Hunsur: ಕಂದಾಯ ಇಲಾಖೆ ಎಡವಟ್ಟು; ಜೀವಂತ ವ್ಯಕ್ತಿಯನ್ನೇ ದಾಖಲೆಯಲ್ಲಿ ಕೊಂದ ಸಿಬ್ಬಂದಿ!
ಒಂದು ಎಕರೆ ಭೂಮಿಯನ್ನು ರಮೇಶ್ ಪತ್ನಿ ಸುಮತಿ ಅವರಿಗೆ ನೋಂದಣಿ ಮಾಡಿಸಿದ್ದರು.
Team Udayavani, Oct 27, 2023, 4:33 PM IST
ಹುಣಸೂರು: ಕಂದಾಯ ಇಲಾಖೆ ಭೂಮಿ ವಿಭಾಗದ ಸಿಬ್ಬಂದಿ ಎಡವಟ್ಟಿನಿಂದಾಗಿ ಬದುಕಿರುವ ರೈತನನ್ನು ದಾಖಲೆಯಲ್ಲಿ
ಮರಣ ಹೊಂದಿದ್ದಾರೆಂದು ದಾಖಲಿಸಿದ್ದಲ್ಲದೆ, ಪ್ರಶ್ನಿಸಿದ ರೈತನಿಗೆ ಬದುಕಿರುವ ಬಗ್ಗೆ ದೃಢೀಕರಣ ಸಹಿತ ಅರ್ಜಿ ಸಲ್ಲಿಸಿದ್ದಲ್ಲಿ ತಿದ್ದುಪಡಿ ಮಾಡಿಕೊಡಲಾಗುವುದೆಂಬ ಉಚಿತ ಸಲಹೆ ನೀಡಿ ಕಳುಹಿಸಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿ ಹಿಂಡಗುಡ್ಲು ಗ್ರಾಮದ ಸುಮತಿ ಅವರ ಪತಿ ರಮೇಶ್‌ರನ್ನೇ ಆರ್‌ಟಿಸಿಯಲ್ಲಿ ಸುಮತಿ ಲೇ. ರಮೇಶ್ ಎಂದು ದಾಖಲಿಸಿದ್ದು, ಬೇಜವಾಬ್ದಾರಿ ಉತ್ತರ ನೀಡಿದ ಸಿಬ್ಬಂದಿ ವಿರುದ್ಧ ಆಕ್ರೋಶಿತರಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.
ನೋಂದಣಿ ಮಾಡಿಸಿದ್ದರು: ಕಳೆದ ಅ.21ರಂದು ಹುಣಸೂರಿನ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಹಕ್ಕು ಖುಲಾಸೆ ಅನ್ವಯ ರಮೇಶ್ ಪತ್ನಿ ಸುಮತಿಯವರ ತಾಯಿ ಜಾನಕಮ್ಮ ಮತ್ತು ಕುಟುಂಬ ಹಕ್ಕು ಖುಲಾಸೆಯೊಂದಿಗೆ ಹಿಂಡಗುಡ್ಲು ಗ್ರಾಮದ ಸರ್ವೆ ನಂ. 51ರಲ್ಲಿನ ಒಂದು ಎಕರೆ ಭೂಮಿಯನ್ನು ರಮೇಶ್ ಪತ್ನಿ ಸುಮತಿ ಅವರಿಗೆ ನೋಂದಣಿ ಮಾಡಿಸಿದ್ದರು.
ಭೂಮಿ ವಿಭಾಗದ ಸಿಬ್ಬಂದಿ ಎಡವಟ್ಟು: ಉಪ ನೋಂದಣಾಧಿಕಾರಿ ಕಚೇರಿಯಿಂದ ಕಂದಾಯ ಇಲಾಖೆ ಭೂಮಿ ವಿಭಾಗಕ್ಕೆ ದಾಖಲೆ ರವಾನೆ ಯಾಗಿತ್ತು. ಅಲ್ಲಿನ ಸಿಬ್ಬಂದಿ ದಾಖಲೆ (ಮ್ಯುಟೇಷನ್ ರಿಜಿಸ್ಟರ್ ಪ್ರತಿ)ತಯಾರು ಮಾಡುವ ವೇಳೆ ಸುಮತಿ ಕೋಂ ರಮೇಶ್ ಹೆಸರಿನ ಬದಲಿಗೆ ಸುಮತಿ ಲೇ. ರಮೇಶ್ ಎಂದು ನಮೂದಿಸಿದ್ದು. ಪಹಣಿಯಲ್ಲೂ ಇದೇ ರೀತಿ ದಾಖಲಾಗಿದೆ.
ಬದುಕಿರುವಾಗಲೇ ಲೇಟ್ ನಮೂದು ಬೇಸರ: ರಮೇಶ್ ಅ.25ರಂದು ಪಡೆದ ಆರ್‌ಟಿಸಿಯಲ್ಲಿ ತಾವು ಜೀವಂತವಾಗಿದ್ದರೂ, ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ನಿಖರವಾದ ಮಾಹಿತಿ ನೀಡಿದ್ದರೂ ಭೂಮಿ ವಿಭಾಗದಲ್ಲಿ ಲೇಟ್ ಎಂದು ಸೇರಿಸಿ ಮರಣ ಹೊಂದಿದ್ದಾರೆಂದು ದಾಖಲಿಸಿರು ವುದನ್ನು ಕಂಡು ಬೇಸರ ತೋಡಿಕೊಂಡಿದ್ದಾರೆ.
ಬದುಕಿರುವ ದಾಖಲೆ ನೀಡಬೇಕಂತೆ: ಸಿಬ್ಬಂದಿಯೇ ತಪ್ಪು ಮಾಡಿದ್ದರೂ ನಾವೇ ಪುನಃ ಜೀವಂತ ವಾಗಿದ್ದೇನೆಂದು ತಿದ್ದುಪಡಿಗೆ ಅರ್ಜಿ ನೀಡಿ ದಾಖಲೆ ಸರಿಪಡಿಸಿಕೊಳ್ಳುವ ದುರ್ದೈವ ಬಂದಿರುವುದು ನಿಜಕ್ಕೂ ನೋವುಂಟಾಗಿದೆ ಎನ್ನುತ್ತಾರೆ ನೊಂದ ರೈತ ರಮೇಶ್.
ಶೋಕಾಸ್ ನೋಟೀಸ್
ಮಾಹಿತಿ ಬಂದಿದ್ದು, ದಾಖಲಾತಿ ನೋಡಿದ್ದೇನೆ, ಭೂಮಿ ವಿಭಾಗದ ಸಿಬ್ಬಂದಿ ಕಣ್ತಪ್ಪಿನಿಂದ ಲೇ. ರಮೇಶ್ ಎಂದು ನಮೂದಿಸಿದ್ದಾರೆ. ತಪ್ಪು ಮಾಡಿರುವ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ದಾಖಲೆ ಸರಿಪಡಿಸಲು ರೈತ
ಅರ್ಜಿ ಸಲ್ಲಿಸಲಿ ಎಂದು ತಹಶೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಡಾ.ಯು.ಎಸ್. ಅಶೋಕ್ ತಿಳಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ದಾಖಲಾತಿ ಪಡೆಯುವುದು ಹರಸಾಹಸವಾಗಿದೆ. ರಮೇಶ್ ವಿಚಾರದಲ್ಲಿ ತಪ್ಪು ಮಾಡಿರುವ ಸಿಬ್ಬಂದಿ ಮೇಲೆ ಕ್ರಮವಾಗ ಬೇಕು. ಮುಂದೆ ಹೀಗಾಗದಂತೆ ನೋಡಿ ಕೊಳ್ಳಬೇಕು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗುವುದು.
● ಬಸವಲಿಂಗಯ್ಯ, ಟಿಎಪಿಸಿಎಂಎಸ್ ನಿರ್ದೇಶಕ, ಹುಣಸೂರು
*ಸಂಪತ್ ಕುಮಾರ್ ಹುಣಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.