ಮಂಜಿನಿಂದ ಮುಳುಗಿತು ಕಾಫಿನಾಡು ಕೊಟ್ಟಿಗೆಹಾರ : ಕರ್ನಾಟಕದ ಕಾಶ್ಮೀರ ಅಂದ್ರು ಪ್ರವಾಸಿಗರು
Team Udayavani, May 4, 2022, 7:28 PM IST
ಚಿಕ್ಕಮಗಳೂರು : ರಸ್ತೆ ತುಂಬಾ ಭಾರೀ ಮಂಜು ಕವಿದಿರುವ ಪರಿಣಾಮ ವಾಹನ ಸವಾವರು ವಾಹನಗಳನ್ನ ಚಲಾಯಿಸೋದಕ್ಕೂ ಪರದಾಡುವಂತಹಾ ಸನ್ನಿವೇಶ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಎದುರಾಗಿದೆ.
ಕೊಟ್ಟಿಗೆಹಾರ ಬೆಟ್ಟಗುಡ್ಡಗಳ ಮಧ್ಯೆ ಇರುವ ಪುಟ್ಟ ಹಾಗೂ ಸುಂದರ ಗ್ರಾಮ. ಪ್ರವಾಸಿಗರನ್ನ ಮಂತ್ರಮುಗ್ಧರನ್ನಾಗಿಸೋ ಚಾರ್ಮಾಡಿಘಾಟಿಗೆ ಅಂಟಿಕೊಂಡಂತೆಯೇ ಇರುವ ಊರು. ಚಾರ್ಮಾಡಿ ಘಾಟಿಯಲ್ಲಿ ಬೀಸುವ ಗಾಳಿ ಶಬ್ಧ ಕೂಡ ಈ ಊರಲ್ಲಿ ಕೇಳಿಸುತ್ತದೆ. ಜೊತೆಗೆ, ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಮಳೆ ಜೊತೆ ವರ್ಷಪೂರ್ತಿ ತಣ್ಣನೆಯ ಗಾಳಿ ಬೀಸುವ ಸ್ಥಳವಾಗಿದ್ದು, ವರ್ಷದ ಏಳೆಂಟು ತಿಂಗಳು ಮಂಜಿನಿಂದಲೇ ಕೂಡಿರುವ ಊರು. ಕರ್ನಾಟಕದ ಕಾಶ್ಮೀರ ಅಂದರೂ ತಪ್ಪಿಲ್ಲ. ಅದೇ ರೀತಿ, ಇಂದು ಕೂಡ ಕೊಟ್ಟಿಗೆಹಾರದಲ್ಲಿ ಭಾರೀ ಮಂಜು ಕವಿದಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಕೇವಲ ಕೊಟ್ಟಿಗೆಹಾರವಷ್ಟೆ ಅಲ್ಲದೆ ಧರ್ಮಸ್ಥಳ ಮಾರ್ಗದ ಚಾರ್ಮಾಡಿಘಾಟ್ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಬಾಳೂರು, ಕಳಸ ಮಾರ್ಗದಲ್ಲೂ ಕೂಡ ಯತೇಚ್ಛವಾಗಿ ಮಂಜು ಕವಿದಿರುವ ಪರಿಣಾಮ ವಾಹನ ಸವಾರರು ವಾಹನಗಳನ್ನ ಚಲಾಯಿಸಲು ಪರಿಪಾಟಲು ಅನುಭವಿಸಿದ್ದಾರೆ. ಧರ್ಮಸ್ಥಳ ಹಾಗೂ ಹೊರನಾಡಿಗೆ ಹೋಗುವ ಪ್ರವಾಸಿಗರು ಈ ಮಂಜಿನಲ್ಲಿ ವಾಹನ ಚಲಾಯಿಸೋದು ಸಹಾಸವೇ ಸರಿ ಎಂದು ವಾಹನಗಳನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ರಸ್ತೆ ಬದಿಯ ಕ್ಯಾಂಟೀನ್‍ಗಳಲ್ಲಿ ಬೋಂಡ, ಬಜ್ಜಿ, ಕಾಫಿ-ಟೀ ಜೊತೆ ನೀರ್ ದೋಸೆ ತಿಂದು ಮಂಜು ಸ್ವಲ್ಪ ಕಡಿಮೆಯಾದ ಬಳಿಕ ತೆರಳುತ್ತಿದ್ದಾರೆ.
ಇದನ್ನೂ ಓದಿ : ಕಾಟನ್ ಪೇಟೆಯ ಕೇಸ್ ತನಿಖೆ ಮಾಡಿದರೆ ಕಾಂಗ್ರೆಸ್ ನವರೆಲ್ಲ ಜೈಲಿಗೆ ಹೋಗುತ್ತಿದ್ದರು: ಬಿಜೆಪಿ
ಫಾಗ್ ಲೈಟ್ ಹಾಗೂ ಹೆಡ್‍ಲೈಟ್ ಹಾಕಿಕೊಂಡೇ ಸಾಗುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಿಗೆಹಾರದಿಂದ ಧರ್ಮಸ್ಥಳ ಹಾಗೂ ಹೊರನಾಡಿನ ಎರಡು ಮಾರ್ಗಗಳೂ ಹಾವು-ಬಳುಕಿನ ಮೈಕಟ್ಟಿನ ತಿರುವುಗಳ ರಸ್ತೆಯಾಗಿದ್ದು ಈ ಮಂಜಿನ ಮಧ್ಯೆ ತಿರುವುಗಳಲ್ಲಿ ಹೆಡ್‍ಲೈಟ್-ಫಾಗ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸೋದಕ್ಕೂ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನಗಳಲ್ಲಿ ಉರಿಯುವ ದೀಪದ ಬೆಳಕಿಗೆ ಮಂಜು ಸೇರಿ ಮತ್ತೊಂದು ಲೋಕವೇ ಸೃಷ್ಟಿಯಾಗಿದೆ. ಆದರೆ, ಪ್ರವಾಸಿಗರು ಈ ಕಷ್ಟ-ನಷ್ಟದ ಮಧ್ಯೆಯೂ ಮಂಜಿನಿಂದ ಮುಳುಗಿರೋ ಕೊಟ್ಟಿಗೆಹಾರ ಹಾಗೂ ಮರಗಿಡಗಳ ಮೇಲೆ ಹಾಲ್ನೊರೆಯಂತೆ ಕೂತಿರೋ ಈ ಸುಂದರ ವಾತಾವರಣವನ್ನ ಕಂಡು ಇದು ಕರ್ನಾಟಕದ ಕಾಶ್ಮೀರ ಎಂದು ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.