ಬಡ್ಡಿ ದರ ಏರಿಕೆ ಸರಣಿ ನಿಂತರೆ ಎಲ್ಲರಿಗೂ ಅನುಕೂಲ
Team Udayavani, Feb 7, 2023, 6:00 AM IST
ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆ ಸಭೆ ಸೋಮವಾರ ಆರಂಭವಾಗಿದ್ದು, ಬುಧವಾರ ಮುಗಿಯಲಿದೆ. ಬಜೆಟ್ ನಿರೀಕ್ಷೆಯಂತೆಯೇ ಈಗ ಜನ ಹಣಕಾಸು ನೀತಿ ಪರಾಮರ್ಶೆ ಸಭೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದಕ್ಕೆ ಕಾರಣಗಳೂ ಇವೆ. 2019ರ ಜೂನ್ 6ರಿಂದ 2022ರ ಡಿಸೆಂಬರ್ 7ರ ವರೆಗೆ ಆರ್‌ಬಿಐನ ರೆಪೋ ದರ ಗಣನೀಯ ಪ್ರಮಾಣದಲ್ಲಿ ಏರಿಕೆ ಮತ್ತು ಇಳಿಕೆಯ ಹಾದಿಯಲ್ಲಿದೆ.
ಕೊರೊನೋತ್ತರದಲ್ಲಿ ಮಾರುಕಟ್ಟೆಯ ಚೇತರಿಕೆಗಾಗಿ ಆರ್‌ಬಿಐ, ರೆಪೋದರವನ್ನು ಇಳಿಕೆ ಮಾಡಿ ಖರೀದಿಗೆ ಉತ್ತೇಜನ ನೀಡಿತ್ತು. ಅಂದರೆ 2019ರ ಆರ್ಥಿಕ ವರ್ಷದಲ್ಲಿ ಶೇ.6.35ರಷ್ಟಿದ್ದ ರೆಪೋ ದರ 2020ರ ಹಣಕಾಸು ವರ್ಷಕ್ಕೆ ಶೇ.4.40ಕ್ಕೆ ಇಳಿಕೆಯಾಗಿತ್ತು. ಅಷ್ಟೇ ಅಲ್ಲ ಅದೇ ವರ್ಷದ ಮೇ ತಿಂಗಳಲ್ಲಿ ತೀರಾ ಕನಿಷ್ಠವೆಂದರೆ ಶೇ.4ಕ್ಕೆ ಇಳಿಕೆಯಾಗಿತ್ತು. ರಿಸರ್ವ್ ಬ್ಯಾಂಕ್‌ನ ಈ ನಿರ್ಧಾರದಿಂದಾಗಿ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿ ದರವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ, ಖರೀದಿದಾರರ ಮುಖದಲ್ಲಿ ಸಂತಸ ಮೂಡಿತ್ತು. ಅಷ್ಟೇ ಅಲ್ಲ ಮಾರುಕಟ್ಟೆ ಕೂಡ ಉತ್ತಮವಾಗಿ ಚೇತರಿಸಿಕೊಂಡಿತ್ತು.
ಆದರೆ 2022ರ ಹಣಕಾಸು ವರ್ಷದಲ್ಲಿ ಜಾಗತಿಕ ಕಾರಣಗಳಿಂದಾಗಿ ಹಣದುಬ್ಬರದ ಪ್ರಮಾಣ ತೀರಾ ಹೆಚ್ಚಳವಾಯಿತು. ಹೀಗಾಗಿ ಭಾರತ, ಅಮೆರಿಕ, ಇಂಗ್ಲೆಂಡ್, ಐರೋಪ್ಯ ಒಕ್ಕೂಟ ಸೇರಿದಂತೆ ಬಹುತೇಕ ರಾಷ್ಟ್ರಗಳು ಅನಿವಾರ್ಯ ಕಾರಣಗಳಿಂದಾಗಿ ಬಡ್ಡಿದರ ಏರಿಕೆಯ ಮೊರೆ ಹೋದವು. ಹೀಗಾಗಿ ಬ್ಯಾಂಕ್‌ಗಳೂ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಲು ಶುರು ಮಾಡಿದವು.
ಈಗ ಭಾರತದಲ್ಲಿ ಶೇ.6.25ರಷ್ಟು ರೆಪೋ ದರವಿದೆ. ಈಗ ಆರಂಭವಾಗಿರುವ ಎಂಪಿಸಿ ಸಭೆಯಲ್ಲಿ 0.25 ಅಂಶಗಳಷ್ಟು ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಅಂದರೆ ಈ ಆರ್ಥಿಕ ವರ್ಷದ ಕಡೇ ಎಂಪಿಸಿ ಸಭೆಯಾಗಿದ್ದು, ಆರ್‌ಬಿಐ ತೀರಾ ಕನಿಷ್ಠ ಎಂದರೆ 0.25 ಅಂಶಗಳಷ್ಟು ರೆಪೋ ದರ ಹೆಚ್ಚಳ ಮಾಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗೆಯೇ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಎಸ್‌ಬಿಐನ ಸಂಶೋಧನ ವರದಿಯೂ ಇದೇ ಅಂಶವನ್ನು ಉಲ್ಲೇಖೀಸಿದೆ. ಈ ಎಂಪಿಸಿ ಸಭೆಯಲ್ಲಿ 0.25 ಅಂಶ ರೆಪೋ ದರ ಏರಿಸಬಹುದು ಅಥವಾ ರೆಪೋ ದರ ಏರಿಕೆಯ ನಿರ್ಧಾರವನ್ನು ತೆಗೆದುಕೊಳ್ಳದೇ ಇರಬಹುದು ಎಂದಿದೆ. ಸದ್ಯದ ಈ ನಿರೀಕ್ಷೆಗೆ ಕಾರಣಗಳೂ ಇವೆ. ಸದ್ಯ ಭಾರತದಲ್ಲಿ ಹಣದುಬ್ಬರ ಸ್ಥಿತಿ ನಿಯಂತ್ರಕ ಹಂತಕ್ಕೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಹಣದುಬ್ಬರ ಪ್ರಮಾಣ ಇನ್ನಷ್ಟು ಇಳಿಯುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಇತ್ತೀಚೆಗಷ್ಟೇ ಬಜೆಟ್‌ನಲ್ಲಿ ಮತ್ತು ಆರ್ಥಿಕ ಸಮೀಕ್ಷೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಒಂದು ವೇಳೆ ಹಣದುಬ್ಬರ ನಿಯಂತ್ರಣಕ್ಕೆ ಬಂದರೆ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಇರಿಸಿಕೊಂಡು ಹೋಗುವ ಸಾಧ್ಯತೆ ಇದೆ. ಅಲ್ಲದೆ ಕೆಲವು ವಿಶ್ಲೇಷಕರ ಪ್ರಕಾರ, ಶೇ.6.25 ರೆಪೋದರ ಸಮರ್ಪಕವಾಗಿದೆ. ಅಂದರೆ ಒಂದು ರೀತಿಯಲ್ಲಿ ಅದು ಹೆಚ್ಚಾ ಅಲ್ಲ, ಕಡಿಮೆಯೂ ಅಲ್ಲದ ಸ್ಥಿತಿ ಎನ್ನುತ್ತಿದ್ದಾರೆ. ಆದರೂ ಮಾರುಕಟ್ಟೆ ಚೇತರಿಕೆಗೆ ಶೇ.6.25 ರೆಪೋ ದರ ಒಂದಷ್ಟು ಏರಿಕೆಯಂತೇ ಇದೆ. ತೀರಾ ಶೇ.4ಕ್ಕೆ ಹೋಗಲಾಗದಿದ್ದರೂ ಶೇ.5ರ ಆಚೀಚೆಗೆ ತಂದು ನಿಲ್ಲಿಸಬಹುದು. ಆಗ ಗೃಹ, ವಾಹನ ಸೇರಿದಂತೆ ಸಾಲ, ವಾಹನ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳು ಇನ್ನಷ್ಟು ಚೇತರಿಕೆಯಾಗಬಹುದು. ಮಧ್ಯಮ ವರ್ಗದ ಕನಸಿಗೂ ರೆಕ್ಕೆ ಪುಕ್ಕ ಸಿಗಬಹುದಾಗಿದೆ. ಹೀಗಾಗಿ ಈ ಎಂಪಿಸಿಯಲ್ಲಿ ಆರ್‌ಬಿಐ ಬಡ್ಡಿದರ ಯಥಾಸ್ಥಿತಿ ಕಾಪಾಡಿಕೊಂಡು ಹೋಗಲಿ ಎಂಬುದು ಜನಸಾಮಾನ್ಯರ ನಿರೀಕ್ಷೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.