Election: ಚುನಾವಣ ಅಕ್ರಮಗಳಿಗೆ ಭಾರೀ ದಂಡ
Team Udayavani, Aug 11, 2023, 11:48 PM IST
ಬ್ರಿಟಿಷರ ಕಾಲದ ಹಳೆಯ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳಿಗೆ ಬದಲಾಗಿ ಹೊಸ ಮೂರು ಮಸೂದೆಗಳನ್ನು ಮಂಡಿಸಿರುವ ಕೇಂದ್ರ ಸರಕಾರ, ಇದನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಕಳುಹಿಸಿದೆ. ಹೊಸದಾಗಿ ಬರುತ್ತಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮಸೂದೆ 2023, ಭಾರತೀಯ ನಾಗರಿಕ ಸುರಕ್ಷ ಸಂಹಿತೆ (ಬಿಎನ್‌ಎಸ್‌ಎಸ್) ಮತ್ತು ಭಾರತೀಯ ಸಾಕ್ಷ್ಯ ಮಸೂದೆ 2023ಗಳನ್ನು ಜಾರಿಗೆ ತಂದು ಈ ಮೂಲಕ ಹಿಂದಿನ ಕಾನೂನುಗಳಿಗೆ ಬದಲಾವಣೆ ತರುವುದು ಕೇಂದ್ರ ಸರಕಾರದ ಉದ್ದೇಶ. ಲೋಕಸಭೆಯಲ್ಲಿ ಈ ಮಸೂದೆಗಳನ್ನು ಮಂಡಿಸಿದ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ವಿವರಣೆಯನ್ನೂ ನೀಡಿದರು.
ಹೊಸದಿಲ್ಲಿ: ಭಾರತೀಯ ನ್ಯಾಯ ಸಂಹಿತೆಯಲ್ಲಿ ಚುನಾವಣ ಅಕ್ರಮಗಳ ಸಂಬಂಧ ಪ್ರಮುಖವಾದ ಅಂಶಗಳನ್ನು ಸೇರಿಸಲಾಗಿದೆ. ಅಂದರೆ ಈ ಮಸೂದೆಯಲ್ಲಿ ಚುನಾವಣ ಸಂಬಂಧಿತ ಅಕ್ರಮ ಹಣ ಪಾವತಿ ಪ್ರಕರಣದಲ್ಲಿ ಇದುವರೆಗೆ 500 ರೂ. ದಂಡ ವಿಧಿಸಲಾಗುತ್ತಿತ್ತು. ಇದನ್ನು 10 ಸಾವಿರ ರೂ.ಗಳಿಗೆ ಏರಿಕೆ ಮಾಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ.
ಇದುವರೆಗೆ ಭಾರತೀಯ ದಂಡ ಸಂಹಿತೆಯ 171ಎ ಯಿಂದ 171ಐವರೆಗೆ ಚುನಾ ವಣ ಅಪರಾಧಗಳು, ಅಭ್ಯರ್ಥಿಗಳು, ಚುನಾವಣ ಲಂಚದ ಬಗ್ಗೆ ವಿವರಿಸಲಾಗಿತ್ತು. ಇದನ್ನು
ಬಿಎನ್‌ಎಸ್‌ನ ಅಧ್ಯಾಯ 9ರಲ್ಲಿನ 167ರಿಂದ 175 ಸೆಕ್ಷನ್ ವರೆಗೆ ಸೇರಿಸಲಾಗಿದೆ.
ಐಪಿಸಿಯ 171ಎಚ್ ಪ್ರಕಾರ, ಅಭ್ಯರ್ಥಿಯೊಬ್ಬರು ಪ್ರಾಧಿಕಾರದ ಒಪ್ಪಿಗೆ ಇಲ್ಲದೇ ಯಾವುದೇ ರೀತಿಯ ಚುನಾವಣ ವೆಚ್ಚ ಮಾಡಿದಲ್ಲಿ ಅಂಥ ಪ್ರಕರಣಗಳಲ್ಲಿ 500 ರೂ.ವರೆಗೆ ದಂಡ ವಿಧಿಸಬಹುದಿತ್ತು. ಇದನ್ನು ಈಗ 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಜತೆಗೆ ಚುನಾವಣ ವೆಚ್ಚದ ಬಗ್ಗೆ ಲೆಕ್ಕ ಇಡದ ಅಭ್ಯರ್ಥಿಗೂ 500 ರೂ.ವರೆಗೆ ಮಾತ್ರ ದಂಡ ಹಾಕಬಹುದಿತ್ತು. ಇದನ್ನು ಈಗ 5 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.
ಸಣ್ಣ ಪುಟ್ಟ ಅಪರಾಧಗಳಿಗೆ ಸಾಮುದಾಯಿಕ ಸೇವೆ ಶಿಕ್ಷೆ: ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್)ನಲ್ಲಿ ಸಾಮುದಾಯಿಕ ಸೇವೆ ಅಥವಾ ಸಮಾಜಸೇವೆಯ ಅವಕಾಶ ಕಲ್ಪಿಸಲಾಗಿದೆ. ಅಂದರೆ ಮಾನಹಾನಿ, ಕುಡಿದು ಸಾರ್ವಜನಿಕರಿಗೆ ತೊಂದರೆ ಕೊಟ್ಟ ಪ್ರಕರಣಗಳಲ್ಲಿ, ಆರೋಪಿಗಳಿಗೆ ಸಮಾಜಸೇವೆಯ ಶಿಕ್ಷೆ ನೀಡಲಾಗುತ್ತದೆ. ಕೋರ್ಟ್‌ಗಳು, ಇಂಥವರಿಗೆ ಸಸಿ ನೆಡುವುದು, ಧಾರ್ಮಿಕ ಸ್ಥಳ, ನಿರಾಶ್ರಿತರ ಶಿಬಿರಗಳು, ಅನಾಥಾಶ್ರಮಗಳು, ಟ್ರಾಫಿಕ್ ಸಿಗ್ನಲ್ ನಿರ್ವಹಣೆಯಂಥ ಶಿಕ್ಷೆ ನೀಡಬಹುದು.
ಮಾನಹಾನಿ, ಸರಕಾರಿ ಹುದ್ದೆಯಲ್ಲಿರುವವರ ಅಕ್ರಮ ವ್ಯವಹಾರ, ಸೂಚನೆ ಹೊರತಾಗಿಯೂ ಹಾಜರಾಗದೇ ಇರುವುದು, ಆತ್ಮಹತ್ಯೆಗೆ ಯತ್ನ, ಅಧಿಕಾರ ಚಲಾವಣೆಗೆ ಅಡ್ಡಿಯಂಥ ಸಣ್ಣ ಪುಟ್ಟ ಪ್ರಕರಣಗಳಲ್ಲಿನ ಶಿಕ್ಷೆಯನ್ನೂ ಬದಲಿಸಲಾಗಿದೆ.
ಮಾನಹಾನಿ ಪ್ರಕರಣದಲ್ಲಿ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ಜೈಲು, ದಂಡ ಅಥವಾ ಸಮಾಜ ಸೇವೆ ಶಿಕ್ಷೆ ನೀಡಬಹುದು. ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಡ್ಡಿ ಪಡಿಸುವವರಿಗೆ 1 ಸಾವಿರ ರೂ. ದಂಡ ಮತ್ತು ಸಮಾಜಸೇವೆ ಶಿಕ್ಷೆ ನೀಡಬಹುದಾಗಿದೆ. ಆತ್ಮಹತ್ಯೆಗೆ ಯತ್ನ ಅಥವಾ ಯಾವುದೇ ಸರಕಾರಿ ಅಧಿಕಾರಿಯ ಸೇವೆಗೆ ಅಡ್ಡಿ ಪಡಿಸುವವರಿಗೆ ಇನ್ನು ಮುಂದೆ ಕೇವಲ ಸಮಾಜ ಸೇವೆಯ ಶಿಕ್ಷೆ ನೀಡಬಹುದು. 5 ಸಾವಿರ ರೂ. ಮೌಲ್ಯಕ್ಕಿಂತ ಕಡಿಮೆಯ ವಸ್ತುಗಳನ್ನು ಮೊದಲ ಬಾರಿಗೆ ಕಳವು ಮಾಡಿದವರು, ತಾವು ಕಳವು ಮಾಡಿದ ವಸ್ತು ಮರಳಿಸಿದರೆ ಅವರಿಗೆ ಸಾಮುದಾಯಿಕ ಸೇವೆಯ ಶಿಕ್ಷೆ ನೀಡಲು ಅವಕಾಶ ನೀಡಲಾಗಿದೆ.
ಕೇಂದ್ರದ ಪ್ರಸ್ತಾವಿತ ಮಸೂದೆಯಲ್ಲೇನಿದೆ?
1 ಈ ಮಸೂದೆಗಳಲ್ಲಿ ಪ್ರಸ್ತಾವಿತವಾಗಿರುವ ಕಾನೂನುಗಳ ಉದ್ದೇಶ ಶಿಕ್ಷೆ ನೀಡುವುದಲ್ಲ. ಬದಲಾಗಿ ನ್ಯಾಯ ಒದಗಿಸುವುದು. ಅಪರಾಧವನ್ನು ತಡೆಯುವ ಸಲುವಾಗಿ ಶಿಕ್ಷೆಯನ್ನು ನೀಡುವುದು.
2 ಇಡೀ ಪ್ರಕ್ರಿಯೆ ಅಂದರೆ ಎಫ್ಐಆರ್ ಅನ್ನು ದಾಖಲಿಸುವುದರಿಂದ ಹಿಡಿದು, ಕೇಸ್ ಡೈರಿ, ಚಾರ್ಜ್ ಶೀಟ್ ಮತ್ತು ತೀರ್ಪಿನ ಪ್ರತಿ ಪಡೆಯುವ ವರೆಗೆ ಎಲ್ಲವೂ ಡಿಜಿಟಲೀಕರಣವಾಗಿರುತ್ತವೆ.
3 ವಿಧಿವಿಜ್ಞಾನ ಅತ್ಯಂತ ಪ್ರಮುಖವಾದದ್ದು, 7 ವರ್ಷಕ್ಕಿಂತ ಗರಿಷ್ಠ ಶಿಕ್ಷೆಯಾಗುವಂಥ ಪ್ರಕರಣಗಳಲ್ಲಿ ಅಪರಾಧದ ಸ್ಥಳಕ್ಕೂ ವಿಧಿವಿಜ್ಞಾನ ತಂಡ ಹೋಗುವುದು ಕಡ್ಡಾಯ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಮೂರು ಸಂಚಾರಿ ವಿಧಿ ವಿಜ್ಞಾನ ಪ್ರಯೋಗಾಲಯಗಳು ಇರುವುದು ಕಡ್ಡಾಯ.
4 ಶೇ.90ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದು ಗುರಿ.
5 2027ರ ಒಳಗೆ ದೇಶದ ಎಲ್ಲ ಕೋರ್ಟ್‌ಗಳೂ ಕಂಪ್ಯೂಟರೀಕರಣವಾಗಿರುತ್ತವೆ. ಇದೇ ಮೊದಲ ಬಾರಿಗೆ ಇ- ಎಫ್ಐಆರ್‌ಗಳನ್ನು ದಾಖಲಿಸಲು ಅವಕಾಶ.
6 ಯಾವುದೇ ಪೊಲೀಸ್ ಠಾಣೆಯಲ್ಲಿ ಬೇಕಾದರೂ ಒಂದು ಝೀರೋ ಎಫ್ಐಆರ್ ದಾಖಲಿಸಬಹುದು. ಇದು ದಾಖಲಾದ 15 ದಿನದಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ಈ ಎಫ್ಐಆರ್ ವರ್ಗಾವಣೆ ಮಾಡಬೇಕು.
7 ಪ್ರತಿಯೊಂದು ಜಿಲ್ಲೆಯಲ್ಲಿಯೂ ಒಬ್ಬ ಪೊಲೀಸ್ ಅಧಿಕಾರಿಯನ್ನು ಬಂಧನಕ್ಕೊಳಗಾದವರ ಕುಟುಂಬಗಳ ನೆರವಿಗಾಗಿ ನೇಮಕ. ಇವರು ಈ ಕುಟುಂಬಕ್ಕೆ ಪ್ರಮಾಣಪತ್ರದಿಂದ ಹಿಡಿದು, ಇತರ ಮಾಹಿತಿಗಳನ್ನು ಆನ್‌ಲೈನ್ ಮತ್ತು ವೈಯಕ್ತಿಕವಾಗಿಯೂ ನೀಡುತ್ತಾರೆ.
8 ಲೈಂಗಿಕ ಹಿಂಸೆಯಂಥ ಪ್ರಕರಣಗಳಲ್ಲಿ ಸಂತ್ರಸ್ತರಿಂದ ವೀಡಿಯೋ ರೆಕಾರ್ಡಿಂಗ್ ಪಡೆಯುವುದು ಕಡ್ಡಾಯ.
9 ಪೊಲೀಸರು ಪ್ರತಿಯೊಂದು ಪ್ರಕರಣದ ಯಥಾ ಸ್ಥಿತಿ ವರದಿಯನ್ನು 90 ದಿನಗಳಲ್ಲಿ ನೀಡಬೇಕು.
10 7 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾಗಬಹುದಾದ ಪ್ರಕರಣಗಳ ಸಂಬಂಧ ಯಾವುದೇ ಸರಕಾರ ಪ್ರಕರಣಗಳನ್ನು ಹಿಂದಕ್ಕೆ ವಾಪಸ್ ಪಡೆಯಲು ಸಾಧ್ಯವಿಲ್ಲ. ಇಲ್ಲಿ ವಾಪಸ್ ಪಡೆಯಲೇಬೇಕಾದರೆ ಸಂತ್ರಸ್ತರೊಂದಿಗೆ ಮಾತನಾಡಬೇಕು. ಈ ಮೂಲಕ ನಾಗರಿಕರ ಹಕ್ಕುಗಳಿಗೆ ರಕ್ಷಣೆ ನೀಡಲಾಗುತ್ತದೆ.
11 ಇದೇ ಮೊದಲ ಬಾರಿಗೆ ಶಿಕ್ಷೆಯ ರೂಪದಲ್ಲಿ ಸಾಮುದಾಯಿಕ ಸೇವೆ ನೀಡುವ ಬಗ್ಗೆ ಪ್ರಸ್ತಾವಿಸಲಾಗಿದೆ.
12 ಆರೋಪಪಟ್ಟಿಯನ್ನು 90 ದಿನದಲ್ಲಿ ಸಲ್ಲಿಸಲೇಬೇಕು. ಕೋರ್ಟ್ ಇದನ್ನು ಇನ್ನೂ 90 ದಿನಗಳ ವರೆಗೆ ವಿಸ್ತರಿಸಬಹುದು. ಆದರೆ 180 ದಿನಗಳಿಗಿಂತ ಹೆಚ್ಚು ವಿಸ್ತರಣೆ ಇಲ್ಲ. ಇದನ್ನು ವಿಚಾರಣೆಗಾಗಿ ಕಳುಹಿಸಬೇಕು.
13 ವಿಚಾರಣೆಯಾದ ಬಳಿಕ 30 ದಿನಗಳ ಒಳಗಾಗಿ ತೀರ್ಪು ನೀಡಬೇಕು. ಈ ತೀರ್ಪನ್ನು ವಾರದ ಒಳಗೆ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಬೇಕು.
14 ನಾಗರಿಕ ಸೇವೆಯಲ್ಲಿರುವವರ ವಿರುದ್ಧ ನೀಡಲಾಗುವ ದೂರುಗಳ ಸಂಬಂಧ ಸಂಬಂಧಿತ ಪ್ರಾಧಿಕಾರಗಳು 120 ದಿನದಲ್ಲಿ ಒಪ್ಪಿಗೆ ಅಥವಾ ನಿರಾಕರಣೆಯ ನಿರ್ಧಾರಕ್ಕೆ ಬರಬೇಕು. ಒಂದು ವೇಳೆ ಇಷ್ಟು ದಿನದಲ್ಲಿ ಯಾವುದೇ ಸ್ಪಂದನೆ ಸಿಗದಿದ್ದರೆ ಅದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದೇ ಅರ್ಥ ಎಂದು ಭಾವಿಸಿಕೊಳ್ಳಬೇಕು.
15 ಅಪರಾಧಿ ಎಂದು ಘೋಷಿಸಲ್ಪಟ್ಟ ಆಸ್ತಿ ಬಳಸಿಕೊಂಡು ಪರಿಹಾರ ನೀಡಲು ಅವಕಾಶ
16 ಸಂಘಟಿತ ಅಪರಾಧ ಮತ್ತು ಅಂತಾರಾಷ್ಟ್ರೀಯ ಗ್ಯಾಂಗ್‌ಗಳ ಮೂಲಕ ನಡೆಸುವ ಅಪರಾಧಗಳಿಗೆ ಕಠಿನಾತಿ ಕಠಿನ ಶಿಕ್ಷೆ ನೀಡಲು ಅವಕಾಶ.
17 ಮದುವೆ, ಉದ್ಯೋಗ, ಭಡ್ತಿ ಅಥವಾ ಗುರುತು ಮುಚ್ಚುವಿಕೆಯ ಸಂಬಂಧ ಲೈಂಗಿಕ ಶೋಷಣೆಯನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ.
18 ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ನೀಡಲು ಅವಕಾಶ.
19 ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆ.
20ಗುಂಪು ಥಳಿತ ಪ್ರಕರಣದಲ್ಲಿ ಏಳು ವರ್ಷ, ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶ.
21 ಮಕ್ಕಳ ಮೇಲಿನ ಅಪರಾಧಗಳಿಗೆ 10 ವರ್ಷಗಳ ಜೈಲು ಶಿಕ್ಷೆ. ದಂಡದ ಮೊತ್ತ ಏರಿಕೆ.
22 ದೇಶದ್ರೋಹ ಕಾನೂನು ಸಂಪೂರ್ಣ ರದ್ದು.
23 ಭಯೋತ್ಪಾದನೆಗೆ ಹೊಸ ವ್ಯಾಖ್ಯಾನ. ಅಪರಾಧಿಗಳು ಸಿಗದಿದ್ದರೂ, ಅವರ ವಿಚಾರದಲ್ಲಿ ವಿಚಾರಣೆ ನಡೆಸಲು ಅವಕಾಶ.
24 ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಕ್ಕೇ ಸಿಗುತ್ತದೆ. ಅಪರಾಧಿಗಳಿಗೆ ಗರಿಷ್ಠ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.