ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸ್ಪಂದಿಸಲಿ : ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್ ಆತಂಕ
Team Udayavani, Jan 9, 2021, 11:54 AM IST
ಹಾಸನ: ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಸ್ಪಂದಿಸದಿದ್ದರೇ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹವಾಮಾನದ ಏರುಪೇರು ಕಾಫಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 2015 ರಿಂದ ಇತ್ತೀಚೆಗೆ ನಿರಂತರವಾಗಿ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ
ಸಿಲುಕಿದ್ದಾರೆ. ರೋಗಬಾಧೆ, ಬೆಲೆಕುಸಿತ, ಕಾರ್ಮಿಕರ ಕೊರತೆ ಕಾಡುಪ್ರಾಣಿಗಳ ಹಾವಳಿಯ ಜೊತೆಗೆ ಹವಾಮಾನದ ವೈಪರೀತ್ಯವು ಬೆಳೆಗಾರರಿಗೆ ಕಷ್ಟವಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.
ಪ್ಯಾಕೇಜ್ ಘೋಷಿಸಲಿ: ಗಿಡದಲ್ಲಿದ್ದ ಕಾಫಿಯು ನೆಲಕಚ್ಚಿದೆ. ಕಣದಲ್ಲಿ ಒಣಗಳು ಹಾಕಿದ್ದ ಕಾಫಿಯು ಕೊಚ್ಚಿ ಹೋಗಿದೆ. ಈ ನಷ್ಟದ ಜೊತೆಗೆ ಅಕಾಲಿಕ ಮಳೆಯಿಂದ ಕಾಫಿ ಮೊಗ್ಗಾಗಿದ್ದು, ಕಾಫಿಯ ಕಟಾವು ಸಂಪೂರ್ಣಗೊಳ್ಳದೇ ಇದ್ದು ಮುಂದಿನ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಟಾವಿನ ಸಂದರ್ಭದಲ್ಲಿ ಮೊಗ್ಗು, ಅರಳಿರುವ ಹೂ ಉದುರಲಿದೆ. ಅಕಾಲಿಕ ಮಳೆ ಯಿಂದ ಆಗುತ್ತಿರುವ ನಷ್ಟವನ್ನು ಕಾಫಿ ಮಂಡಳಿ ಸಮೀಕ್ಷೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸ ಬೇಕು. ಸರ್ಕಾರವು ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ವೊಂದನ್ನು ಶೀಘ್ರದಲ್ಲೇ
ಬಿಡುಗಡೆಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಆರ್ಥಿಕ ಸಂಕಷ್ಟ: ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಳೆದ ಕೆಲ ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದ್ದು, ಬೆಳೆಗಾರರ ಫಸಲು ನಾಶದ ಜೊತೆಗೆ ಪ್ರಾಣಭಯದಿಂದ ಜೀವನ ಸಾಗಿಸು ವಂತಾಗಿದೆ. ಕೆಲಸ ಮಾಡುವ ಜನರ ಪ್ರಾಣಹಾನಿ ಹೆಚ್ಚಾಗುತ್ತಿದ್ದು, ಅಪಾರ ಪ್ರಮಾಣದ ಕಾಫಿ, ಕಾಳುಮೆಣಸು, ಬಾಳೆ, ಭತ್ತ ಹಾಗೂ ಅಡಕೆ ಬೆಳೆಗಳ ನಾಶದಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಹೇಳಿದರು.
ಕಾಡು ಪ್ರಾಣಿಗಳ ಕಾಟ: ದಿನನಿತ್ಯ ತೋಟಗಳಲ್ಲಿ ನೀರಿನ ಟ್ಯಾಂಕ್, ಮೋಟರ್, ಪಂಪ್‌ಸೆಟ್, ಪೈಪ್ ಲೈನ್, ಬೇಲಿಗಳ ಹಾನಿಯಾಗಿದೆ. ಮಕ್ಕಳು ಹಳ್ಳಿ ಯಿಂದ ಶಾಲೆಗಳಿಗೆ ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಕಾಫಿ ತೋಟಗಳಲ್ಲಿ ಮಂಗಗಳು, ಕಾಡಮ್ಮೆಗಳು, ಕಾಡು ಹಂದಿಗಳು, ಹಾವಳಿ ಹೆಚ್ಚಾಗಿದೆ. ಕಾಫಿ ಗಿಡದ ರೆಕ್ಕೆಗಳನ್ನು, ಗದ್ದೆಗಳನ್ನು ಸಂಪೂರ್ಣ ನಾಶಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವೈಜ್ಞಾನಿಕ ಪರಿಹಾರ ನೀಡಿ: ಬೆಳೆಗಾರರಿಗೆ ಸೂಕ್ತ ರಕ್ಷಣೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಾಡಾನೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು. ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಿ, ಆನೆ ಕಾಲುವೆ ನಿರ್ಮಾಣ ಮಾಡಬೇಕು. ಶೇ.90ರ ಸಹಾಯಧನದಲ್ಲಿ ಸೋಲಾರ್ ಬೇಲಿ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಬೇಕು. ಆನೆನೆ, ಇತರೆ ಕಾಡುಪ್ರಾಣಿಗಳ ಹಾವಳಿ ಇರುವ ಹಳ್ಳಿಗಳಲ್ಲಿ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಕಾಡಾನೆ ದಾಳಿಯಿಂದ ಹಾನಿಯಾದ ಬೆಳೆ, ಗಿಡ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಜಿಲ್ಲಾಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮತ್ತಿತರರು ಪಾಲ್ಗೊಂಡಿದ್ದರು.
ಕಾಡಾನೆ ದಾಳಿಗೆ ಭತ್ತದ ಹುಲ್ಲಿನ ಬಣವೆ ನಾಶ
ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಮಾದಿಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆಗಳು ನಡೆಸಿದ ದಾಳಿಗೆ ಭತ್ತದ ಬಣವೆ ನಾಶವಾಗಿದೆ.ಗ್ರಾಮದ ವೆಂಕಟರಮೇಗೌಡ ಅವರು, ಹವಾಮಾನ್ಯ ವೈಪರೀತ್ಯದ ನಡುವೆಯೂ ಇತ್ತೀಚಿಗೆ ಒಕ್ಕಣೆ ಮಾಡಿದ್ದ ಭತ್ತದ ಹುಲ್ಲನ್ನು ಬವಣೆ ಮಾಡಿದ್ದರು. ಅದಕ್ಕೆ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ದ್ದರು. ಆದರೂ ಬಿಡದ ಕಾಡಾನೆಗಳು ಬವಣೆ ಮೇಲೆ ದಾಳಿ ನಡೆಸಿ, ಹುಲ್ಲನ್ನು ತಿಂದು, ತಿಳಿದು, ಎಲ್ಲೆಡೆ ಚೆಲ್ಲಾಡಿವೆ. ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಆನೆ ಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.