Rubber: ಕನಿಷ್ಠ ಬೆಂಬಲ ಬೆಲೆ ನೀಡದಿದ್ದರೆ ರಬ್ಬರ್‌ಗೆ ಭವಿಷ್ಯ ಇಲ್ಲ- ಬೆಳೆಗಾರರ ಆತಂಕ
Team Udayavani, Dec 15, 2023, 12:34 AM IST
ಮಂಗಳೂರು: ಪ್ರಸ್ತಾವಿತ ರಬ್ಬರ್ ಮಸೂದೆ ಜಾರಿಗೆ ಬರುವ ವೇಳೆಗೆ ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಅಂಶವನ್ನು ಸೇರಿಸಲೇಬೇಕು, ಇಲ್ಲವಾದರೆ ರಬ್ಬರ್ ಬೆಳೆಗಾರರಿಗೆ ಭವಿಷ್ಯ ಶೂನ್ಯ ಎಂದು ಹಲವು ರಬ್ಬರ್ ಬೆಳೆಗಾರರು ಆಗ್ರಹಿಸಿದ್ದಾರೆ.
ರಬ್ಬರ್ (ಪ್ರೋತ್ಸಾಹನ ಮತ್ತು ಅಭಿವೃದ್ಧಿ) ಮಸೂದೆ-2023ರ ಕುರಿತು ರಬ್ಬರ್ ಮಂಡಳಿಯು ನಗರದಲ್ಲಿ ಹಮ್ಮಿಕೊಂಡ ಬೆಳೆಗಾರರ ಸಮಾಲೋಚನ ಸಭೆಯಲ್ಲಿ ಪಾಲ್ಗೊಂಡ ಉಡುಪಿ, ದ.ಕ. ಜಿಲ್ಲೆ ಅಲ್ಲದೆ ಕೇರಳದ ಕಾಸರಗೋಡು, ಕಾಂಞಂಗಾಡು ಭಾಗದಿಂದ ಆಗಮಿಸಿದ್ದ ಹಲವು ಬೆಳೆಗಾರರು ಕನಿಷ್ಠ ಬೆಂಬಲ ಬೆಲೆ ಕೊಡಲೇಬೇಕು ಎಂದು ಒತ್ತಾಯಿಸಿದರು.
ಕಡಬ ಪೇರಡ್ಕದ ಬೆಳೆಗಾರ ಎ.ಕೆ. ವರ್ಗೀಸ್ ಮಾತನಾಡಿ, ಒಂದೆಡೆ ರಬ್ಬರ್ ಬೆಳೆ ಕುಸಿಯುತ್ತಲೇ ಇದೆ. ಕೇರಳದಲ್ಲಿ ಕನಿಷ್ಠ ಬೆಂಬಲ ಬೆಲೆ ಕೊಡುತ್ತಾರೆ, ಆದರೆ ಕೇಂದ್ರ ಸರಕಾರವಾಗಲಿ ಕರ್ನಾಟಕ ಸರಕಾರವಾಗಲೀ ಬೆಂಬಲ ಬೆಲೆ ನೀಡುತ್ತಿಲ್ಲ ಎಂದರು. ಬೆಳ್ತಂಗಡಿ ರಬ್ಬರ್ ಸೊಸೈಟಿಯ ಸಿಇಒ ರಾಜು ಶೆಟ್ಟಿ ಮಾತನಾಡಿ, ಎಲ್ಲೂ ಮಸೂದೆಯಲ್ಲಿ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಪ್ರಸ್ತಾವಿಸಿಲ್ಲ. ಅದಿಲ್ಲದೆ ಹೋದರೆ ನಮಗೆ ಭವಿಷ್ಯವೇ ಇಲ್ಲ ಎಂದರು.
ವರ್ಷದ ಆರಂಭದಲ್ಲೇ ಬೆಂಬಲ ಬೆಲೆ ಘೋಷಿಸಿ
ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಸದಸ್ಯ ಜಿ.ಕೆ. ಭಟ್ ಮಾತನಾಡಿ, ಸರಕಾರ ವರ್ಷದ ಆರಂಭದಲ್ಲೇ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಅಲ್ಲದೆ ಆಮದು ಮಾಡುವುದನ್ನು ಕಡಿಮೆ ಮಾಡಿ ಸ್ಥಳೀಯ ಬೆಳೆಗಾರರ ಹಿತವನ್ನು ಗಮನಿಸಬೇಕು. ರಾಜ್ಯದಲ್ಲಿ ರಬ್ಬರ್ ಟ್ಯಾಪರ್‌ಗಳ ಕೊರತೆ ಇದೆ, ಅದಕ್ಕಾಗಿ ಝಾರ್ಖಂಡ್, ಛತ್ತಿಸ್‌ಗಢ ಮುಂತಾದ ರಾಜ್ಯಗಳಿಂದ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ ಅವರನ್ನು ಈ ಭಾಗದ ತೋಟಗಳಲ್ಲಿ ನಿಯೋಜನೆ ಮಾಡುವ ಬಗ್ಗೆ ಗಮನಹರಿಸಬೇಕು ಎಂದರು.
ಅಜೆಕಾರಿನ ರಬ್ಬರ್ ಸೊಸೈಟಿಯ ಥೋಮಸ್ ಲ್ಯೂಕಾಸ್ ಮಾತನಾಡಿ, ರಬ್ಬರ್‌ಗೆ ಹಿಂದೆಯೇ 170 ರೂ.ನಷ್ಟು ಕನಿಷ್ಠ ಉತ್ಪಾದನ ವೆಚ್ಚ ಇದೆ. ಆದರೆ ಈಗ ಮಾರುಕಟ್ಟೆ ದರ 150 ರೂ.ಗಳಲ್ಲಿರುವಾಗ ಬೆಳೆಗಾರರು ಬದುಕಲು ಸಾಧ್ಯವಿಲ್ಲ, ಮಸೂದೆಯಲ್ಲಿ ಕೇವಲ ರಬ್ಬರ್ ಮಂಡಳಿ ಹಾಗೂ ರಬ್ಬರ್ ಮಾರುಕಟ್ಟೆ ಬಗ್ಗೆ ಹೇಳಿದರೆ ಸಾಲದು, ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಅತ್ಯಂತ ಮುಖ್ಯ, ಅದು ನೀಡಿದರೆ ಎಲ್ಲವೂ ಸರಿಯಾದೀತು ಎಂದು ಹೇಳಿದರು.
ಕರ್ನಾಟಕಕ್ಕೆ ಸ್ಥಾನ ನೀಡಿ
ರಾಜ್ಯದಲ್ಲಿ 60 ಸಾವಿರದಷ್ಟು ರಬ್ಬರ್ ಬೆಳೆಗಾರರಿದ್ದೇವೆ, ಆದರೆ ಸಣ್ಣ ರಾಜ್ಯ ತ್ರಿಪುರಕ್ಕೂ ಮಂಡಳಿಯಲ್ಲಿ ಸದಸ್ಯತ್ವ ನೀಡಲಾಗಿದೆ, ಕೇರಳ, ತಮಿಳುನಾಡಿಗೆ ಸದಸ್ಯತ್ವ ಇದೆ, ಆದರೆ ಕರ್ನಾಟಕಕ್ಕೆ ಒಂದೇ ಒಂದು ಸದಸ್ಯತ್ವ ಸ್ಥಾನ ನೀಡಿಲ್ಲ, ಇದನ್ನು ಸರಿಪಡಿಸಲೇಬೇಕು ಎಂದು ಬೆಳೆಗಾರ ಕರ್ನಲ್ ಶರತ್ ಭಂಡಾರಿ ಆಗ್ರಹಿಸಿದರು.
ಟ್ಯಾಪಿಂಗ್‌ಗೆ ತರಬೇತಿ ಅಗತ್ಯ
ಅರುವ ಸೊಸೈಟಿಯ ಸುಕನ್ಯಾ ಮಾತನಾಡಿ, ರಬ್ಬರ್ ಟ್ಯಾಪಿಂಗ್‌ಗೆ ನುರಿತ ಕೆಲಸಗಾರರು ಸಿಗುತ್ತಿಲ್ಲ, ರಾಜ್ಯದಲ್ಲಿ ಅದಕ್ಕಾಗಿ ಅಂತಹವರಿಗೆ ಸೂಕ್ತ ತರಬೇತಿ ಕೋರ್ಸ್‌ಗಳನ್ನು ನೀಡುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದರು.
ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ವಸಂತಗೇಸನ್ ಮಾತನಾಡಿ, ಬೆಳೆಗಾರರು ಒತ್ತಾಯಿಸಿರುವಂತೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು, ಆದರೆ ಅದನ್ನು ಮಸೂದೆಗೆ ಸೇರ್ಪಡೆ ಮಾಡುವುದು ಕಷ್ಟಸಾಧ್ಯ, ಉಳಿದಂತೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದರು.
ಉಪನಿರ್ದೇಶಕ ಇ.ಎ. ಮ್ಯಾಥ್ಯೂ ರಬ್ಬರ್ ಮಸೂದೆಯ ಬಗ್ಗೆ ವಿವರ ನೀಡಿದರು. ಮಂಗಳೂರು ಪ್ರಾದೇಶಿಕ ಕಚೇರಿಯ ಉಪ ರಬ್ಬರ್ ಆಯುಕ್ತೆ ಟಿ.ಪಿ. ಶೀಜಾ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಟಿ.ವಿ. ಮ್ಯಾಥ್ಯೂ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.