ಮಲಪ್ರಭೆ ನದಿಗೆ ಬಿದ್ದು ಹೆಸ್ಕಾಂ ಗುತ್ತಿಗೆ ನೌಕರ ಸಾವು
Team Udayavani, Aug 28, 2019, 8:40 PM IST
ಬಾಗಲಕೋಟೆ : ಪ್ರವಾಹದಿಂದ ಹಾನಿಯಾದ ವಿದ್ಯುತ್ ಮಾರ್ಗ ದುರಸ್ಥಿ ವೇಳೆ ಆಯತಪ್ಪಿ ಮಲಪ್ರಭಾ ನದಿಗೆ ಬಿದ್ದು ಹೆಸ್ಕಾಂ ಗುತ್ತಿಗೆ ನೌಕರನೊಬ್ಬ ಮೃತಪಟ್ಟ ಘಟನೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಬಳಿ ಮಲಪ್ರಭಾ ನದಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಮೃತಪಟ್ಟ ಹೆಸ್ಕಾಂ ಗುತ್ತಿಗೆ ನೌಕರನನ್ನು ಕಮತಗಿಯ ನೀಲಕಂಠ ಬಂಡಿ (36) ಎಂದು ಗುರುತಿಸಲಾಗಿದೆ. ಕಳೆದ ವಾರ ಮಲಪ್ರಭಾ ನದಿಗೆ ಪ್ರವಾಹ ಬಂದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ, ತಂತಿ ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಮಲಪ್ರಭಾ ನದಿಯ ಒಂದು ದಡದಿಂದ ಇನ್ನೊಂದು ದಡದ ವರೆಗೆ ವಿದ್ಯುತ್ ತಂತಿ ಅಳವಡಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿ ಬುಧವಾರ ನಡೆಸುತ್ತಿದ್ದರು. ವಿದ್ಯುತ್ ತಂತಿ ಅಳವಡಿಸುವ ವೇಳೆ, ನೀಲಕಂಠ ಮಲಪ್ರಭಾ ನದಿಯಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಅಮೀನಡಗ ಪಿಎಸ್‌ಐ ಲಕ್ಷ್ಮೀಕಾಂತ ಬಾಣಿಕೋಲ, ಹೇಸ್ಕಾಂ ಹುನಗುಂದ ತಾಲೂಕಾ ಅಭಿಯಂತರ ಬಾಲಾಜಿಸಿಂಗ್, ಸ್ಥಳೀಯ ಹೇಸ್ಕಾಂ ಅಧಿಕಾರಿ ರಮೇಶ ನಾಯಕ ಭೇಟಿ ನೀಡಿದ್ದಾರೆ. ಈ ಕುರಿತಂತೆ ಅಮೀನಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.