹಗರಣದಲ್ಲಿ ಸಿಎಂ ಕುಟುಂಬ ದವರು ಸರಕಾರಿ ಭೂಮಿ ಲಪ ಟಾಯಿಸಿರುವ ದಾಖಲೆಗಳು ಬೀದಿ ಬೀದಿ ಯಲ್ಲಿ ಹರಿದಾಡುತ್ತಿವೆ. ಏನೂ ತಪ್ಪು ಮಾಡಿಲ್ಲ ವೆಂದು ಸಾಧಿಸಲು ಹೊರ ಟಿರುವುದು ನೋಡಿದರೆ ಅವರು ರಾಜೀನಾಮೆ ಕೊಡುವ ನಿರೀಕ್ಷೆ ಇಲ್ಲ. ಅಂತಿಮ ವಾಗಿ ಕಾನೂನು ಹೋರಾಟ ವೊಂದೇ ಪರಿಹಾರ ಎಂದಿದ್ದಾರೆ.ತಮ್ಮ ಇಲಾಖೆಯ ಒಟ್ಟು ಸಾಧನೆ, ರಾಜ್ಯ ರಾಜಕಾರಣದ ಬಗ್ಗೆ ಎಚ್‌ಡಿಕೆ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಮುಡಾ ಹಗರಣದ ವಿರುದ್ಧ ಸದನದಲ್ಲಿ ಜಂಟಿ ಹೋರಾಟ ಮಾಡಿ ಮೈಸೂರು ಚಲೋ ಕೂಡ ಮಾಡಿದಿರಿ. ಸಾಧಿಸಿದ್ದೇನು?
ಸದನದಲ್ಲಿ ಚರ್ಚಿಸಲು ಅವಕಾಶ ನೀಡಿ, ಸಿಎಂ ಉತ್ತರ ಕೊಡಬೇಕಿತ್ತು. ಅದಾಗದೆ ಇದ್ದ ಕಾರಣ “ಮೈಸೂರು ಚಲೋ’ ನಡೆಸಬೇಕಾಯಿತು. ಅಲ್ಲಿಯೂ ಜನಾಂದೋಲನ ಸಭೆ ಹೆಸರಿನಲ್ಲಿ ವಿಷಯಾಂತರ ಮಾಡಲು ಪ್ರಯತ್ನಿಸಿದರು. ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಮುಡಾ ಹಗರಣದಲ್ಲಿ ಅವರ ಕುಟುಂಬದ ನೇರ ಪಾತ್ರವಿದೆ. ಸರಕಾರಿ ಭೂಮಿ ಲಪಟಾಯಿಸಿದ್ದಾರೆ. ಏನೂ ತಪ್ಪು ಮಾಡಿಲ್ಲವೆಂದು ಭಂಡ ಧೈರ್ಯದಲ್ಲಿ ಹೇಳುತ್ತಿದ್ದಾರೆ. ನನ್ನ ಹಿಂದೆ ಹೈಕಮಾಂಡ್ ಇದೆ, 136 ಶಾಸಕರ ರಕ್ಷಣೆ ನನಗಿದೆ ಎನ್ನುತ್ತಿದ್ದಾರೆ. ಅಂತಿಮವಾಗಿ ಕಾನೂನಿನ ವ್ಯಾಪ್ತಿಯಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕಾನೂನು ಹೋರಾಟ ಆರಂಭವಾಗಿದೆ, ನೋಡೋಣ.
ಹೇಗಾದರೂ ಮಾಡಿ ರಾಜ್ಯ ಸರಕಾರ ಬೀಳಿಸುವು ದಾಗಿ ನೀವು ಅಮಿತ್ ಶಾಗೆ ಮಾತು ಕೊಟ್ಟು ಬಂದಿದ್ದೀರಿ, ಅದಕ್ಕೆ ದೇವೇಗೌಡರ ಬೆಂಬಲವೂ ಇದೆ ಎಂಬ ಆರೋಪಗಳೂ ಇವೆಯಲ್ಲ?
ಈ ಸರಕಾರವನ್ನು ಬೀಳಿಸುವುದಾಗಿ ಅಮಿತ್ ಶಾಗೆ ನಾನು ಮಾತು ಕೊಟ್ಟು ಬಂದಿದ್ದೇನೆ ಎನ್ನುವಂತೆ ಕಾಂಗ್ರೆಸ್‌ನವರು ಮಾತನಾಡಿದ್ದಾರೆ. ನಾನೂ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಅವರಿಗೆ ಅದೇನು ಕನಸು ಬಿತ್ತೋ? ಅವರ ಗುಪ್ತಚರ ದಳ ಕೊಟ್ಟ ಮಾಹಿತಿಯೋ ಗೊತ್ತಿಲ್ಲ. ಅಮಿತ್ ಶಾ ಅವರಿಗೆ ಸರಕಾರ ಬೀಳಿಸುವುದೇ ಕೆಲಸವೇ? ಅಥವಾ ಕುಮಾರಸ್ವಾಮಿಗೆ ಚುನಾಯಿತ ಸರಕಾರ ಬೀಳಿಸುವುದೇ ಕೆಲಸವೇ? ಬೇರೆ ಕೆಲಸ ಇಲ್ಲವೇ? ನೀವು ಭದ್ರವಾಗಿದ್ದರೆ ನಿಮ್ಮನ್ಯಾರು ಕೆಡವುತ್ತಾರೆ? ನಿಮ್ಮ ದೌರ್ಬಲ್ಯಗಳನ್ನು ಮೊದಲು ಸರಿಪಡಿಸಿಕೊಳ್ಳಿ. ಅಷ್ಟಿಲ್ಲದಿದ್ದರೆ, ಶಾಸಕಾಂಗ ಸಭೆಯನ್ನೇಕೆ ಕರೆದಿರಿ? ಶಾಸಕರ ಸಂಖ್ಯೆ ಹಿಡಿದಿಟ್ಟುಕೊಳ್ಳಲು ತಾನೆ? ಅವರನ್ನು ಬಿಗಿ ಮಾಡಿಟ್ಟು ಕೊಳ್ಳಲು ಈ ರೀತಿಯ ಹೇಳಿಕೆ ಕೊಟ್ಟುಕೊಂಡು ಹೊರಟಿದ್ದಾರೆ.
ಐಎನ್‌ಡಿಐಎ ಒಕ್ಕೂಟದ ನಾಯಕರೆಲ್ಲರೂ ಸೇರಿ ರಾಷ್ಟ್ರಪತಿಗಳಿಗೂ ದೂರು ಕೊಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಬಗ್ಗೆ ಏನು ಹೇಳುವಿರಿ?
ರಾಜ್ಯಪಾಲರ ಬಳಿಗೆ ದೂರು ಬಂದಾಗ ಅಂಬೇಡ್ಕರರು ಕೊಟ್ಟ ಸಂವಿಧಾನದಡಿ ನೋಟಿಸ್ ಕೊಟ್ಟಿದ್ದಾರೆ. ಮಿಂಚಿನ ವೇಗದಲ್ಲಿ ನೋಟಿಸ್ ಕೊಟ್ಟರು ಎನ್ನುವವರು, ನೋಟಿಸ್ ಕೊಟ್ಟ ಬಳಿಕ ಕಾನೂನು ತಜ್ಞರೊಂದಿಗೆ ಚರ್ಚಿಸಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಉಲ್ಲಂ ಸದೆ ರಾಜ್ಯಪಾಲರು ಕರ್ತವ್ಯ ನಿರ್ವಹಿಸಿದ್ದನ್ನು ಏಕೆ ಹೇಳುವುದಿಲ್ಲ? ದೂರು ಬಂದಾಗ ತನಿಖೆ ನಡೆಯಬೇಕೋ ಬೇಡವೋ? ಅದಕ್ಕೆ ಅನುಮತಿ ಕೊಟ್ಟರೆ ಕೇಂದ್ರ ಸರಕಾರದ ಕೈಗೊಂಬೆ ಎನ್ನುವುದೇ? ಅವರನ್ನೇನು ಬಂಧಿಸಿ ಎಂದಿಲ್ಲವಲ್ಲ? ತನಿಖೆ ಆಗಲಿ ಎಂದೇ ಆದೇಶಿಸಿದ್ದಾರೆ. ಹಿಂದೆಲ್ಲ ಕಾಂಗ್ರೆಸ್ ಸುದೀರ್ಘ ರಾಜಕಾರಣ ಮಾಡಿಕೊಂಡು ಬಂದಾಗ ಯಾವ್ಯಾವ ರೀತಿ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಿದರೆ ಪುಟಗಟ್ಟಲೇ ಬರೆಯಬಹುದು. ಇವತ್ತು ಇವರಿಗೆ ರಾಜ್ಯಪಾಲರ ಬಗ್ಗೆ ಕೆಟ್ಟ ದೃಷ್ಟಿ ಬಿದ್ದಿದೆ. ಇವರು ಏನೇ ತೀರ್ಮಾನ ಮಾಡಿದರೂ ಅವೆಲ್ಲ ರಾಜಕೀಯ ತೀರ್ಮಾನಗಳಷ್ಟೇ. .
ನೀವೂ ಸೇರಿದಂತೆ ಬಿಜೆಪಿಯ ಮಾಜಿ ಸಚಿವರ ವಿರುದ್ಧದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡುತ್ತಿಲ್ಲ. ನಿಮ್ಮೆಲ್ಲರ ರಕ್ಷಣೆ ಆಗುತ್ತಿದೆ ಎಂಬ ದೂರೂ ಇದೆಯಲ್ಲ?
ಇಲ್ಲಿ ದ್ವೇಷದ ರಾಜಕಾರಣ ಯಾರು ಮಾಡುತ್ತಿದ್ದಾರೆಂದು ನೀವೇ ಗಮನಿಸಿ. ಬಿಜೆಪಿ-ಜೆಡಿಎಸ್ ಅವಧಿಯ ಹಗರಣಗಳನ್ನು ಬಿಡಲ್ಲ ಎಂದು ಸಿಎಂ, ಗೃಹ ಸಚಿವರು ಹೇಳುತ್ತಾರೆ. ಅದೇನೇನು ಅಕ್ರಮ ಗಳಿವೆಯೋ ಹೊರತನ್ನಿ. ನಿಷ್ಪಕ್ಷ ತನಿಖೆ ಮಾಡಿ. ಬೇಕಿದ್ದರೆ ಮುಂಚಿತವಾಗಿ ಇನ್ನೊಂದು ಪರಪ್ಪನ ಅಗ್ರಹಾರ ಕಟ್ಟಿ. ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪೆನಿಗೆ ನಾನೇನೋ ಸಹಾಯ ಮಾಡಿಬಿಟ್ಟಿದ್ದೇನೆ ಎನ್ನುವಂತೆ ಬಿಂಬಿಸಿ ಕೊಂಡು ಹೊರಟಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸುವಂತೆ 2017ರಲ್ಲೇ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಇಷ್ಟು ದಿನ ಸುಮ್ಮನಿದ್ದದ್ದೇಕೆ? ನಾನಾಗ ಸಾಮಾನ್ಯ ಶಾಸಕನಿದ್ದೆ. ಈಗ ನವೆಂಬರ್‌ನಿಂದ ಈಚೆಗೆ ಪ್ರಾಸಿಕ್ಯೂಷನ್‌ಗೆ ಕೇಳಲಾರಂಭಿ ಸಿದ್ದಾರೆ. ಸಿಎಂ ಆದವರಿಗೆ ಜ್ಞಾನ ಬೇಡವೇ? ಸರಕಾರದ ಬೊಕ್ಕಸಕ್ಕೆ ನಾನೇನು ನಷ್ಟ ಮಾಡಿದ್ದೇನೆಯೇ? ಒಂದಿಂಚು ಭೂಮಿಯನ್ನಾದರೂ ಕೊಟ್ಟಿದ್ದೇನಾ? ಇವರು ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಹೊರಟಿದ್ದಾರೆ. ಇವರು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೇ ಸಲಹೆ ಕೊಡುತ್ತಾರೆ. ದೇಶದ ನಾಗರಿಕನಾಗಿ ರಾಜ್ಯಪಾಲರಿಗೆ ಕೈಮುಗಿದು ಕೇಳುತ್ತೇನೆ, ಯಾವ ಯೋಚನೆಯನ್ನೂ ಮಾಡದೇ ಪ್ರಾಸಿಕ್ಯೂಷನ್‌ಗೆ ಕೊಡಿ. ನಾನು ಮುಕ್ತವಾಗಿದ್ದೇನೆ. ನನ್ನ ರಕ್ಷಣೆ ಮಾಡಲು ಹೊರಟ ಅಪಖ್ಯಾತಿ ಬರುವುದು ಬೇಡ.
ಮೈಸೂರು ಚಲೋಗೆ ಪ್ರೀತಂಗೌಡ ಬರಬಾರದು, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸ್ಪರ್ಧಿಸಬಾರದು ಎನ್ನುವ ನೀವು ಮಿತ್ರಪಕ್ಷವಾದ ಬಿಜೆಪಿ ಮೇಲೆ ಸವಾರಿ ಮಾಡುತ್ತಿದ್ದೀರಾ?
ನಾನು ಯಾರನ್ನೂ ಪಾದಯಾತ್ರೆಗೆ ಬರಬೇಡಿ ಎಂದಿರಲಿಲ್ಲ. ಕೆಲವು ದಿನ ಮುಂದೂಡಲು ಕೇಳಿದ್ದೆವು. ಹಾಸನದ ರಾಜಕಾ ರಣದ ಬಗ್ಗೆ ಹೆಚ್ಚು ಮಾತನಾಡಲ್ಲ. ಚನ್ನಪಟ್ಟಣದಲ್ಲಿ ಈ ಕ್ಷಣದವರೆಗೆ ಅಭ್ಯರ್ಥಿ ಬಗ್ಗೆ ಚರ್ಚೆಯೇ ಆಗಿಲ್ಲ. ಮಧ್ಯದಲ್ಲಿ ಕೆಲವರು ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ನಾವು ಗೆಲುವಿನತ್ತ ಹೋಗಲು ಇವೆಲ್ಲ ಅಡಚಣೆ ಆಗುತ್ತದೆ ಎನ್ನುವುದನ್ನು ಅರ್ಥ ಮಾಡಿ ಕೊಳ್ಳಬೇಕು. ಮಾಧ್ಯಮಗಳ ಮುಂದೆ ಹೋಗುವುದಕ್ಕಿಂತ, ಸಾರ್ವಜನಿಕವಾಗಿ ಚರ್ಚಿಸುವುದಕ್ಕಿಂತ ನಾಲ್ಕು ಗೋಡೆ ನಡುವೆ ಬಗೆಹರಿಸಬೇಕು. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ತಾತ್ಕಾಲಿಕ ವಾಗಿ ಮಾಡಿದ್ದಲ್ಲ. ಶಾಶ್ವತವಾಗಿ ಇರ ಬೇಕು ಎಂದು ಮಾಡಿದ್ದೇನೆ. ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಇದು ದೀರ್ಘಕಾಲ ಇರಬೇಕೆಂಬ ಭಾವನೆ ಇದೆ. ಸಾರ್ವಜನಿಕ ಅಪಸ್ವರ ಬೇಡ.
ಕೇಂದ್ರ ಸಚಿವರಾಗಿ ಪ್ರಧಾನಿ ಮೋದಿ ಜತೆಗಿನ ಕೆಲಸ ಹೇಗನ್ನಿಸುತ್ತಿದೆ?
ಬಹುಶಃ ಇತ್ತೀಚೆಗೆ ನಾನು ಕಂಡ ರಾಜಕಾರಣಿಗಳಲ್ಲಿ ಆಡಳಿತದ ಅನುಭವ ಇರುವ, ಅಭಿವೃದ್ಧಿ ಬಗ್ಗೆ ಅವರದ್ದೇ ಆದ ದೃಷ್ಟಿಕೋನ ಇಟ್ಟುಕೊಂಡಿರುವಂತಹ ಹಿರಿತನವನ್ನ ಪ್ರಧಾನಿ ಮೋದಿ ಅವರಲ್ಲಿ ಕಾಣಬಹುದು. ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಬಗ್ಗೆ ಕಲ್ಪನೆ ಇಟ್ಟುಕೊಂಡಿದ್ದಾರೆ. ಆತ್ಮನಿರ್ಭರ ಭಾರತ, ವಿಕಸಿತ ಭಾರತದ ಪರಿಕಲ್ಪನೆಗಳ ಮೂಲಕ 2047ಕ್ಕೆ ಸ್ವತಂತ್ರ ಬಂದು 100 ವರ್ಷಗಳನ್ನು ಪೂರೈಸುವಷ್ಟರಲ್ಲಿ ಎಲ್ಲ ರಂಗದಲ್ಲೂ ದೇಶವು ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿಸುವ ಗುರಿ ಮುಟ್ಟಿಸುವ ಹಂಬಲ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಪೂರಕ ತೀರ್ಮಾನ ಸಂಪುಟದಲ್ಲಿ ತೆಗೆದುಕೊಂಡಿದ್ದಾರೆ. ಪಿಎಂ ಕಿಸಾನ್ ಯೋಜನೆಗೆ 20 ಸಾವಿರ ಕೋಟಿ ರೂ. ಹಾಗೂ 4 ಕೋಟಿ ಮನೆಗಳ ನಿರ್ಮಾಣಕ್ಕೆ ಮೊದಲ ಸಂಪುಟ ಸಭೆಯಲ್ಲೇ ಅನುಮೋದನೆ ಕೊಟ್ಟರು. ಅವರಲ್ಲಿರುವ ಬದ್ಧತೆ ಏನೆಂಬುದನ್ನು ಇದರಲ್ಲಿ ಕಾಣಬಹುದು. ದೇಶದ ಅಭಿವೃದ್ಧಿ ವೇಗವಾಗಿ ಹೋಗಬೇಕೆಂಬುದು ಪ್ರಧಾನಿ ಮನಸ್ಸಿನಲ್ಲಿದೆ. ಆ ವೇಗಕ್ಕೆ ಅಧಿಕಾರಿಗಳಾಗಲೀ, ರಾಜ್ಯಗಳಾಗಲೀ ಹೊಂದಿಕೊಳ್ಳಬೇಕು, ಸಹಕರಿಸಬೇಕು. ಅದಾದರೆ ಬಹುಶಃ ಅವರ ಗುರಿ ಮುಟ್ಟಲು ಅವಕಾಶ ಇದೆ.
ಕೇಂದ್ರದಲ್ಲಿ ನಿಮಗೆ ಕೃಷಿ ಇಲಾಖೆ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಉಕ್ಕು ಮತ್ತು ಕೈಗಾರಿಕೆ ಇಲಾಖೆ ಸಿಕ್ಕಿದೆ. ಹೇಗನ್ನಿಸ್ತಾ ಇದೆ?
ನನಗೆ ಕೃಷಿ ಇಲಾಖೆ ಸಿಗುತ್ತದೆ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿತ್ತು. ಮೂರು ಬಾರಿ ಮಧ್ಯಪ್ರದೇಶದ ಸಿಎಂ ಆಗಿ ಕೃಷಿ ಬಗ್ಗೆ ಬದ್ಧತೆ ತೋರಿದ ಶಿವರಾಜ್‌ಸಿಂಗ್ ಚೌಹಾಣ್ ಅವರ ಅನುಭವ ಗುರುತಿಸಿ ಕೃಷಿ ಖಾತೆ ಕೊಟ್ಟಿದ್ದಾರೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಂತಹ ಹಿಂದಿಬಾಹುಳ್ಯವಿರುವ ರಾಜ್ಯಗಳಲ್ಲಿ ಕೃಷಿ ವಲಯ ಬಹಳ ಸೂಕ್ಷ್ಮವಾಗಿದೆ. ಜನಸಾಮಾನ್ಯರೊಂದಿಗೆ ಸಂವಹನ ಕೊರತೆಯಾಗಬಾರದೆಂದು ಅವರಿಗೆ ಜವಾಬ್ದಾರಿ ಕೊಡಲಾಗಿದೆ. ನನಗೆ ಕೊಟ್ಟಿರುವ ಉಕ್ಕು ಮತ್ತು ಭಾರೀ ಕೈಗಾರಿಕಾ ಇಲಾಖೆಯಲ್ಲೂ ಸಾಕಷ್ಟು ಸವಾಲುಗಳಿವೆ. ವಿದ್ಯುಚ್ಚಾಲಿತ ವಾಹನಗಳ ವಿಚಾರದಲ್ಲಿ ಆದ್ಯತೆ ಕೊಟ್ಟಿದೆ. ಉಳಿದಂತೆ ದೊಡ್ಡಮಟ್ಟದ ಹಣಕಾಸಿನ ಬೆಂಬಲವಿಲ್ಲ.
ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ, ಕೆಐಒಸಿಎಲ್, ಪುನಶ್ಚೇತನಕ್ಕೆ ಹೊರಟಾಗ ರಾಜ್ಯ ಸರಕಾರ ಅಡ್ಡಿಪಡಿಸುತ್ತಿದೆಯೇ?
ರಾಜ್ಯ ಸರಕಾರ ಹೋಗುತ್ತಿರುವ ಮಾರ್ಗ ನೋಡಿದರೆ ಅನುಮಾನವೇ ಇಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ನಮ್ಮ ಮೇಲಿರುವ ಅಸೂಯೆಯಿಂದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದೆ. ನಾನು ಕೇಂದ್ರ ಸಚಿವನಾದ ಬಳಿಕ ಮೊದಲು ಸಹಿ ಮಾಡಿದ್ದೇ ಕರ್ನಾಟಕಕ್ಕೆ ಸಂಬಂಧಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ(ಕೆಐಒಸಿಎಲ್)ಗೆ ಸಂಬಂಧಿಸಿದ ಕಡತಕ್ಕೆ. 2015-16ರಲ್ಲಿ ಇದೇ ಕಾಂಗ್ರೆಸ್ ಸರಕಾರ ದೇವದಾರ ಭಾಗದಲ್ಲಿ ಚಟುವಟಿಕೆ ನಡೆಸಲು ಅನುಮತಿಸಿತ್ತು. ಆ ಜಾಗವನ್ನು 500 ಕೋಟಿ ರೂ. ಕೊಟ್ಟು ನೋಂದಣಿ ಮಾಡಿಸಿ ಕೊಂಡಿದ್ದ ಸಂಸ್ಥೆ, ಅರಣ್ಯೀಕರಣಕ್ಕಾಗಿ 193 ಕೋಟಿ ರೂ.ಗಳನ್ನೂ ಕೊಟ್ಟಿದೆ. ನಾನೀಗ ಅದಕ್ಕೆ ಅಗತ್ಯವಾದ 1,700 ಕೊಟಿ ರೂ. ವರ್ಕಿಂಗ್ ಕ್ಯಾಪಿಟಲ್ ಕೊಡುವ ಕಡತಕ್ಕೆ ಸಹಿ ಮಾಡಿದ್ದೇನೆ. ಇದರೊಂದಿಗೆ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೂ ಕೈಹಾಕಿದ್ದೇನೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಲಾಭ ಇದೆ. 2000 ಕೋಟಿ ರೂ.ಗಳ ರಾಯಧನ ಸೇರಿದಂತೆ ಇನ್ನಿತರ ಆದಾಯ ಕಳೆದುಕೊಳ್ಳಬೇಕಾಗುತ್ತದೆ.
-ಉದಯವಾಣಿ ಸಂದರ್ಶನ: ಸಾಮಗ ಶೇಷಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.