ಕೋವಿಡ್ 19 ಯುಗದಲ್ಲಿ ನಾನು
Team Udayavani, May 20, 2020, 4:09 AM IST
ರಜೆ, ವಿಶ್ರಾಂತಿ ಎಂಬ ಪದಗಳೇ ನನಗೆ ಗೊತ್ತಿಲ್ಲ. ಕೆಲಸದ ಸ್ವರೂಪ ಬದಲಾಯಿಸಿಕೊಳ್ಳುವುದಷ್ಟೇ ಗೊತ್ತಿರುವುದು. ನನ್ನ ಪರಿವಾರವೆಲ್ಲ ಕ್ಷೇಮವಿದ್ದರೂ, ಹೊರಜಗತ್ತಿನ ವಿಷಾದ, ವಿಷಣ್ಣತೆ ನನ್ನನ್ನು ಆಕ್ರಮಿಸಿಕೊಂಡಿತ್ತು. ಇದು ಸೃಜನಶೀಲ ಕ್ಷಣ ಅನ್ನಿಸಲಿಲ್ಲ. ಒಂದಕ್ಷರ ಬರೆಯಲಾಗಲಿಲ್ಲ. ಜನ ನರಳುವಾಗ, ಸಾಯುವಾಗ ಅದರ ಬಗ್ಗೆ ಕತೆ, ಕವನ ಬರೆಯುವುದು ಕ್ರೌರ್ಯ ಅನಿಸಿತು. ಅಸಂಘಟಿತ ಕಾರ್ಮಿಕರಿಗೆ ಕೊಂಚ ನೆರವಾಗಿದ್ದೇನೆ. ವಿದ್ಯಾರ್ಥಿಗಳೊಂದಿಗೆ ನಾನೂ ಸೇರಿ ರಕ್ತದಾನ ಮಾಡಿದ್ದೇನೆ. ಕೆಲವು ಬಡ ಕುಟುಂಬಗಳನ್ನು ಜತೆಗೇ ಇರಿಸಿಕೊಂಡಿದ್ದೇನೆ. ಸಮಾನತೆ, ಸ್ನೇಹ, ಹಾಸ್ಯಪ್ರಜ್ಞೆ ನಮ್ಮ ಕುಟುಂಬದ ಜೀವಾಳ. ಆದ್ದರಿಂದ ಕೋವಿಡ್ 19 ನಮಗೆ ಎಂದೂ ಅಸಹನೀಯ ಅನಿಸಲಿಲ್ಲ.
ಕೋವಿಡ್ 19 ತಂದ ವರಗಳು:
1. ಮಿನಿಮಮ್ ಹತ್ಸಾವ್ರ ಜನ ಸೇರದ ಸಭೆಗೆ ನಾನು ಬರಲ್ಲ,
ಅಂತಿದ್ದೋರು ಮನೇಲಿ ಬಾಯಿ ಮುಚ್ಚಿಕೊಂಡು ಕೂತಿರೋದು.
2. ಸಾಹಿತಿ, ರಾಜಕಾರಣಿಗಳ ಭಾಷಣಗಳಿಂದ ಮುಕ್ತಿ.
3. ಒಳಗೆ ಮುಖವಾಡ, ಹೊರಗೆ ಮುಖಗವಸು-ಎಂಬ ಹೊಸ ಅರ್ಧ ಮನುಷ್ಯ ನೋಡಲು ಸಿಕ್ಕಿದ್ದು.
4. ದೇವರು,ಆಚರಣೆ ನಿರುಪಯುಕ್ತ ಅಂತ ತಿಳೀತಲ್ಲ? ಈಗಲಾದರೂ ಜನ ತಂತಮ್ಮ ತೀರ್ಥ ಕ್ಷೇತ್ರ, ಪೂಜಾಮಂದಿರ, ಮತ್ತು ಧರ್ಮದ ಗುತ್ತಿಗೆದಾರರಿಂದ ವಿವೇಚನಾ ಅಂತರ’ ಕಾಯ್ದುಕೊಳ್ತಾರೇನೋ; ಇನ್ಮೆಲಾದ್ರೂ ಸರಳ ವಿವಾಹಗಳು ಶುರುವಾಗ್ತವೇನೋ ಅನ್ನೊ ಆಸೆ ಹುಟ್ಸೆದ್ದು.
5. ಯಾವ ಇಸಮ್ಮೂ ತರಲಾಗದ ಸಮಾನತೆಯನ್ನು ಕೋವಿಡ್ 19 ಮಾರಿ ತಂದಿದ್ದು.
6. ನಗರದ ರಸ್ತೇಲಿ ನವಿಲು ಕುಣಿದದ್ದು; ಮಟಮಟ ಮಧ್ಯಾಹ್ನವೂ ಕೋಗಿಲೆ ಹಾಡಿದ್ದು.
ಕೋವಿಡ್ 19 ತೋರಿದ ವಿಕೃತಿಗಳು:
1. ಮುಂದಿನ ಎಲೆಕ್ಷನ್ಗೆ ಈಗಲೇ ಬಂಡವಾಳ ಹೂಡಿದ ಫುಲ್ ಪೇಜ್ ಜಾಹೀರಾತಿನ ಅನ್ನದಾನಿಗಳು.
2. ದಾನಿಗಳ ಪ್ಯಾಕೆಟ್ ಮೇಲೆ ತಮ್ಮ ಹೆಸರು ಹಚ್ಚಿ, ಮರುದಾನಗೈದು ಫೋಟೋ ಪ್ರದರ್ಶಿಸಿದ ಶಾಸಕರು.
3. ಎಲ್ಲವನ್ನೂ ಕಾಳಸಂತೆಯಲ್ಲಿ ಮಾರಿದವರು.
4. ಸಿಗರೇಟಿನಲ್ಲೂ ಕೋಟಿ ಕಬಳಿಸಿದ ಪೊಲೀಸರು.
5. ಶವ ಸಂಸ್ಕಾರಕ್ಕೂ ಬಿಡದ ನೀಚ ಮನಸ್ಸುಗಳು.
6. ಬಡಪಾಯಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ ಅನಾಗರಿಕರು.
* ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಚಿತ್ರ ನಿರ್ದೇಶಕರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.