3 ವರ್ಷಗಳ ಪೈಕಿ 2021ರಲ್ಲಿಅಪರಾಧ ಸಂಖ್ಯೆ ಕಡಿಮೆ: ಕಮಲ್ ಪಂತ್
Team Udayavani, Jan 8, 2022, 7:20 AM IST
ಬೆಂಗಳೂರು: ಕಳೆದ ಮೂರು ವರ್ಷಗಳ ಪೈಕಿ 2021ನೇ ಸಾಲಿನಲ್ಲಿ ನಗರದಲ್ಲಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳಿಗೆ ಬಹುತೇಕ ಕಡಿವಾಣ ಹಾಕಿದ್ದು, ರೌಡಿ ಚಟುವಟಿಕೆಗಳು, ಕೊಲೆ, ಸುಲಿಗೆ, ಡ್ರಗ್ಸ್, ಸರಗಳ್ಳತನ ಹಾಗೂ ಇತರೆ ಪ್ರಕರಣಗಳ ನಿಯಂತ್ರಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸುರಕ್ಷಿತ ಸ್ಥಳವಾಗಿದೆ. ಮಕ್ಕಳು ಮತ್ತು ಮಹಿಳೆಯರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಹಾಗೆಯೇ ಸಾರ್ವಜನಿಕರು ಕೂಡ ಪೊಲೀಸರ ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರು ವರ್ಷಗಳ ಪೈಕಿ 2021ನೇ ಸಾಲಿನಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಕೊಲೆ, ಸರಗಳ್ಳತನ, ರಾಬರಿ, ಅತ್ಯಾಚಾರ, ಕೊಲೆ ಸೇರಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಸೈಬರ್, ಡ್ರಗ್ಸ್ ಮತ್ತು ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲಾಗಿದೆ ಎಂದರು.
ಹಿಂದಿನ ಎರಡು ವರ್ಷಗಳಿಗಿಂತ 2021ರಲ್ಲಿ ನಾಪತ್ತೆ ಪ್ರಕರಣಗಳು ಕಡಿಮೆ. ದಾಖಲಾದ ಪ್ರಕರಣಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ನಾಪತ್ತೆಯಾಗಿದ್ದಾರೆ. ಒಟ್ಟು 3853 ಪ್ರಕರಣಗಳ ಪೈಕಿ 3199 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 115 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮನೆಯವರಿಂದಲೇ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ವಿಶೇಷವೆಂದರೆ 2021ನೇ ಸಾಲಿನಲ್ಲಿ ಒಂದೇ ಒಂದು ಬಾಲಕ-ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿಲ್ಲ. ಮಹಿಳೆಯರಿಗೆ ಸಂಬಂಧಿಸಿದ 2009 ಪ್ರಕರಣಗಳಲ್ಲಿ 1879 ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೇ ಸರಗಳ್ಳತನ 165 ಪ್ರಕರಣಗಳ ಪೈಕಿ 130 ಪ್ರಕರಣಗಳು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಬೆಡ್ ನಿರಾಕರಿಸುವಂತಿಲ್ಲ : ಉಡುಪಿ ಡಿಸಿ ಎಚ್ಚರಿಕೆ
ಸೈಬರ್ ಕ್ರೈಂ ಪ್ರಕರಣ ವಿಲೇವಾರಿ
ಸೈಬರ್ ಕ್ರೈಂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಸಿಐಆರ್ ಬೇಗನೆ ದೂರುದಾರರ ಹಣವನ್ನು ಜಪ್ತಿ ಮಾಡಲಾಗಿದ್ದು, 8407 ಪ್ರಕರಣಗಳಲ್ಲಿ 7838 ಪ್ರಕರಣಗಳನ್ನು ಭೇದಿಸಲಾಗಿದೆ. 569 ಪ್ರಕರಣಗಳು ತನಿಖಾ ಹಂತದಲ್ಲಿವೆ. 990 ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಬೇರೆ ಸೆನ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದರು.
ರೌಡಿಸಂ ನಿಯಂತ್ರಣ
ನಗರದಲ್ಲಿ ಯಾವುದೇ ರೌಡಿಗಳ ಗುಂಪಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಲಾಗಿದೆ. ರೌಡಿಗಳನ್ನು ಸದೆಬಡಿಯಲು ಪ್ರತಿ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತಲೆಮರೆಸಿಕೊಂಡಿರುವ ರೌಡಿಗಳ ಪತ್ತೆ ಕಾರ್ಯ, ನೋಟಿಸ್ ನೀಡುವುದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲಸ ಈ ತಂಡ ಮಾಡುತ್ತಿದೆ.
2021ರಲ್ಲಿ 28 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೈಲಿನಲ್ಲಿದ್ದುಕೊಂಡೇ ಕ್ರೈಂ ಚಟುವಟಿಕೆ ನಡೆಸುತ್ತಿದ್ದ 40 ರೌಡಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಕಮಲ್ ಪಂತ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸುಬ್ರಮಣ್ಯೇಶ್ವರ ರಾವ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತಾ, ಡಿಸಿಪಿಗಳಾದ ಸಂತೋಷ ಬಾಬು, ಬಿ.ಎಸ್.ಅಂಗಡಿ, ಅನುಚೇತ್ ಇದ್ದರು.
ಹೆಚ್ಚಾಗಿರುವ ವಾಹನ ಕಳವು
ನಗರದಲ್ಲಿ ಕಳೆದ ಮೂರು ವರ್ಷದಲ್ಲಿ 2021ರಲ್ಲಿ ಕೊಂಚ ಪ್ರಮಾಣದಲ್ಲಿ ವಾಹನ ಕಳ್ಳತನಕ್ಕೆ ಬ್ರೇಕ್ ಹಾಕಲಾಗಿದೆ. 4126 ಪ್ರಕಕರಣಗಳ ಪೈಕಿ 915 ಪ್ರಕರಣ ಪತ್ತೆ ಹಚ್ಚಲಾಗಿದೆ. ವಾಹನ ಕಳವು ಮಾಡುವ ಆರೋಪಿಗಳು ನೆರೆ ರಾಜ್ಯದವರೇ ಹೆಚ್ಚಾಗಿದ್ದು, ಕೃತ್ಯ ಎಸಗಿದ ಕೂಡಲೇ ತಮ್ಮ ಊರಿಗೆ ಪರಾರಿಯಾಗುತ್ತಾರೆ. ಹೀಗಾಗಿ ಅವರ ಪತ್ತೆ ತಡವಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಧನ್ಯವಾದ
2021ನೇ ಕೆಲ ಕಹಿಘಟನೆಗಳನ್ನು ಹೊರತುಪಡಿಸಿ ಉಳಿದಂತೆ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ವೇಳೆ ಲಕ್ಷಾಂತರ ಅಭಿಮಾನಿಗಳು ಬಂದಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು.ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.
167 ಅಪಹರಣ ಪ್ರಕರಣ ಪತ್ತೆಯಾಗಿಲ್ಲ
ನಗರದಲ್ಲಿ 2021ನೇ ಸಾಲಿನಲ್ಲಿ ಒಟ್ಟು 825 ಅಪಹರಣ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 658 ಪ್ರಕರಣ ಭೇದಿಸಲಾಗಿದೆ. ಉಳಿದಂತೆ 41 ಬಾಲಕರು, 105 ಬಾಲಕಿಯರು, 15 ಪುರುಷರು ಹಾಗೂ 6 ಮಹಿಳೆಯರು ಸೇರಿದಂತೆ ಒಟ್ಟು 167 ಅಪಹರಣ ಪ್ರಕರಣ ಪತ್ತೆಯಾಗಿಲ್ಲ. 2021ನೇ ಸಾಲಿನಲ್ಲಿ ನಗರದಲ್ಲಿ 115 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 446 ಲೈಂಗಿಕ ದೌರ್ಜನ್ಯ, 25 ವರಕ್ಷಿಣ ಕಿರುಕುಳ ಸಾವು, ಪತಿ ಮತ್ತು ಸಂಬಂಧಿಕರ ಹಿಂಸೆಯಿಂದ 420 ಮಹಿಳೆಯರ ಸಾವು ಪ್ರಕರಣಗಳು ದಾಖಲಾಗಿವೆ.
ನಗರದಲ್ಲಿ 375 ಪೋಕ್ಸೋ ಪ್ರಕರಣ
ಕಳೆದ ವರ್ಷ ನಗರದಲ್ಲಿ ಪೋಕ್ಸೋ ಕಾಯ್ದೆಯಡಿ 375 ಪ್ರಕರಣ ದಾಖಲಾಗಿವೆ. ಬಾಲ ಕಾರ್ಮಿಕ ಕಾಯ್ದೆಡಿ 10 ಪ್ರಕರಣ, ಬಾಲ್ಯ ವಿವಾಹ ತಡೆ ಕಾಯ್ದೆಯಡಿ 13 ಪ್ರಕರಣ ಸೇರಿದಂತೆ ಮಕ್ಕಳ ಸಂಬಂಧ ವಿವಿಧ ಆರೋಪಗಳಡಿ ಒಟ್ಟು 450 ಪ್ರಕರಣಗಳು ದಾಖಲಾಗಿವೆ.
1,405 ಪುರುಷರು ನೇಣಿಗೆ ಶರಣು !
ನಗರದಲ್ಲಿ 2021ನೇ ಸಾಲಿನಲ್ಲಿ ಒಟ್ಟು 1,974 ಮಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 1,405 ಮಂದಿ ಪುರುಷರು ಹಾಗೂ 569 ಮಂದಿ ಮಹಿಳೆಯರು ಇದ್ದಾರೆ. ಅಂತೆಯೆ 171 ಮಂದಿ ವಿಷ ಸೇವಿಸಿ ಮೃತಪಟ್ಟಿದ್ದು, ಈ ಪೈಕಿ 119 ಪುರುಷರು ಹಾಗೂ 52 ಮಹಿಳೆಯರು ಇದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.