IFFI: ಈಗ ನಾವು ರೂಪಿಸುತ್ತಿರುವುದು ಕಾಂತಾರದ ಎರಡನೇ ಭಾಗವಲ್ಲ… – ರಿಷಬ್ ಶೆಟ್ಟಿ
Team Udayavani, Nov 28, 2023, 7:53 PM IST
ಪಣಜಿ: ʼಈಗ ನಾವು ರೂಪಿಸುತ್ತಿರುವುದು ಕಾಂತಾರದ ಮೊದಲ ಭಾಗ, ಎರಡನೇ ಭಾಗವಲ್ಲʼ ಎಂದು ಸ್ಪಷ್ಟಪಡಿಸಿದವರು ನಿರ್ದೇಶಕ ರಿಷಬ್ ಶೆಟ್ಟಿ.
ಇಫಿ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದ ಸ್ಪರ್ಧೆಯಲ್ಲಿ ಕಾಂತಾರ ಭಾಗವಹಿಸಿದ್ದು, ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಉಳಿದ 15 (ಎರಡು ಹಿಂದಿ ಸಿನಿಮಾವೂ ಸೇರಿದಂತೆ) ಸಿನಿಮಾಗಳೊಂದಿಗೆ ಸೆಣಸುತ್ತಿದೆ. ಈ ಸಂಬಂಧ ಕೆಂಪು ಹಾಸಿನ ಗೌರವ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ಮುಂದೆ ಬರುತ್ತಿರುವುದು ಕಾಂತಾರದ ಮೊದಲ ಭಾಗ” ಎಂದರು.
ಹಲವು ಮಾದರಿಯ ಕಥೆಗಳು, ಕನಸುಗಳೊಂದಿಗೆ ಕರ್ನಾಟಕದ ಪುಟ್ಟ ಊರಿನಿಂದ ಬೆಂಗಳೂರಿಗೆ ಬರುತ್ತೇವೆ. ಎಲ್ಲವೂ ಹೇಳಲಾಗುವುದಿಲ್ಲ. ಒಂದಿಷ್ಟನ್ನು ಹೇಳುತ್ತೇವೆ. ಹಾಗೆಯೇ ಕಾಂತಾರ ಆ ನೆಲೆಯಲ್ಲಿ ಮೂಡಿದ್ದು. ಈಗ ಅದರ ಹಿಂದಿನ ಹಲವಾರು ಸಂಗತಿಗಳು ಹೇಳುವುದಿದೆ. ಈ ಹಿನ್ನೆಲೆಯಲ್ಲೇ ನನ್ನ ಹೊಸ ಸಿನಿಮಾ ರೂಪುಗೊಳ್ಳುತ್ತಿದೆʼ ಎಂದರು.
ಕಾಂತಾರ ಯಶಸ್ಸಿನ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದನ್ನು ಹೊಣೆಗಾರಿಕೆಯೆಂದೇ ಸ್ವೀಕರಿಸಿದ್ದೇನೆ. ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನೀಡುವುದು ನಮ್ಮ ಗುರಿ ಎಂದರಲ್ಲದೇ, ಕಾಂತಾರ ಸಿನಿಮಾ ಶ್ರದ್ಧೆಯ ನೆಲೆಯೆಂದೇ ಹೇಳುವೆ. ನಾವು ಏನನ್ನು ಮಾಡುತ್ತೇವೆಯೋ ಅದರಲ್ಲಿ ಶ್ರದ್ಧೆ ಇರಬೇಕು. ನಾನು ನಂಬದಿರುವುದನ್ನು ನಾನು ಮಾಡಿಲ್ಲ. ಕಾಂತಾರದಲ್ಲಿನ ಭೂತಾರಾಧನೆ ಎಲ್ಲವೂ ಬಾಲ್ಯದಿಂದಲೂ ನೋಡುತ್ತಾ, ಆಚರಿಸುತ್ತಾ ಬಂದಂಥವು ಎಂದು ವಿವರಿಸಿದರು.
ಜನಪ್ರಿಯತೆಗಾಗಿ ಯಾರದೇ ನಂಬಿಕೆಗೆ ಧಕ್ಕೆ ತರುವಂಥದ್ದು ಸೂಕ್ತವಾದುದಲ್ಲ. ಹಾಗೆ ಮಾಡಲೂ ಬಾರದು ಎಂಬುದು ರಿಷಬ್ ಶೆಟ್ಟಿಯವರ ಅಭಿಪ್ರಾಯವಾಗಿತ್ತು. ಸಾಮಾನ್ಯವಾಗಿ ಋಣಾತ್ಮಕ ಅಭಿಪ್ರಾಯಗಳನ್ನೇ ಹೆಚ್ಚು ಪ್ರಸರಿಸುವಂಥ ಸಾಮಾಜಿಕ ಮಾಧ್ಯಮಗಳೂ ಕಾಂತಾರದ ವಿಷಯದಲ್ಲಿ ಧನಾತ್ಮಕವಾಗಿಯೇ ಪ್ರತಿಕ್ರಿಯಿಸಿದವು. ಹಾಗಾಗಿ ಕಾಂತಾರದ ಯಶಸ್ಸಿನಲ್ಲಿ ಅವುಗಳ ಸಹಯೋಗವೂ ಇದೆ. ನಾವೆಂದೂ ಕಾಂತಾರವನ್ನು ಪ್ಯಾನ್ ಇಂಡಿಯಾ ಸಿನಿಮಾವೆಂದು ಮಾಡಿರಲಿಲ್ಲ. ಜನರೇ ಆ ಮಟ್ಟಕ್ಕೆ ಕೊಂಡೊಯ್ದರುʼ ಎಂದರು.
ಭಾಷೆಗಳ ಗಡಿ ಮೀರಿ ಎಲ್ಲರೂ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಲು ಈಗ ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ಒಟಿಟಿಗಳೂ ಸಹಾಯ ಮಾಡುತ್ತಿವೆ ಎಂದರಲ್ಲದೇ, ಈಗ ನಾವು ಭಾರತೀಯ ಭಾಷೆಗಳ ಸಿನಿಮಾ ಎಂದು ಕರೆಯುವುದು ಸೂಕ್ತ ಎಂದು ಹೇಳಿದರು.
ಕಾಂತಾರ ಚಲನಚಿತ್ರ ಪ್ರದರ್ಶನದ ಬಳಿಕ ಕೊನೆಯ ದೃಶ್ಯ ನಟನೆ ಎಂದೆನಿಸುವುದಿಲ್ಲ. ಆ ಅನುಭವ ಹಂಚಿಕೊಳ್ಳಿ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುತ್ತಾ, ಈ ಪ್ರಶ್ನೆ ಹಲವಾರು ಬಾರಿ ತೂರಿ ಬಂದಿದೆ. ಆಗ ಹೇಳಿದ್ದನ್ನೇ ಈಗಲೂ ಹೇಳುವೆ. ಆ ಅನುಭವವನ್ನು ಹೇಳಲಾಗದು, ನನ್ನ ಮನಸ್ಸಿನಲ್ಲೇ ಉಳಿಸಿಕೊಂಡಿರುವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.