ಬಿಜೆಪಿ ಬಗ್ಗೆ ನನಗೆ ಸಾಫ್ಟ್ ಕಾರ್ನರ್ ಇಲ್ಲ
Team Udayavani, Nov 3, 2019, 3:09 AM IST
ಬೆಂಗಳೂರು: ರಾಜ್ಯದಲ್ಲಿ ಈಗ ಮತ್ತೆ ವಿಧಾನಸಭಾ ಚುನಾವಣೆ ನಡೆದರೂ ಅತಂತ್ರ ಫಲಿತಾಂಶವೇ ಬರುತ್ತದೆ. ಯಾವೊಂದು ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ. ಜತೆಗೆ, “ನನಗೆ ಬಿಜೆಪಿ ಸರ್ಕಾರದ ಮೇಲೆ ಸಾಫ್ಟ್ ಕಾರ್ನರ್ ಇಲ್ಲ. ನಾನು ಈ ಸರ್ಕಾರ ಅಥವಾ ಯಡಿಯೂರಪ್ಪ ಅವರನ್ನು ಅಪ್ಪಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್‌ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ಬಿಜೆಪಿ ಸಚಿವರೇ ಹೇಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಆಂತರಿಕ ಸಭೆಯಲ್ಲಿ ಯಡಿಯೂರಪ್ಪ ಅವರು, “ನನಗೆ ಸಿಎಂ ಪದವಿ ಬೇಕಿರಲಿಲ್ಲ’ ಎಂದು ಹೇಳಿದ್ದಾರೆ. ಇದು ರಾಜ್ಯ ರಾಜ ಕೀಯದ ಸ್ಥಿತಿ ಎಂದು ಹೇಳಿದರು.
ಕುಮಾರಸ್ವಾಮಿಯವರ ವಾಕ್ ವೈಖರಿ ಹೀಗಿತ್ತು
* ಉಪ ಚುನಾವಣೆ ನಡೆದರೂ ನಾವು ಯಾರ ಜತೆಯೂ ಹೊಂದಾಣಿಕೆ ಮಾಡಿ ಕೊಳ್ಳಲ್ಲ. ಒಂದೊಮ್ಮೆ, ಸಾರ್ವತ್ರಿಕ ಚುನಾವಣೆ ಬಂದರೂ ಮೈತ್ರಿ ಮಾಡಿಕೊಳ್ಳುವುದಿಲ್ಲ.
* ಯಾರೇ ಮುಖ್ಯಮಂತ್ರಿಯಾಗಿರಲಿ, ಒಳ್ಳೆಯ ಅಧಿಕಾರಿಗಳನ್ನು ಇಟ್ಟುಕೊಂಡು ಸಂಕಷ್ಟದಲ್ಲಿರುವ ಜನರ ಸಮಸ್ಯೆ ನಿವಾರಿಸಬೇಕು. ಅದು ಯಡಿಯೂರಪ್ಪ ಆಗಲಿ, ಸಿದ್ದರಾಮಯ್ಯ ಆಗಲಿ, ನನ್ನ ಬೆಂಬಲ ಇರುತ್ತದೆ. ನನಗೆ ಜನರ ಹಿತ ಮುಖ್ಯ. ಹೀಗಾಗಿ, ತಕ್ಷಣಕ್ಕೆ ಚುನಾವಣೆ ಬೇಡ ಎಂಬುದು ನನ್ನ ಅನಿಸಿಕೆ. ಆದರೆ, ಬಿಜೆಪಿಯವರೇ ಡಿಸೆಂಬರ್, ಫೆಬ್ರವರಿ ಒಳಗೆ ಚುನಾವಣೆಗೆ ಹೋಗ ಬಹುದು ಎಂಬ ಮೂಡ್‌ನಲ್ಲಿದ್ದಾರೆ.
* ಒಬ್ಬ ಸಚಿವರು ಯಾವುದೇ ಅನಿರೀಕ್ಷಿತ ಘಟನೆಗಳು ನಡೆಯದೆ ಸರ್ಕಾರ ಇದ್ದರೆ ಜನವರಿ ವೇಳೆಗೆ ಹೊಸ ನೀತಿ ಜಾರಿಗೊಳಿ ಸಲಾಗುವುದು ಎಂದು ತಿಳಿಸಿದ್ದಾರೆ. ಇದರ ಅರ್ಥ ಅವರಿಗೆ ಸರ್ಕಾರದ ಉಳಿವಿನ ಬಗ್ಗೆ ನಂಬಿಕೆ ಇಲ್ಲ ಎಂದು ತಾನೆ?.
* ಪ್ರವಾಹ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರದ ಕ್ರಮ ನನಗೆ ಸಮಾಧಾನ ತಂದಿಲ್ಲ. ಆದರೆ, ಉಗ್ರವಾಗಿ ಟೀಕೆ ಮಾಡುತ್ತಿಲ್ಲ. ಬದಲಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗಿ, ನಾನು ನಿಮ್ಮ ಜತೆ ಇದ್ದೇನೆ ಎಂದು ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಹೇಳಲು ಬಯಸುತ್ತೇನೆ.
* ಬೆಳಗಾವಿಯಲ್ಲಿ 1.13 ಲಕ್ಷ ಹೆಕ್ಟೇರ್ ಕಬ್ಬು ಬೆಳೆ ಹಾಳಾಗಿದೆ. ಹಾವೇರಿಯಲ್ಲಿ ಗೋವಿನ ಜೋಳ, ಈರುಳ್ಳಿ ರಾಶಿ, ರಾಶಿ ನೀರಿನಲ್ಲಿ ಬಿದ್ದಿದೆ. ಮನೆ ಕಳೆದುಕೊಂಡವರಿಗೆ ಸರ್ಕಾರ ಕೊಡುವುದಾಗಿ ಹೇಳಿರುವ ಐದು ಲಕ್ಷ ರೂ.ನೆರವಿನಿಂದ ಯಾವುದೇ ಪ್ರಯೋಜನವಾಗದು. ಈಗಿರುವ ಜಾಗದಲ್ಲಿ ಮನೆ ಕಟ್ಟಿಕೊಟ್ಟರೂ ಮತ್ತೆ ಅದೇ ಸಮಸ್ಯೆ. ಹೀಗಾಗಿ, ಬೇರೆ ಕಡೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ಸೂಕ್ತ.
* ಜೆಡಿಎಸ್‌ನ ಶಾಸಕರು ಬಿಜೆಪಿಗೆ ಹೋಗುವುದನ್ನು ತಡೆಯಲು ಅಥವಾ ನನ್ನ ಮೇಲೆ ಐಎಂಎ, ಫೋನ್ ಟ್ಯಾಫಿಂಗ್ ಪ್ರಕರಣದಲ್ಲಿ ಸಿಬಿಐ, ಐಟಿ ದಾಳಿ ಮಾಡಿಸುತ್ತಾರೆ ಎಂಬ ಭಯದಿಂದ ನಾನು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಆಗಿಲ್ಲ. ಆದರ ಆಗತ್ಯವೂ ಇಲ್ಲ. 2008ರಲ್ಲಿ ಇದೇ ಯಡಿಯೂರಪ್ಪ ವಿರುದ್ಧ ದಾಖಲೆ ಸಮೇತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವನು ನಾನು.
* 2006ರಲ್ಲಿ ಬಿಜೆಪಿ ಜತೆ ಹೋಗಿ ನನ್ನ ತಂದೆ ದೇವೇಗೌಡರಿಗೆ ನೋವು ಕೊಟ್ಟಿದ್ದೆ. ಅದಾದ ನಂತರ ಎಂದೂ ಅವರ ಇಚ್ಛೆಗೆ ವಿರುದ್ಧವಾಗಿ ನಡೆದು ಕೊಂಡಿಲ್ಲ. 2018ರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಜತೆ ಮೈತ್ರಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಕುರಿತು ಅವರದೇ ಅಂತಿಮ ತೀರ್ಮಾನ. ದೇಶದ ಪ್ರಧಾನಿಯೇ ಕಾಂಗ್ರೆಸ್ ಜತೆಗಿನ ಸರ್ಕಾರದಲ್ಲಿ ನಿನಗೆ ಒಳ್ಳೆಯ ಹೆಸರು ಬರುತ್ತಿಲ್ಲ, ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ. ಬೆಳಗ್ಗೆ ರಾಜೀನಾಮೆ ನೀಡು, ಸಂಜೆ ಬಿಜೆಪಿ ಸಹಕಾರದೊಂದಿಗೆ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸು ಎಂದು ಆಫರ್ ನೀಡಿದಾಗಲೂ ನಾನು ನನ್ನ ತಂದೆಗಾಗಿ ರಿಜೆಕ್ಟ್ ಮಾಡಿ ಬಂದವನು.
* ನಾನು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದ್ದೇನೆ. ಈಗಲೂ ಬೆಳಗಾವಿ, ಹಾವೇರಿ, ವಿಜಯಪುರ, ಧಾರವಾಡ…ಎಲ್ಲೇ ಹೋದರೂ ರೈತರು ನಮ್ಮ ಸಾಲ ಮನ್ನಾ ಆಯ್ತು ಎಂದು ಹಾರ ಹಾಕುತ್ತಾರೆ. ಹದಿನೈದು ಲಕ್ಷ ರೈತರ ಮೊಬೈಲ್ ಸಂಖ್ಯೆ ನನ್ನ ಬಳಿ ಇದೆ. ಎಲ್ಲರಿಗೂ ದೀಪಾವಳಿ ಶುಭಾಶಯದ ವಾಯ್ಸ ಮೆಸೇಜ್ ಕಳುಹಿಸಿದ್ದೇನೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಎಷ್ಟೆಷ್ಟು ರೈತರ ಸಾಲ ಮನ್ನಾ ಆಗಿದೆ ಎಂಬುದರ ಬಗ್ಗೆ ಕ್ಷೇತ್ರವಾರು ಬುಕ್‌ಲೆಟ್ ಸಿದ್ಧ ಮಾಡುತ್ತಿದ್ದೇನೆ. ಇನ್ನೂ ಹಲವು ರೈತರ ಸಾಲ ಮನ್ನಾ ತಾಂತ್ರಿಕ ಕಾರಣಕ್ಕೆ ಆಗಿಲ್ಲ. ಅವರಿಗೆ ನೆರವಾಗಲು ವೆಬ್‌ಸೈಟ್ ಸಹ ಮಾಡಿ, ಸಹಾಯವಾಣಿ ಪ್ರಾರಂಭಿಸಿದ್ದೇನೆ.
ಯಡಿಯೂರಪ್ಪ ಅವರು ನೇಕಾರರ ಸಾಲ ಮನ್ನಾ ಹಾಗೂ ಮೀನುಗಾರರ ಸಾಲ ಮನ್ನಾ ಅಂತಾರೆ. ಅದು ದಾಖಲೆಗಷ್ಟೇ ಸೀಮಿತ. ಅವರು ಎಷ್ಟು ಜನರ ಸಾಲ ಮನ್ನಾ ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಕೊಡಲಿ.
-ಕುಮಾರಸ್ವಾಮಿ, ಮಾಜಿ ಸಿಎಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.