ಈ ದೇವಸ್ಥಾನದಲ್ಲಿ ನಡೆಯುತ್ತದೆ ನೂರಾರು ಪ್ರೇತ ಮದುವೆ!
ಕೂಡ್ಲಿ ಜನಾರ್ದನ ದೇಗುಲ ಕುಲೆ ಮದಿಮೆಗೆ ಪ್ರಸಿದ್ಧ ; ಪ್ರತೀ ಅಮಾವಾಸ್ಯೆ ದಿನ ವಿವಾಹ ; ಜೋಡಿ ಸಿಗದಿದ್ದರೂ ಇಲ್ಲಿದೆ ಪರಿಹಾರ!
Team Udayavani, May 13, 2024, 7:20 AM IST
ಕೋಟ: ಪುತ್ತೂರಿನ ಕುಟುಂಬವೊಂದು ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ ಎಂದು ಜಾಹೀರಾತು ನೀಡಿದ್ದರಿಂದ ಕುಲೆ ಮದಿಮೆ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಅದರ ನಡುವೆ ಕರಾವಳಿಯ ದೇಗುಲವೊಂದರಲ್ಲಿ ಪ್ರತೀ ತಿಂಗಳು ಹತ್ತಾರು ಪ್ರೇತ ವಿವಾಹ ನಡೆಯುತ್ತಿರುವುದು ಗಮನ ಸೆಳೆದಿದೆ.
ಸಾಮಾನ್ಯವಾಗಿ ಪ್ರೇತ ವಿವಾಹಗಳು ಕೌಟುಂಬಿಕವಾಗಿ ಮನೆಗಳಲ್ಲಿ ನಡೆದರೆ ಬ್ರಹ್ಮಾವರ ತಾ|ನ ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಹೇರಾಡಿಯ ಕೂಡ್ಲಿ ಜನಾರ್ದನ ದೇವಸ್ಥಾನದಲ್ಲಿ ದೇವಸ್ಥಾನದ ವತಿಯಿಂದಲೇ ಈ ಮದುವೆ ನಡೆಯುತ್ತದೆ. ಪ್ರತೀ ತಿಂಗಳ ಅಮಾವಾಸ್ಯೆಯಂದು ಹತ್ತಾರು ಅತೃಪ್ತ ಆತ್ಮಗಳಿಗೆ ಪ್ರೇತ ವಿವಾಹ ಎನ್ನುವ ಆಚರಣೆ ಶತಮಾನಗಳಿಂದ ನಡೆಯುತ್ತಿದೆ. ಇತ್ತೀಚೆಗಂತೂ ಇಲ್ಲಿ ತಿಂಗಳಿಗೆ ಕನಿಷ್ಠ 10ರಿಂದ 15 ಮದುವೆಗಳು ನಡೆಯುತ್ತಿದೆ. ವರ್ಷಕ್ಕೆ ನೂರಾರು ಮದುವೆಗಳು ಇಲ್ಲಿ ನಡೆಯುತ್ತಿವೆ.
ಹೇಗಿರುತ್ತದೆ ಇಲ್ಲಿನ ಪ್ರೇತ ಮದುವೆ?
ಪ್ರೇತ ಮದುವೆ ಕೂಡ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿ ನಡೆಯುತ್ತದೆ. ಕೂಡ್ಲಿಯಲ್ಲಿ ಸಾಮಾನ್ಯ ಮದುವೆಯ ಸಂಪ್ರದಾಯದಂತೆ ನಡೆಸಲಾಗುತ್ತದೆ. ಸಣ್ಣ ಪ್ರಾಯದಲ್ಲಿ, ಅವಘಡದಲ್ಲಿ ಸತ್ತು ಹೋದರೆ ಅವರು ಪ್ರೌಢ ವಯಸ್ಸು ದಾಟಿ ಮದುವೆ ವಯಸ್ಸಿಗೆ ಬಂದಾಗ ತಮ್ಮ ಇರವನ್ನು ನಾನಾ ಘಟನೆಗಳ ಮೂಲಕ ತೋರಿಸುತ್ತಾರೆ ಎಂಬ ನಂಬಿಕೆ ಇದೆ. ಪ್ರಶ್ನೆ ಚಿಂತನೆ ವೇಳೆ ಈ ವಿಚಾರ ಬೆಳಕಿಗೆ ಬಂದಾಗ ಇದೇ ರೀತಿ ಸಾವಿಗೀಡಾದ ಅದೇ ವಯಸ್ಸಿನ ಗಂಡು/ಹೆಣ್ಣಿನ ಹುಡುಕಾಟ ನಡೆಯುತ್ತದೆ. ಹಾಗೆ ಸೂಕ್ತ ಜೊತೆ ಸಿಕ್ಕವರು ಅಮಾವಾಸ್ಯೆ ದಿನ ಕೂಡ್ಲಿ ದೇವಸ್ಥಾನಕ್ಕೆ ಬಂದು ಮದುವೆ ಮಾಡಿಸಲು ಅವಕಾಶವಿದೆ.
ಮೊದಲಿಗೆ ಕ್ಷೇತ್ರದ ಪುರೋಹಿತರ ಬಳಿ ಈ ಬಗ್ಗೆ ಮಾತನಾಡಿ ದಿನಾಂಕ ನಿಗದಿಗೊಳಿಸಬೇಕು. ಮದುವೆಯಂದು ಎರಡೂ ಕಡೆಯವರನ್ನು ಒಟ್ಟು ಸೇರಿಸಿ ನಿಶ್ಚಿತಾರ್ಥ ಮಾಡಲಾಗುತ್ತದೆ. ಅನಂತರ ಮದುಮಗಳ ಸೀರೆ, ಮದುಮಗನ ಬಟ್ಟೆಗಳನ್ನು ಕೈ ಬದಲಾಯಿಸಲಾಗುತ್ತದೆ. ಸುಲಿಯದ ಎರಡು ತೆಂಗಿನ ಕಾಯಿಯಲ್ಲಿ ಗಂಡು ಪ್ರೇತ ಮತ್ತು ಹೆಣ್ಣು ಪ್ರೇತಗಳನ್ನು ಪ್ರಾರ್ಥನೆ ಮೂಲಕ ಆವಾಹನೆ ಮಾಡಿ ತೀರಿ ಹೋದ ಪ್ರೇತಾತ್ಮದ ಜಾತಿಯ ಸಂಪ್ರದಾಯದಂತೆ ಪುರೋಹಿತರು ಮದುವೆ ಮಾಡಿಸುತ್ತಾರೆ. ತೆಂಗಿನಕಾಯಿಯ ಮೇಲಿನ ಹಿಂಗಾರ ಬದಲಾಯಿಸಿ ಮದುವೆ ನಡೆಯುತ್ತದೆ. ಗಂಡಿನ ಪ್ರೇತದ ಕಡೆಯವರು ಹೆಣ್ಣು ಪ್ರೇತ ಆವಾಹಿಸಲಾದ ತೆಂಗಿನ ಕಾಯಿಗೆ ತಾಳಿ ಕಟ್ಟುವುದರೊಂದಿಗೆ ವಿವಾಹ ವಿಧಿವತ್ತಾಗಿ ನಡೆಯುತ್ತದೆ.
ಪ್ರೇತ ಮದುವೆಗೂ ಕೂಡ್ಲಿಗೂ ಏನು ಸಂಬಂಧ?
ಮಾರ್ಕಂಡೇಯ ಮುನಿಯೇ ಈ ದೇವಸ್ಥಾನವನ್ನೂ ಸ್ಥಾಪಿಸಿದವರು ಎಂದು ನಂಬಲಾಗಿದೆ. ಸಾಮಾನ್ಯವಾಗಿ ಜನಾರ್ದನ ಅರ್ಥಾತ್ ವಿಷ್ಣು ಅಂದ್ರೆ ಶಂಖ, ಚಕ್ರ, ಗದಾ, ಪದ್ಮ ಧಾರಿ. ಆದರೆ ಕೂಡ್ಲಿಯ ಜನಾರ್ದನ ದೇವರೆಂದರೆ ಶಂಖ, ಚಕ್ರ, ಗದಾ, ಪಿಂಡಧಾರಿ. ಜನಾರ್ದನನೇ ಪಿಂಡಧಾರಿ ಆಗಿರುವುದರಿಂದ ಪಿಂಡ ಹಾಗೂ ಪಿತೃಗಳ ಕಾರ್ಯ, ಪ್ರೇತಕ್ಕೆ ಮದುವೆ ಇಲ್ಲಿ ನ ವಿಶೇಷತೆ. ಇಲ್ಲಿ ಪ್ರೇತ ಮದುವೆ ನಡೆಸಿದವರು ತಮ್ಮ ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಪುರೋಹಿತರಾಗಿರುವ ಕೂಡ್ಲಿ ಗಣಪತಿ ಉಡುಪರು.
ಜೋಡಿ ಸಿಗದವರಿಗೂ ಇಲ್ಲಿ ಪರಿಹಾರವಿದೆ
ಮದುವೆಯಾಗುವ ಗಂಡು-ಹೆಣ್ಣು ಪ್ರೇತಗಳು ಬೇರೆ ಬೇರೆ ಗೋತ್ರ ಅಥವಾ ಬಳಿಗೆ ಸೇರಿದವು ಆಗಿರಬೇಕು. ಪ್ರೇತಗಳ ವಯಸ್ಸು, ಜಾತಿ, ಕುಲ ಎಲ್ಲ ನೋಡಬೇಕು. ಹೀಗಾಗಿ ಹೆಚ್ಚಿನ ಕಡೆಗಳಲ್ಲಿ ಗಂಡು-ಹೆಣ್ಣು ಪ್ರೇತಾತ್ಮಗಳಿಗೆ ಸರಿಯಾದ ಜೋಡಿ ಸಿಗದೆ ಪರಿತಪಿಸಬೇಕಾಗುತ್ತದೆ. ಒಂದು ವೇಳೆ ಜೋಡಿ ಸಿಗದಿದ್ದರೆ ಅದಕ್ಕೂ ಇಲ್ಲಿ ಪರಿಹಾರವಿದೆ. ತೆಂಗಿನ ಗಿಡವನ್ನೇ ಪ್ರೇತ ಸ್ವರೂಪಿ ಎಂದು ಕಲ್ಪಿಸಿ, ಆವಾಹಿಸಿ ಅದಕ್ಕೆ ಮದುವೆ ಮಾಡಲಾಗುತ್ತದೆ.
ವರ್ಷದಿಂದ ವರ್ಷಕ್ಕೆ
ಪ್ರೇತ ಮದುವೆ ಹೆಚ್ಚಳ
ಆಧುನಿಕ ಕಾಲಘಟದಲ್ಲೂ ಕುಲೆ ಮದುವೆ ಬಲವಾಗಿ ಬೇರೂರುತ್ತಿರುವುದಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕುಲೆ ಮದುವೆಗಳೇ ಸಾಕ್ಷಿ. ಉಡುಪಿ, ದ.ಕ. ಮಾತ್ರವಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಮುಂಬಯಿಯಿಂದಲೂ ಪ್ರೇತ ಮದುವೆಗೆ ಬರುತ್ತಾರೆ.
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.