ಜೈಲ್‌ಗಳಲ್ಲಿ ಅಸಹಜ ಸಾವಿಗೆ ವರದಿ ಕೊಡಿ’
ಕಾರಾಗೃಹಗಳಲ್ಲಿರುವ ಮಾನಸಿಕ ಅಸ್ವಸ್ಥರ ಸಂಖ್ಯೆ ಎಷ್ಟು?: ವರದಿ ಕೇಳಿದ ಹೈಕೋರ್ಟ್
Team Udayavani, Jul 5, 2019, 5:39 AM IST
ಬೆಂಗಳೂರು: ಕೇಂದ್ರ ಕಾರಾಗೃಹ, ಜಿಲ್ಲಾ ಕಾರಾಗೃಹ, ತಾಲೂಕು ಮತ್ತು ಉಪ ಕಾರಾಗೃಹಗಳು ಸೇರಿ ರಾಜ್ಯದ ಬಂದೀಖಾನೆಗಳಲ್ಲಿ 2017ರ ನವೆಂಬರ್ 1ರಿಂದ 2019ರ ಮಾರ್ಚ್ 31ರವರೆಗೆ ಎಷ್ಟು ‘ಅಸಹಜ ಸಾವು’ ಪ್ರಕರಣಗಳು ನಡೆದಿವೆ ಮತ್ತು ಅವರ ಸಂಬಂಧಿತರಿಗೆ ತಾತ್ಕಾಲಿಕವಾಗಿ ಎಷ್ಟು ಪರಿಹಾರ ನೀಡುತ್ತೀರಿ ಎಂಬ ಬಗ್ಗೆ ತಿಂಗಳಲ್ಲಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಬಂದೀಖಾನೆಗಳಲ್ಲಿ ನಡೆಯುವ ‘ಅಸಹಜ ಸಾವು’ ಪ್ರಕರಣಗಳಲ್ಲಿ ಮೃತರ ಸಂಬಂಧಿತರಿಗೆ ಪರಿಹಾರ ನೀಡುವ ಯೋಜನೆ ಕುರಿತು 2017ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿತು.
ಅರ್ಜಿ ವಿಚಾರಣೆ ಬಂದಾಗ ಸರ್ಕಾರದ ಪರ ವಕೀಲರು ವಾದ ಮಂಡಿಸಿ 2012ರಿಂದ 2017ರ ಅಕ್ಟೋಬರ್‌ವರೆಗೆ ರಾಜ್ಯದ ಬಂದೀಖಾನೆಗಳಲ್ಲಿ 26 ಅಸಹಜ ಸಾವು ಪ್ರಕರಣಗಳು ನಡೆದಿದ್ದು, ಅದರಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಶಿಫಾರಸು ಮಾಡಿದ ಪ್ರಕರಣಗಳಲ್ಲಿ ಪರಿಹಾರ ಕೊಟ್ಟಿರುವ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಆತ್ಮಹತ್ಯೆ, ಹಲ್ಲೆ ಮತ್ತು ಗಾಯಗಳಿಂದ ನಡೆದ ಸಾವು ಪ್ರಕರಣಗಳನ್ನು ಅಸಹಜ ಸಾವು ಪ್ರಕರಣ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಅಂತಹ ಪ್ರಕರಣಗಳಿಗೆ ಪರಿಹಾರ ನೀಡುವುದಿಲ್ಲ ಎಂದು ಹೇಳಿದರು.
ಆಗ, ಪೊಲೀಸ್ ಕಸ್ಟಡಿಯಲ್ಲಿರುವಾಗ ಕೈದಿ ಅಥವಾ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದರೆ ಅದು ಅಸಹಜ ಸಾವು ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಿರುವಾಗ ಅಸಹಜ ಸಾವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ವರ್ಗೀಕರಣ ಮಾಡುವುದು ಹೇಗೆ ಎಂದು ಪ್ರಶ್ನಿಸಿದ ನ್ಯಾಯಪೀಠ, 2012ರಿಂದ 2017ರ ಅಕ್ಟೋಬರ್‌ವರೆಗಿನ ಅಸಹಜ ಸಾವು ಪ್ರಕರಣಗಳು ಮತ್ತು ಪರಿಹಾರದ ಬಗ್ಗೆ ಮುಂದಿನ ವಿಚಾರಣೆ ಹಂತದಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು. ಆದರೆ, 2017ರ ನ.1ರಿಂದ 2019ರ ಮಾ.31ರವರೆಗೆ ನಡೆದ ಅಸಹಜ ಸಾವು ಪ್ರಕರಣಗಳು ಎಷ್ಟು ಮತ್ತು ಮೃತರ ಸಂಬಂಧಿತರಿಗೆ ತಾತ್ಕಾಲಿಕವಾಗಿ ಎಷ್ಟು ಪರಿಹಾರ ಮೊತ್ತ ನೀಡುತ್ತೀರಿ ಎಂಬ ಬಗ್ಗೆ ಒಂದು ತಿಂಗಳಲ್ಲಿ ಮಾಹಿತಿ ಸಲ್ಲಿಸಿ ಎಂದು ಹೇಳಿ ವಿಚಾರಣೆಯನ್ನು ಆ.2ಕ್ಕೆ ಮುಂದೂಡಿತು.
ಮಾನಸಿಕ ಅಸ್ವಸ್ಥರ ಬಗ್ಗೆ ವರದಿ ಕೊಡಿ: ಇದೇ ವೇಳೆ ‘ಮಾನಸಿಕ ಕಾಯಿಲೆ ಕಾಯ್ದೆ-2017ರ’ ಪ್ರಕಾರ ಬಂದೀಖಾನೆಗಳಲ್ಲಿ ಕೈದಿಗಳಿಗೆ ಒದಗಿಸಲಾಗುತ್ತಿರುವ ವೈದ್ಯಕೀಯ ಸೌಲಭ್ಯಗಳ ಕುರಿತು ಸಲ್ಲಿಸಲಾಗಿರುವ ಮತ್ತೂಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ರಾಜ್ಯದ 9 ಕೇಂದ್ರ ಕಾರಾಗೃಹ ಹಾಗೂ 22 ಜಿಲ್ಲಾ ಕಾರಾಗೃಹಗಳಲ್ಲಿ 562 ಕೈದಿಗಳಿಗೆ ಮಾನಸಿಕ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಆದರೆ, ಯಾವ ತರಹದ ಮಾನಸಿಕ ಕಾಯಿಲೆ ಇದೆ, ಅದಕ್ಕೆ ಯಾವ ಚಿಕಿತ್ಸೆ ಕೊಡಲಾಗುತ್ತಿದೆ ಎಂಬ ಮಾಹಿತಿ ಕೊಟ್ಟಿಲ್ಲ. ಹಾಗಾಗಿ, ರಾಜ್ಯದ ಎಲ್ಲ ಬಂದೀಖಾನೆಗಳಲ್ಲಿ ಎಷ್ಟು ಮಂದಿ ಮಾನಸಿಕ ಅಸ್ವಸ್ಥರಿದ್ದಾರೆ, ಯಾರಿಗೆ ಯಾವ ಬಗೆಯ ಮಾನಸಿಕ ಅಸ್ವಸ್ಥತೆ ಇದೆ ಎಂಬ ಬಗ್ಗೆ ಪರಿಶೀಲನಾ ವರದಿ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿತು. ಅಲ್ಲದೆ, ಮಾನಸಿಕ ಅಸ್ವಸ್ಥರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಮನೋವೈದ್ಯರು, ಮನೋರೋಗ ಚಿಕಿತ್ಸಕ ಸಾಮಾಜಿಕ ಕಾರ್ಯಕರ್ತರ ಖಾಲಿ ಹುದ್ದೆಗಳ ಭರ್ತಿ, ಪ್ರತಿ ಬಂದೀಖಾನೆಯಲ್ಲಿ ಪ್ರತ್ಯೇಕ ಮನೋರೋಗಿಗಳ ವಾರ್ಡ್ ಸ್ಥಾಪನೆ ಮತ್ತು ಮಾನಸಿಕ ಕಾಯಿಲೆ ಕಾಯ್ದೆಯನ್ವಯ ಮಾನಸಿಕ ಕಾಯಿಲೆ ನಿರ್ವಹಣಾ ಮಂಡಳಿ ರಚನೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ತಿಂಗಳಲ್ಲಿ ಮಾಹಿತಿ ನೀಡುವಂತೆಯೂ ಸೂಚಿಸಿತು.
ಸಾಮರ್ಥಯದ ಬಗ್ಗೆ ಮಾಹಿತಿ ಕೊಡಿ: ಬಂದೀಖಾನೆಗಳಲ್ಲಿ ಸಾಮರ್ಥಯಕ್ಕಿಂತ ಹೆಚ್ಚು ಕೈದಿಗಳನ್ನು ಇಡಲಾಗುತ್ತಿದೆ ಮತ್ತು ಸಮರ್ಪಕ ಸಿಬ್ಬಂದಿ, ಮೂಲಸೌಕರ್ಯ ಒದಗಿಸುತ್ತಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ, ರಾಜ್ಯದಲ್ಲಿರುವ ಒಟ್ಟು ಬಂದೀಖಾನೆಗಳೆಷ್ಟು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಂದೀಖಾನೆ ಕಾಯ್ದೆ ಹಾಗೂ ಕೈದಿಗಳ ಕಾಯ್ದೆ ಪ್ರಕಾರ ಬಂದೀಖಾನೆಗಳ ಸಾಮರ್ಥಯ ಎಷ್ಟಿದೆ, ಖಾಲಿ ಇರುವ ಹುದ್ದೆಗಳೆಷ್ಟು ಹುದ್ದೆಗಳ ಭರ್ತಿಗೆ ಕೈಗೊಂಡ ಕ್ರಮಗಳೇನು ಎಂದು ಸಮಗ್ರವಾದ ವರದಿ ನೀಡುವಂತೆ ನ್ಯಾಯಪೀಠ ಆದೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.