ಕೊಟ್ಟರೆ ಸಂಪುಟ ದರ್ಜೆ ಸ್ಥಾನ ಕೊಡಿ
Team Udayavani, Jan 27, 2020, 3:07 AM IST
ವಿಜಯಪುರ: “ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಿ, ಇಲ್ಲವಾದಲ್ಲಿ ನಾನು ಶಾಸಕನಾಗಿಯೇ ಮುಂದುವರಿಯುತ್ತೇನೆ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಆಗಲ್ಲ. ಕೊಟ್ಟರೆ ಸಂಪುಟ ಸಚಿವ ಸ್ಥಾನವನ್ನೇ ಕೊಡಲಿ, ಇಲ್ಲವೇ ಶಾಸಕನಾಗಿರುವೆ. ಹಾಗಂತ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಕೇವಲ ಭಾಷಣ ಮಾಡಿದರೆ ಸಾಲದು, ರಾಜ್ಯದಲ್ಲಿ ಎಲ್ಲಾ ಸ್ಥಾನಮಾನ ಅನುಭವಿಸಿದವರು ತಮ್ಮ ಸಚಿವ ಸ್ಥಾನ ಬಿಟ್ಟು ಕೊಡಬೇಕೆಂದರು.
ಸಚಿವ ಸಂಪುಟ ವಿಸ್ತರಣೆ ಆಗಲೇಬೇಕಿದ್ದು, ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 17 ಜನರಲ್ಲಿ ಕೆಲವರಿಗೆ ಡಿಸಿಎಂ, ಹಲವರಿಗೆ ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಮಾನ ನೀಡಲು ಮಾತುಕತೆ ಆಗಿದೆ. ಅದರಂತೆ ಸಚಿವರ ನೇಮಕ ಆಗಲಿದೆ ಎಂಬ ವಿಶ್ವಾಸವಿದೆ. ರಮೇಶ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂಬುದು ಸಹಜ ಬಯಕೆ. ಬಹಳ ಲಾಭ ಅನುಭವಿಸಿರುವ ಕೆಲವರು ತ್ಯಾಗ ಮಾಡಬೇಕು.
ಕೆಲವು ಸಚಿವರು ವಿಧಾನಸೌಧಕ್ಕೆ ಸೀಮಿತವಾಗಿದ್ದು, ಗನ್‌ಮ್ಯಾನ್, ಕೆಂಪು ದೀಪದ ಕಾರಿನಲ್ಲಿ ಓಡಾಡಲು ಸಚಿವರಾಗಬೇಕಿಲ್ಲ. ಹೀಗಾಗಿ ಪಕ್ಷದ ಹೈಕಮಾಂಡ್ ಪ್ರತಿ 3 ತಿಂಗಳಿಗೆ ಒಮ್ಮೆ ಸಚಿವರ ಪ್ರಗತಿ ಪರಿಶೀಲನೆ ಮಾಡಬೇಕೆಂದರು. ಡಿಸಿಎಂ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದರಿಂದ ಗೌರವ ಕಡಿಮೆಯಾಗಲಿದ್ದು, ಈ ಕ್ರಮ ಸರಿಯಲ್ಲ ಎಂಬುದು ತನ್ನ ವೈಯಕ್ತಿಕ ಭಾವನೆ. ತನ್ನ ಕೋರಿಕೆ ಮೇರೆಗೆ 15 ದಿನದಲ್ಲಿ ಸಿಎಂ ಯಡಿಯೂರಪ್ಪ ವಿಜಯಪುರಕ್ಕೆ ಬರಲಿದ್ದಾರೆ ಎಂದರು.
ವರಿಷ್ಠರಿಂದ ಸೂಚನೆ ಬಂದರೆ ಸಚಿವ ಸ್ಥಾನ ತ್ಯಾಗ
ತುಮಕೂರು: ಸಚಿವ ಸಂಪುಟ ವಿಸ್ತರಣೆ ವೇಳೆ ಪಕ್ಷದ ವರಿಷ್ಠರಿಂದ ಸಚಿವ ಸ್ಥಾನ ತ್ಯಾಗ ಮಾಡಬೇಕೆಂದು ಸೂಚನೆ ಬಂದರೆ ಹರ್ಷದಿಂದ ಸಚಿವ ಸ್ಥಾನ ತ್ಯಾಗ ಮಾಡುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಡುತ್ತಾರೆಂಬ ವದಂತಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ,
ಪಕ್ಷಕ್ಕೆ ಒಳ್ಳೆಯದಾಗುತ್ತದೆಂದರೆ ಸಚಿವ ಸ್ಥಾನವನ್ನು ಸಂತೋಷದಿಂದಲೇ ತ್ಯಾಗಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದರು. ಪಕ್ಷಕ್ಕೆ ಬಂದವರಿಗೆ ಮೊದಲು ಅವಕಾಶ ನೀಡುವ ಸಲುವಾಗಿ ಸಚಿವ ಸ್ಥಾನ ತ್ಯಾಗ ಸೂಚನೆಯನ್ನು ಹರ್ಷದಿಂದ ಒಪ್ಪಿಕೊಳ್ಳುತ್ತೇನೆ. ಪಕ್ಷ ಹೇಳಿದರೆ ಸಚಿವ ಸ್ಥಾನವಷ್ಟೇ ಅಲ್ಲ, ಶಾಸಕ ಸ್ಥಾನವನ್ನೂ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.