Health: ಡಯಾಲಿಸಿಸ್ ಕೇಂದ್ರಗಳೇ ಅಸ್ವಸ್ಥ !
ಸಂಭವನೀಯ ಅವಘಡಕ್ಕೆ ಹೊಣೆ ಯಾರು? ಇಲಾಖೆ-ಸಿಬಂದಿಯ ಕಿತ್ತಾಟಕ್ಕೆ ರೋಗಿಗಳು ಕಂಗಾಲು
Team Udayavani, Dec 2, 2023, 12:44 AM IST
ಬೆಂಗಳೂರು: ಬಡ ರೋಗಿಗಳ ಹಿತದೃಷ್ಟಿಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾದ ಡಯಾಲಿಸಿಸ್ ಸೇವೆಗಳಿಗೇ ಈಗ “ಚಿಕಿತ್ಸೆ’ ಬೇಕಿದೆ. ಸರಿಯಾದ ನಿರ್ವಹಣೆ ಇಲ್ಲದೆ, ಸಕಾಲಕ್ಕೆ ಸೇವೆ ಲಭ್ಯವಾಗದೆ ರೋಗಿಗಳು ಪರದಾಡುವಂತಾಗಿದೆ. ಅನಿವಾರ್ಯವಾಗಿ ದುಬಾರಿ ದರ ತೆತ್ತು ಖಾಸಗಿ ಆಸ್ಪತ್ರೆಗಳತ್ತ ಹೆಜ್ಜೆ ಹಾಕಬೇಕಿದೆ. ಇನ್ನು ಕೆಲವರು ಜೇಬಿಗೆ ಭಾರವಾದ್ದರಿಂದ ಡಯಾಲಿಸಿಸ್‌ನಿಂದಲೇ ದೂರ ಉಳಿಯುವಂತಾಗಿದೆ.
ಇದು ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆಯ ಸ್ಥಿತಿಗತಿ. ಈ ಮಧ್ಯೆ ಡಯಾಲಿಸಿಸ್ ಕೇಂದ್ರಗಳ ಸಿಬಂದಿ ಗುರುವಾರ ಮುಷ್ಕರ ಆರಂಭಿಸಿರುವುದರಿಂದ ಸೇವೆ ಮತ್ತಷ್ಟು ಅಸ್ತವ್ಯಸ್ತಗೊಂಡಿದೆ.
ರಾಜ್ಯದ 31 ಜಿಲ್ಲೆಗಳಲ್ಲಿ 167 ಡಯಾಲಿಸಿಸ್ ಕೇಂದ್ರಗಳು ಕೆಲಸ ಮಾಡುತ್ತಿವೆ. ಸದ್ಯ ಇವುಗಳಲ್ಲಿ ಎಷ್ಟು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಪರಿಶೀಲಿಸಿದರೆ ಉತ್ತರ ಬೆರಳೆಣಿಕೆಯಷ್ಟು ಮಾತ್ರ. 2017ರಲ್ಲಿ ಪ್ರಾರಂಭಿ ಸಲಾದ ಉಚಿತ ಡಯಾಲಿಸಿಸ್ ಕೇಂದ್ರಗಳಲ್ಲಿ ವ್ಯವಸ್ಥಿತ ನಿರ್ವಹಣೆಯ ವೈಫಲ್ಯ ಕಂಡುಬಂದಿದೆ. ಮೂರು ವರ್ಷಗಳಿಂದ ಸಿಬಂದಿಯ ವೇತನ ಪಾವತಿ, ಯಂತ್ರಗಳಲ್ಲಿ ತಾಂತ್ರಿಕ ತೊಡಕುಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದರೂ ಸರಕಾರ ತಲೆಕೆಡಿಸಿಕೊಂಡಿಲ್ಲ. ಇದರಿಂದಾಗಿ ಬಡ ರೋಗಿಗಳು ಡಯಾಲಿಸಿಸ್ ಸೇವೆಯಿಂದ ವಂಚಿತರಾಗಿದ್ದಾರೆ.
ದುಬಾರಿ
ಪ್ರಸ್ತುತ ರಾಜ್ಯದಲ್ಲಿ 3,700 ರೋಗಿಗಳು ಡಯಾಲಿಸಿಸ್ ಸೇವೆಯನ್ನು ಸರಕಾರಿ ವ್ಯವಸ್ಥೆಯಲ್ಲಿ ಪಡೆಯುತ್ತಿದ್ದಾರೆ. ಇದುವರೆಗೆ ಉಚಿತವಾಗಿ ಡಯಾಲಿಸಿಸ್ ಸೇವೆ ಪಡೆಯುತ್ತಿದ್ದ ರೋಗಿಗಳು ಪ್ರಸ್ತುತ ಖಾಸಗಿ ಕೇಂದ್ರಗಳಲ್ಲಿ ಸುಮಾರು 1,500 ರೂ.ಗಳಿಂದ 2 ಸಾವಿರ ರೂ. ಪಾವತಿಸಿ ಈ ಚಿಕಿತ್ಸೆಗೆ ಒಳಗಾಗಬೇಕಾಗಿದೆ. ಆದರೆ ಅನೇಕ ರೋಗಿಗಳು ಖಾಸಗಿಯಲ್ಲಿ ಇದಕ್ಕೆ ತಗಲುವ ದುಬಾರಿ ಖರ್ಚನ್ನು ಭರಿಸಲಾಗದೆ ಮನೆಯಲ್ಲೇ ಉಳಿದು ಕಾಲನ ಕರೆಗೆ ಕಾಯುತ್ತಿದ್ದಾರೆ.
ನಿರ್ವಹಣೆಯ ವೈಫಲ್ಯಗಳು
2017ರಿಂದೀಚೆಗೆ ಡಯಾಲಿಸಿಸ್ ಕೇಂದ್ರಗಳಲ್ಲಿರುವ ಡಯಾಲಿಸಿಸ್ ಮತ್ತಿತರ ಯಂತ್ರಗಳಲ್ಲಿ ತಾಂತ್ರಿಕ ತೊಂದರೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ತಾಂತ್ರಿಕ ದೋಷಗಳು ಕಂಡುಬಂದಿರುವ ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ರೋಗಿಯನ್ನು ಕಳುಹಿಸಿದರೂ ಅಲ್ಲಿಯೂ ಪಾಳಿ ಸಿಗದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರಿಲ್ಲ, ವೇತನ ಸಿಗದ ಕಾರಣ ಸಿಬಂದಿ ಗೈರು ಹಾಜರಾಗಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹರಕೆ ಸಂದಾಯ!
ಪ್ರಸ್ತುತ ಸಿಬಂದಿ ಪ್ರತಿಭಟನೆಗೆ ಇಳಿದಿರುವ ಹಿನ್ನೆಲೆಯಲ್ಲಿ ಕೆಲವು ಕೇಂದ್ರಗಳಲ್ಲಿ ಖಾಸಗಿ ಲ್ಯಾಬ್ ತಂತ್ರಜ್ಞರಿಗೆ 2 ಸಾವಿರ ರೂ. ನೀಡಿ ಡಯಾಲಿಸಿಸ್ ಸೇವೆ ಆಯೋಜಿಸಲಾಗಿದೆ. ಒಬ್ಬ ರೋಗಿಗೆ 4 ತಾಸು ನೀಡಬೇಕಾದ ಡಯಾಲಿಸಿಸ್ ಸೇವೆಯನ್ನು ಕೇವಲ ಒಂದು ತಾಸಷ್ಟೇ ನೀಡಿ ಹರಕೆ ಸಂದಾಯ ಮಾಡುವ ಕೆಲಸವಾಗುತ್ತಿದೆ ಎನ್ನುವ ಆರೋಪಗಳೂ ರೋಗಿಗಳ ಕುಟುಂಬದಿಂದ ಕೇಳಿಬರುತ್ತಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸದ ಕೇಂದ್ರಗಳ ಬಡ ರೋಗಿಗಳು ಪರದಾಡುತ್ತಿದ್ದಾರೆ.
ಮುಷ್ಕರ ಕೈ ಬಿಡುವ ಪ್ರಶ್ನೆ ಇಲ್ಲ
ಡಯಾಲಿಸಿಸ್ ನೌಕರರಿಗೆ ಬಿಆರ್‌ಎಸ್ ಸಂಸ್ಥೆ ನೀಡ ಬೇಕಾಗಿರುವ 9 ತಿಂಗಳ ಇಎಸ್‌ಐ ಮತ್ತು ಪಿಎಫ್ ಹಾಗೂ ಕೆಎಸ್‌ಕೆಎಜಿ ಸಂಸ್ಥೆ (ಸಂಜೀವಿನಿ ಸಂಸ್ಥೆ)ಯವರು ನೀಡಬೇಕಾಗಿರುವ 20 ತಿಂಗಳ ಇಎಸ್‌ಐ ಮತ್ತು ಪಿಎಫ್ ಹಾಗೂ 2023ರ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ವೇತನ ಪಾವತಿ ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿ. 1ರಿಂದ ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್ ಕೇಂದ್ರಗಳ ಸಿಬಂದಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.
23 ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಗೆ ಜವಾಬ್ದಾರಿ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಯನ್ನು ಹಿಂದೆ ಬಿ.ಆರ್. ಶೆಟ್ಟಿ ಸಮೂಹ ಸಂಸ್ಥೆಗೆ ನೀಡಲಾಗಿತ್ತು. ಕಾರಣಾಂತರ ದಿಂದ ಜವಾಬ್ದಾರಿಯನ್ನು ಕೋಲ್ಕತಾ ಮೂಲದ ಇನ್ನೊಂದು ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಈಗಾಗಲೇ 23 ಜಿಲ್ಲೆಗಳಲ್ಲಿ ಟೆಂಡರ್ ಅವಧಿ ಮುಕ್ತಾಯ ವಾಗಿದ್ದು, ಅದರ ಜವಾಬ್ದಾರಿಯನ್ನು ಆರೋಗ್ಯ ಇಲಾಖೆ ವಹಿಸಿಕೊಂಡಿದೆ. ಇನ್ನುಳಿದ ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ನಗರ, ಶಿವಮೊಗ್ಗ, ಗದಗ, ಬಾಗಲಕೋಟೆ, ಧಾರವಾಡ ಸಹಿತ 8 ಜಿಲ್ಲೆಗಳಲ್ಲಿ ಏಜೆನ್ಸಿಯೇ ಮುನ್ನಡೆಸುತ್ತಿದೆ.
ಡಯಾಲಿಸಿಸ್ ಉದ್ಯೋಗಿಗಳ ವೇತನವನ್ನು ಆರ್ಥಿಕ ಇಲಾಖೆಯ ಅನುಮತಿ ಪಡೆದು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಸಿಬಂದಿ ತತ್‌ಕ್ಷಣವೇ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು.
– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.