Hijab: ಮುಂದುವರಿದ ರಾಜಕೀಯ ಕೆಸರೆರಚಾಟ
Team Udayavani, Dec 24, 2023, 10:22 PM IST
ಬೆಂಗಳೂರು: ಹಿಜಾಬ್ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟರೂ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಜಿದ್ದಿಗೆ ಬಿದ್ದಿದ್ದು, ಪರಸ್ಪರ ಕೆಸರೆರಚಾಟ ಮುಂದುವರಿಸಿವೆ.
ಮತ್ತೆ ಹಿಜಾಬ್ ಹಾಕಬಹುದು ಎನ್ನುವ ಮೂಲಕ ಬಿಜೆಪಿಗರು ಹಾಗೂ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಯೋಚನೆ ಇದೆಯಷ್ಟೇ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಸಿಎಂ ಮಾಡಿದ್ದರು.
ಆದರೆ ಸಿಎಂ ಹೇಳಿಕೆಯನ್ನು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಸಹಿತ ಮುಸ್ಲಿಂ ಮುಖಂಡರು ಸ್ವಾಗತಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ತಮಗೆ ಜಯ ಸಿಕ್ಕಿದೆ ಎನ್ನುವಂತೆ ಮಾತನಾಡಿದ್ದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟಾದರೂ ಮುಖ್ಯಮಂತ್ರಿಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಸಹಿತ ಇತರ ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು, ಕಾನೂನಿನ ವ್ಯಾಪ್ತಿಯಲ್ಲೇ ಹಿಜಾಬ್ ಜಾರಿಗೊಳಿಸುತ್ತೇವೆ ಎಂದಿದ್ದಾರೆ. ಅದಕ್ಕೆ ಹಿಂದು ಸಂಘಟನೆಗಳೂ ತಿರುಗೇಟು ನೀಡಿವೆ.
ಒಟ್ಟಾರೆ ತಣ್ಣಗಾಗಿದ್ದ ಹಿಜಾಬ್ ವಿವಾದವನ್ನು ಸ್ವತಃ ಸಿಎಂ ಅವರೇ ಕೆದಕಿದ್ದು, ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿದೆಯಲ್ಲದೆ, ಲೋಕಸಭೆ ಚುನಾವಣೆಗೂ ಇದು ಅಸ್ತ್ರ-ಪ್ರತ್ಯಸ್ತ್ರಗಳಾಗಲಿವೆಯೇ? ಹೊಸ ವಿವಾದಗಳಿಗೆ ತಿರುಗಲಿವೆಯೇ ಮುಂತಾದ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಒಮ್ಮೆ ನಾಯಕ, ಮತ್ತೂಮ್ಮೆ ಖಳನಾಯಕ ಆಗುವುದು ಬೇಡ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು, ಸಿಎಂ ಸಿದ್ದರಾಮಯ್ಯರನ್ನು ಕರಾವಳಿಯ ಯಕ್ಷಗಾನ ಪಟು ಅಥವಾ ಸಿನೆಮಾ ನಟ ಇದ್ದಂತೆ. ಇವತ್ತು ಖಳನಾಯಕ ಆಗುತ್ತಾರೆ, ನಾಳೆ ನಾಯಕ ಆಗುತ್ತಾರೆ. ಇವತ್ತು ರಾವಣ ಆಗುತ್ತಾರೆ, ನಾಳೆ ರಾಮ ಆಗಲು ಪ್ರಯತ್ನಪಡುತ್ತಾರೆ ಎಂದು ಜರೆದಿದ್ದಾರೆ.
ಜವಾಬ್ದಾರಿ ಇರುವ ಮುಖ್ಯಮಂತ್ರಿ ಘಳಿಗೆಗೊಂದು ವೇಷ ಹಾಕಬಾರದು. ಮುಖ್ಯಮಂತ್ರಿ ಆಗಿರುವವರು ಮುಖ್ಯಮಂತ್ರಿಯ ವೇಷವನ್ನೇ ಹಾಕಬೇಕು. ಸಿಎಂ ಸ್ಥಾನದಲ್ಲಿದ್ದುಕೊಂಡು ಬೆಳಗ್ಗೊಂದು, ಸಂಜೆಯೊಂದು ಮಾತನಾಡುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಾನಿದನ್ನು ಖಡಾಖಂಡಿತವಾಗಿ ಖಂಡಿಸುತ್ತೇನೆ ಎಂದರು.
ಸಂದರ್ಭ ಬಂದರೆ ಬೀದಿಗಿಳಿದು ಹೋರಾಟ: ವಿಜಯೇಂದ್ರ
ರಾಜ್ಯದ ಮುಖ್ಯಮಂತ್ರಿಗಳು ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ ಆಡುತ್ತಿರುವುದೇಕೆ? ಕನಿಷ್ಠ ಶಿಕ್ಷಣ ಕ್ಷೇತ್ರವನ್ನಾದರೂ ನಿಮ್ಮ ಕೆಟ್ಟ ರಾಜಕಾರಣದಿಂದ ದೂರವಿಡಬೇಕು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತಿಯ ವಿಷಬೀಜ ಬಿತ್ತುವುದೇಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ನಿಮಗೇಕೆ ಆತುರ? ಬರಗಾಲದ ಸಂದರ್ಭದಲ್ಲಿ ನಿಮ್ಮ ಆದ್ಯತೆ ರೈತರಾಗಬೇಕೇ ಹೊರತು ಹಿಜಾಬ್ ವಿಚಾರ ಯಾಕೆ ಎಂದು ಪ್ರಶ್ನಿಸಿದರು. ಇದು ಒಡೆದು ಆಳುವ ನೀತಿ ಎಂದು ಟೀಕಿಸಿದರು. ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಒಂದು ಸ್ಥಾನವೂ ಲಭಿಸುವುದಿಲ್ಲ ಎಂಬ ಸ್ಥಿತಿಯ ಹಿನ್ನೆಲೆಯಲ್ಲಿ ಈ ರೀತಿಯ ಒಡೆದಾಳುವ ನೀತಿಗೆ ಮೊರೆಹೋಗಿದೆ ಎಂದು ಆಕ್ಷೇಪಿಸಿದರು.
ಅಭಿವೃದ್ಧಿಗೆ ಅಡಿಗಲ್ಲು ಹಾಕಿ, ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಬೇಡಿ: ಅಶೋಕ್
ಕಾಂಗ್ರೆಸ್ ಸರಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಕೋಟಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿರುವ ಸರಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರಕಾರದ ಬಗ್ಗೆ ಛೀ, ಥೂ ಎನ್ನುತ್ತಿದ್ದಾರೆ. ಆದರೆ ಸರಕಾರ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರನಾಗಿದ್ದಾರೆ ಎಂದರು.
ಹಿಜಾಬ್ ನಿಷೇಧ ವಾಪಸ್ ಹೇಳಿಕೆ ಹಿಂಪಡೆದಿದ್ದು ಉತ್ತಮ ಬೆಳವಣಿಗೆ
ದಾವಣಗೆರೆ: ಎಲ್ಲರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧವನ್ನು ರದ್ದುಪಡಿಸುವ ಹೇಳಿಕೆಯನ್ನು ಹಿಂಪಡೆದಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಲ್ಪಸಂಖ್ಯಾಕರ ವಿರೋಧಿಗಳಲ್ಲ. ನಾವು ಹಿಂದೂ, ಮುಸ್ಲಿಂ, ಕ್ರೈಸ್ತರು ಸಹಿತ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು ಎನ್ನುವವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲಾದರೂ ಜಾತಿಯ ವಿಷಬೀಜವನ್ನು ಬಿತ್ತುವ ಕೆಲಸವನ್ನು ನಿಲ್ಲಿಸಬೇಕು ಎಂದರು.
ಸಿಎಂ ಹೇಳಿಕೆ ಮುಠ್ಠಾಳತನದ್ದು
ಹುಬ್ಬಳ್ಳಿ: ರಾಜ್ಯದಲ್ಲಿ ಹಿಜಾಬ್‌ಗ ನಿಷೇಧವೇ ಇಲ್ಲ. ಹಾಗಿರುವಾಗ ಹಿಜಾಬ್ ನಿಷೇಧವನ್ನು ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರುವುದು ಮುಠ್ಠಾಳತನವಾಗಿದೆ ಎಂದರು.
ಗೊಂದಲಮಯ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದ ಬಳಿಕ ಸಿಎಂ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡಿದ್ದಾರೆ. ಸಹವಾಸ ದೋಷದಿಂದ ಮಾತನಾಡಿರ
ಬಹುದು ಎನಿಸುತ್ತದೆ ಎಂದರು.
ಹಿಜಾಬ್‌ಗ ಅವಕಾಶ ನೀಡಿದರೆ ಸುಮ್ಮನಿರೆವು
ಶ್ರೀರಂಗಪಟ್ಟಣ: ರಾಜ್ಯ ಸರಕಾರ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದ್ದೇ ಆದಲ್ಲಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಆರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಎಚ್ಚರಿಸಿದರು.
ಪಟ್ಟಣದ ನಿಮಿ ಷಾಂಬ ದೇಗುಲದ ಬಳಿಯಲ್ಲಿ ನಡೆದ ಹನುಮ ಮಾಲಾಧಾರಿಗಳ ಸಂಕೀರ್ತನೆ ಯಾತ್ರೆಗೂ ಮುನ್ನ ಹನುಮ ಮಾಲಾಧಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಮಕ್ಕಳು ಹಿಜಾಬ್ ಧರಿಸಿದರೆ ನಮ್ಮ ಮಕ್ಕಳು ಕೇಸರಿ ಶಾಲು ಹಾಗೂ ಕೇಸರಿ ಪೇಟ ಧರಿಸಿ ಶಾಲೆ, ಕಾಲೇಜುಗಳಲ್ಲಿ ರಾಮ ಜಪ ಮಾಡಲಿದ್ದಾರೆ ಎಚ್ಚರಿಕೆ ನೀಡಿದರು.
ಹಿಜಾಬ್‌ಗ ಅವಕಾಶ ನೀಡುವ ಮೂಲಕ ಪ್ರತ್ಯೇಕತೆಯ ಬೀಜವನ್ನು ಬಿತ್ತುತ್ತೀರಾ ಎಂದು ಸರಕಾರವನ್ನು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳಲ್ಲಿ ಭೇದಭಾವ ಬರಬಾರದೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ನೀತಿ ಜಾರಿಯಲ್ಲಿದೆ. ನಿಮಗೆ ತಾಕತ್ತಿದ್ದರೆ ಹಿಜಾಬ್‌ಗ ಅವಕಾಶ ನೀಡಿ ಎಂದು ಸವಾಲೆಸೆದರು.
ಮುಸ್ಕಾನ್‌ಗೆ ಉಗ್ರ ನಂಟು
ಈ ಹಿಂದೆ ಮಂಡ್ಯದಲ್ಲಿ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದಳು. ನೀನು ನಿನ್ನ ಮನೆ, ಮಸೀದಿಯಲ್ಲಿ ಈ ಘೋಷಣೆ ಕೂಗಿಕೋ. ಇದು ಹಿಂದೂಗಳ ನಾಡು, ಈ ದೇಶದಲ್ಲಿ ರಾಮ್ ರಾಮ್ ಎಂದು ಹೇಳಬೇಕು. ಈ ದೇಶದಲ್ಲಿ ಇರಬೇಕಾದರೆ ಎಲ್ಲರಂತೆ ನೀನೂ ಇರಬೇಕು. ಮುಸ್ಕಾನ್‌ಗೆ ಹಣ, ಶಹಬ್ಟಾಶ್‌ಗಿರಿ ಕೊಟ್ಟದ್ದು ಭಯೋತ್ಪಾದಕ ಸಂಘಟನೆ ಅಲ್‌ಖೈದಾ. ಆ ಸಂಘಟನೆ ಜತೆ ಸಂಪರ್ಕದಲ್ಲಿರುವ ಹೆಣ್ಣು ಮಗಳು ಮಂಡ್ಯದಲ್ಲಿದ್ದಾಳೆ, ಹಿಂದೂಗಳು ಹುಷಾರಾಗಿರಬೇಕು. ನಾಳೆಯಿಂದ ಕಾಲೇಜಿಗೆ ಹೋಗುವುದಾಗಿ ಆಕೆ ಹೇಳಿದ್ದಾಳೆ. ತಾಕತ್ ಇದ್ರೆ ಅವಳು ಕಾಲೇಜಿಗೆ ಹೋಗಲಿ ಎಂದು ಸವಾಲೆಸೆದರು.
ಮೂರು ಮಕ್ಕಳನ್ನು ಹೆರಲು ಸಲಹೆ
ಹಿಂದೂಗಳ ಸಂಖ್ಯೆ ದಿನೇದಿನೆ ಕಡಿಮೆಯಾಗಿ ನಾವು ಅಲ್ಪ ಸಂಖ್ಯಾಕರಾಗುತ್ತಿದ್ದೇವೆ. ದಯವಿಟ್ಟು ಹಿಂದೂಗಳು ಮೂರು ಮಕ್ಕಳನ್ನು ಮಾಡಿಕೊಳ್ಳಿ. ಹಿಂದು ಸಮಾಜ ಉಳಿಯಬೇಕಾದರೆ ಒಂದು ಮಗು ಸಾಕು ಅನ್ನೋದು ಬಿಡಬೇಕು. ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ. ಅವರ ಸಂಖ್ಯೆ ಹೆಚ್ಚಾದರೆ ಪಾಕಿಸ್ಥಾನ ಜಿಂದಾಬಾದ್ ಎನ್ನುತ್ತಾರೆ. ಹೀಗಾಗಿ ಹಿಂದೂಗಳು ಜಾಗೃತರಾಗುವಂತೆ ಎಚ್ಚರಿಕೆ ನೀಡಿದರು.
ಜಿನ್ನಾ- ಕಾಂಗ್ರೆಸ್ ಮನಸ್ಥಿತಿ ಬೇರೆಯಲ್ಲ
ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ಸಂಚು ಹೂಡಿರುವುದು ಅವರ ಅವರ ಹೇಳಿಕೆಯಲ್ಲಿ ವ್ಯಕ್ತವಾಗಿದೆ. ಮಹಮದ್ ಆಲಿ ಜಿನ್ನಾ ಮತ್ತು ಕಾಂಗ್ರೆಸ್ ಮನಸ್ಥಿತಿ ಒಂದೇ ರೀತಿಯಲ್ಲಿವೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಸಮವಸ್ತ್ರ ಇರಬೇಕೋ, ಬೇಡವೋ ಎನ್ನುವುದು ಚರ್ಚೆಯ ವಿಷಯವಾಗಬಾರದು. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಯಾವ ಉದ್ದೇಶಕ್ಕೆ ತಂದಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಇದನ್ನು ಅರ್ಥ ಮಾಡಿಕೊಳ್ಳದೆ ಶಾಲಾ-ಕಾಲೇಜುಗಳ ಮಕ್ಕಳಲ್ಲಿಯೂ ಜಾತಿ ಮತ್ತು ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅದೊಂದು ರಾಷ್ಟ್ರಘಾತಕ ಕೆಲಸ. ಇದನ್ನು ಯಾರೂ ಕ್ಷಮಿಸುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.